ಎಚ್ಚರಿಕೆಯ ಗಂಟೆ ಬಾರಿಸಿದ ಇಂಗ್ಲೆಂಡ್​ ಸೋಲು

ಟೀಮ್​ ಇಂಡಿಯಾ ಇಂಗ್ಲೆಂಡ್​ ವಿರುದ್ಧದ ಸರಣಿಯಲ್ಲಿ ವೈಫಲ್ಯ ಅನುಭವಿಸಿದ್ರು. ಕೊಹ್ಲಿ ಪಡೆ ಉತ್ತರ ಪೌರುಷನಂತೆ ಮೊದಲು ಜಾಗಟೆ ಹೊಡೆದಿದ್ದೇ ಬಂತು, ಮೈದಾನದಲ್ಲಿ ಮಾತ್ರ ಸ್ಟಾರ್​ ಪ್ಲೇಯರ್ಸ್​​ ಮಕಾಡೆ ಮಲಗಿದ್ರು. ಟೀಮ್​ ಇಂಡಿಯಾ ನಾಯಕ ಆಟಗಾರನಾಗಿ ಬೆಸ್ಟ್​​ ಆಟ ಪ್ರದರ್ಶಿಸಿದ್ರೆ, ನಾಯಕನಾಗಿ ಹಲವು ತಪ್ಪುಗಳನ್ನು ಮಾಡಿದ್ದಾರೆ. ಮುಂಬರುವ ಮಾರಿ ಹಬ್ಬಕ್ಕೆ ಸಜ್ಜಾಗಲು ಈ ಟೆಸ್ಟ್​​ ಸೂಕ್ತ ವೇದಿಕೆ ಆಗಲಿದೆ. ಆದ್ರೆ, ಇದ್ರಿಂದ ಪಾಠ ಕಲಿಯಬೇಕಾದವರು, ಪಾಠ ಕಲಿಯಬೇಕು. ಇಂಗ್ಲೆಂಡ್​ ನೆಲದಲ್ಲಿ ಟೀಮ್​ ಇಂಡಿಯಾ ಹೀನಾಯ ಸೋಲಿಗೆ, ತಂಡ ಎಷ್ಟು ಕಾರಣನೋ ಅಷ್ಟೇ ಹೊಣೆ ಟೀಮ್​ ಇಂಡಿಯಾದ ಕೋಚ್​ ರವಿ ಶಾಸ್ತ್ರಿ ಅವರದ್ದಾಗಿದೆ.

ರವಿ ಶಾಸ್ತ್ರಿ ಇಂಗ್ಲೆಂಡ್​ ಪ್ರವಾಸದ ವೇಳೆ ಮಾತನಾಡುವ ಧಾಟಿ ಹಾಗೂ ಬಾಡಿ ಲ್ಯಾಂಗ್ವೆಜ್​ ನೋಡಿದ್ರೆ, ಸಾಧನೆಯ ಗುಡ್ಡವನ್ನು ಹತ್ತಿ ವಿಶ್ರಮಿಸಿದಂತೆ ಇತ್ತು. ಪಾಪ ಅವರಿಗೇನು ಗೊತ್ತು, ತಮ್ಮ ತಂಡ ವಿದೇಶದಲ್ಲಿ ಹಳೆ ಟ್ರ್ಯಾಕ್​​ನಲ್ಲೇ ನಡೆಯುತ್ತದೆ ಎಂದು. ಈ ಎಲ್ಲಾ ಸೋಲುಗಳು ರವಿ ಶಾಸ್ತ್ರಿ ಅವರತ್ತ ಬೊಟ್ಟು ಮಾಡುತ್ತಿವೆ. ಒಂದರ್ಥದಲ್ಲಿ ಇದು ಅಕ್ಷರಶಃ ಸುಳ್ಳು ಅಲ್ಲವೇ ಅಲ್ಲ. ಇಂಗ್ಲೆಂಡ್​ ಪ್ರವಾಸದಲ್ಲಿ ರವಿ ಶಾಸ್ತ್ರಿ ಹಾವ, ಭಾವವನ್ನು ಒಮ್ಮೆ ನೋಡಿದ್ರೆ, ಇವರು ಕೋಚ್​ ಮಾಡೋದಕ್ಕೆ ಹೋಗಿದ್ದಾರೋ ಅಥವಾ ಮಜಾ ಮಾಡೋಕೆ ಹೋಗಿದ್ರೋ ಎಂಬ ಅನುಮಾನ ಮೂಡದೆ ಇರದು. ಕೋಚ್​ ಆದವರು ಶಿಸ್ತಿನ ಸಿಪಾಯಿಯಾಗಿ ಕೆಲಸ ಮಾಡಬೇಕು. ಆದ್ರೆ, ಈ ಪ್ರವಾಸದಲ್ಲಿ ಬೇಲಿಯೇ ಎದ್ದು ಹೊಲ ಮೇದಂತೆ ಕಾಣುತ್ತಿದೆ.

ರವಿ ತನ್ನ ಪ್ರಖರ ಬೆಳಕಿನಿಂದ ಜಗತ್ತಿಗೆ ಬೆಳಕು ನೀಡುತ್ತಾನೆ. ಆ ರವಿ ತನ್ನನ್ನು ತಾನೇ ಸುಟ್ಟು ಕೊಂಡು ಬೇರೆಯವರ ಏಳಿಗೆಗೆ ಶ್ರಮಿಸುತ್ತಾನೆ. ಆದ್ರೆ, ಈ ರವಿ ತನ್ನ ಅನುಭವವನ್ನು ಧಾರೆ ಎರೆದು ತಂಡ ಕಟ್ಟುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ತಂಡದ ಆಯ್ಕೆ ಹಾಗೂ ಬೆಸ್ಟ್​ ಪ್ಲೇಯಿಂಗ್​ ಇಲೆವೆನ್​ ಕಣಕ್ಕೆ ಇಳಿಸುವಲ್ಲಿ ರವಿ ಶಾಸ್ತ್ರಿ ಮಕಾಡೆ ಮಲಗಿದ್ದಾರೆ. ಸದ್ಯದ ಟೀಮ್​ ಇಂಡಿಯಾದ ಆಟದ ವೈಖರಿ ನೋಡ್ತಾ ಇದ್ರೆ, ಕೋಚ್​ ತಮ್ಮ ಕಾರ್ಯವನ್ನು ನಿಭಾಯಿಸುವಲ್ಲಿ ಎಡವುತ್ತಿರೋದು ಎದ್ದು ಕಾಣುತ್ತಿದೆ. ಇದ್ರಿಂದ ಅಭಿಮಾನಿಗಳು ಕೆಂಡಾ ಮಂಡಲರಾಗಿದ್ದಾರೆ.

ಕೋಚ್​​ ರವಿ ಶಾಸ್ತ್ರಿ ಅವರನ್ನು ತೊಲಗಿಸಿ ಎಂಬ ಕೂಗನ್ನು ಸಾಮಾಜಿಕ ತಾಣದಲ್ಲಿ ಎತ್ತಲಾಗಿದೆ. ಈ ಸ್ಥಾನಕ್ಕೆ ಅಂಡರ್​ 19 ವಿಶ್ವಕಪ್​ ವಿಜೇತ ತಂಡದ ಕೋಚ್​ ರಾಹುಲ್​ ದ್ರಾವಿಡ್​ರನ್ನು ಕೂರಿಸುವಂತೆ ಕೇಳಿ ಕೊಳ್ಳಲಾಗುತ್ತಿದೆ. ದ್ರಾವಿಡ್​ ಹೆಸರು ಕೋಚ್​ ಹುದ್ದೆಗೆ ಆಗಾಗೇ ಕೇಳಿ ಬರುತ್ತಿದ್ದು, ರಾಹುಲ್​ ಈ ಹಿಂದೆ ಈ ಬಗ್ಗೆ ಮೌನ ಮುರಿದಿದ್ದರು. ಅಲ್ಲದೆ ಕಿರಿಯರ ತಂಡಕ್ಕೆ ತರಬೇತಿ ನೀಡೋದ್ರಲ್ಲೇ ಖುಷಿ ಪಡುತ್ತಿರೋದಾಗಿ ಹೇಳಿದ್ರು.

ಟೀಮ್​ ಇಂಡಿಯಾ ವಿಶ್ವಕಪ್​ ಗೆಲ್ಲುವ ಆಸೆಯನ್ನು ಹೊಂದಿದ್ದು, ಈ ಅಶ್ವಮೇಧ ಯಾಗಕ್ಕೆ ಇನ್ನು ಒಂದು ವರ್ಷ ಬಾಕಿ ಉಳಿದಿದೆ. ಆಗಲೇ ತುಕ್ಕು ಹಿಡಿದ ಶಸ್ತ್ರಗಳಿಗೆ ಸಾಣಿ ಹಿಡಿಯುವ ಕಾರ್ಯ ಮಾಡಬೇಕು. ಇಲ್ಲದೇ ಇದ್ದರೆ, ಸೋಲಿನ ಹಾದಿಯಲ್ಲಿ ಮುಳ್ಳಿನ ನೋವು ವಿರಾಟ್​ ಪಡೆಯನ್ನು ಅಪ್ಪಿಕೊಳ್ಳುತ್ತಲೇ ಇರುತ್ತವೆ. ಹೀಗಾಗಿ ಆಗಾಗ ವಿ ಪ್ಲೇಯ್ಡ್​​​ ಅವರ್ ಬೆಸ್ಟ್ ಅನ್ನೋ ಮಾತುಗಳನ್ನ ಅಭಿಮಾನಿಗಳ ಕಿವಿಯಲ್ಲಿ ಗುಯ್ಗುಡುತ್ತಲೇ ಇರುತ್ತವೆ. ವಿರಾಟ್​​ ಪ್ಲೀಜ್​ ಇನ್ಮುಂದೆ ಹೀಗೆ ಮಾಡಾಬೇಡಿ.

0

Leave a Reply

Your email address will not be published. Required fields are marked *