ಮೋದಿ ಆಡಳಿತಕ್ಕೆ ಮೂರು ವರ್ಷ: ಅಜ್ಞಾನವೇ ಪರಮ ಸುಖ

ಗರಿಷ್ಠ ಮುಖಬೆಲೆಯ ನೋಟುಗಳ ನಿಷೇಧವಾಗಿ ಆರು ತಿಂಗಳು ಕಳೆದಿವೆ. ಆರಂಭದಲ್ಲಿ ದಿನನಿತ್ಯದ ವ್ಯವಹಾರಕ್ಕೂ ಹಣ ಸಿಗದೆ ಜನ ಪರದಾಡಿದ್ದರು. ನೂರಕ್ಕೂ ಹೆಚ್ಚು ಜನ ನೋಟ್ ಬ್ಯಾನ್ ವಿಷಯಕ್ಕೆ ಸಂಬಂಧಿಸಿದಂತೆ ಆತ್ಮಹತ್ಯೆಗೆ ಶರಣಾಗಿದ್ದರು.

ರಾಜ್ಯಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಇದೇ ವಿಷಯವನ್ನು ಪ್ರಸ್ತಾಪಿಸಿ, ನೋಟ್ ಬ್ಯಾನ್ ಆದ ನಂತರ ಗಡಿಯಲ್ಲಿ ಸಂಭವಿಸಿರುವ ಸೈನಿಕರ ಸಾವಿನ ಪ್ರಮಾಣಕ್ಕಿಂತ ನೋಟ್​ ಬ್ಯಾನ್ ದುಷ್ಪರಿಣಾಮದಿಂದ ಸತ್ತ ಜನರ ಸಂಖ್ಯೆ ಹೆಚ್ಚಾಗಿದೆ ಎಂದಿದ್ದರು. ದೇಶಭಕ್ತರು ಈ ಹೇಳಿಕೆಯ ಹಿಂದಿನ ಕಾಳಜಿಯನ್ನು ಅರಿಯುವ ಬದಲು, ಗುಲಾಂ ನಬಿ ಆಜಾದ್ ಅವರ ವಿರುದ್ಧ ಮುಗಿಬಿದ್ದಿದ್ದರು. ಇಲ್ಲಿ ಸೈನಿಕರ ಸಾವನ್ನು ಗುಲಾಂ ನಬಿ ಆಜಾದ್ ಅವರೇನು ಬಯಸಿರಲಿಲ್ಲ.
ಆದರೆ, ಗರಿಷ್ಠ ಮುಖಬೆಲೆಯ ನೋಟುಗಳ ನಿಷೇಧದಿಂದಾಗಿ ಜನಸಾಮಾನ್ಯರಿಗೆ ಆಗಿರುವ ತೊಂದರೆಗಳನ್ನು ಪರಿಣಾಮಕಾರಿಯಾಗಿ ಹೇಳುವ ಸಲುವಾಗಿ ಈ ಹೋಲಿಕೆಯನ್ನು ಅವರು ನೀಡಿದ್ದರು. ಆದರೆ ಆಡಳಿತ ಪಕ್ಷದ ಸದಸ್ಯರು ರಾಜ್ಯಸಭೆ ಕಲಾಪವನ್ನು ನಾಲೆಗೆ ತಳ್ಳಿಬಿಟ್ಟಿದ್ದರು.

ಇನ್ನು ನೋಟ್​​ ಬ್ಯಾನ್​ ನಂತರ ಜನರಿಗೆ ಎದುರಾಗಿರುವ ಸಮಸ್ಯೆಗಳನ್ನು ಕುರಿತು ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ತಮಗೆ ಬೆದರಿಕೆ ಇದೆ ಎಂದು ಕಣ್ಣೀರು ಹರಿಸಿದ್ದರು. ಅಲ್ಲದೇ, ನೋಟ್ ಬ್ಯಾನ್ ಮಾಡಿದ ನಂತರ ನನಗೆ ಕೇವಲ 50 ದಿನಗಳ ಅವಧಿ ಕೊಡಿ, ದೇಶದಲ್ಲಿ ಭ್ರಷ್ಟಾಚಾರ, ಕಪ್ಪುಹಣ, ಗಡಿಯಾಚೆಗಿನ ಭಯೋತ್ಪಾದನೆಗಳನ್ನೆಲ್ಲ ನಿಯಂತ್ರಿಸುತ್ತೇನೆ ಎಂದು ಭರವಸೆ ನೀಡಿದ್ದರು.

ರಾಜಕಾರಣಿಗಳು ನೀಡುವ ಭರವಸೆಗಳ ಕುರಿತು ಜನಸಾಮಾನ್ಯರಿಗೆ ಇರಲಿ; ಸ್ವತಃ ಭರವಸೆ ನೀಡುವ ರಾಜಕಾರಣಿಗಳಿಗೂ ಯಾವುದೇ ಭರವಸೆ, ನಂಬಿಕೆ, ಖಾತ್ರಿ ಇರುವುದಿಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿಯವರ ವಿಷಯದಲ್ಲಿ ಮಾತ್ರ ಇದು ಸುಳ್ಳಾಗಿತ್ತು.

ದೇಶವನ್ನು ಉದ್ಧರಿಸಲು ಬಂದಿರುವ ಅವತಾರ ಪುರುಷ ಎಂದು ಅವರ ಬೆಂಬಲಿಗರು ಮತ್ತು ಕಾಂಗ್ರೆಸ್, ಕಮ್ಯುನಿಸ್ಟ್, ಪ್ರಗತಿಪರರ ವಿರೋಧಿಗಳು ನಂಬಿದ್ದರು. ಅವರು 2014ರ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಆಡಿದ ಮಾತುಗಳಂತೂ ದೇಶವನ್ನು ನೂರೇ ದಿನದಲ್ಲಿ ಭ್ರಷ್ಟಾಚಾರ, ಕಪ್ಪುಹಣ ಮತ್ತು ಭಯೋತ್ಪಾದನೆಗಳನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಿಯೇ ಮಾಡುತ್ತಾರೆ ಎಂದೇ ದೇಶದ ಬಹುತೇಕ ನಾಗರಿಕರು ನಂಬಿದ್ದರು. ಈಗಲೂ ಈ ಮೂಢನಂಬಿಕೆಯಲ್ಲೇ ಅವರ ಬೆಂಬಲಿಗರು ಸುಖಿಸುತ್ತಿದ್ದಾರೆ. ಅಜ್ಞಾನವೇ ಪರಮ ಸುಖ ಎನ್ನುವ ಮಾತು ಅವರ ನಂಬಿಕೆಯ ಕುರಿತು ಹೇಳಿರುವಂತಿದೆ.

ತಾವು ಅಧಿಕಾರಕ್ಕೆ ಬರಲು ಏನೆಲ್ಲ ಮಾತನಾಡಬೇಕೋ ಅವುಗಳನ್ನೇ ಪ್ರಧಾನಿ ಮಾತನಾಡಿದ್ದರು. ಯುಪಿಎ ಅವಧಿಯ ಭ್ರಷ್ಟಾಚಾರ, ಕೋಲ್​ಗೇಟ್, 2ಜಿ ಸ್ಪೆಕ್ಟ್ರಮ್​ನಂತಹ ಹಗರಣಗಳು, ಆಧಾರ್ ಕಾರ್ಡ್, ವಿದೇಶಿ ನೇರ ಬಂಡವಾಳ ಹೂಡಿಕೆ, ಜಿಎಸ್​ಟಿ, ಕಪ್ಪುಹಣ ಇತ್ಯಾದಿಗಳನ್ನು ಇಡೀ ದೇಶದಾದ್ಯಂತ ಆಯೋಜಿಸಿದ್ದ ಪ್ರಚಾರ ಸಭೆಗಳಲ್ಲಿ ಪ್ರಸ್ತಾಪಿಸಿದ್ದರು.

ಆದರೆ, ಅಧಿಕಾರಕ್ಕೆ ಬರಲು ಆಡುವ ಮಾತುಗಳು ಬೇರೆ ಅಧಿಕಾರಕ್ಕೆ ಬಂದ ನಂತರ ತೋರುವ ಕ್ರಿಯಾಶೀಲತೆ ಬೇರೆ ಎನ್ನುವುದು ಪ್ರಧಾನಿ ನರೇಂದ್ರ ಮೋದಿಯವರಿಗೆ ಅರಿವಾಗುವುದಕ್ಕೆ ಬಹಳ ಕಾಲ ಬೇಕಾಗಲಿಲ್ಲ. ಆದರೆ, ಮತ ಕೊಟ್ಟು ಆರಿಸಿದ್ದ ಜನ ಮಾತ್ರ ಇಂದಿಗೂ ಅವುಗಳನ್ನು ನಂಬಿಕೊಂಡಿದ್ದಾರೆ.

ಆದರೆ, ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದು ಇದೇ ಮೇ 26ಕ್ಕೆ ಮೂರು ವರ್ಷ ಪೂರೈಸುತ್ತಿದೆ. ತಾವು 2014ರ ಲೋಕಸಭೆ ಚುನಾವಣೆ ವೇಳೆ ನೀಡಿದ್ದ ಭರವಸೆಗಳಲ್ಲಿ ಮುಖ್ಯವಾಗಿ ಉದ್ಯೋಗ ಸೃಷ್ಟಿ, ಆಧಾರ್ ಕಾರ್ಡ್​ ರದ್ದು, ಎಫ್​ಡಿಐ ರದ್ದು, ವಿದೇಶದಲ್ಲಿರುವ ಕಪ್ಪು ಹಣ ತರುವುದು, ಭಯೋತ್ಪಾದನೆ ನಿಗ್ರಹ ಮುಂತಾದ ವಿಷಯಗಳಲ್ಲಿ ಮೊದಲೆರೆಡು ಹೆಜ್ಜೆಗಳನ್ನೂ ಇಟ್ಟಿಲ್ಲ. ಅವರು ಇನ್ನೂ ಚುನಾವಣಾ ಪ್ರಚಾರದ ವೇಳೆ ಆಡುತ್ತಿದ್ದ ಆವೇಶದ ಮಾತುಗಳಿಂದ ಹೊರಬಂದಿಲ್ಲ.

ಕಾಂಗ್ರೆಸ್ 70 ವರ್ಷಗಳಿಂದ ಏನನ್ನೂ ಮಾಡಿಲ್ಲ ಎನ್ನುವ ಮೋದಿಯವರ ಮಾತುಗಳನ್ನು ಕನಸಿನಲ್ಲೂ ಕನವರಿಸುವ ಮೋದಿ ಬೆಂಬಲಿಗರು ಮೋದಿ ಹೇಳಿದ್ದೇನು? ಮಾಡಿದ್ದೇನು? ಎಂದು ಆಲೋಚಿಸುವ ಗೊಡವೆಯಿಂದ ಮುಕ್ತರಾಗಿದ್ದಾರೆ.

ಸ್ವತಃ ಪ್ರಧಾನಿ ಮೋದಿಯವರಿಗೂ 70 ವರ್ಷಗಳಿಂದ ದೇಶದಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ ಎಂಬ ದೃಢವಾದ ವಿಶ್ವಾಸವಿದೆ. ಈ ಅವಧಿಯಲ್ಲಿ ಕಾಂಗ್ರೆಸ್ಸೇತರ ಸರ್ಕಾರಗಳೂ ಅಸ್ತಿತ್ವದಲ್ಲಿದ್ದವು ಎಂಬುದಂತೂ ಅವರಿಗೆ ನೆನಪೇ ಇಲ್ಲ. ಮೋದಿಯವರು ಅಪಾರವಾಗಿ ಗೌರವಿಸುವ ಲಾಲ್ ಬಹದ್ದೂರ್ ಶಾಸ್ತ್ರಿಯವರು ಒಂದೂ ವರೆ ವರ್ಷ, ಮೊರಾರ್ಜಿ ದೇಸಾಯಿಯವರು ಎರಡೂಕಾಲು ವರ್ಷ, ಚರಣ್ ಸಿಂಗ್, ವಿ ಪಿ ಸಿಂಗ್, ಚಂದ್ರಶೇಖರ್, ಎಚ್ ಡಿ ದೇವೇಗೌಡ, ಐ ಕೆ ಗುಜ್ರಾಲ್ ಸೇರಿ ಸುಮಾರು 4 ವರ್ಷ ಅಧಿಕಾರ ನಡೆಸಿದ್ದಾರೆ. ಇನ್ನು ಬಿಜೆಪಿಯ ಅಟಲ್ ಬಿಹಾರಿ ವಾಜಪೇಯಿ ಅವರು 6 ವರ್ಷಗಳ ಕಾಲ ಪ್ರಧಾನಿಯಾಗಿದ್ದಾರೆ.

ಹೆಚ್ಚೂ ಕಡಿಮೆ 70 ವರ್ಷಗಳಲ್ಲಿ 12 ವರ್ಷಗಳ ಕಾಲ ಕಾಂಗ್ರೆಸ್ಸೇತರರು ಈ ದೇಶವನ್ನು ಆಳಿದ್ದಾರೆ. ಅದರಲ್ಲಿ ಸಿಂಹಪಾಲು ಸಿಕ್ಕಿರುವುದು ಅಟಲ್ ಬಿಹಾರಿ ವಾಜಪೇಯಿಯವರಿಗೆ. 70 ವರ್ಷಗಳಿಂದ ಈ ದೇಶದಲ್ಲಿ ಏನೂ ನಡೆದೇ ಇಲ್ಲ ಎಂದರೆ ಮೇಲಿನ ಪ್ರಧಾನಿಗಳೂ ಹೊಣೆಗಾರರಾಗುತ್ತಾರೆ.

ಕಾಂಗ್ರೆಸ್ ಪಕ್ಷವನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಭರದಲ್ಲಿ ಪ್ರಧಾನಿ ಮೋದಿಯವರು ಅನೇಕ ಎಡವಟ್ಟು ಮಾತುಗಳನ್ನು ಆಡಿದ್ದಾರೆ. ಅದನ್ನು ಅವರ ಬೆಂಬಲಿಗರು ಅಕ್ಷರಶಃ ನಂಬಿಕೊಂಡಿದ್ದಾರೆ. ಪ್ರಧಾನಿಯವರ ಆರೋಪದ ಪ್ರಕಾರ ಅಟಲ್ ಬಿಹಾರಿ ವಾಜಪೇಯಿಯವರು ಕೂಡ ಏನೂ ಮಾಡಿಲ್ಲ. ಅವರು ಈ ಆರೋಪವನ್ನು ಉದ್ದೇಶಪೂರ್ವಕವಾಗಿ ಮಾಡಿರಬಹುದೇ? ಎಂಬ ಅನುಮಾನ ಕೂಡ ಮೋದಿ ಬೆಂಬಲಿಗರಿಗೆ ಎದುರಾಗಿಯೇ ಇಲ್ಲ.

ಬ್ಯಾಂಕುಗಳ ರಾಷ್ಟ್ರೀಕರಣದಿಂದ ಹಿಡಿದು ಎಟಿಎಂವರೆಗೆ ಹಸಿರು ಕ್ರಾಂತಿಯಿಂದ ಕ್ಷೀರಕ್ರಾಂತಿಯವರೆಗೆ ಕಾಂಗ್ರೆಸ್ ಅವಧಿಯಲ್ಲಿ ಅನೇಕ ಮಹತ್ವದ ಕೆಲಸಗಳು ನಡೆದಿವೆ. ಇದೇ ಅವಧಿಯಲ್ಲಿ ಗ್ಯಾಟ್ ಮತ್ತು ಎಫ್​​ಡಿಐನಂಥ ತಳಸಮುದಾಯ ವಿರೋಧಿ ನಿರ್ಧಾರಗಳನ್ನು ಕೂಡ ಕಾಂಗ್ರೆಸ್ ಕೈಗೊಂಡಿದೆ. ಆದರೆ, ಇವುಗಳನ್ನೆಲ್ಲ ವಿರೋಧಿಸಿದ್ದ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಭಾರತೀಯ ಜನತಾ ಪಕ್ಷ ಪ್ರಚಂಡ ಬಹುಮತ ಪಡೆದು ಮಾಡಿದ್ದೇನು? ಎಂಬ ಪ್ರಶ್ನೆಯನ್ನು ಬಿಜೆಪಿ ಮತ್ತು ನರೇಂದ್ರ ಮೋದಿ ಬೆಂಬಲಿಗರು ಕೇಳಿಕೊಳ್ಳುತ್ತಿಲ್ಲ.

ಪ್ರಧಾನಿ ಮೋದಿಯವರ ಆಡಳಿತದ ಅವಧಿ ಮುಗಿದ ಮೇಲೆ ನೀವು ಏನು ಮಾಡಿದಿರಿ ಎಂದು ಕೇಳುವುದು ಮೂರ್ಖತನ ಅದರ ಬದಲಿಗೆ ಅಧಿಕಾರ ನಡೆಸುತ್ತಿರುವ ಅವಧಿಯಲ್ಲೇ ಏನು ಮಾಡಿದಿರಿ ಎಂದು ಕೇಳಬೇಕು. ಪ್ರಾಯಶಃ ಮೋದಿಯವರು ಏನು ಮಾಡಿದರು ಎಂಬ ಪ್ರಶ್ನೆಗೆ ಸಮಾಧಾನಕರ ಉತ್ತರವನ್ನು ಅಧಿಕಾರಾವಧಿ ಮುಗಿದ ನಂತರ ಕೂಡ ಅವರ ಬೆಂಬಲಿಗರು ಪಡೆಯಲಾರರು.

ಅಧಿಕಾರದಲ್ಲಿರುವವರನ್ನು ಓಡಿಸಿ ಅಧಿಕಾರ ಹಿಡಿಯುವುದಕ್ಕೆ ಜಗತ್ತಿನಲ್ಲಿ ಸಾವಿರಾರು ವರ್ಷಗಳ ಇತಿಹಾಸವಿದೆ. ರಾಜ ಮಹಾರಾಜರ ಕಾಲದಿಂದ ಇಂದಿನವರೆಗೆ ಅದೇ ನಡೆದಿರುವುದು. ಬ್ರಿಟಿಷರನ್ನು ಓಡಿಸಿದರೆ ತಮಗೆ ಅಧಿಕಾರ ಸಿಗುವುದು ಎಂಬ ದೂರಾಲೋಚನೆ ಕಾಂಗ್ರೆಸ್​​ಗೂ ಇತ್ತು ಎನಿಸುತ್ತದೆ. ಅದರಂತೆ ಈಗ ಕಾಂಗ್ರೆಸ್ ಮುಕ್ತ ಭಾರತದ ಕನಸು ಹೊಸೆಯುತ್ತಿರುವ ಬಿಜೆಪಿಗೆ ತನ್ನ ಶತೃವನ್ನು ಶಾಶ್ವತವಾಗಿ ನಿರ್ಮೂಲನೆಗೊಳಿಸುವ ಹಠ ತೊಟ್ಟಿದೆ. ಅಧಿಕಾರ ರಾಜಕಾರಣಕ್ಕಾಗಿ ತನ್ನ ಸೈದ್ಧಾಂತಿಕ ವಿರೋಧಿಗಳನ್ನು ದಮನ ಮಾಡುವಷ್ಟು ಕ್ರೂರತೆಗೆ ಇಳಿಯಬಾರದು.

ಪ್ರದೀಪ್ ಮಾಲ್ಗುಡಿ ಹಿರಿಯ ಉಪ ಸಂಪಾದಕ ಸುದ್ದಿ ಟಿವಿ

3+

Leave a Reply

Your email address will not be published. Required fields are marked *