ಬಿಜೆಪಿ ಮೈತ್ರಿ ಇಲ್ಲದಿದ್ದಲ್ಲಿ ಹೆಚ್ಚುವರಿಯಾಗಿ ನಾವು 15 ಕ್ಷೇತ್ರಗಳನ್ನು ಗೆಲ್ಲುತ್ತಿದ್ದೆವು: ಎನ್ ಚಂದ್ರಬಾಬು ನಾಯ್ಡು

ಗುಂಟೂರ್: ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳದಿದ್ದಲ್ಲಿ ಟಿಡಿಪಿ 15 ಹೆಚ್ಚು ಸೀಟುಗಳನ್ನು ಗೆಲ್ಲುತ್ತಿತ್ತು ಎಂದು ಆಂಧ್ರ ಸಿಎಂ ಎನ್ ಚಂದ್ರಬಾಬು ನಾಯ್ಡು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ, ಬಿಜೆಪಿಗರು ಸುಳ್ಳುಗಳನ್ನು ಹರಡುವ ಮೂಲಕ ವಿಶೇಷ ಸ್ಥಾನಮಾನವನ್ನು ಹಾಳು ಮಾಡಿದ್ದಾರೆ ಎಂದಿದ್ದಾರೆ. ಬಿಜೆಪಿಗರು ವಿಶೇಷ ಸ್ಥಾನಮಾನವನ್ನು ಕೈಬಿಟ್ಟಿದ್ದಾರೆ. ಆದರೆ, ಈಗ ಕೂಡ ಈಶಾನ್ಯ ರಾಜ್ಯಗಳಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ಆದರೆ, ಆಂಧ್ರಕ್ಕೆ ಯಾಕೆ ವಿಶೇಷ ಸ್ಥಾನಮಾನ ಕೊಡುತ್ತಿಲ್ಲ. ಇದು ಸರಿಯೇ ಎಂದು ಅವರು ಪ್ರಶ್ನಿಸಿದ್ದಾರೆ. ಜೊತೆಗೆ, ಕೇಂದ್ರ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಮೂಲಕ ಎನ್​ಡಿಎ ಮೈತ್ರಿಕೂಟ ತೊರೆದ ತಮ್ಮ ನಿರ್ಧಾರವನ್ನು ಅವರು ಸಮರ್ಥಿಸಿಕೊಂಡಿದ್ದಾರೆ. ಪಕ್ಷದ 37ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಕೀಯ ಲಾಭಕ್ಕಾಗಿ ಆಂಧ್ರ ವಿಭಜನೆ ಪೂರ್ವದಲ್ಲಿ ಬಿಜೆಪಿಯೊಂದಿಗಿನ ಮೈತ್ರಿ ಮಾಡಿಕೊಂಡಿರಲಿಲ್ಲ ಎಂದು ಅವರು ಸ್ಪಷ್ಟೀಕರಣ ನೀಡಿದ್ದಾರೆ. ಅಲ್ಲದೇ, ಮೈತ್ರಿಯ ಹಿಂದೆ ರಾಜ್ಯದ ಅಭಿವೃದ್ಧಿಯ ಉದ್ದೇಶ ಮಾತ್ರ ಇತ್ತು ಎಂದು ಅವರು ಹೇಳಿದ್ದಾರೆ.

ಮಾ. 16ರಂದು ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡುವಲ್ಲಿ ತಾರತಮ್ಯ ವಿರೋಧಿಸಿ ಟಿಡಿಪಿ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟವನ್ನು ತೊರೆದಿತ್ತು. ಬಿಜೆಪಿ ಮತ್ತು ಟಿಡಿಪಿಯ ಸಂಸದರು ಮತ್ತು ಶಾಸಕರು ಮೈತ್ರಿಕೂಟದ ಸಚಿವ ಸ್ಥಾನವನ್ನು ತೊರೆದಿದ್ದರು. ಇದೇ ಸಂಬಂಧವಾಗಿ ಆಂಧ್ರದ ಆಡಳಿತ ಮತ್ತು ವಿಪಕ್ಷಗಳು ಸಂಸತ್ ಅಧಿವೇಶನದಲ್ಲಿ ಮತ್ತು ಹೊರಗೆ ಕೂಡ ವಿಶೇಷ ಸ್ಥಾನಮಾನಕ್ಕೆ ಒತ್ತಾಯಿಸಿ ನಿರಂತರ ಪ್ರತಿಭಟನೆ ನಡೆಸುತ್ತಿವೆ.

0

Leave a Reply

Your email address will not be published. Required fields are marked *