ಇಂದಿನಿಂದ ಇಂಗ್ಲೆಂಡ್​-ಇಂಡೋ 3ನೇ ಟೆಸ್ಟ್​

ನಾಟಿಂಗ್​ಹ್ಯಾಮ್​​ ಅಂಗಳದಲ್ಲಿ ಇಂದಿನಿಂದ ಮೂರನೇ ಟೆಸ್ಟ್​ ಪಂದ್ಯ ಆರಂಭವಾಗಲಿದೆ. ಭರ್ಜರಿ ಪ್ರದರ್ಶನ ನೀಡುತ್ತಿರುವ ಇಂಗ್ಲೆಂಡ್​ ತಂಡ, ಪ್ರವಾಸಿ ಟೀಮ್​ ಇಂಡಿಯಾಗೆ ಸವಾಲು ಎಸೆಯಲಿದೆ. ಈಗಾಗಲೇ ಇಂಗ್ಲೆಂಡ್​ 5 ಟೆಸ್ಟ್​​ ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದ್ದು, ಮತ್ತೊಂದು ಗೆಲುವಿನ ಲೆಕ್ಕಾಚಾರ ಹಾಕಿಕೊಳ್ಳುತ್ತಿದೆ. ಇತ್ತ ಕೊಹ್ಲಿ ಪಡೆ ಈ ಪಂದ್ಯ ಗೆದ್ದು ಆತಿಥೇಯ ಇಂಗ್ಲೆಂಡ್​ ತಂಡಕ್ಕೆ ಶಾಕ್ ನೀಡುವ ಲೆಕ್ಕಾಚಾರವನ್ನು ಹಾಕಿಕೊಂಡಿದೆ. ಎರಡು ಟೆಸ್ಟ್​​ಗಳಲ್ಲಿ ಮಾಡಿದ ತಪ್ಪಿನಿಂದ ಪಾಠ ಕಲಿತಿರುವ ಬ್ಲ್ಯೂ ಬಾಯ್ಸ್​ ಈ ಬಾರಿ ಉತ್ತಮ ಪ್ರದರ್ಶನ ನೀಡಲು ಉತ್ಸುಕರಾಗಿದ್ದಾರೆ.

ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಇಂಗ್ಲೆಂಡ್​ ತಂಡ ಬಲಾಢ್ಯವಾಗಿದೆ. ಆದ್ರೆ, ಟೀಮ್​ ಇಂಡಿಯಾ ಸದ್ಯ ಟೆಸ್ಟ್​​ನಲ್ಲಿ ಮೊದಲ ಸ್ಥಾನದಲ್ಲಿದ್ದು, ವಿದೇಶದಲ್ಲಿ ಜಯದ ಮಾಲೆ ತೊಡುವಲ್ಲಿ ಹಿಂದೆ ಬೀಳ್ತಾ ಇದೆ. ಇಂದಿನ ಪಂದ್ಯದಲ್ಲಿ ಶತಾಯ ಗತಾಯ ಗೆಲ್ಲಲೇ ಬೇಕು ಎಂಬ ಪಣದೊಂದಿಗೆ ಕೊಹ್ಲಿ ಬ್ರಿಗೇಡ್​ ಅಂಗಳಕ್ಕೆ ಪ್ರವೇಶಿಸಲಿದೆ. ಟೀಮ್​ ಇಂಡಿಯಾ ಮೂರನೇ ಟೆಸ್ಟ್​ ಪಂದ್ಯಕ್ಕೆ ಅಳೆದು ತೂಗಿ ತಂಡ ರಚಿಸಲು ಪ್ಲಾನ್ ಮಾಡಿಕೊಂಡಿದೆ. ಈ ಬಾರಿ ತಂಡದಲ್ಲಿ ಮೂರು ಬದಲಾವಣೆ ಆಗುವ ಸಾಧ್ಯತೆ ಇದೆ. ವಿಕೆಟ್​ ಕೀಪಿಂಗ್​ನಲ್ಲಿ ಮೊನಚು ಕಳೆದುಕೊಂಡಂತೆ ಕಾಣುತ್ತಿರುವ ದಿನೇಶ್​ ಕಾರ್ತಿಕ್​ ಬದಲಿಗೆ ಯುವ ವಿಕೆಟ್​ ಕೀಪರ್​ ರಿಶಬ್​ ಪಂತ್​​ಗೆ ಸ್ಥಾನ ಸಿಗುವು ಚಾನ್ಸ್​ ಇದೆ. ಹೀಗಾದಲ್ಲಿ ರಿಶಬ್​ ಸಿಕ್ಕ ಅವಕಾಶದಲ್ಲಿ ಅಬ್ಬರದ ಪ್ರದರ್ಶನ ನೀಡಲು ಪ್ಲಾನ್ ಮಾಡಿಕೊಂಡಿದ್ದಾರೆ. ಇನ್ನು ಆರಂಭಿಕ ಮುರಳಿ ವಿಜಯ್​ ಪ್ರದರ್ಶನದ ಮೇಲೆ ಪ್ರಶ್ನೆಗಳು ಎದ್ದಿದ್ದು, ಮತ್ತೊಮ್ಮೆ ಶಿಖರ್​ ಧವನ್​ ಕಣಕ್ಕೆ ಇಳಿಯಬಹುದು. ಶಿಖರ್​ ಕಣಕ್ಕೆ ಇಳಿದ್ರೆ, ಮುರಳಿ ಬೆಂಚ್​ ಕಾಯಬೇಕು.

ಆರಂಭಿಕರಾಗಿ ಕಣಕ್ಕೆ ಇಳಿಯುತ್ತಿರುವ ಕನ್ನಡಿಗ ರಾಹುಲ್​ ಹೇಳಿಕೊಳ್ಳುವ ಪ್ರದರ್ಶನ ನಿಡ್ತಾ ಇಲ್ಲ. ರನ್​ ಕಲೆ ಹಾಕುವಲ್ಲಿ ಹಿಂದೆ ಬಿದ್ದಿರುವ ಕೆ.ಎಲ್​ ನ್ಯೂನತೆ ಅರಿತು ಬ್ಯಾಟ್​ ಮಾಡಬೇಕು. ಇನ್ನು ಟೆಸ್ಟ್​ ಸ್ಪೆಷಲಿಸ್ಟ್​ಗಳಾದ ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯ ರಹಾನೆ ತಮ್ಮ ಘನತೆಗೆ ತಕ್ಕ ಆಟ ಆಡುತ್ತಿಲ್ಲ. ಎರಡನೇ ಟೆಸ್ಟ್​​ನ 2ನೇ ಇನ್ನಿಂಗ್ಸ್​​ನಲ್ಲಿ ರನ್​ ಕಲೆ ಹಾಕುವ ವಿಶ್ವಾಸ ಮೂಡಿಸಿದ್ದ ಈ ಸ್ಟಾರ್ ಪ್ಲೇಯರ್ಸ್​ ರನ್​ ಕಲೆ ಹಾಕುವಲ್ಲಿ ಹಿಂದೆ ಬಿದ್ದಿದ್ದರು. ರಹಾನೆ ಹಳೆಯ ಖದರ್​​ನಲ್ಲಿ ಬ್ಯಾಟಿಂಗ್ ಮಾಡುವ ಅನಿವಾರ್ಯತೆ ಇದೆ. ಇನ್ನು ವಿರಾಟ್​ ಕೊಹ್ಲಿ, ನೈಜ ಆಟ ಆಡಿದ್ರೂ ರನ್ ಶಿಖರ ಏರಬಹುದು.

ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಯಾರ್ಕರ್​ ಸ್ಪೆಷಲಿಸ್ಟ್​​ ಜಸ್ಪ್ರಿತ್​ ಬೂಮ್ರಾ ಚೇತರಿಸಿಕೊಂಡಿದ್ದಾರೆ. ಇಂದಿನ ಪಂದ್ಯದಲ್ಲಿ ಬೂಮ್ರಾ ಅಂಗಳಕ್ಕೆ ಇಳಿದ್ರೆ, ಟೀಮ್ ಇಂಡಿಯಾಗೆ ಪ್ಲಸ್​ ಪಾಯಿಂಟ್​. ಇನ್ನು ಇಶಾಂತ್​ ಶರ್ಮಾ ಹಾಗೂ ಮೊಹಮ್ಮದ್​ ಶಮಿ ತಮ್ಮ ಶಿಸ್ತು ಬದ್ಧ ದಾಳಿಯನ್ನು ಮುಂದುವರೆಸಬೇಕಿದೆ. ಆರಂಭದಲ್ಲಿ ಬಿಗುವಿನ ದಾಳಿ ನಡೆಸಿ ವಿಕೆಟ್​ ಬೇಟೆಯಾಡುವ ಅನಿವಾರ್ಯತೆ ಇದೆ. ಲಾರ್ಡ್ಸ್​ ಅಂಗಳದಲ್ಲಿ ಸಿಕ್ಕ ಅವಕಾಶದಲ್ಲಿ ವಿಕೆಟ್​ ಪಡೆಯಲು ವಿಫಲರಾದ ಕುಲ್ದೀಪ್​ ಯಾದವ್​​, ಸ್ಥಾನದ ಮೇಲೆ ಅಪಾಯದ ತೂಗುಗತ್ತಿ ನೇತಾಡುತ್ತಿದೆ. ಅಶ್ವಿನ್​ ಸ್ಪಿನ್​ ಮೋಡಿ ನಡೆಸಿದ್ರೆ, ಗೆಲುವು ಸನೀಹ ಎಂಬುದ್ರಲ್ಲಿ ಎರಡು ಮಾತಿಲ್ಲ.

ಇಂಗ್ಲೆಂಡ್ ಪ್ರವಾಸದಲ್ಲಿ ಟೀಮ್​ ಇಂಡಿಯಾವನ್ನು ಕಟ್ಟಿ ಹಾಕಿರುವ ಇಂಗ್ಲೆಂಡ್​ ಅಬ್ಬರಿಸುತ್ತಿದೆ. ಕೊಹ್ಲಿ ಪಡೆಯ ವಿರುದ್ಧ ಆಂಗ್ಲರ ಹುಡುಗರು ಸಂಘಟಿತ ಆಟದ ಪ್ರದರ್ಶನ ನೀಡುತ್ತಿದ್ದಾರೆ. ಬ್ಯಾಟಿಂಗ್ ಹಾಗೂ ಬೌಲಿಂಗ್​ನಲ್ಲಿ ಆಟಗಾರರು ತಂಡಕ್ಕೆ ನೆರವಾಗುತ್ತಿದ್ದಾರೆ. ಇನ್ನು ಕ್ರಿಸ್​​ ವೋಕ್ಸ್​ ಕಳೆದ ಪಂದ್ಯದಲ್ಲಿ ಶತಕ ಬಾರಿಸಿ ವಿಶ್ವಾಸ ಮೂಡಿಸಿದ್ದಾರೆ. ಆರಂಭಿಕ ಅಲಿಸ್ಟರ್​ ಕುಕ್​, ಕೀಟನ್​ ಜೆನ್ನಿಂಗ್ಸ್​​ ರನ್​ ಕಲೆ ಹಾಕುವಲ್ಲಿ ಎಡವುತ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಜೋ ರೂಟ್​ ಹಾಗೂ ಜಾನಿ ಬೇರ್​ಸ್ಟೋ ತಂಡಕ್ಕೆ ನೆರವಾಗಬಲ್ಲ ಆಟಗಾರರು. ಇನ್ನು ಇಂಗ್ಲೆಂಡ್​ ತಂಡದ ವೇಗಿಗಳು ಕಮಾಲ್​ ಪ್ರದರ್ಶನ ನಿಡ್ತಾ ಇದ್ದಾರೆ. ಜೇಮ್ಸ್​ ಆ್ಯಂಡರ್ಸನ್​, ಸ್ಟುವರ್ಟ್​​ ಬ್ರಾಡ್​​ ಲಯ ಬದ್ಧ ದಾಳಿ ನಡೆಸುತ್ತಿದ್ದಾರೆ. ಈ ಆಟಗಾರರು ಮೂರನೇ ಪಂದ್ಯದಲ್ಲೂ ಸ್ಥಿರ ಪ್ರದರ್ಶನ ನೀಡುವ ಇರಾದೆ ಹೊಂದಿದ್ದಾರೆ.

ಮೂರನೇ ಪಂದ್ಯದಲ್ಲಿ ಟಾಸ್​ ಮಹತ್ವದ ಪಾತ್ರವನ್ನು ವಹಿಸುತ್ತದೆ. ಈ ಪಿಚ್​​ನ ಲಾಭ ಪಡೆದು ಗೆಲುವಿನ ಬಾವುಟ್ ಹಾರಿಸಲು ವಿರಾಟ್​ ಕೊಹ್ಲಿ ಪಡೆ ಪ್ಲಾನ್ ಮಾಡಿಕೊಂಡಿದೆ. ನಾಟಿಂಗ್​ ಹ್ಯಾಮ್​ ಅಂಗಳ ಯಾವ ತಂಡದ ಕೈ ಹಿಡಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

0

Leave a Reply

Your email address will not be published. Required fields are marked *