ಮಹತ್ವದ ಪಂದ್ಯದಲ್ಲಿ ವಿನಯ್ ಹ್ಯಾಟ್ರಿಕ್ ಸಾಧನೆ

ನಾಗ್ಪುರದಲ್ಲಿ ನಡೆಯುತ್ತಿರೋವ ರಣಜಿ ಕ್ವಾರ್ಟರ್ ಫೈನಲ್​ ಪಂದ್ಯದಲ್ಲಿ ಮುಂಬೈ ವಿರುದ್ಧ ಕರ್ನಾಟಕ ತಂಡ ಭರ್ಜರಿ ಪ್ರದರ್ಶನ ನೀಡ್ತಿದೆ. ಮೊದಲ ದಿನವೇ ಮುಂಬೈ ವಿರುದ್ಧ ಮೇಲುಗೈ ಸಾಧಿಸಿದ ವಿನಯ್ ಪಡೆ ಸಾಧಾರಣ ಮೊತ್ತಕ್ಕೆ ಮುಂಬೈ ತಂಡವನ್ನ ಆಲೌಟ್ ಮಾಡಿದೆ. ಟಾಸ್ ಗೆದ್ರೂ, ಮೊದಲು ಮುಂಬೈ ತಂಡವನ್ನ ಬ್ಯಾಟಿಂಗ್​ಗೆ ಅಹ್ವಾನಿಸಿದ ಕರ್ನಾಟಕ, ತಾನು ಹಾಕಿಕೊಂಡ ಯೋಜನೆಯಂತೆ ಮುಂಬೈ ತಂಡದ ಮೇಲೆ ಸವಾರಿ ಮಾಡಿತು. ಆರಂಭದಲ್ಲೇ ದಾಳಿಗಿಳಿದ ನಾಯಕ ವಿನಯ್ ಕುಮಾರ್ ಸೂಪರ್ ಸ್ಪೆಲ್ ಮಾಡಿದರು.

ಮೊದಲ ಓವರ್​ನ ಕೊನೆಯ ಎಸೆತದಲ್ಲೇ ಮುಂಬೈನ ಸ್ಟಾರ್ ಆಟಗಾರ ಪೃಥ್ವಿ ಶಾಗೆ ಪೆವಿಲಿಯನ್ ಹಾದಿ ತೋರಿಸಿದರು. ಬಳಿಕ ಮೂರನೇ ಓವರ್​ನ ಮೊದಲ ಎಸೆತದಲ್ಲಿ ಗೋಕುಲ್ ಬಿಸ್ಟ್, ಹಾಗೂ 2ನೇ ಎಸೆತದಲ್ಲಿ ಆಕಾಶ್ ಪರ್ಕರ್​ರನ್ನ ಎಲ್​​ಬಿಡಬ್ಲ್ಯು ಮಾಡೋ ಮೂಲಕ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಮಾಡಿದರು. ಇನ್ನು, ರಣಜಿಯಲ್ಲಿ 100ನೇ ಪಂದ್ಯವನ್ನಾಡ್ತಿರೋ ವಿನಯ್​ಕುಮಾರ್​ ಇದೇ ಮೊದಲ ಬಾರಿಗೆ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ್ದಾರೆ. ಆದರೆ ಇದುವರೆಗೂ ರಣಜಿ ಕ್ರಿಕೆಟ್​ನಲ್ಲಿ ವಿನಯ್ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಮಾಡಿರಲಿಲ್ಲ. ಹೀಗಾಗಿ ಇದೀಗ, ಆ ಸಾಧನೆಯನ್ನ ಕೂಡ ವಿನಯ್ ಮುಂಬೈ ವಿರುದ್ಧ ಮಾಡಿಬಿಟ್ಟರು. ಇನ್ನು, ಈ ಹ್ಯಾಟ್ರಿಕ್ ಸಾಧನೆ ಮಾಡಿದ ಕರ್ನಾಟಕದ 10ನೇ ಆಟಗಾರನಾದ್ರೆ, ಒಟ್ಟಾರೆ ರಣಜಿಯಲ್ಲಿ ಈ ಹ್ಯಾಟ್ರಿಕ್ ವಿಕೆಟ್ ಪಡೆದವರ ಪಟ್ಟಿಯಲ್ಲಿ 75 ನೇ ಬೌಲರ್ ಎನಿಸಿಕೊಂಡರು. ಇನ್ನು, ಈಗಾಗಲೇ 2 ಬಾರಿ ಕರ್ನಾಟಕಕ್ಕೆ ರಣಜಿ ಟ್ರೋಫಿಯನ್ನ ಗೆದ್ದುಕೊಟ್ಟಿರೋ ವಿನಯ್, ಇದೀಗ ಮೂರನೇ ಬಾರಿಗೆ ಕರ್ನಾಟಕದ ಮುಕುಟಕ್ಕೆ ರಣಜಿ ಟ್ರೋಫಿಯನ್ನ ತೊಡಿಸೊಕೆ ಪಣತೊಡ್ಡಿದ್ದಾರೆ.

ಶಿವಕುಮಾರ್​​​ ಕೆ. ಸ್ಪೋರ್ಟ್ಸ್ ಬ್ಯೂರೋ ಸುದ್ದಿಟಿವಿ

0

Leave a Reply

Your email address will not be published. Required fields are marked *