ಸುದ್ದಿ ಟಿವಿ ಡಾಟ್ ಕಾಮ್​​ಗೆ ಎಲ್ಲರಿಗೂ ಸ್ವಾಗತ

ಸುದ್ದಿ ಟಿವಿ ಡಾಟ್ ಕಾಮ್​ಗೆ ತಮಗೆಲ್ಲ ಸ್ವಾಗತ. ಹೊಸ ಕನಸುಗಳೊಂದಿಗೆ ಪ್ರಾರಂಭವಾದ ಸುದ್ದಿ ಟಿವಿ ಈಗ ಮೂರು ತಿಂಗಳನ್ನು ಮುಗಿಸುತ್ತಿದೆ. ಈ ಅವಧಿಯಲ್ಲಿ ನಮ್ಮ ವಾಹಿನಿಯನ್ನು ವಿಭಿನ್ನವಾಗಿ ನೀಡಲು ಯತ್ನ ನಡೆಸಿದ್ದೇವೆ. ಬೇರೆ ಯಾವುದೇ ವಾಹಿನಿಯ ಅನುಕರಣೆಯನ್ನು ನಾವು ಮಾಡುತ್ತಿಲ್ಲ. ನಾವು ನಮ್ಮದೇ ಹಾದಿಯಲ್ಲಿ ನಡೆಯುತ್ತಿದ್ದೇವೆ. ಇದು ಸತ್ಯದ ಹಾದಿ. ಚಿಂತನೆಯ ಹಾದಿ. ಬದುಕನ್ನು ಗುಣಾತ್ಮಕವಾಗಿ ನೋಡುವ ಹಾದಿ. ನಾವು ಅನಗತ್ಯವಾಗಿ ಯಾವ ಸುದ್ದಿಯನ್ನು ವೈಭವೀಕರಿಸುವುದಿಲ್ಲ. ಎಲ್ಲವನ್ನು ಮೆಲು ದನಿಯಲ್ಲಿ ಹೇಳುತ್ತ ನಿಮ್ಮ ಹೃದಯಗಳಿಗೆ ಅದನ್ನು ತಲುಪಿಸುವ ಯತ್ನ ನಮ್ಮದು. ನಮಗೆ ಗೊತ್ತಿದೆ. ಈವತ್ತಿನ ಸಂದರ್ಭದಲ್ಲಿ ನಮ್ಮ ಧ್ವನಿ ನೋಡುಗರನ್ನು ತಲುಪಲು ಸಮಯ ಬೇಕು. ಎಲ್ಲರೂ ಒಂದೇ ರೀತಿಯಲ್ಲಿ, ಒಂದೇ ರೀತಿ ಗಟ್ಟಿ ಧ್ವನಿಯಲ್ಲಿ ಮಾತನಾಡುವಾಗ ನಮ್ಮ ಮೆಲು ಮಾತು ಕೇಳುವುದು ಕಷ್ಟ. ಆದರೆ ನಮ್ಮ ನೋಡುಗರು ನಮ್ಮ ಧ್ವನಿಯನ್ನು ಕೇಳಿಸಿಕೊಳ್ಳುತ್ತಾರೆ ಎಂಬ ವಿಶ್ವಾಸ ನಮ್ಮದು. ಸಂತೆಯಲ್ಲಿ ಮೌನ ತರವಲ್ಲ ಎಂದು ಬಹಳಷ್ಟು ಜನರಿಗೆ ಅನ್ನಿಸಬಹುದು. ಆದರೆ ಸಂತೆಯಲ್ಲಿ ಎಲ್ಲರೂ ಮಾತನಾಡುವಾಗ ಮೌನವಾಗಿರುವವರು ವಿಚಿತ್ರವಾಗಿ ಕಾಣುತ್ತಾರೆ. ಇದು ಸಹಜ. ಆದರೆ ವಿಭಿನ್ನ ಧ್ವನಿಯಲ್ಲಿ ಮಾತನಾಡುವವರು, ಮೌನವಾಗಿ ಇರುವವರು ಹೆಚ್ಚು ಪರಿಣಾಮ ಬೀರಬಲ್ಲರು. ಮೌನಕ್ಕೆ ಇರುವ ಶಕ್ತಿ ಮಾತಿಗೆ ಇಲ್ಲ. ಸುದ್ದಿ ಟಿವಿ ಡಾಟ್ ಕಾಮ್ ಬ್ರೇಕಿಂಗ್ ನ್ಯೂಸ್ ನಿಂದ ಪ್ರಾರಂಭವಾಗಿ ಲೇಖನ ವಿಶ್ಲೇಷಣೆ ಎಲ್ಲವನ್ನೂ ನಿಮಗೆ ನೀಡುತ್ತದೆ. ನಮ್ಮ ಸಹೋದ್ಯೋಗಿಗಳು ಲೇಖನ ಬರೆಯುತ್ತಾರೆ. ನಾವು ಸುದ್ದಿ ವಾಹಿನಿಯಲ್ಲಿ ನೀಡಿದ್ದು, ನೀಡದಿರುವುದು ಎಲ್ಲವೂ ನಿಮಗೆ ಈ ತಾಣದಲ್ಲಿ ಸಿಗುತ್ತದೆ. ಹಾಗೆ ಈ ತಾಣದ ಮೂಲಕವೇ ಸುದ್ದಿ ವಾಹಿನಿಯ ಕಾರ್ಯಕ್ರಮಗಳನ್ನು ನೋಡಬಹುದು. ಸುದ್ದಿ ಲೈವ್ ಕೂಡ ಇಲ್ಲಿ ದೊರಕುತ್ತದೆ. ಈಗ ನಾನು ಹೆಚ್ಚು ಮಾತನಾಡಲಾರೆ. ಪ್ರತಿ ದಿನ ನಾನು ಈ ತಾಣದ ಮೂಲಕ ತಮ್ಮ ಜೊತೆ ಮಾತನಾಡುತ್ತೇನೆ. ಇದಕ್ಕಿಂತ ಸಂತೋಷ ನನಗೆ ಬೇರೆ ಇಲ್ಲ.

ಶಶಿಧರ್ ಭಟ್

ನಿರ್ದೇಶಕ ಮತ್ತು ಪ್ರಧಾನ ಸಂಪಾದಕ

ಸುದ್ದಿ ಟಿವಿ

8+

One thought on “ಸುದ್ದಿ ಟಿವಿ ಡಾಟ್ ಕಾಮ್​​ಗೆ ಎಲ್ಲರಿಗೂ ಸ್ವಾಗತ

  1. ಖಂಡಿತ..ಸುಳ್ಳು ಹೇಳದ ಸದ್ದು ಮಾಡದ ಮೌನ ಮೆರವಣಿಗೆ ನಮಗೆ ಬೇಕು..

    4+

Leave a Reply

Your email address will not be published. Required fields are marked *