ದೇಶ ಹೊಸ ದಾಖಲೆಗಳತ್ತ ದಾಪುಗಾಲಿಟ್ಟಿದೆ: ನರೇಂದ್ರ ಮೋದಿ

ದೆಹಲಿ: 2014ರಿಂದ ಇಲ್ಲಿಯವರೆಗೆ ದೇಶದ ಜನ ಕೇವಲ ಸರ್ಕಾರವನ್ನು ರಚಿಸಿ ಸುಮ್ಮನೆ ಕುಳಿತಿಲ್ಲ. ಅವರು ದೇಶ ಕಟ್ಟುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಈ ನಾಲ್ಕು ವರ್ಷಗಳ ಅವಧಿಯಲ್ಲಿ ನಮ್ಮ ಸಾಧನೆಗೆ ನಾವು ಹೆಮ್ಮೆ ಪಡುತ್ತೇವೆ. ನಾವು ಎಲ್ಲಿಂದ ಬಂದಿದ್ದೇವೆ ಎನ್ನುವುದನ್ನೂ ನೋಡಬೇಕು ಎಂದ ಅವರು, ಈ ಅವಧಿಯಲ್ಲಿ ದೇಶ ನಂಬಲಾಗದ ದಾಪುಗಾಲುಗಳನ್ನು ಇಟ್ಟಿರುವುದನ್ನು ಅರಿಯಬಹುದು ಎಂದರು.

ಅಂಬೇಡ್ಕರ್ ನೀಡಿರುವ ಸಂವಿಧಾನ ಎಲ್ಲರಿಗೂ ನ್ಯಾಯದ ಕುರಿತು ಮಾತನಾಡುತ್ತದೆ. ನಾವು ಎಲ್ಲರಿಗೂ ಸಾಮಾಜಿಕ ನ್ಯಾಯ ನೀಡುವ ಮೂಲಕ ಕ್ಷಿಪ್ರ ಅಭಿವೃದ್ಧಿಗೆ ಬದ್ಧವಾಗಿದ್ದೇವೆ ಎಂದರು. ಮುಂದಿನ ವರ್ಷ ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಶತಮಾನ ಕಳೆಯಲಿದೆ. ಜೀವ ಬಲಿದಾನ ಮಾಡಿದ ಎಲ್ಲರಿಗೂ ನಮನಗಳು ಎಂದರು. ದೇಶದ ಅನೇಕ ಕಡೆ ಉತ್ತಮ ಮಳೆಯಾಗಿದೆ. ಆದರೆ, ಅನೇಕ ಕಡೆ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದ ಅವರು
ಎಲ್ಲ ನೊಂದವರ ಕುಟುಂಬಗಳಿಗೆ ಸಾಂತ್ವನ ಹೇಳಿದರು.

ಹೊಸ ಮೈಲಿಗಲ್ಲಿಗೆ ಭಾರತವನ್ನು ಕೊಂಡಯ್ಯಲು ಯತ್ನಿಸುತ್ತಿದ್ದೇವೆ. 125 ಕೋಟಿ ಜನರ ನಿರ್ಧಾರವನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಎಲ್ಲರಿಗೂ ಸಮಾನ ಅವಕಾಶ ಕೊಡಲು ಯತ್ನಿಸುತ್ತಿದ್ದೇವೆ ಎಂದರು. ಭಾಷಣದಲ್ಲಿ 12 ವರ್ಷಕ್ಕೊಮ್ಮೆ ಪಶ್ಚಿಮ ಘಟ್ಟದಲ್ಲಿ ಅರಳುವ ನೀಲಕುರಂಜಿ ಹೂವನ್ನು ನೆನಪಿಸಿಕೊಂಡರು.

ಭಾರತ ಜಗತ್ತಿನ 6ನೇ ಅತಿದೊಡ್ಡ ಆರ್ಥಿಕ ಶಕ್ತಿ. ಸೇನಾಪಡೆಗಳು ಸ್ವಾರ್ಥರಹಿತವಾಗಿ ರಕ್ಷಣೆಯಲ್ಲಿ ನಿರತವಾಗಿವೆ ಎಂದು ಅವರು ಸೈನಿಕರ ಸೇವೆಯನ್ನು ನೆನೆದರು. ದೇಶವನ್ನುದ್ದೇಶಿಸಿ ಪ್ರಧಾನಿ ಕೆಂಪು ಕೋಟೆಯಲ್ಲಿ ಭಾಷಣ ಮಾಡಿದ ಅವರು, ನಮ್ಮ ಸರ್ಕಾರ ದುರ್ಬಲರಿಗೆ ನ್ಯಾಯ ಒದಗಿಸಲು ಬದ್ಧವಾಗಿದೆ.
ಒಬಿಸಿ ಆಯೋಗಕ್ಕೆ ನಮ್ಮ ಸರ್ಕಾರ ಸಾಂವಿಧಾನಿಕ ಮಾನ್ಯತೆ ನೀಡಿದೆ. ಕಳೆದ ಸಂಸತ್ ಅಧಿವೇಶನ ಉತ್ಪಾದಕವಾಗಿದೆ ಎಂದರು.

ಹೊಸ ಕನಸು, ಉತ್ಸಾಹದೊಂದಿಗೆ ದೇಶ ಮುನ್ನಡೆಯುತ್ತಿದೆ. ಎವರೆಸ್ಟ್ ಏರಿದ ಭಾರತೀಯರು ತಿರಂಗ ಧ್ವಜ ಹಾರಿಸಿದ್ದಾರೆ. ದೇಶದ ತಿರಂಗ ಹಾರಿಸಿದ ಎಲ್ಲರಿಗೂ ನೂರುನೂರು ನಮನಗಳು. ದೇಶದ ಸಮಸ್ತ ನಾಗರಿಕರಿಗೆ ಸ್ವಾತಂತ್ರ್ಯೋತ್ಸವದ ಶುಭಾಷಯಗಳನ್ನು ಕೋರಿದರು. ಹೊಸ ಗಾಳಿ, ಹೊಸ ಆನಂದ ನಮ್ಮದಾಗಿದೆ. ದೇಶ ಹೊಸ ಮೈಲುಗಲ್ಲುಗಳನ್ನು ದಾಟುತ್ತಿದೆ. ಏಳು ಸಮುದ್ರಗಳನ್ನು ದಾಟಿ ನಮ್ಮ ಹೆಣ್ಣು ಮಕ್ಕಳು ತಿರಂಗ ಹಾರಿಸಿದ್ದಾರೆ. ಚಿಕ್ಕಪುಟ್ಟ ಆದಿವಾಸಿ ಮಕ್ಕಳು ಕೂಡ ತಿರಂಗ ಹಾರಿಸುತ್ತಿದ್ದಾರೆ ಎಂದು ದೇಶದ ನಾಗರಿಕರ ಸಾಧನೆಗಳನ್ನು ಹೊಗಳಿದರು.

2013ರಲ್ಲಿ ಶೌಚಾಲಯಗಳನ್ನು ಕಟ್ಟಿದ ವೇಗದಲ್ಲಿ ಕಟ್ಟಿದಲ್ಲಿ, ಪೂರ್ಣಗೊಳಿಸಲು ದಶಕಗಳ ಕಾಲದ ಅವಧಿಯ ಅಗತ್ಯವಿದೆ. ರೈತರ ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಬೇಡಿಕೆ ಬಹಳ ದಿನಗಳಿಂದ ಇತ್ತು. ರೈತರು, ರಾಜಕಾರಣಿಗಳು, ಕೃಷಿ ತಜ್ಞರು ಇದಕ್ಕಾಗಿ ಒತ್ತಾಯಿಸುತ್ತಿದ್ದರು. ಆದರೆ ಈ ವಿಷಯದಲ್ಲಿ ಏನೂ ಆಗಿರಲಿಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ ಕನಿಷ್ಠ ಬೆಂಬಲ ಬೆಲೆ ನೀಡುವ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದರು.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *