ಪಾಕ್ ವಿರುದ್ಧ ಯುದ್ಧ: 1999 ಹಿಸ್ಟರಿ ರಿಪೀಟ್ಸ್!

ಅದು 1999. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ಎನ್​ಡಿಎ ಸರ್ಕಾರ ಅಧಿಕಾರದಲ್ಲಿತ್ತು. ಮೈತ್ರಿಕೂಟದಲ್ಲಿದ್ದ ಎಐಎಡಿಎಂಕೆ ಪ್ರತಿದಿನ ಬೆಂಬಲ ವಾಪಸ್ ಪಡೆಯುವುದಾಗಿ ಬಹಿರಂಗವಾಗಿ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದರು. ಆಗ, ತಮ್ಮ ಸರ್ಕಾರ ಅಲ್ಪಮತಕ್ಕೆ ಕುಸಿದು ಬೀಳುವ ಕುರಿತು ಬಿಜೆಪಿಗೆ ಯಾವುದೇ ಅನುಮಾನ ಉಳಿದಿರಲಿಲ್ಲ.

ಇವೆಲ್ಲದರ ನಡುವೆ ಎನ್​ಡಿಎ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಜಯಲಲಿತಾ ವಾಪಸ್ ಪಡೆದರು. ಕೇವಲ ಒಂದೇ ಒಂದು ಮತದ ಅಂತರದಿಂದ ಅಟಲ್ ನೇತೃತ್ವದ ಎನ್​ಡಿಎ ಸರ್ಕಾರ ಬಿದ್ದುಹೋಯಿತು. ಏಪ್ರಿಲ್ 17, 1999ರಂದು ಬಹುಮತವನ್ನು ಸಾಬೀತುಪಡಿಸಲು ಅಟಲ್ ವಿಫಲವಾದರು. ನಂತರ ಉಸ್ತುವಾರಿ ಪ್ರಧಾನಿಯಾಗಿ ಅಟಲ್ ಮುಂದುವರೆದರು.

ಉಸ್ತುವಾರಿ ಪ್ರಧಾನಿಯಾಗಿ ಅಧಿಕಾರ ನಡೆಸುತ್ತಿದ್ದ ಅಟಲ್ ಬಿಹಾರಿ ವಾಜಪೇಯಿ ಸರ್ಕಾರಕ್ಕೆ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕಾದ ಒತ್ತಡವಿತ್ತು. ಅದರಲ್ಲೂ ಒಂದೇ ಒಂದು ಮತದಿಂದ ಹೊಂದಿದ ಪರಾಭವಕ್ಕೆ ತಕ್ಕ ಪ್ರತ್ಯುತ್ತರ ಕೊಡಬೇಕಿತ್ತು. ದಶಕಗಳ ಕಾಲ ಹೋರಾಡಿ ಪಡೆದಿದ್ದ ಅಧಿಕಾರ ಒಂದು ಕಡೆ, ಮಿತ್ರಪಕ್ಷ ಕೈಕೊಟ್ಟ ನೋವು ಮತ್ತೊಂದೆಡೆ. ಆಗ ಪಾಕಿಸ್ತಾನದ ವಿರುದ್ಧ ಯುದ್ಧದ ಚಿಂತನೆ ಮೊಳಕೆ ಹೊಡೆಯಿತು.

ದೇಶದಲ್ಲಿ ಇರುವ ಎಲ್ಲ ಸಮಸ್ಯೆಗಳನ್ನೂ ಕರಗಿಸುವ ಶಕ್ತಿ ಇರುವುದು ಪಾಕಿಸ್ತಾನದ ವಿರುದ್ಧದ ಯುದ್ಧಕ್ಕೆ. ಕಣ್ಣೆದುರಿನ ತಳಮಳಗಳನ್ನು ಮರೆಮಾಚುವುದು ಯುದ್ಧದಿಂದ ತುಂಬಾ ಸುಲಭ. ಇಂತಹ ಭಾವನಾತ್ಮಕ ವಿಷಯಗಳನ್ನು ಯಾವುದೇ ರಾಜಕೀಯ ಪಕ್ಷ ಮತ್ತು ರಾಜಕಾರಣಿಗಳು ಬಳಸಿಕೊಳ್ಳುವುದು ಸಹಜ ಸಂಗತಿ. ಆದರೆ, ಇಂತಹ ಸಂಗತಿಗಳನ್ನು ಅತಿಹೆಚ್ಚು ಬಳಸಿಕೊಳ್ಳುವ ಕಲೆ ಸಂಘ ಪರಿವಾರ ಮತ್ತು ಬಿಜೆಪಿಯವರಿಗೆ ಕರಗತವಾಗಿದೆ. ಇದಕ್ಕೆ ನಾಡು, ನುಡಿ, ಗಡಿ, ಜಲ ಸಮಸ್ಯೆಗಳೂ ಹೊರತಲ್ಲ. 2018ರ ವಿಧಾನಸಭೆ ಚುನಾವಣೆ ವೇಳೆ ಅಮಿತ್ ಶಾ ಅವರು ಮಹದಾಯಿ ಸಮಸ್ಯೆ ಪರಿಹಾರವಾಗಬೇಕಾದರೆ ಬಿಜೆಪಿಯನ್ನು ಗೆಲ್ಲಿಸಿ ಎಂದು ಕನ್ನಡಿಗರಿಗೆ ಆಮಿಶ ಒಡ್ಡಿದ್ದರು. ಕಾವೇರಿ ಇತ್ಯಾದಿ ನೀರು ಹಂಚಿಕೆ ವಿಷಯಗಳು ಕೂಡ ಅಧಿಕಾರಸ್ಥರಿಗೆ ಒಂದು ಅಸ್ತ್ರವಾಗಿಯೇ ಬಳಕೆಯಾಗುತ್ತದೆ.

ಅಧಿಕಾರಸ್ಥರು ತಮ್ಮ ಹುಳುಕುಗಳನ್ನು ಮರೆಮಾಚಲು ಇಂತಹ ಭಾವನಾತ್ಮಕ ಸಂಗತಿಗಳನ್ನು ಬಳಸಿಕೊಳ್ಳುತ್ತಾರೆ. ರಫೇಲ್ ಅವ್ಯವಹಾರದ ಕುರಿತು ದೊಡ್ಡದಾಗಿ ಸುದ್ದಿಯಾದ ಅವಧಿಯಲ್ಲಿ ದೇಶದಲ್ಲಿ ಮಸೀದಿಯ ಬಾಂಗ್ ಸುದ್ದಿ ದೊಡ್ಡ ಸದ್ದು ಮಾಡತೊಡಗುತ್ತದೆ. ಅನಂತರ, ಮೀಟೂ ಅಭಿಯಾನ ದೊಡ್ಡದಾಗುತ್ತದೆ. ನಂತರ ಪದ್ಮಾವತ್ ಚಲನಚಿತ್ರ ಬಿಡುಗಡೆ ವಿಷಯ ದೊಡ್ಡದಾಗುತ್ತದೆ. ಆ ಮೂಲಕ ತನ್ನ ಸಮಸ್ಯೆಯನ್ನು ಅಧಿಕಾರಸ್ಥ ಪಕ್ಷಗಳು ಪರಿಹರಿಸಿಕೊಳ್ಳುತ್ತವೆ.

ಕರ್ನಾಟಕದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು ನಂತರ ಯಡಿಯೂರಪ್ಪನವರು ಸಿಎಂ ಆದ ಸಂಗತಿಯನ್ನು ನೆನಪಿಸಿಕೊಳ್ಳಿ. ಯಡಿಯೂರಪ್ಪನವರಿಗೆ ನೀಡಿದ್ದ ಬೆಂಬಲವನ್ನು 11 ಬಿಜೆಪಿ ಶಾಸಕರು, 5 ಪಕ್ಷೇತರ ಶಾಸಕರು ವಾಪಸ್ ಪಡೆದಿದ್ದರು. ಆಗ ಅವರ ಸರ್ಕಾರ ಅಲ್ಪಮತಕ್ಕೆ ಕುಸಿದಿತ್ತು.

ಕೆ ಜೆ ಬೋಪಯ್ಯ ಅನರ್ಹಗೊಳಿಸಿದ್ದ ಶಾಸಕರು

           ಕ್ಷೇತ್ರ                  ಶಾಸಕ

  1. ಅರಭಾವಿ – ಬಾಲಚಂದ್ರ ಜಾರಕಿಹೊಳಿ

     2. ಕಾಗವಾಡ – ಭರಮಗೌಡ ಕಾಗೆ

     3. ಬಸವನ ಬಾಗೇವಾಡಿ – ಎಸ್.ಕೆ.ಬೆಳ್ಳುಬ್ಬಿ

  1. ಇಂಡಿ-ಡಾ.ಸಾರ್ವಭೌಮ ಬಗಲಿ

     5. ಕಾರವಾರ – ಆನಂದ್ ವಸಂತ ಅಸ್ನೋಟಿಕರ್

     6. ದೇವದುರ್ಗ – ಕೆ.ಶಿವನ ಗೌಡ ನಾಯಕ್

     7. ಸಾಗರ – ಗೋಪಾಲಕೃಷ್ಣ ಬೇಳೂರು

     8. ಕೆಜಿಎಫ್ – ವೈ.ಸಂಪಂಗಿ

    9. ನೆಲಮಂಗಲ – ಎಂ.ವಿ.ನಾಗರಾಜು

   10. ಚಾಮರಾಜ (ಮೈಸೂರು) – ಎಚ್.ಎಸ್.ಶಂಕರಲಿಂಗೇಗೌಡ

   11. ಕೊಳ್ಳೇಗಾಲ – ಜಿ.ಎನ್.ನಂಜುಂಡಸ್ವಾಮಿ

ಬಹುಮತವನ್ನು ಬಿ ಎಸ್ ಯಡಿಯೂರಪ್ಪ ಸಾಬೀತು ಮಾಡುವ ಮುನ್ನವೇ ಬಿಜೆಪಿ ಮತ್ತು ಪಕ್ಷೇತರ ಶಾಸಕರನ್ನು ಅಂದಿನ ಸ್ಪೀಕರ್ ಆಗಿದ್ದ ಕೆ ಜೆ ಬೋಪಯ್ಯ ಅಮಾನತು ಮಾಡಿದ್ದರು. ಈ ಮೂಲಕ ಪರೋಕ್ಷವಾಗಿ ಯಡಿಯೂರಪ್ಪನವರಿಗೆ ನೆರವಾಗಿದ್ದರು. (ಮುಂದೆ ಈ ಕ್ರಮವನ್ನು 14 ಮೇ, 2011ರಂದು ಸುಪ್ರೀಂ ಕೋರ್ಟ್ ತೀವ್ರವಾಗಿ ಖಂಡಿಸಿತು. ಪಕ್ಷೇತರರನ್ನು ಅಮಾನತು ಮಾಡಿರುವ ಕ್ರಮ ತಪ್ಪು ಎಂದಿತು.) ಇವೆಲ್ಲವುಗಳ ನಡುವೆ ಬಿ.ಎಸ್.ಯಡಿಯೂರಪ್ಪ ಸೆರೆಮನೆ ಸೇರಿದರು. ಡಿ.ವಿ.ಸದಾನಂದ ಗೌಡ ಸಿಎಂ ಆದರು. ನಂತರ ಅವರನ್ನು ಇಳಿಸಿ, ಜಗದೀಶ್ ಶೆಟ್ಟರ್ ಅವರನ್ನು ಸಿಎಂ ಆಗಿಸಲಾಯಿತು. ಹೀಗೆ ತಮ್ಮ ಮನಸಿಗೆ ಬಂದವರನ್ನು ಸಿಎಂ ಆಗಿಸುವ ಕ್ರಮದ ಕುರಿತು ರಾಜ್ಯದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿತ್ತು. ಈ ಸಂಗತಿಯನ್ನು ಮಂಕಾಗಿಸಲು ಒಂದು ಸಂಗತಿಯನ್ನು ಯಶಸ್ವಿಯಾಗಿ ಬಳಸಿಕೊಳ್ಳಲಾಯಿತು. ಮಂಗಳೂರಿನಲ್ಲಿ ನಡೆದ ಒಂದು ಪಾರ್ಟಿಯನ್ನು ಹೀಗೆ ಬಳಸಿಕೊಂಡು ಗಮನವನ್ನು ಬೇರೆಡೆ ಸೆಳೆಯುವಲ್ಲಿ ಸರ್ಕಾರ ಯಶಸ್ವಿಯಾಗಿತ್ತು. ಅನಂತರ ಬಿಜೆಪಿಯಲ್ಲಿ ನಡೆಯುತ್ತಿರುವ ಬದಲಾವಣೆ ರಾಜಕೀಯ ಹಿನ್ನೆಲೆಗೆ ಸರಿದು, ಪಾರ್ಟಿ ವಿಷಯವೇ ಮುನ್ನೆಲೆಗೆ ಬಂದು ನಿಂತಿತು. ಇದು ರಾಜಕೀಯ ಪಕ್ಷಗಳ ಮತ್ತು ರಾಜಕಾರಣಿಗಳ ಪ್ರಮುಖ ದಾಳವಷ್ಟೇ. ಇಂತಹ ಸಂಗತಿಗಳ ಮೂಲಕ ವಾಸ್ತವವನ್ನು ಮರೆಮಾಚಲಾಗುತ್ತದೆ.

1999ರಲ್ಲಿ ಅಟಲ್ ಅವರ ಸರ್ಕಾರ ಅಲ್ಪಮತಕ್ಕೆ ಕುಸಿದ ನಂತರ ಮತ್ತೊಮ್ಮೆ ಅಧಿಕಾರಕ್ಕೆ ತರಲು ಯೋಜನೆಗಳು ರೂಪಗೊಳ್ಳತೊಡಗಿದ್ದವು. ಆಗ ಇಂದು ಪಾಕಿಸ್ತಾನದ ಉಗ್ರರು ಮಾಡಿದಂತಹದೇ ಕೀಟಲೆಯನ್ನು ಮಾಡುತ್ತಿದ್ದರು. ಮೇ 3, 1999ರಂದು ಕಾಶ್ಮೀರದಲ್ಲಿ ಪಾಕ್ ದಾಳಿ ನಡೆಸಿದ ದಾಳಿಕೋರರು, ಸ್ಥಳೀಯ ಕುರಿಗಾಹಿಗಳನ್ನು ಕೊಂದುಹಾಕಿದರು. ಅನಂತರ ಮೇ 5ರಂದು ನುಸುಳುಕೋರರು ಭಾರತದ ಸೈನಿಕರನ್ನು ಅಪಹರಿಸಿ ಹತ್ಯೆಗೈದರು. ಮೇ 9ರಂದು ಕಾರ್ಗಿಲ್ ಬಳಿ ಷೆಲ್ ದಾಳಿ ನಡೆಯಿತು. ಮರುದಿನ 10ರಂದು ನುಸುಳಕೋರರು ಎಲ್​ಒಸಿ ದಾಟಿ ಒಳ ನುಗ್ಗಲು ಯತ್ನಿಸಿದರು. ನಂತರ ಭಾರತೀಯ ಸೇನೆ ಕಾರ್ಯಾಚರಣೆಗೆ ಸಜ್ಜಾಯಿತು. ನಂತರ ನಡೆದ ಸಂಗತಿ ಇದೀಗ ಇತಿಹಾಸವಾಗಿದೆ.

ಇಂಡೋ – ಪಾಕ್ ಯುದ್ಧಗಳಿಂದಾಗಿ ಮಡಿದವರ ಸಂಖ್ಯೆ

ಇಸವಿ          ಭಾರತ                ಪಾಕಿಸ್ತಾನ

1948           1,104          1,500

1965           3,264         3,800

1971            3,843         7,900

1999           522            696

1971ರಲ್ಲಿ ಭಾರತದ 3,843 ಮತ್ತು ಪಾಕಿಸ್ತಾನದ 8,000 ಸೈನಿಕರು ಪ್ರಾಣ ತೆತ್ತರು. ಅಲ್ಲದೇ, 90,000 ಪಾಕ್ ಸೈನಿಕರು ಯುದ್ಧ ಖೈದಿಗಳಾದರು.

1999ರಲ್ಲಿ ಉಭಯ ರಾಷ್ಟ್ರಗಳ ನೂರಾರು ಸೈನಿಕರು ಸಾವಿಗೀಡಾದರು. ಮಕ್ಕಳು ತಮ್ಮ ತಂದೆ ಕಳೆದುಕೊಂಡು ಅನಾಥರಾದರೆ, ಮಹಿಳೆಯರು ಗಂಡನನ್ನು ಕಳೆದುಕೊಂಡು ವಿಧವೆಯರಾದರು, ಪೋಷಕರು ತಮ್ಮ ಮಕ್ಕಳನ್ನು ಕಳೆದುಕೊಂಡು ಕಣ್ಣಿರ ಕೋಡಿ ಹರಿಸತೊಡಗಿದರು. ಎರಡು ದೇಶಗಳ ಸಾವಿರಾರು ಕೋಟಿ ರೂಪಾಯಿಗಳು ಮೇ 11ರಿಂದ ಜುಲೈ 26ರವರೆಗೆ ಸುಟ್ಟು ಭಸ್ಮವಾದವು.

ಒಂದು ಮೂಲದ ಪ್ರಕಾರ, ಭಾರತ ಕಾರ್ಗಿಲ್ ಯುದ್ಧಕ್ಕೆ ಬರೋಬ್ಬರಿ 45,000 ಕೋಟಿ ರೂಪಾಯಿಗಳನ್ನು ವ್ಯಯಿಸಿದೆ. ಇದರ ಹೊಣೆ ಭಾರತೀಯರ ಹೆಗಲೇಗೇರಿತು. ಕೇವಲ 3.50 ರೂಪಾಯಿ ಇದ್ದ ಸೀಮೆಎಣ್ಣೆ ಬೆಲೆ ಒಮ್ಮಿಂದೊಮ್ಮೆಲೆ 10.50 ರೂಪಾಯಿಗಳಿಗೆ ಏರಿತು. ಹಾಲು, ಹಣ್ಣು, ತರಕಾರಿ, ಅಕ್ಕಿ, ದ್ವಿದಳ ಧಾನ್ಯಗಳ ಬೆಲೆಗಳು ಗಗನಕ್ಕೇರಿದವು. 25 ಪೈಸೆ ಇದ್ದ ಅಂಚೆ ಕಾರ್ಡ್ ಬೆಲೆ 50 ಪೈಸೆಗೆ, 50 ಪೈಸೆ ಇದ್ದ ಇನ್​ಲ್ಯಾಂಡ್ ಲೆಟರ್ ಬೆಲೆ 1 ರೂಪಾಯಿಗೆ ಏರಿಕೆಯಾಯಿತು. ಪೆಟ್ರೋಲ್, ಡೀಸೆಲ್, ಎಲ್​ಪಿಜಿ ಬೆಲೆಗಳೂ ಏರಿದವು.

ಯುದ್ಧವನ್ನು ಬಯಸುವ ಸುದ್ದಿ ವಾಹಿನಿಗಳ ನಿರೂಪಕರಾಗಲಿ, ಯುದ್ಧ ಪರವಾಗಿ ಕೆಲಸ ಮಾಡುವ ಮಾಧ್ಯಮದ ಜನರಾಗಲಿ, ಸಾಮಾಜಿಕ ಜಾಲತಾಣದಲ್ಲಿ ಯುದ್ಧವನ್ನು ಪ್ರೇರೇಪಿಸುತ್ತಿರುವ ಯುದ್ಧದಾಹಿಗಳಾಗಲಿ ಮೇಲಿನ ಸಂಗತಿಗಳನ್ನು ನೆನಪಿಸಿಕೊಳ್ಳಬೇಕಿದೆ. ಇಲ್ಲಿ ಮೇಲುವರ್ಗದವರಿಗೆ ಯುದ್ಧದಿಂದ ಯಾವುದೇ ರೀತಿಯ ಸಮಸ್ಯೆಗಳು ಎದುರಾಗಲಾರವು. ಯಾವ ರಾಜಕಾರಣಿ, ಉದ್ಯಮಿಗಳೂ ಯುದ್ಧ ಸಂತ್ರಸ್ತರಾಗುವುದಿಲ್ಲ. ಯುದ್ಧದಲ್ಲಿ ಬಲಿಯಾಗುವ ಸೈನಿಕರು ದೇಶದ ಅನ್ನದಾತರ, ಬಡವರ, ದೀನದಲಿತರ, ಅಲ್ಪಸಂಖ್ಯಾತರ ಮಕ್ಕಳು. ಬೆಲೆಗಳು ದುಪ್ಪಟ್ಟಾದರೆ ಅದರ ಭಾರವನ್ನು ಹೊರಬೇಕಿರುವುದು ಮಧ್ಯಮ ವರ್ಗ, ಬಡವರು, ತಳಸಮುದಾಯದವರು. ಯುದ್ಧ ಆರಂಭವಾದರೆ, ಈ ಸಮುದಾಯದವರಿಗೆ ಉದ್ಯೋಗವಕಾಶಗಳೂ ಇಲ್ಲವಾಗುತ್ತವೆ.

ಒಂದು ಕಡೆ ಬೆಲೆ ಏರಿಕೆಯ ಬಿಸಿ, ನಿರುದ್ಯೋಗದ ಸಮಸ್ಯೆ, ಡಾಲರ್ ಬೆಲೆ ಏರಿಕೆ, ಷೇರು ಮಾರುಕಟ್ಟೆ ಕುಸಿತ, ಹಣದುಬ್ಬರ ಇತ್ಯಾದಿಗಳಿಂದ ದೇಶ ನರಳತೊಡಗುತ್ತದೆ. 1999ರ ಕಾರ್ಗಿಲ್ ಯುದ್ಧಕ್ಕೆ ಅಪಾರ ಪ್ರಮಾಣದ ಹಣವನ್ನು ದೇಶ ವಿನಿಯೋಗಿಸಿದ ಪರಿಣಾಮದಿಂದಾಗಿ ಮುಂದಿನ ದಿನಗಳಲ್ಲಿ ಭಾರತ ಆರ್ಥಿಕ ಕುಸಿತವನ್ನು ಕಂಡಿತು. ಆಗ ಜನ ಸಾಮಾನ್ಯರು ನರಳಿದರು. ಇಂತಹ ಸೂಕ್ಷ್ಮ ವಿಷಯಗಳನ್ನು ಅವಲೋಕಿಸುವ ವ್ಯವಧಾನವನ್ನು ಮಾಧ್ಯಮಗಳು ಇಂದು ಕಳೆದುಕೊಂಡಿವೆ. ಯುದ್ಧದಿಂದ ಜಗತ್ತಿನಲ್ಲಿ ಯಾರೂ ಶಾಂತಿಯನ್ನು ಸ್ಥಾಪಿಸಲು ಸಾಧ್ಯವಾಗಿಲ್ಲ ಎಂಬ ಸಂಗತಿಯನ್ನು ಎಲ್ಲ ಯುದ್ಧೋತ್ಸಾಹಿಗಳೂ ನೆನಪಿಸಿಕೊಳ್ಳಬೇಕಿದೆ.

ಯುದ್ಧದ ನಂತರ ನಡೆದ ಲೋಕಸಭೆ ಚುನಾವಣೆಯಲ್ಲಿ ಎನ್​ಡಿಎ ಮತ್ತೊಮ್ಮೆ ಅಧಿಕಾಕ್ಕೆ ಬಂತು. ಇದೀಗ 2019ರ ಲೋಕಸಭೆ ಚುನಾವಣೆ ಸಮೀಪದಲ್ಲಿದೆ. 2014ರಲ್ಲಿ ಪ್ರಧಾನಿ ಮೋದಿ ಮತ್ತು ಬಿಜೆಪಿ ಕೊಟ್ಟಿದ್ದ ಚುನಾವಣಾ ಭರವಸೆಗಳು ಈಡೇರಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ, ವಿದೇಶದಲ್ಲಿರುವ ಕಪ್ಪು ಹಣವನ್ನು ಭಾರಕ್ಕೆ ಮರಳಿ ತರುವುದು, ಗಡಿಯಾಚೆಗಿನ ಭಯೋತ್ಪಾದನೆಯನ್ನು ನಿಯಂತ್ರಿಸುವುದು, ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ ಇತ್ಯಾದಿಗಳು ಸುಳ್ಳಾಗಿವೆ. ಜಾಹೀರಾತಿಗಾಗಿ 4,000 ಕೋಟಿ, ವಿದೇಶ ಪ್ರವಾಸಕ್ಕಾಗಿ 2,000 ಕೋಟಿ ರೂಪಾಯಿಗಳು ಕರ್ಚಾಗಿವೆ. ರೈತರ ಆದಾಯ ದುಪ್ಪಟ್ಟು ಮಾಡಲು ಮೋದಿ ವಿಫಲರಾಗಿದ್ದಾರೆ. ರೈತರ ಸಾಲ ಮನ್ನಾ ಮಾಡುವ ಬದಲು ಉದ್ಯಮಿಗಳ 2.41 ಲಕ್ಷ ಕೋಟಿ ರೂಪಾಯಿಗಳನ್ನು ರಿಟ್ ಆಫ್ ಹೆಸರಿನಲ್ಲಿ ಹಿಂಬಾಗಿಲ ಮೂಲಕ ಮನ್ನಾ ಮಾಡಲಾಗಿದೆ. ರಫೇಲ್ ಅವ್ಯಹಾರ ತಾರಕ್ಕೇರಿದೆ. ಈ ಎಲ್ಲವುಗಳನ್ನು ಮರೆಮಾಚಲು ಈಗ ತುರ್ತಾಗಿ ಪಾಕ್ ವಿರುದ್ಧ ಜನಾಕ್ರೋಶವನ್ನು ರೂಪಿಸಲಾಗುತ್ತಿದೆ. ಪ್ರಶ್ನಿಸಿದವರ ವಿರುದ್ಧ ದೇಶದ್ರೋಹದ ಆರೋಪ, ತಲೆ ಕತ್ತರಿಸುವ ಬೆದರಿಕೆಗಳನ್ನು ನರೇಂದ್ರ ಮೋದಿ ಬೆಂಬಲಿಗರು ಹಾಕುತ್ತಿದ್ದಾರೆ. ಇಲ್ಲಿ ದೇಶ ಮೊದಲು ಎನ್ನುವುದಕ್ಕಿಂತ ಮೋದಿ ಮೊದಲು ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಇನ್ನೊಂದು ಸಂಗತಿಯೆಂದರೆ, ಎನ್​ಡಿಎ ವಿಪಕ್ಷದಲ್ಲಿದ್ದಾಗ ನಡೆದ ಎಲ್ಲ ದಾಳಿಗಳಿಗೆ ಸರ್ಕಾರ, ಪ್ರಧಾನಿಗಳು ಕಾರಣ. ಸೈನಿಕರ ಸಾವಿಗೂ ಅವರೇ ಹೊಣೆ. ಭಯೋತ್ಪಾದನೆ, ಭ್ರಷ್ಟಾಚಾರಗಳಿಗೂ ಆಡಳಿತಾರೂಢ ಪಕ್ಷವೇ ಹೊಣೆ. ಆದರೆ, ಪ್ರಧಾನಿ ಮೋದಿ ನೇತೃತ್ವದ ಸರ್ಕಾರದಲ್ಲಿ ರೈತರು, ಯೋಧರು ಮಡಿದರೆ ಅದಕ್ಕೆ ಅವರು ಹೊಣೆಗಾರರಲ್ಲ. ಪಾಕ್ ವಿರುದ್ಧ ನಿರ್ದಿಷ್ಟ ದಾಳಿಯನ್ನು ಭಾರತೀಯ ಸೇನೆ ನಡೆಸಿದರೆ ಅದಕ್ಕೆ ಕಾರಣರು ಮೋದಿ. ಇದು ಸದ್ಯ ದೇಶದಲ್ಲಿರುವ ಮೋದಿ ಭಕ್ತರ, ಅನುಯಾಯಿಗಳ ತರ್ಕವಾಗಿದೆ. ಇದು ದೇಶದ ದುರಂತ. ರಾಜಕಾರಣದ ಒಳ ಹುನ್ನಾರಗಳನ್ನು ಪ್ರಶ್ನಿಸಿದರೆ ಸೈನಿಕರ ನೈತಿಕ ಸ್ಥೈರ್ಯ ಕುಸಿಯುತ್ತದೆ ಎಂದು ಬಿಜೆಪಿಗರು ಮತ್ತವರ ಬೆಂಬಲಿಗರು ವಾದಿಸುತ್ತಾರೆ. ತೇಜ್ ಬಹದ್ದೂರ್ ಎಂಬ ಸೈನಿಕ ಗುಣಮಟ್ಟದ ಆಹಾರವನ್ನು ಕೊಡುತ್ತಿಲ್ಲ ಎಂದಾಗ ಕುಸಿಯದ ಸೈನಿಕರ ನೈತಿಕತೆ, ರಾಜಕಾರಣಿಗಳ ಬಣ್ಣವನ್ನು ಬಯಲಿಗೆಳೆದಾಗ ಕುಸಿಯುವುದು ಮಾತ್ರ ವಿಪರ್ಯಾಸ.

ಇನ್ನು ಎಲ್ಲ ವಿಷಯಗಳನ್ನೂ ರಾಜಕೀಯ ಬಳಸಿಕೊಳ್ಳುವ ಬಿಜೆಪಿಗರ ಮನಃಸ್ಥಿತಿ ಬಯಲಾಗಿದೆ. 27/02/2018ರಂದು ಚಿತ್ರದುರ್ಗದಲ್ಲಿ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ, ಪಾಕಿಸ್ತಾನದ ಬಾಲಕೋಟ್ ಉಗ್ರರ ನೆಲೆಗಳ ಮೇಲೆ ಸೇನೆ ನಡೆಸಿದ ವೈಮಾನಿಕ ದಾಳಿ ಬಿಜೆಪಿಗೆ ನೆರವಾಗಲಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ 22 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಇದು ಸಹಾಯವಾಗಲಿದೆ. ಪಾಕಿಸ್ತಾನದ ಉಗ್ರ ನೆಲೆ ಮೇಲೆ ಇತ್ತೀಚೆಗೆ ಭಾರತೀಯ ವಾಯುಪಡೆ ನಡೆಸಿದ ದಾಳಿ ನರೇಂದ್ರ ಮೋದಿ ಅವರ ಪರವಾಗಿ ಕೆಲಸ ಮಾಡಲಿದೆ. ಲೋಕಸಭೆ ಚುನಾವಣೆಯಲ್ಲಿ 22 ಸೀಟುಗಳನ್ನು ಗೆಲ್ಲಲು ನೆರವಾಗಲಿದೆ,  ದಾಳಿಯು ಯುವಜನರಲ್ಲಿ ಸಂತೋಷ ತಂದಿದ್ದು, ಮತ್ತೊಮ್ಮೆ ಮೋದಿ ಪ್ರಧಾನಿಯಾಗಲಿದ್ದಾರೆ ಎಂದಿದ್ದಾರೆ. ಈ ಮೂಲಕ ಬಿಜೆಪಿಯ ಯುದ್ಧದ ಹಿಂದಿನ ಅಜೆಂಡಾವನ್ನು ಅನಾವರಣಗೊಳಿಸಿದ್ದಾರೆ.

ಆದರೆ, ತಮ್ಮ ಹೇಳಿಕೆ ಕುರಿತು ವ್ಯಾಪಕ ಟೀಕೆ ವ್ಯಕ್ತವಾದ ನಂತರ ಅವರು ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಆದರೆ, ಯಡಿಯೂರಪ್ಪನವರ ಬಾಯಲ್ಲಿ ಗುಟ್ಟು ನಿಲ್ಲುವುದಿಲ್ಲ ಎಂಬ ಮಾತನ್ನು ಅವರು ಈಗಾಗಲೇ ನಿಜವೆಂದು ಸಾಬೀತುಮಾಡಿಯಾಗಿದೆ.

ಈ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಅಸಮಧಾನ ವ್ಯಕ್ತಪಡಿಸಿದ್ದು, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರಯೋಧರ ಸಾವಿನಲ್ಲಿ ರಾಜಕೀಯ ಲಾಭ ಕಾಣುತ್ತಿರುವ @BSYBJP ಅವರ ಹೇಳಿಕೆ ಅಧಿಕಾರದಲ್ಲಿರುವ @BJP4Indiaದ ಉದ್ದೇಶದ ಬಗ್ಗೆ ಸಂಶಯ ಹುಟ್ಟುವಂತೆ ಮಾಡಿದೆ. ಪ್ರಧಾನಿ @narendramodi ಅವರು ಇದಕ್ಕೆ ಸ್ಪಷ್ಟೀಕರಣ‌ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಇದರೊಂದಿಗೆ #BJPsPlot4Vote @INCKarnataka ಟ್ಯಾಗ್ ಮಾಡಿದ್ದಾರೆ.

ಬಿಜೆಪಿ ಮತ್ತು ಅವರ ಬೆಂಬಲಿಗರು ಒಂದು ಸಂಗತಿಯನ್ನು ಅರಿಯಬೇಕಿದೆ. ಯುದ್ಧ ಮಾಡಿರುವುದು ಮೋದಿಯವರಲ್ಲ. ಭಾರತೀಯ ಸೇನೆ. ಪಾಕ್ ನಾಗರಿಕರ ಕೈಗೆ ಸಿಕ್ಕದ್ದು ಸಂಘ ಪರಿವಾರ, ಬಿಜೆಪಿ, ಯುದ್ಧದ ಪರವಾಗಿ ಬ್ಯಾಟ್ ಮಾಡುತ್ತಿರುವ ಸುದ್ದಿ ವಾಹಿನಿಗಳ ಆಂಕರ್​ಗಳಲ್ಲ. ಅದು ಅಭಿನಂದನ್. ಇಂತಹ ಸೂಕ್ಷ್ಮ ಸಂಗತಿಗಳನ್ನು ಯುದ್ಧಕ್ಕಾಗಿ ಹಾತೊರೆಯುತ್ತಿರುವ ಮನಸುಗಳು ಅರಿಯಲಿ. ಇವೆಲ್ಲ ಸಂಗತಿಗಳ ನಡುವೆ  ಅಭಿಯಾನ ನಡೆಯುತ್ತಿರುವುದು ತುಸು ಸಮಾಧಾನಕರ ಸಂಗತಿ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *