2002ರಲ್ಲಿ ವಾಜಪೇಯಿಯವರು ಮೋದಿ ಸರ್ಕಾರವನ್ನು ವಜಾಗೊಳಿಸಲು ಬಯಸಿದ್ದರು: ಸಿನ್ಹಾ

ಭೋಪಾಲ್: 2002ರಲ್ಲಿ ಗುಜರಾತ್ ಸಿಎಂ ಆಗಿದ್ದ ಮೋದಿಯವರ ಸರ್ಕಾರವನ್ನು ವಜಾಗೊಳಿಸಲು ಅಟಲ್ ಬಿಹಾರಿ ವಾಜಪೇಯಿ ಬಯಸಿದ್ದರು ಎಂದು ಬಿಜೆಪಿಯ ಹಿರಿಯ ನಾಯಕ ಮತ್ತು ವಾಜಪೇಯಿಯವರ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಯಶವಂತ ಸಿನ್ಹಾ ಹೇಳಿದರು.

ಭೋಪಾಲ್‍ನಲ್ಲಿ ಆಯೋಜಿಸಲಾಗಿದ್ದ ಮೀಟ್‍ ದ ಪ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗೋಧ್ರಾ ಹತ್ಯಾಕಾಂಡದ ನಂತರ ನಡೆದ ಘಟನೆಗಳ ನಂತರ ಮೋದಿಯವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಮೋದಿಯವರು ಒಂದು ವೇಳೆ ರಾಜೀನಾಮೆ ಕೊಡದೇ ಇದ್ದಲ್ಲಿ, ಮೋದಿ ನೇತೃತ್ವದ ಸರ್ಕಾರವನ್ನು ವಜಾ ಮಾಡಬೇಕು ಎಂದು ವಾಜಪೇಯಿ ಬಯಸಿದ್ದರು. ಆದರೆ, ಗೃಹಸಚಿವರಾಗಿದ್ದ ಎಲ್ ಕೆ ಅಡ್ವಾಣಿಯವರು ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದರು. ಆದ್ದರಿಂದ ಮೋದಿಯವರನ್ನು ಮುಂದುವರೆಸಲಾಗಿತ್ತು ಎಂದರು.

ಇದೇ ವೇಳೆ, ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು ಐಎನ್‍ಎಸ್ ವಿರಾಟ್ ವೈಯಕ್ತಿಕ ಟ್ಯಾಕ್ಸಿ ಮಾದರಿಯಲ್ಲಿ ಬಳಸಿಕೊಂಡಿದ್ದಾರೆ ಎಂಬ ಮೋದಿಯವರ ಆರೋಪದ ಕುರಿತು ಪ್ರತಿಕ್ರಿಯಿಸಿದ ಸಿನ್ಹಾ, ಈ ವಿಷಯದ ಕುರಿತು ಈಗಾಗಲೇ ನೌಕಾ ಸೇನೆಯ ಮಾಜಿ ಅಧಿಕಾರಿಗಳು ವಿವರಣೆ ನೀಡಿದ್ದಾರೆ. ಇಂತಹ ಆರೋಪಗಳನ್ನು ಮಾಡುವುದು ಪ್ರಧಾನಿ ಹುದ್ದೆಗೆ ಘನತೆ ತರುವ ಕೆಲಸವಲ್ಲ ಎಂದರು. ಜೊತೆಗೆ, ಲೋಕಸಭೆ ಚುನಾವಣೆಯನ್ನು ಪ್ರಧಾನಿ ಮೋದಿಯವರ ಸರ್ಕಾರದ ಕೆಲಸಗಳ ಮೇಲೆ ಎದುರಿಸಬೇಕೇ ಹೊರತು, ದೇಶದ ಇತಿಹಾಸದ ಆಧಾರದಲ್ಲಲ್ಲ ಎಂದರು.

ಪಾಕಿಸ್ತಾನ ವಿಷಯವನ್ನು ಚುನಾವಣೆಯಲ್ಲಿ ಎಳೆದು ತರುವುದು ದುರಾದೃಷ್ಟಕರ. ಅವರು (ಮೋದಿ) ಪಾಕಿಸ್ತಾನ ವಿಷಯವನ್ನು ಒತ್ತುಕೊಟ್ಟು ತೋರಿಸುತ್ತಿದ್ದಾರೆ. ನಾವು ಪಾಕಿಸ್ತಾನ ದೇಶದಂತಹ ವರ್ಗಕ್ಕೆ ಸೇರುತ್ತೇವೆಯೇ? ಚೀನಾದ ಕುರಿತು ಮಾತೇ ಇಲ್ಲ ಎಂದರು.

0

Leave a Reply

Your email address will not be published. Required fields are marked *