ಅವರು ನನ್ನನ್ನು ನೀಚನೆಂದೇ ಕರೆಯಲಿ, ಅದಕ್ಕೆ ಪ್ರತಿಕ್ರಿಯಿಸುವುದಿಲ್ಲ: ಮೋದಿ

ಸೂರತ್: ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ತಮ್ಮ ವಿರುದ್ಧ ನೀಚ ಎಂಬ ಹೇಳಿಕೆ ನೀಡಿದ್ದ ಕುರಿತು ಗುಜರಾತ್ ಚುನಾವಣೆಯ ಪ್ರಚಾರ ಸಭೆಯಲ್ಲಿ ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ವೀಕಾರಾರ್ಹವಲ್ಲದ ಭಾಷೆಯನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಿದರು. ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡಿರುವ ಮತ್ತು ರಾಜತಾಂತ್ರಿಕ ಹುದ್ದೆಗಳನ್ನು ನಿರ್ವಹಿಸಿರುವ, ಸಂಪುಟ ದರ್ಜೆಯ ಸ್ಥಾನವನ್ನು ನಿರ್ವಹಿಸಿರುವ ನಾಯಕ ಮೋದಿ ನೀಚ ಎನ್ನುತ್ತಿದ್ದಾರೆ. ಇದು ಅವಮಾನಕರ. ಇದು ಮೊಘಲ್​​ರ ಮನಃಸ್ಥಿತಿ ಎಂದು ವಾಗ್ದಾಳಿ ನಡೆಸಿದರು.

ಅವರು ನಮ್ಮನ್ನ ಕತ್ತೆ, ನೀಚ ಎಂದು ಕರೆಯುತ್ತಿದ್ದಾರೆ. ಗುಜರಾತಿನ ಜನ ಇದಕ್ಕೆ ತಕ್ಕ ಉತ್ತರ ಕೊಡುತ್ತಾರೆ ಎಂದರು. ನಾನು ಸಿಎಂ ಆಗಿದ್ದ ಕಾಲದಿಂದ, ಪಿಎಂ ಆಗುವವರೆಗೆ ನೀವು ನೋಡಿದ್ದೀರಿ. ನನ್ನ ಕಾರಣಕ್ಕಾಗಿ ನಿಮಗೆ ಅವಮಾನವಾಗುವುದನ್ನು ನೀವು ಸಹಿಸುತ್ತೀರಾ? ಎಂದು ತಮ್ಮ ಮೇಲಿನ ಹೇಳಿಕೆಯನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳಲು ಯತ್ನಿಸಿದರು.

ಅಲ್ಲದೇ, ಅವರು ನನ್ನನ್ನು ನೀಚ ಎಂದು ಕರೆಯುತ್ತಿದ್ದಾರೆ. ಹೌದು, ನಾನು ಬಡಕುಟುಂಬದ ಸಮಾಜದಿಂದ ಬಂದಿದ್ದೇನೆ ಮತ್ತು ನನ್ನ ಜೀವನವನ್ನು ಬಡವರಿಗಾಗಿ, ದಲಿತರಿಗಾಗಿ, ಬುಡಕಟ್ಟು ಮತ್ತು ಹಿಂದುಳಿದ ವರ್ಗಗಳಿಗಾಗಿ ವ್ಯಯಿಸುತ್ತೇನೆ ಎಂದರು. ಅವರು ಹೀಗೆಯೇ ಮಾತನಾಡುವುದನ್ನು ಮುಂದುವರೆಸಲಿ. ನಾನು ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದರು.

ಕಾಂಗ್ರೆಸ್ಸಿಗರು ನನ್ನನ್ನು ನೀಚನೆಂದೇ ಕರೆಯಲಿ. ನಾವು ಅದಕ್ಕೆ ಪ್ರತಿಕ್ರಿಯಿಸುವುದಿಲ್ಲ. ಅವರ ಮನಃಸ್ಥಿತಿಯನ್ನು ನಾನು ಅಭಿನಂದಿಸುತ್ತೇನೆ. ಅವರ ಪ್ರಶ್ನೆಗೆ ಡಿಸೆಂಬರ್ 9 ಮತ್ತು 14ರಂದು ಮತದ ಮೂಲಕ ನಾವು ಉತ್ತರಿಸುತ್ತೇವೆ ಎಂದರು. ಜೊತೆಗೆ ನಮ್ಮ ಮೌಲ್ಯ ವ್ಯವಸ್ಥೆ ಸುಭದ್ರವಾಗಿದೆ. ಇಂಥ ವಿಷಯಗಳ ಕುರಿತು ನಾವು ಹೇಳುವುದು ಏನೂ ಇಲ್ಲ. ನಮ್ಮ ಉತ್ತರ ಬ್ಯಾಲೆಟ್ ಬಾಕ್ಸ್​​ನಿಂದ ಬರುತ್ತದೆ. ನಾವು ಇಂಥ ಸಾಕಷ್ಟು ಅವಮಾನವನ್ನು ನೋಡಿದ್ದೇವೆ. ನಾನು ಸಿಎಂ ಆಗಿದ್ದ ಅವಧಿಯಲ್ಲೂ ಅವರು ನನ್ನನ್ನು ಅವಮಾನಿಸಿದ್ದರು. ಅವರು ನನ್ನನ್ನು ಸಾವಿನ ವ್ಯಾಪಾರಿ ಎಂದು ಕರೆದಿದ್ದರು. ಅಲ್ಲದೇ, ನನ್ನನ್ನು ಸೆರೆಮನೆಯಲ್ಲಿಡಲು ಬಯಸಿದ್ದರು ಎಂದರು.

ಮಣಿಶಂಕರ್ ಅಯ್ಯರ್ ಅವರ ಹೇಳಿಕೆಯ ಕುರಿತು ಪ್ರತಿಕ್ರಿಯಿಸುವುದಿಲ್ಲ ಎನ್ನುತ್ತಲೇ ತಮ್ಮ ಭಾಷಣದುದ್ದಕ್ಕೂ ಇದೇ ವಿಷಯವನ್ನು ಪ್ರಧಾನಿ ಮೋದಿ ಪ್ರಸ್ತಾಪಿಸಿದರು. ಇವರೊಂದಿಗೆ ಹಣಕಾಸು ಸಚಿವ ಅರುಣ್ ಜೇಟ್ಲಿ ಕೂಡ ಪ್ರತಿಕ್ರಿಯೆ ನೀಡಿದರು.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *