ರೈತರ ಗೋಳು ಕೇಳೋರ್ ಯಾರು? 

ದೆಹಲಿಯಲ್ಲಿ ತಮಿಳುನಾಡಿನ ರೈತರು ನಡೆಸುತ್ತಿರುವ ಪ್ರತಿಭಟನೆ ಇಂದಿಗೆ 39ನೇ ದಿನಕ್ಕೆ ಕಾಲಿಟ್ಟಿದೆ. ಸಾಲ ಮನ್ನಾ ಮತ್ತಿತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಮಿಳುನಾಡಿನ ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ತೀವ್ರ ಬರಗಾಲದ ಹಿನ್ನೆಲೆಯಲ್ಲಿ ತಮಿಳುನಾಡಿಗೆ 40,000 ಕೋಟಿ ರೂ. ವಿಶೇಷ ಪ್ಯಾಕೇಜ್ ನೀಡಬೇಕು, ರಾಷ್ಟ್ರೀಯ ಬ್ಯಾಂಕ್​ಗಳಲ್ಲಿರುವ ರೈತರ ಸಾಲ ಮನ್ನಾ ಮಾಡಬೇಕು, ಅಶಕ್ತ ರೈತರಿಗೆ ವೃದ್ಧಾಪ್ಯ ವೇತನ ನೀಡಬೇಕು, ಉತ್ತರದಿಂದ ದಕ್ಷಿಣಕ್ಕೆ ನದಿ ಜೋಡಣೆ ಮಾಡಬೇಕು ಮತ್ತು ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸಬೇಕು ಎಂದು ಆಗ್ರಹಿಸಿ ರೈತರು ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಈ ಪ್ರತಿಭಟನೆಯ ಮಾದರಿಗಳು ವಿಭಿನ್ನವಾಗಿವೆ. ಅಲ್ಲದೇ, ಸಾಂಕೇತಿಕವಾಗಿ ಅವರು ಕೇಂದ್ರ ಸರ್ಕಾರಕ್ಕೆ ಮಹತ್ವದ ಅಂಶಗಳನ್ನು ದಾಟಿಸುವ ಪ್ರಯತ್ನವನ್ನೂ ಮಾಡ್ತಿದಾರೆ.

ನೆತ್ತಿ ಮತ್ತು ಕಾಲುಗಳನ್ನು ಸುಡುವ ಬಿರು ಬಿಸಿಲಿನಲ್ಲಿ ಸುಮಾರು 70 ರೈತರು, ಕೇಂದ್ರ ಸರ್ಕಾರದ ಕಣ್ಣು ತೆರೆಸೋ ಸಲುವಾಗಿ ಒಟ್ಟು 100 ದಿನಗಳ ಕಾಲ ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಈಗಾಗಲೇ ಅವರು 39 ದಿನಗಳನ್ನು ಪ್ರತಿಭಟನೆಯಲ್ಲೇ ಕಳೆದಿದ್ದಾರೆ. ಆದರೆ, ಇದುವರೆಗೆ ಅವರ ಸಮಸ್ಯೆಯನ್ನು ಕೇಂದ್ರ ಸರ್ಕಾರ ಆಲಿಸುವ ಮನಸು ಮಾಡಿಯೇ ಇಲ್ಲ ಅಂದ್ರೆ ಯಾರಿಗಾದ್ರೂ ಅಚ್ಚರಿಯಾಗದೇ ಇರೋದಿಲ್ಲ.

ಕೇಂದ್ರ ಸರ್ಕಾರದ ವಿರುದ್ಧ 100 ದಿನ ತಮಿಳು ರೈತರ ವಿಶಿಷ್ಟ ಪ್ರೊಟೆಸ್ಟ್​

ದೆಹಲಿಯ ಜಂತರ್​ ಮಂತರ್​​ನಲ್ಲಿ ವಿಭಿನ್ನವಾಗಿ ಪ್ರತಿಭಟಿಸುತ್ತಿರುವ ರೈತರು, ಇದುವರೆಗೆ ಅರೆಬೆತ್ತಲೆಯಾಗಿ, ಬಾಯಿಯಲ್ಲಿ ಸತ್ತ ಹಾವುಗಳನ್ನು ಇಟ್ಟುಕೊಂಡು, ಮಾನವರ ತಲೆ ಬುರುಡೆಗಳನ್ನು ಇಟ್ಟುಕೊಂಡು, ಅರ್ಧ ತಲೆ ಬೋಳಿಸಿಕೊಂಡು, ಪೂರ್ಣತಲೆ ಬೋಳಿಸಿಕೊಂಡು, ಸಂಪೂರ್ಣ ನಗ್ನರಾಗಿ, ಸೀರೆ ಉಟ್ಟುಕೊಳ್ಳುವ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಯ ಹಿಂದಿರುವ ರೈತರ ಸಮಸ್ಯೆ ಮತ್ತು ಅವರ ಆಶಯಗಳು ಮತ್ತು ಪ್ರತಿಭಟನೆಯ ಮಾದರಿಗಳು ವಿಭಿನ್ನವಾಗಿವೆ.

ಆತ್ಮಹತ್ಯೆ ಮಾಡಿಕೊಂಡ ರೈತರ ತಲೆಬುರುಡೆಗಳೊಂದಿಗೆ ಪ್ರತಿಭಟನೆ

ಅವರು ತಲೆ ಬುರುಡೆಗಳನ್ನು ಯಾವುದೋ ಸ್ಮಶಾನದಿಂದ ಅನಾಮತ್ತಾಗಿ ಪ್ರಚಾರಕ್ಕಾಗಿ ರೈತರು ಎತ್ತಿಕೊಂಡು ಬಂದಿಲ್ಲ. ಬದಲಾಗಿ ಮಾಡಿದ ಸಾಲ ತೀರಿಸಲಾಗದೆ ಅಸಹಾಯಕತೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ರೈತರ ತಲೆಬುರುಡೆಗಳನ್ನು ರಾಷ್ಟ್ರ ರಾಜಧಾನಿ ನವದೆಹಲಿಯ ರಸ್ತೆಗೆ ತಂದಿದಾರೆ. ಈ ಮೂಲಕ ಕೇಂದ್ರ ಸರ್ಕಾರಕ್ಕೆ ರೈತರ ಸಮಸ್ಯೆಯನ್ನು ಮನವರಿಕೆ ಮಾಡಿಕೊಡಲು ರೈತರು ಪ್ರಯತ್ನಿಸ್ತಿದಾರೆ.

ಸತ್ತ ಹಾವುಗಳನ್ನು ಬಾಯಿಯಲ್ಲಿಟ್ಟುಕೊಂಡ ರೈತರು

ಹಾವು ತಿಂದವರ ನುಡಿಸಬಹುದು, ಗರ ಬಡಿದವರ ನುಡಿಸಬಹುದು, ಸಿರಿಗರ ಬಡಿದವರ ನುಡಿಸಲು ಬಾರದು ನೋಡಯ್ಯಾ ಎಂಬ ಬಸವಣ್ಣನವರ ವಚನ ಒಂದಿದೆ. ಕೇಂದ್ರ ಸರ್ಕಾರ ಇದುವರೆಗೆ ಸಿರಿವಂತರ ಪರವಾಗಿದೆ ಎನ್ನೋದನ್ನು ಸಾಬೀತುಪಡಿಸೋ ಸಲುವಾಗಿ ತಮಿಳುನಾಡು ರೈತರು ಸಾಂಕೇತಿಕವಾಗಿ ಬಾಯಿಯಲ್ಲಿ ಸತ್ತ ಹಾವುಗಳನ್ನು ಇಟ್ಟುಕೊಂಡು ಪ್ರತಿಭಟನೆ ನಡೆಸಿದರು. ಆದರೆ, ನಿಜಕ್ಕೂ ರೈತರ ಈ ಯಾವ ಪ್ರತಿಭಟನೆಯೂ ಕೂಗಳತೆ ದೂರದಲ್ಲಿರೋ ಪ್ರಧಾನಿ ಮೋದಿಯವರ ಕಿವಿಗೆ ಬಿದ್ದೇ ಇಲ್ಲ ಅನ್ನೋದು ಮಾತ್ರ ಅಚ್ಚರಿ.

ಅರ್ಧ ತಲೆ, ಪೂರ್ಣ ತಲೆ ಬೋಳಿಸಿಕೊಂಡ ಹತಾಶ ರೈತರು

ಹೌದು, ಈ ರೈತರು ತಮಿಳುನಾಡಿನಲ್ಲಿ ಪ್ರತಿಭಟನೆ ನಡೆಸಿದರೆ ತಮ್ಮ ಗೋಳನ್ನು ಯಾರೂ ಕೇಳೋದಿಲ್ಲ ಅಂತ ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್​ನಲ್ಲಿ ಜಮೆಯಾಗಿದ್ರು. ಒಂದು ಅಥವಾ ಎರಡು ದಿನಗಳಲ್ಲಿ ತಮ್ಮ ಪ್ರತಿಭಟನೆ ದೆಹಲಿ ದೊರೆಗಳ ಕಿವಿಗೆ ಬೀಳುತ್ತೆ ಅನ್ನೋ ಆಸೆಯಿಂದ ಪ್ರತಿಭಟನೆ ನಡೆಸಿದ್ರು. ಆದ್ರೆ, ಅವರ ಕೂಗು ಕೇಳದಷ್ಟು ಕೇಂದ್ರ ಸರ್ಕಾರದ ಕಿವಿ ಕಿವುಡಾಗಿಬಿಟ್ಟಿತ್ತು. ಅದಕ್ಕಾಗಿ ಮೊದಲು ಅರ್ಧ ತಲೆಗಳನ್ನು ಬೋಳಿಸಿಕೊಂಡು ಪ್ರತಿಭಟನೆ ನಡೆಸಿದರು. ಆಗ ಕೂಡ ಕೇಂದ್ರ ಸರ್ಕಾರ ಅವರ ಗೋಳು ಕೇಳೋದಕ್ಕೆ ಮುಂದಾಗಲಿಲ್ಲ. ಆಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪೂರ್ಣ ತಲೆ ಬೋಳಿಸಿಕೊಂಡರು. ಅನಂತರ ಕೂಡ ಅವರ ಕೂಗು ಯಾರಿಗೂ ಕೇಳಲೇ ಇಲ್ಲ. ಅದಾದ ನಂತರ ಅವರು, ಅರ್ಧ ತಲೆ, ಅರ್ಧ ಮೀಸೆಯನ್ನು ಕೂಡ ಬೋಳಿಸಿಕೊಂಡು ಪ್ರತಿಭಟನೆಯನ್ನು ದಾಖಲಿಸಿದರು.

ಸಂಪ್ರದಾಯ ಮರೆತರೇ ಸಂಸ್ಕೃತಿ ರಕ್ಷಕರು?

ಭಾರತೀಯರಲ್ಲಿ ತಂದೆ ತೀರಿಕೊಂಡ ಸಮಯದಲ್ಲಿ, ಮಕ್ಕಳು ತಲೆ ಬೋಳಿಸಿಕೊಳ್ಳುವ ಪದ್ಧತಿ ಆಚರಣೆಯಲ್ಲಿದೆ. ತಂದೆ ಜೀವಂತವಿರುವಾಗಲೇ ತಲೆ ಬೋಳಿಸಿಕೊಳ್ಳಬಾರದು ಎಂಬ ನಂಬಿಕೆ ಕೂಡ ಕೆಲವರಲ್ಲಿ ಇದೆ. ತಮಿಳುನಾಡು ರೈತರು ತಮ್ಮ ತಲೆಗಳನ್ನು ಬೋಳಿಸಿಕೊಂಡದ್ದಕ್ಕೆ ಇದೂ ಒಂದು ಕಾರಣ. ಸಂಸ್ಕೃತಿ, ಧರ್ಮ, ಸಂಪ್ರದಾಯವನ್ನು ರಕ್ಷಿಸೋ ಕುರಿತು ಬಿಟ್ಟಿ ಭಾಷಣ ಮಾಡುವ ಸಂಘ ಪರಿವಾರ, ಬಿಜೆಪಿ ಮತ್ತು ಅವರ ಅನುಯಾಯಿಗಳನ್ನೂ ಒಳಗೊಂಡಂತೆ ತಮ್ಮ ಗೋಳು ಎಲ್ಲರಿಗೂ ತಲುಪುತ್ತೆ. ತಾವು ತಲೆಬೋಳಿಸಿಕೊಂಡಲ್ಲಿ ಆಡಳಿತಾರೂಢ ಪಕ್ಷದವರು ತಮ್ಮ ಅಹವಾಲುಗಳನ್ನು ಕೇಳಿಸಿಕೊಳ್ಳುತ್ತಾರ ಎಂದು ರೈತರು ನಂಬಿದ್ದರು. ಆದರೆ, ಈ ನಂಬಿಕೆ ಕೂಡ ಕಡೆಗೆ ಸುಳ್ಳಾಗಿಬಿಟ್ಟಿದೆ.

ಬರಪೀಡಿತ ಪ್ರದೇಶಗಳಲ್ಲಿ ಸಾಲ ವಸೂಲಿಗೆ ಬ್ರೇಕ್ ಹಾಕಿ ಎಂದ ಕೋರ್ಟ್​​

23 ದಿನಗಳ ಕಾಲ ದೆಹಲಿಯ ಜಂತರ್ ಮಂತರ್​​ನಲ್ಲಿ ತಮಿಳುನಾಡು ರೈತರು ಪ್ರತಿಭಟಿಸಿದ ನಂತರ ಕಡೆಗೂ ಇವರ ಪರವಾಗಿ ನಿಂತದ್ದು ಮದ್ರಾಸ್ ಹೈಕೋರ್ಟ್​​. ನಿರಂತರ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಕೋರ್ಟ್, ಸಹಕಾರಿ ಬ್ಯಾಂಕ್​ಗಳ ಸಾಲವನ್ನು ಮನ್ನಾ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತು. ಜೊತೆಗೆ ಬರಪೀಡಿತ ಪ್ರದೇಶಗಳಲ್ಲಿ ಬ್ಯಾಂಕ್​ಗಳು ಸಾಲ ವಸೂಲಿ ಮಾಡದಂತೆ ಕೂಡ ಖಡಕ್ ಸೂಚನೆ ನೀಡಿತು.

ತಮಿಳುನಾಡು ರಾಜ್ಯದಿಂದ ಸಾಲ ಮನ್ನಾದ ಹೊರೆಯನ್ನು ಹೊರಲು ಸಾಧ್ಯವಿಲ್ಲ. ಆದ್ದರಿಂದ ಕೇಂದ್ರ ಸರ್ಕಾರ ಅಗತ್ಯ ನೆರವನ್ನು ರಾಜ್ಯ ಸರ್ಕಾರಕ್ಕೆ ನೀಡಬೇಕು ಎಂದು ಕೂಡ ಮಧುರೈ ಪೀಠ ಅಭಿಪ್ರಾಯಪಟ್ಟಿತ್ತು. ರಾಜ್ಯ ಕಷ್ಟ ಕಾಲದಲ್ಲಿರುವಾಗ ಕೇಂದ್ರ ಮೌನಪ್ರೇಕ್ಷಕನಾಗಿರಬಾರದು. ಅಗತ್ಯ ಪ್ರಮಾಣದಲ್ಲಿ ರಾಜ್ಯಕ್ಕೆ ನೆರವಾಗಬೇಕು ಎಂದು ನ್ಯಾ. ನಾಗಮುತ್ತು ಮತ್ತು ನ್ಯಾ. ಎಂ ವಿ ಮುರಳೀಧರನ್ ಅವರನ್ನೊಳಗೊಂಡ ಪೀಠ​​ ಸೂಚಿಸಿತ್ತು. ಇಷ್ಟೆಲ್ಲ ಆದ್ರೂ ಕೇಂದ್ರ ಸರ್ಕಾರ ಮಾತ್ರ ಜಾಣ ಕಿವುಡು ಮೆರಿಯುತ್ತಿದೆ.

ತಮಿಳುನಾಡಿನಲ್ಲಿ ಕರ್ನಾಟಕದಂತೆ ಈ ಬಾರಿ ತೀವ್ರವಾದ ಬರಗಾಲ ಎದುರಾಗಿದೆ. ನಿಜಕ್ಕೂ ಅಲ್ಲಿನ ರೈತರು ಇಲ್ಲಿನ ರೈತರಂತೆಯೇ ತಾವು ಸಾಲ ಸೋಲ ಮಾಡಿ, ಭೂಮಿಯನ್ನು ನಂಬಿಕೊಂಡು ಹಾಕಿದ ಬಂಡವಾಳ ಕೂಡ ಬಾರದೇ ಇರೋ ದುಃಸ್ಥಿತಿಯಲ್ಲಿದ್ದಾರೆ. ಆದ್ದರಿಂದ ತಮ್ಮ ಸಾಲವನ್ನು ಮನ್ನಾ ಮಾಡಿ ಮತ್ತು ವಿಶೇಷ ಪ್ಯಾಕೇಜ್ ಘೋಷಿಸಿ ಅಂತ ಅವರು ಅಂಗಲಾಚಿ ಬೇಡಿಕೊಳ್ಳುತ್ತಿದ್ದಾರೆ. ಬರ ಪೀಡಿತ ತಂಜಾವೂರು ಮತ್ತು ತಿರುಚಿನಾಪಳ್ಳಿಯ ರೈತರು ದೆಹಲಿಯ ಜಂತರ್ ಮಂತರ್​ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನೊಂದು ಗಮನಾರ್ಹ ವಿಷಯವೆಂದರೆ, ತಮಿಳುನಾಡಿನ ರಾಜಕಾರಣಿಗಳು, ನಟ ಪ್ರಕಾಶ್ ರೈ ಸೇರಿದಂತೆ ಸೇರಿದಂತೆ ಅನೇಕರು, ಪಕ್ಷ ಮತ್ತು ಸಿದ್ಧಾಂತ ಭೇದ ಮರೆತು, ರೈತರನ್ನು ಬೆಂಬಲಿಸಿದರು. ರಾಜಕಾರಣಿಗಳಾದ ಸಿಪಿಐ ಮುಖಂಡ ಡಿ ರಾಜಾ ಸೇರಿದಂತೆ ಅನೇಕ ರಾಜಕಾರಣಿಗಳು, ನಟರಾದ ಪ್ರಕಾಶ್ ರೈ ಮೊದಲಾದವರು ಪ್ರತಿಭಟನಾ ನಿರತ ರೈತರನ್ನು ಭೇಟಿಯಾಗಿ ನೈತಿಕ ಸ್ಥೈರ್ಯ ತುಂಬಿದ್ದಾರೆ.

ರೈತರನ್ನು ದೆಹಲಿಯ ಪ್ರತಿಭಟನಾ ಸ್ಥಳದಲ್ಲಿ ಭೇಟಿಯಾಗಿದ್ದ ಡಿಎಂಕೆ ಕಾರ್ಯಾಧ್ಯಕ್ಷ ಎಂ ಕೆ ಸ್ಟಾಲಿನ್, ಕೇಂದ್ರ ಸರ್ಕಾರ ರೈತರ ಮನವಿಗೆ ಸ್ಪಂದಿಸುತ್ತಿಲ್ಲ. ರೈತರು ನಿರಂತರವಾಗಿ ಮುಷ್ಕರದಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಕೇಂದ್ರ ಸರ್ಕಾರ ಈ ಕುರಿತು ಗಮನಹರಿಸದಿರೋದು ಮಾತ್ರ ದುರದೃಷ್ಟಕರ. ಅಲ್ಲದೇ, ಲೋಕಸಭೆ ಚುನಾವಣೆ ಸಮಯದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಬಿಜೆಪಿ ಸಂಪೂರ್ಣವಾಗಿ ಸೋತಿದೆ. ಬಿಜೆಪಿಯ ಅಧಿಕಾರದ ಅವಧಿಯಲ್ಲಿ ಯಾವುದೇ ಸಕಾರಾತ್ಮಕ ಬದಲಾವಣೆಗಳೂ ಆಗಿಲ್ಲ ಅಂಥಾ ಆರೋಪವನ್ನು ಕೂಡ ಮಾಡಿದರು.

ಈ ನಡುವೆ ರಾಷ್ಟ್ರೀಕೃತ ಬ್ಯಾಂಕ್​ಗಳಿಂದ ಪಡೆದಿರುವ ಸಾಲವನ್ನು ಮನ್ನಾ ಮಾಡಬೇಕೆಂದು ರೈತರ ಪ್ರತಿಭಟನೆ ಮುಂದುವರೆದಿತ್ತು. ತಮ್ಮ ಬೆಳೆಗಳಿಗೆ ನ್ಯಾಯಸಮ್ಮತ ಬೆಲೆ ನೀಡುವಂತೆ ಕೂಡ ಅವರು ಆಗ್ರಹಿಸತೊಡಗಿದರು. ಆದರೆ, ಕಡೆಗೆ ಕುಂಭಕರ್ಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತೆ ಕೇಂದ್ರ ಸರ್ಕಾರ ತಮಿಳುನಾಡಿಗೆ 1,447.99 ಕೋಟಿ ರೂ.ಗಳನ್ನು ಬರಪರಿಹಾರಕ್ಕಾಗಿ ಬಿಡುಗಡೆ ಮಾಡಿ ಕೈತೊಳೆದುಕೊಂಡುಬಿಟ್ಟಿದೆ. ಇದರಿಂದಾಗಿ ರೈತರ ಪ್ರತಿಭಟನೆ ಮತ್ತೆ ತೀವ್ರವಾಗಿದೆ.

ಪ್ರತಿಭಟನಾ ನಿರತ ರೈತರನ್ನು ಭೇಟಿ ಮಾಡಿ ಸಮಾಧಾನ ಹೇಳಿದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಕೇಂದ್ರ ಸರ್ಕಾರದ ಜೈಕಿಸಾನ್ ಘೋಷಣೆ ಕೇವಲ ಮತಗಳಿಕೆಗೆ ಸೀಮಿತ. ಪ್ರಧಾನಿ ನರೇಂದ್ರ ಮೋದಿಯವರಿಗೆ ತಮಿಳುನಾಡಿನ ರೈತರ ಸಮಸ್ಯೆಯನ್ನು ಕೇಳುವಷ್ಟು ಸಮಯ ಇಲ್ಲ. ದೇಶದ ರೈತರನ್ನು ಪ್ರಧಾನಿ ಕಡೆಗಣಿಸಿದ್ದಾರೆ. ಅಲ್ಲದೇ, ಪ್ರಧಾನಿ ದೇಶದ ಸಿರಿವಂತರ ಸಾಲಮನ್ನಾ ಮಾಡಿದ್ದಾರೆ. ಆದರೆ, ಈ ದೇಶವನ್ನು ಕಟ್ಟಿರುವ ಬಡವರ ಸಾಲ ಮನ್ನಾ ಏಕೆ ಮಾಡಿಲ್ಲ ಅನ್ನೋ ಮಾರ್ಮಿಕವಾದ ಪ್ರಶ್ನೆಯನ್ನು ಪ್ರಧಾನಿ ಮೋದಿಯವರ ಮುಂದಿಟ್ಟಿದ್ದಾರೆ. ಆದರೆ, ಮೋದಿಯವರು ತಮ್ಮ ಎಂದಿನ ಶೈಲಿಯಂತೆ ಈ ಸಂದರ್ಭದಲ್ಲಿ ಕೂಡ ತುಟಿ ಹೊಲಿದು ಕುಂತುಬಿಟ್ಟಿದಾರೆ.

ರೈತರ ಪ್ರತಿಭಟನೆ ಕುರಿತು ಮೋದಿ ಟ್ವೀಟ್ ಮಾಡಿದ್ರಾ?

ಹೌದು, ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾದ ಮೇಲೆ, ದೇಶದ ಪ್ರತಿಯೊಂದು ಆಗುಹೋಗುಗಳ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯಿಸುತ್ತಾರೆ. ಯಾವುದೋ ದೂರದ ಹಳ್ಳಿಯೊಂದರಿಂದ ಪ್ರಧಾನಿ ಕಚೇರಿಗೆ ಬಂದ ಪತ್ರಕ್ಕೆ ಕೂಡ ಪ್ರಧಾನಿ ಮೋದಿಯವರು ತಮ್ಮ ಬಿಡುವಿರದ ಷೆಡ್ಯೂಲ್​​ನಲ್ಲಿ ಕೂಡ ಉತ್ತರಿಸುತ್ತಾರೆ. ಇದರೊಂದಿಗೆ ಆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಮಾತನಾಡ್ತಾರೆ ಅನ್ನೋದು ಈ ದೇಶದ ಎಲ್ಲ ನಾಗರಿಕರಿಗೂ ಮನದಟ್ಟಾಗಿದೆ. ಇನ್ನು ಭಾರತದ ರೈತರ ಕುರಿತು ಪ್ರಧಾನಿ ಮೋದಿಯವರು ಒಂದು ಟ್ವೀಟ್ ಮಾಡಿದ್ರು. ಅದರಲ್ಲಿ ಭಾರತೀಯ ರೈತರು ದೇಶದ ಹೆಮ್ಮೆ. ಅವರ ಕಠಿಣ ಪರಿಶ್ರಮದಿಂದಾಗಿ ಲಕ್ಷಾಂತರ ಜನಕ್ಕೆ ಊಟ ಸಿಕ್ತಿದೆ. ಅವ್ರ ಯೋಗಕ್ಷೇಮಕ್ಕಾಗಿ ಅಗತ್ಯವಾದ ಎಲ್ಲ ಕೆಲಸಗಳನ್ನೂ ನಾವು ಮಾಡುತ್ತೇವೆ ಅಂಥ ಹೇಳಿಕೊಂಡಿದ್ದರು. ಆದರೆ, ಇದುವರೆಗೆ ತಮಿಳುನಾಡು ರೈತರ ಪ್ರತಿಭಟನೆ ಕುರಿತು ಮಾತ್ರ ಅವರು ತಮ್ಮ ಬೆರಳುಗಳನ್ನು ಬಳಸಿ ಟ್ವೀಟ್ ಮಾಡಿಯೇ ಇಲ್ಲ.

ಮನ್​ ಕೀ ಬಾತ್​​ನಲ್ಲಿ ರೈತರ ಸಮಸ್ಯೆ ಕುರಿತು ಮಾತನಾಡಿದ್ರಾ ಮೋದಿ?

2014ರ ಚುನಾವಣೆಯಿಂದ ಮೇರೇ ಪ್ಯಾರೇ ದೇಶ್ ವಾಸಿಯೋ, ಭಾಯಿಯೋ ಔರ್ ಬೆಹ್ನೋ ಎಂಬ ಮಾತುಗಳನ್ನು ಈ ದೇಶವಾಸಿಗಳು ಕೇಳಿಯೇ ಇರ್ತಾರೆ. ಕೆಲವರಿಗಂತೂ ಈ ಮಾತುಗಳನ್ನು ಕೇಳಿದರೆ ಏನೋ ರೋಮಾಂಚನ, ಪುಳಕ. ಇನ್ನು ಕೆಲವರಲ್ಲಿ ಈ ಭಾಷಣಗಳಿಂದ್ಲೇ ದೇಶ ಉದ್ಧಾರವಾಗಿಬಿಡುತ್ತೆ ಅನ್ನೋ ಖಚಿತವಾದ ನಂಬಿಕೆ ಕೂಡ ಇದೆ. ಇದೇ ಪ್ರಧಾನಿಯವರು ದೇಶದ ಎಲ್ಲ ಜನರ ಸಂಪರ್ಕದಲ್ಲಿರುವ ಸಲುವಾಗಿ, ಆಕಾಶವಾಣಿಯ ಮೂಲಕ ಮಾತನಾಡೋ ಮನ್​ ಕೀ ಬಾತ್ ಅನ್ನೋ ಕಾರ್ಯಕ್ರಮವನ್ನು ಕೂಡ ನಡೆಸಿಕೊಡುತ್ತಾರೆ. ಆದರೆ, ಇದುವರೆಗೆ ಮನ್​ ಕೀ ಬಾತ್​ನಲ್ಲಿ ಕೂಡ ರೈತರ ಗೋಳನ್ನು ಕುರಿತು, ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡಿಯೇ ಇಲ್ಲ. ಅಂದ್ಹಾಗೆ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವ್ರನ್ನು ಮೌನಿ ಪ್ರಧಾನಿ ಅಂತ ಇದೇ ನರೇಂದ್ರ ಮೋದಿಯವರು ಗೇಲಿ ಮಾಡಿದ್ರು. ಆದ್ರೆ, ಇದೇ ನರೇಂದ್ರ ಮೋದಿಯವರು ಇಡೀ ದೇಶ ಪ್ರಧಾನಿ ನರೇಂದ್ರ ಮೋದಿಯವರಿಂದ ಪ್ರತಿಕ್ರಿಯೆಯನ್ನು ನಿರೀಕ್ಷಿಸ್ತಿರೋ ಸಂದರ್ಭದಲ್ಲಿ, ಸಿಂಗ್ ಅವ್ರಿಗಿಂತ ಒಂದು ಕೈ ಮಿಗಿಲಾಗಿ ಮೌನವ್ರತಕ್ಕೆ ಜಾರಿಬಿಡ್ತಾರೆ. ಅದಕ್ಕೆ ಇನ್ನೊಂದಿಷ್ಟು ಉದಾಹರಣೆಗಳನ್ನು ಕೊಡುವುದಾದರೆ, ಗರಿಷ್ಠ ಮುಖಬೆಲೆಯ ನೋಟುಗಳ ನಿಷೇಧ, ಗೋರಕ್ಷರಿಂದ ಮುಸ್ಲಿಮರು, ದಲಿತರ ಮೇಲೆ ನಡೆಯುತ್ತಿರುವ ಹಲ್ಲೆ ಹತ್ಯೆ ಮುಂತಾದ ದೇಶದ ಮಾನವನ್ನು ಹರಾಜು ಹಾಕುತ್ತಿರುವ ವಿಷಯಗಳ ಕುರಿತು ಇದುವರೆಗೆ ಪ್ರಧಾನಿ ಮೋದಿಯವರು ತುಟಿ ಬಿಚ್ಚಿ ಮಾತನಾಡಿಲ್ಲ.

ಮೋದಿ ಪವಾಡ ಮಾಡೋ ನಿರೀಕ್ಷೆಯಲ್ಲಿದ್ದಾರೆ ಭಾರತೀಯ ಪ್ರಜೆಗಳು

27 ದಿನಗಳವರೆಗೆ ಪ್ರತಿಭಟಿಸಿದ ರೈತರು, ಪ್ರಧಾನಿ ತಮ್ಮ ಬಳಿ ಬಂದು ಸಮಸ್ಯೆಗಳನ್ನು ಆಲಿಸ್ತಾರೆ ಅಂತ ನಂಬಿಕೊಂಡಿದ್ರು. ಯಾಕೆಂದರೆ, ಪ್ರಧಾನಿ ಮೋದಿಯವರು ಆಡೋ ಪ್ರತಿ ಮಾತುಗಳು ಕೂಡ ಅವರು ಪವಾಡ ಮಾಡಿಯೇ ಮಾಡ್ತಾರೆ ಅನ್ನೋ ನಂಬಿಕೆಯನ್ನು ಹುಟ್ಟಿಸುತ್ವೆ. ವಿದೇಶದಲ್ಲಿರೋ ಕಪ್ಪುಹಣ ತಂದು 15 ಲಕ್ಷ ನಿಮ್ ಅಕೌಂಟಿಗೆ ಹಾಕ್ತೀನಿ ಅನ್ನೋದ್ರಿಂದ ಹಿಡಿದು, ಇತ್ತೀಚೆಗೆ 2022ರ ಹೊತ್ತಿಗೆ ದೇಶದ ಎಲ್ಲ ಬಡವರಿಗೆ ಸುಸಜ್ಜಿತವಾದ ಮನೆ ಕೊಡ್ತೀನಿ ಅಂತ ಹೇಳುವ ಎಲ್ಲ ಮಾತುಗಳನ್ನು ಕೇಳಿದ್ರೆ, ಸ್ವತಃ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೂಡ ತಾವೊಬ್ಬ ಪವಾಡ ಪುರುಷ ಅನ್ನೋ ನಂಬಿಕೆ ಇರೋ ಅನುಮಾನ ಮೂಡದೇ ಇರೋದಿಲ್ಲ. ಇನ್ನು ಅವರ ಭಕ್ತರಂತೂ ಅವರ ಮಾತುಗಳು ನಿಜಕ್ಕೂ ಪುರಾಣ ಕಾಲದ ಪವಾಡಗಳು ಮತ್ತೆ ಆರಂಭವಾಗೋ ಮುನ್ಸೂಚನೆ ಅಂತಲೇ ನಿಜಕ್ಕೂ ನಂಬಿದ್ದಾರೆ. ಆದರೆ, ಅಂಥಾ ಪವಾಡ, ರೈತರ ಪ್ರತಿಭಟನೆ ವಿಷಯದಲ್ಲಿ ನಡೆಯಲೇ ಇಲ್ಲ.

ಬಿರು ಬಿಸಿಲಿನಲ್ಲಿ ಪ್ರತಿಭಟನೆ ನಡೆಸಿ ಸೋತು, ಬಸವಳಿದಿದ್ದ ರೈತರು, ಕಡೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಖುದ್ದಾಗಿ ಭೇಟಿ ಮಾಡೋಕೆ ಸಮಯಾವಕಾಶ ಕೇಳಿದ್ರು. ಅದಕ್ಕೆ ಪ್ರಧಾನಿ ಕಚೇರಿಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಕೂಡ ಸಿಕ್ಕಿತ್ತು. ಏಪ್ರಿಲ್ 10ರಂದು ನಿಗದಿಯಾದ ಸಮಯಕ್ಕೆ ಸರಿಯಾಗಿ, ರೈತರು, ತಮ್ಮ ಬಹು ನಿರೀಕ್ಷಿತ ಪ್ರಧಾನಿ ಭೇಟಿಗೆ ಸಿದ್ಧವಾಗಿ ಕಚೇರಿ ತಲುಪಿದ್ರು. ಆದರೆ, ಅಂದು ಆಗಿದ್ದೇ ಬೇರೆ.

ಪ್ರಧಾನಿ ಭೇಟಿಗೆ ಕಾದು ಕುಳಿತಿದ್ದ ರೈತರಿಗೆ ಭಾರೀ ನಿರಾಸೆ ಕಾದಿತ್ತು. ಪ್ರಧಾನಿ ಭೇಟಿ ಸಾಧ್ಯವಿಲ್ಲ. ತಮ್ಮ ಮನವಿಗಳನ್ನು ಕೊಟ್ಟು ಹೋಗಿ ಅಂತ ಪ್ರಧಾನಿ ಕಚೇರಿ ಸಿಬ್ಬಂದಿ, 21ನೇ ಶತಮಾನದ ಪವಾಡ ಪುರುಷನ ಭೇಟಿಗೆ ಕಾದು, ತುದಿಗಾಲ ಮೇಲೆ ಕುಳಿತಿದ್ದ ರೈತರಿಗೆ ಹೇಳಿಬಿಟ್ಟರು. ಇದರಿಂದಾಗಿ ರೈತರು ರೊಚ್ಚಿಗೆದ್ದು ಪ್ರಧಾನಿ ಕಚೇರಿಯಲ್ಲೇ ಗದ್ದಲ ಮಾಡಿದರು. ತಕ್ಷಣ ಅವರನ್ನು ಪೊಲೀಸ್ ವಾಹನದಲ್ಲಿ ತುಂಬಿಕೊಂಡು, ಹೊರಗೆ ಬಿಡೋದಕ್ಕೆ ಪೊಲೀಸ್ರು ಮುಂದಾದರು.

ಪ್ರಧಾನಿ ಕಚೇರಿ ಎದುರು ಬೆತ್ತಲೆ ಪ್ರತಿಭಟನೆ ನಡೆಸಿದ ರೈತರು

ಪ್ರಧಾನಿ ಕಚೇರಿಯಿಂದ ತುಸು ದೂರ ಬಂದ ಪೊಲೀಸ್ ವಾಹನದಿಂದ ಇದ್ದಕ್ಕಿದ್ದಂತೆ ಒಬ್ಬ ರೈತ ಹಾರಿ ರಸ್ತೆ ಮೇಲೆ ನಿಂತುಬಿಟ್ಟರು. ಅವರ ಹಿಂದೆಯೇ ಇನ್ನಿಬ್ಬರು ರಸ್ತೆಗೆ ಹಾರಿಬಿಟ್ರು. 27 ದಿನಗಳ ಕಾಯುವಿಕೆ ಅವರ ಸಹನೆಯ ಕಟ್ಟೆಯನ್ನೇ ಸ್ಫೋಟಿಸಿಬಿಟ್ಟಿತ್ತು. ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ರೈತರು, ಪ್ರಧಾನಿ ಕಚೇರಿ ಎದುರೇ ತಮ್ಮ ಬಟ್ಟೆಗಳನ್ನು ಸಂಪೂರ್ಣ ಕಳಚಿ, ರಸ್ತೆಯಲ್ಲಿ ಉರುಳುಸೇವೆ ಮಾಡಿಬಿಟ್ರು. ಈ ಮೂಲಕ ತಮ್ಮ ಅಸಹನೆ, ಅಸಹಾಯಕತೆಗಳೆಲ್ಲವನ್ನೂ ಒಟ್ಟಿಗೆ ಹೊರಹಾಕಿದರು.

ನಮ್ಮ ಸಮಸ್ಯೆಯನ್ನು ಹೇಳಿಕೊಳ್ಳಲು ಅವಕಾಶವಿಲ್ಲ. ಆದ್ದರಿಂದ ಬೆತ್ತಲೆಯಾಗಿ ಓಡುತ್ತಿದ್ದೇವೆ ಎಂದು ಪ್ರತಿಭಟನಾಕಾರರಲ್ಲಿ ಒಬ್ಬರಾದ ಇಳೈಕಣ್ಣು ಆಕ್ರೋಶ ವ್ಯಕ್ತಪಡಿಸಿದರು. ಇದು ನಮ್ಮ ದುಃಖಕರ ಪರಿಸ್ಥಿತಿ. ನಮ್ಮ ಕರುಣಾಜನಕ ಸ್ಥಿತಿಯನ್ನು ನೋಡಿ ಅಂತ ಕೂಡ ಪ್ರಧಾನಿಯವರಿಗೆ ತಮ್ಮ ಪರಿಸ್ಥಿತಿಯನ್ನು ಅರಿವಿಗೆ ತರುವ ಪ್ರಯತ್ನ ಮಾಡಿದರು. ಆದರೆ, ಈ ಯಾವ ಹೃದಯ ವಿದ್ರಾವಕ ಘಟನೆಗಳೂ ನವಭಾರತ ನಿರ್ಮಾಣದ ಕನಸು ಮಾರುವ, ದೇಶದ ಅಭಿವೃದ್ಧಿ ಮಾಡುವ  ಕುರಿತು ಮಾತನಾಡುವ ಪ್ರಧಾನಿ ಮೋದಿಯವರ ಕಣ್ಣಿಗೆ ಬೀಳಲೇ ಇಲ್ಲ.

ರೈತರ ಪ್ರತಿಭಟನೆ ಕುರಿತು ಮಾಧ್ಯಮಗಳು ಮಾಡಿದ್ದೇನು?

ದಕ್ಷಿಣ ಭಾರತದ ಬೆರಳೆಣಿಕೆಯ ಕೆಲ ವಾಹಿನಿಗಳನ್ನು ಹೊರತು ಪಡಿಸಿದರೆ, ಉಳಿದ ರಾಷ್ಟ್ರೀಯ ಮತ್ತು ಸ್ಥಳೀಯ ಸುದ್ದಿ ವಾಹಿನಿಗಳಿಗೆ, ಪ್ರತಿಭಟನೆ ಮುಖ್ಯ ಸುದ್ದಿಯಾಗಲೇ ಇಲ್ಲ. ಯಾವಾಗ ರೈತರು ಬೆತ್ತಲೆ ಪ್ರತಿಭಟನೆ ನಡೆಸಿದರೋ ಆಗ ಕೆಲವು ಸುದ್ದಿ ವಾಹಿನಿಗಳ ಕುಂಭಕರ್ಣ ನಿದ್ದೆಗೆ ಭಂಗವಾಯಿತು. ತಕ್ಷಣ ಈ ಸುದ್ದಿಯನ್ನು ಪ್ರಸಾರ ಮಾಡಿದವು. ಈ ವಿಷಯ ರಾಷ್ಟ್ರೀಯ, ಅಂತರರಾಷ್ಟ್ರೀಯ ಸಮಸ್ಯೆಯಾಗಿ ಚರ್ಚೆಯಗುತ್ತೆ ಅನ್ನೋ ನಂಬಿಕೆ ಆಗ ಮೂಡಿತ್ತು. ಆದರೆ, ಬೆತ್ತಲೆ ಉರುಳು ಸೇವೆ ನಡೆದ ನಂತರ ನಡೆದದ್ದೇ ಬೇರೆ. ಏಪ್ರಿಲ್ 10ರಂದು ಮಾತ್ರ ಕೆಲ ಸಮಯ ತಮಿಳುನಾಡು ರೈತರ ಸಮಸ್ಯೆಯನ್ನು ತೋರಿಸಿದ ಮಾಧ್ಯಮಗಳು ಮತ್ತೆ ಅವರ ಪಾಡಿಗೆ ಅವರನ್ನು ಬಿಟ್ಟುಬಿಟ್ಟವು. ಅದಾದ ನಂತ್ರ ಕೂಡ ರೈತರು ತಮ್ಮ ಸಮಸ್ಯೆಗಳತ್ತ ದೇಶದ, ರಾಜಕಾರಣಿಗಳ, ಆಡಳಿತಾರೂಢ ಬಿಜೆಪಿ ಪಕ್ಷದ ಗಮನ ಸೆಳೆಯೋಕೆ ವಿನೂತನ ಪ್ರತಿಭಟನೆಯ ಮಾದರಿಗಳನ್ನು ಹುಡುಕುತ್ತಲೇ ಇದ್ದಾರೆ.

ಪ್ರತಿಭಟನೆ ಕುರಿತು ಬಿಜೆಪಿ ಹೇಳಿದ್ದೇನು?

ಅನ್ನ, ನೀರು, ನೆರಳಿಲ್ಲದೇ ರಸ್ತೆಯಲ್ಲಿ ಪ್ರತಿಭಟನೆಯಲ್ಲಿ ನಿರತರಾಗಿದ್ದ ರೈತರ ಕುರಿತು ಬಿಜೆಪಿ ಹೇಳಿದ್ದೇ ಬೇರೆ. ಬೆತ್ತಲೆ ಪ್ರತಿಭಟನೆಯನ್ನು ಖಂಡಿಸಿದ ಕೇಸರಿ ಪಕ್ಷ, ತಮಿಳುನಾಡು ಸರ್ಕಾರ ರೈತರನ್ನು ಪ್ರಚೋದಿಸಿ, ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವುದಕ್ಕೆ ಕುಮ್ಮಕ್ಕು ಕೊಡ್ತಿದೆ ಅಂದಿದೆ. ಅಚ್ಚರಿಯ ಅಂಶವೆಂದರೆ, ಈ ಕುರಿತು ತಮಿಳುನಾಡಿನ ಬಿಜೆಪಿ ಮುಖಂಡರು ಸೇರಿದಂತೆ ಯಾವ ಬಿಜೆಪಿಗರೂ ತುಟಿ ಬಿಚ್ಚುವ ಕೃಪೆಯನ್ನು ತೋರಿಸಿಯೇ ಇಲ್ಲ. ಬದಲಾಗಿ ರೈತರ ಪ್ರತಿಭಟನೆಯನ್ನು ಷಡ್ಯಂತ್ರ ಅಂತ ಕರೆದುಬಿಟ್ಟಿದೆ.

ಪ್ರಧಾನಿ ವೇಷಧಾರಿಯೆದುರು, ಸೀರೆಯುಟ್ಟು ಭಿಕ್ಷೆ

ಕಡೆಗೆ ತಮ್ಮ ಯಾವ ರೀತಿಯ ಬೇಡಿಕೆಗಳಿಗೂ ಬೆಲೆ ಇಲ್ಲ ಎಂದು ತಿಳಿದ ರೈತರು 32ನೇ ದಿನ, ಸೀರೆ ಉಟ್ಟುಕೊಂಡು ಪ್ರತಿಭಟನೆ ನಡೆಸಿದರು. ಪ್ರಧಾನಿ ಮೋದಿ ವೇಷಧಾರಿಯಿಂದ ಭಿಕ್ಷೆ ಕೇಳುವ ಮತ್ತು ರೈತರು ಸಾಲ ಮನ್ನಾ ಮನವಿ ಮಾಡುವ ಮೂಲಕ ರೈತರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಿಶೇಷವೆಂದರೆ ಪ್ರಧಾನಿ ವೇಷಧಾರಿ ರೈತರ ಮನವಿಯನ್ನು ತಿರಸ್ಕರಿಸಿದರು. ಈ ಸಂದರ್ಭದಲ್ಲಿ ಪ್ರಧಾನಿ ವೇಷಧಾರಿ, ಭಿಕ್ಷೆಯನ್ನು ನೀಡಲು ನಿರಾಕರಿಸಿದರು. ಜೊತೆಗೆ ಮನವಿ ಪತ್ರವನ್ನು ಪಡೆದು ನೀವು ಹೊರಡಿ ಎಂದು ಬೆರಳು ತೋರಿಸಿದರು. ಈ ಮೂಲಕ ತಮ್ಮ ಸಮಸ್ಯೆಯನ್ನು ಪರಿಹರಿಸಲು ಪ್ರಧಾನಿ ಮೋದಿ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ ಎನ್ನುವುದನ್ನು ಸಾಂಕೇತಿಕವಾಗಿ ದೇಶಕ್ಕೆ ತೋರಿಸೋ ಪ್ರಯತ್ನವನ್ನು ರೈತರು ನಡೆಸಿದರು.

ದೇಶದ ಅನ್ನದಾತರು ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ದೆಹಲಿಯಲ್ಲಿ 39 ಡಿಗ್ರಿ ತಾಪಮಾನವಿದೆ. ರಸ್ತೆಗಳಲ್ಲಿ ರೈತರು ಬರಿಗಾಲಿನಲ್ಲಿ ನಡೆದು, ಉರುಳಾಡಿ, ಲಾಗ ಹಾಕುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಗಾಯಗೊಂಡಿರುವ ರೈತರಿಗೆ, ಕೆಲ ಸಾಮಾಜಿಕ ಸಂಘಟನೆಗಳು ಚಿಕಿತ್ಸೆ ನೀಡಿವೆ. ಆರೋಗ್ಯ ತಪಾಸಣೆ ವೇಳೆ, ಕೆಲ ರೈತರ ಬಿಪಿಯಲ್ಲಿ ಭಾರೀ ಏರಿಕೆ ಕೂಡ ಕಂಡುಬಂದಿದೆ. ಆದರೆ, ಅವರ ಆರೋಗ್ಯದ ಕಡೆಗಾಗಲಿ, ಅವರ ಬೇಡಿಕೆಗಳನ್ನು ಈಡೇರಿಸುವ ಕಡೆಗಾಗಲೀ ಕೇಂದ್ರ ಸರ್ಕಾರ ಗಮನ ಹರಿಸಲೇ ಇಲ್ಲ. ಈ ವಿಷಯದಲ್ಲಿ ಕೇಂದ್ರ ಸರ್ಕಾರ ದಿವ್ಯ ನಿರ್ಲಕ್ಷ್ಯವನ್ನು ಮುಂದುವರೆಸಿಬಿಟ್ಟಿದೆ. ಹಿಡಿದ ಪಟ್ಟು ಬಿಡದ ರೈತರು ಕೂಡ ಪ್ರತಿಭಟನೆ ಮುಂದುವರಿಸಿದ್ದಾರೆ.

ಸಾಲಮನ್ನಾ, ವಿಶೇಷ ಪ್ಯಾಕೇಜ್, ನದಿ ಜೋಡಣೆ, ಸಮಗ್ರ ನೀರಾವರಿ ಯೋಜನೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ರೈತರು ನಡೆಸುತ್ತಿರುವ ಪ್ರತಿಭಟನೆ ಮುಂದುವರಿದಿದೆ. ದುರಾದೃಷ್ಟಕರ ಸಂಗತಿ ಎಂದರೆ, ರೈತರ ಯಾವ ರೀತಿಯ ಪ್ರತಿಭಟನೆಗಳು ಕೂಡ ಮುನ್ನೆಲೆಯಲ್ಲಿ ಚರ್ಚೆಯಾಗುತ್ತಿಲ್ಲ. ಈ ನಡುವೆ ನಮಾಜ್ ವೇಳೆ ಕೂಗುವ ಬಾಂಗ್​ನಿಂದಾಗಿ ನಿದ್ದೆ ಹಾಳಾಗುತ್ತೆ ಅಂತ ಟ್ವೀಟ್ ಮಾಡಿರೋ ಬಾಲಿವುಡ್ ಗಾಯಕ ಸೋನು ನಿಗಮ್, ರೈತರ ಪ್ರತಿಭಟನೆಯಿಂದ ನನಗೆ ನಿದ್ದೆ ಬಂದಿಲ್ಲ ಎಂದು ಯಾವುದೇ ಟ್ವೀಟ್ ಮಾಡಿಲ್ಲ. ಅವರ ಜೊತೆಗೆ ಕೇಂದ್ರ ಸರ್ಕಾರ ರೈತರ ಪ್ರತಿಭಟನೆಯನ್ನು ನಿಲ್ಲಿಸೋ ಪ್ರಯತ್ನ ಮಾಡಿಲ್ಲ. ಕಡೆಗೂ ರೈತರ ಗೋಳು ಕೇಳುವವರು ಯಾರು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

4+

Leave a Reply

Your email address will not be published. Required fields are marked *