ಪ್ರಧಾನಿ ಮೋದಿ ಜನರಿಗೆ ಸುಳ್ಳು ಹೇಳುತ್ತಾರೆ: ರಾಹುಲ್ ಗಾಂಧಿ

ಜೈಪುರ: ಚುನಾವಣೆ ಹೊಸ್ತಿಲಲ್ಲಿರುವ ರಾಜಸ್ಥಾನದಲ್ಲಿ ರಾಹುಲ್ ಗಾಂಧಿ ಪಕ್ಷದ ಪರ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ಜೈಪುರದಲ್ಲಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿಯವರು ಜನರಿಗೆ ಸುಳ್ಳು ಹೇಳುತ್ತಾರೆ ಎಂದರು. ಅಲ್ಲದೇ, ರಫೇಲ್ ದೇಶದ ಅತ್ಯಂತ ದೊಡ್ಡ ರಕ್ಷಣಾ ಹಗರಣ ಎಂದು ಆರೋಪಿಸಿದರು. ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್​ಗಡದಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಈಗ ಈ ರಾಜ್ಯಗಳಲ್ಲಿ ಕಾಂಗ್ರೆಸ್ ಪರ ಅಲೆ ಇದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಕೇವಲ ಸುಳ್ಳು ಭರವಸೆಗಳನ್ನು ನೀಡುತ್ತಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು. ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ಸಮಯದಲ್ಲಿ ರಾಜಸ್ಥಾನ ಕಾಂಗ್ರೆಸ್ ಜೈಪುರದಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿಯವರು ಉದ್ಯೋಗ ಸೃಷ್ಟಿಯಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ಪ್ರಧಾನಿ ಮೋದಿ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದರು. ಪ್ರಧಾನಿ ರೈತರಿಗೂ ಸುಳ್ಳು ಭರವಸೆ ಕೊಡುತ್ತಾರೆ. ಅವರ ಆಡಳಿತದ ಅವಧಿಯಲ್ಲಿ 24 ಗಂಟೆಯಲ್ಲಿ ಕೇವಲ 450 ಯುವಕರಿಗೆ ಉದ್ಯೋಗ ಸಿಗುತ್ತಿದೆ. ಇದು ಕೇಂದ್ರಸ ಸರ್ಕಾರದ ಸದ್ಯದ ನೀತಿ ಎಂದು ಕಿಡಿಕಾರಿದರು.

ಪ್ರಧಾನಿ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ, ದೇಶದ ಪ್ರತಿಯೊಬ್ಬ ನಾಗರಿಕರ ಖಾತೆಗೆ 15 ಲಕ್ಷ ರೂ. ಹಾಕುವುದು, ಮಹಿಳೆಯರ ಭದ್ರತೆ ಕುರಿತು ಭರವಸೆಗಳನ್ನು ನೀಡಿದ್ದರು. ಆದರೆ, ಎಲ್ಲ ರಂಗಗಳಲ್ಲಿ ಅವರು ವಿಫಲರಾಗಿದ್ದಾರೆ. ರಫೇಲ್ ಅವ್ಯವಹಾರ ಮತ್ತು ಭ್ರಷ್ಟಾಚಾರ ವಿಷಯವನ್ನು ನಾನು ಸದನದಲ್ಲಿ ಪ್ರಸ್ತಾಪಿಸಿದ ಸಮಯದಲ್ಲಿ, ಪ್ರಧಾನಿ ಮೋದಿಯವರು ನನ್ನ ಪ್ರಶ್ನೆಗೆ ಉತ್ತರಿಸಲು ಒಂದು ನಿಮಿಷವನ್ನೂ ಮೀಸಲಿಡಲಿಲ್ಲ ಎಂದು ಅವರು ಆರೋಪಿಸಿದರು.

ಕಳೆದ 2 ವರ್ಷಗಳಲ್ಲಿ ಮೋದಿ ಸರ್ಕಾರ 15 ಉದ್ಯಮಿಗಳ 2,00,000 ಕೋಟಿಯನ್ನು ಮನ್ನಾ ಮಾಡಿದೆ. ನಾನು ರೈತರ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿದೆ. ಆದರೆ, ಇದಕ್ಕೆ ಮೌನವೇ ಕೇಂದ್ರದ ಉತ್ತರವಾಗಿದೆ ಎಂದು ಅವರು ಹೇಳಿದರು.

ರಫೇಲ್ ಅವ್ಯಹಾರ ಕುರಿತು ಪ್ರಸ್ತಾಪಿಸಿದ ಅವರು, ರಫೇಲ್ ಒಪ್ಪಂದ ದೇಶದ ಅತ್ಯಂತ ದೊಡ್ಡ ರಕ್ಷಣಾ ಹಗರಣ. ರಫೇಲ್ ಅವ್ಯವಹಾರ ಕುರಿತು ಮೋದಿ ಮೌನವೇಕೆ? ಎಂದು ಪ್ರಶ್ನಿಸಿದರು. ರಫೇಲ್ ಒಪ್ಪಂದ ಭ್ರಷ್ಟ ಒಪ್ಪಂದ. ರಫೇಲ್​​​​​ ಯುದ್ಧ ವಿಮಾನಕ್ಕೆ ಕೇಂದ್ರ 1,600 ಕೋಟಿ ರೂ. ನಿಗದಿಮಾಡಿದೆ. ಮೋದಿ ಸ್ನೇಹಿತ ಅನಿಲ್ ಅಂಬಾನಿಯವರಿಗೆ ಇದರಿಂದ ಲಾಭವಾಗಲಿದೆ ಎಂದರು.

ಪ್ರಧಾನಿ ಜನಸಾಮಾನ್ಯರನ್ನು ಮೂರ್ಖರನ್ನಾಗಿಸುತ್ತಿದ್ದಾರೆ ಎಂದು ಆರೋಪಿಸಿದರು. ಅಲ್ಲದೇ, ವಾಸ್ತವದಲ್ಲಿ ರಫೇಲ್ ಜೊತೆ ಎಚ್​ಎಎಲ್​ಗೆ ಒಪ್ಪಂದ ಆಗಬೇಕಿತ್ತು. ಯುಪಿಎ ಸರ್ಕಾರ ರಫೇಲ್ ಯುದ್ಧ ವಿಮಾನಕ್ಕೆ 540 ಕೋಟಿ ರೂ. ನಿಗದಿ ಮಾಡಿತ್ತು. ಮೋದಿಯವರು 1,600 ಕೋಟಿ ರೂ ನಿಗದಿಗೊಳಿಸಿದ್ದಾರೆ ಎಂದು ಅವರು ಹೇಳಿದರು. ಅನಿಲ್ ಅಂಬಾನಿಯವರಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಅವರು ಆರೋಪಿಸಿದರು.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *