ನಿರುದ್ಯೋಗ ಪ್ರಮಾಣ 45 ವರ್ಷಗಳಲ್ಲೇ ಅತ್ಯಂತ ಏರಿಕೆ: ಮೋದಿ ಆಡಳಿತಕ್ಕೆ ಹಿಡಿದ ಕನ್ನಡಿ

ದೆಹಲಿ: ಭಾರತದ ನಿರುದ್ಯೋಗ ಪ್ರಮಾಣ ಕಳೆದ 45 ವರ್ಷಗಳ ಅವಧಿಯಲ್ಲೇ ಅತ್ಯಂತ ಹೆಚ್ಚಿನ ಪ್ರಮಾಣಕ್ಕೆ ಏರಿದೆ.2017-18ರ ಅವಧಿಯಲ್ಲಿ ನಿರುದ್ಯೋಗದ ಪ್ರಮಾಣ ಶೇ. 6.1ಕ್ಕೆ ಏರಿದೆ. ನ್ಯಾಷನಲ್ ಸ್ಯಾಂಪಲ್ ಸರ್ವೇ ಆಫೀಸ್ ನಡೆಸಿರುವ ಪೀಡಿಯಾಡಿಕ್ ಲೇಬರ್ ಫೋರ್ಸ್ ಸಮೀಕ್ಷೆಯಲ್ಲಿ ಈ ಅಚ್ಚರಿಯ ಮಾಹಿತಿ ಬಹಿರಂಗವಾಗಿದೆ. ಬಿಸಿನೆಸ್ ಸ್ಟಾಂಡರ್ಡ್ ಪತ್ರಿಕೆ ಈ ವಿಷಯವನ್ನು ಬಹಿರಂಗಪಡಿಸಿದೆ. ಆದರೆ ಈ ಮಾಹಿತಿಯನ್ನು ರಾಷ್ಟ್ರೀಯ ಸಾಂಖ್ಯಿಕ ಆಯೋಗ ಬಿಡುಗಡೆ ಮಾಡಿಲ್ಲ ಎಂದು ಕೂಡ ಹೇಳಲಾಗಿದೆ. ಡಿಸೆಂಬರ್​ನಲ್ಲೇ ಈ ಮಾಹಿತಿಯನ್ನು ಬಹಿರಂಗಪಡಿಸಬೇಕಿತ್ತು. ಆದರೆ, ಸರ್ಕಾರ ಈ ಅಂಕಿ ಅಂಶಗಳನ್ನು ಬಿಡುಗಡೆ ಮಾಡದೇ ಇರುವ ಕಾರಣಕ್ಕೆ ದತ್ತಾಂಶ ಸಂಗ್ರಹ ಕೆಲಸದಲ್ಲಿ ನಿರತವಾಗಿದ್ದ ಇಬ್ಬರು ಸ್ವತಂತ್ರ ಸದಸ್ಯರು ರಾಜೀನಾಮೆ ನೀಡಿದ್ದಾರೆ ಎಂದು ಕೂಡ ಹೇಳಲಾಗಿದೆ.

ಕೇಂದ್ರ ಸರ್ಕಾರ ಮಧ್ಯಂತರ ಬಜೆಟ್ ಮಂಡಿಸುವ ಮುನ್ನಾ ದಿನ ಈ ಆಘಾತಕಾರಿ ಅಂಶ ಬಹಿರಂಗವಾಗಿದ್ದು, ವಿರೋಧ ಪಕ್ಷಗಳಿಗೆ ಸಾಕಷ್ಟು ಆಹಾರ ಒದಗಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ, ಈ ಅಂಶವನ್ನು ಬಹಿರಂಗಗೊಳಿಸಬೇಕು ಎಂದು ನಾವು ತಿಳಿಸಿದ್ದೆವು.  ಯಾವಾಗ ಬಿಡುಗಡೆ ಮಾಡಬೇಕು ಎಂಬುದನ್ನು ಶೀಘ್ರದಲ್ಲೇ ನಿರ್ಧರಿಸಲಾಗುವುದು ಎಂದಿದೆ. ಈಗಾಗಲೇ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವ ಬಿಜೆಪಿ ಭರವಸೆ ಈಡೇರಿಲ್ಲ ಎಂದು ವಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ನಿರಂತವಾಗಿ ವಾಗ್ದಾಳಿ ನಡೆಸುತ್ತಿವೆ. ಇದೀಗ ಬಜೆಟ್ ಅಧಿವೇಶನದಲ್ಲೇ ಈ ವಿಷಯವನ್ನು ಸಮರ್ಥವಾಗಿ ಮಂಡಿಸಿ, ಕೇಂದ್ರ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಲು ಸಜ್ಜಾಗಿವೆ.

ವರದಿಯಲ್ಲಿರುವ ಪ್ರಮುಖಾಂಶಗಳು

* ವರದಿಯ ಪ್ರಕಾರ 1972-73ರ ಅವಧಿಗಿಂತ ಗರಿಷ್ಠ ಮಟ್ಟಕ್ಕೇರಿದ ನಿರುದ್ಯೋಗ ಪ್ರಮಾಣ

*  2011-12ರಲ್ಲಿ ನಿರುದ್ಯೋಗ ಪ್ರಮಾಣ ಶೇ. 2.2ರಷ್ಟಿತ್ತು. ಯುವಕರ ನಿರುದ್ಯೋಗ ಪ್ರಮಾಣ 13 – 27ಕ್ಕೆ ಏರಿಕೆ ಕಂಡಿದೆ

* ನಗರದಲ್ಲಿ ನಿರುದ್ಯೋಗದ ಪ್ರಮಾಣ ಶೇ. 7.8 ಮತ್ತು ಗ್ರಾಮೀಣ ಪ್ರದೇಶದಲ್ಲಿ ಶೇ. 5.3ರಷ್ಟಾಗಿದೆ.

* ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ಉದ್ಯೋಗ ಸೃಷ್ಟಿಯಲ್ಲಿ ಇಳಿಕೆಯಾಗಿದೆ

* ಎನ್​ಎಸ್​ಎಸ್​ಒ 2017-18ರ ಸಮೀಕ್ಷೆಯ ಪ್ರಕಾರ ನಿರುದ್ಯೋಗ ಪ್ರಮಾಣದಲ್ಲಿ ಏರಿಕೆಯಾಗಿದೆ. ಪ್ರಧಾನಿ ಮೋದಿ ನವೆಂಬರ್ 8, 2016ರಂದು ಗರಿಷ್ಠ ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ನಂತರ ಇದರ ಪ್ರಮಾಣದಲ್ಲಿ ಅಪಾರವಾಗಿ ಏರಿಕೆಯಾಗಿದೆ.

* ರಾಷ್ಟ್ರೀಯ ಅಂಕಿಅಂಶಗಳ ಆಯೋಗದ ಅಧ್ಯಕ್ಷ ಪಿ ಸಿ ಮೋಹನನ್ ಮತ್ತು ಇಬ್ಬರು ಸದಸ್ಯರು ರಾಜೀನಾಮೆ ನೀಡಿದ್ದಾರೆ. ಇದು ವಿವಾದಾಸ್ಪದ ಅಂಶ ಎಂದು ವರದಿ ಉಲ್ಲೇಖಿಸಿದೆ.

* ಪಿ ಸಿ ಮೋಹನನ್ ಅವರು ತಮ್ಮ ರಾಜೀನಾಮೆಗೆ ನ್ಯಾಷನಲ್ ಸ್ಯಾಂಪಲ್ ಸರ್ವೆ ಕಚೇರಿಯಿಂದ ವರದಿ ಬಿಡುಗಡೆ ಮಾಡದಿರುವುದು ಕೂಡ ಒಂದು ಕಾರಣ ಎಂದು ಸ್ಪಷ್ಟಪಡಿಸಿದ್ದಾರೆ.

* ಎನ್​ಡಿಟಿವಿಗೆ ನೀಡಿದ ಸಂದರ್ಶನದ ವೇಳೆ ಪಿ ಸಿ ಮೋಹನನ್ ಮತ್ತು ಜೆ ವಿ ಮೀನಾಕ್ಷಿಯವರು ಸರ್ಕಾರೇತರ ಸದಸ್ಯರನ್ನು ಹಿನ್ನೆಲೆಗೆ ಸರಿಸಲಾಗಿದೆ ಮತ್ತು ತಮ್ಮ ಸಲಹೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ದೂರಿದ್ದರು.

* ಸಮೀಕ್ಷೆಯ ಪ್ರಕಾರ, ಉದ್ಯೋ ಸೃಷ್ಟಿಯಲ್ಲಿ ಇಳಿಕೆ ಮತ್ತು ನಿರುದ್ಯೋಗದ ಪ್ರಮಾಣದಲ್ಲಿ ಏರಿಕೆಯಾಗಿದೆ.

0

Leave a Reply

Your email address will not be published. Required fields are marked *