ನ್ಯಾಯ್ ಯೋಜನೆಯ ಹಣ ನೇರವಾಗಿ ಕುಟುಂಬದ ಮಹಿಳೆಯರ ಖಾತೆಗೆ ಜಮಾ ಆಗುತ್ತದೆ – ರಾಹುಲ್ ಗಾಂಧಿ

ಕೋಲಾರ: ಚೌಕೀದಾರ್ (ಕಾವಲುಗಾರ) 15 ಲಕ್ಷ ರೂಪಾಯಿ ಕೊಡುವ ಕುರಿತು ಸುಳ್ಳು ಹೇಳಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದರು. ಕೋಲಾರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಕೂಟದ ಲೋಕಸಭೆ ಅಭ್ಯರ್ಥಿಗಳ ಪರವಾಗಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಅವರು, 2014ರಲ್ಲಿ ಮೋದೀಜಿಯವರು ಪ್ರತಿಯೊಂದು ಖಾತೆಗೆ 15 ಲಕ್ಷ ರೂ. ಹಾಕುವ ಭರವಸೆ ನೀಡಿದ್ದರು. ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವ ಮತ್ತು ರೈತರ ಆದಾಯವನ್ನು ದುಪ್ಪಟ್ಟು ಮಾಡುವ ಭರವಸೆಯನ್ನು ನೀಡಿದ್ದರು. ಆದರೆ, ಈಗ ಮೋದಿಯವರು ನಮ್ಮ ಯುವಕರ ಉದ್ಯೋಗದ ಕುರಿತು, ಬಡವರ ಮತ್ತು ರೈತರ ಯೋಗಕ್ಷೇಮದ ಕುರಿತು ಮಾತನಾಡುತ್ತಿಲ್ಲ. ಇದು ಅವರ ವೈಫಲ್ಯಕ್ಕೆ ಸಾಕ್ಷಿ ಎಂದರು.

ಬಡವರ ಖಾತೆಗೆ ಪ್ರತಿ ತಿಂಗಳು 6 ಸಾವಿರ ರೂ. ಹಾಕುವ ಯೋಜನೆ ಕುರಿತು ಪ್ರಸ್ತಾಪಿಸಿದ ಅವರು, ಭಾರತದ ಬಡವರಿಗೆ ಪ್ರತಿ ತಿಂಗಳು 6 ಸಾವಿರ ರೂ.ನಂತೆ ವರ್ಷಕ್ಕೆ 72,000, 5 ವರ್ಷಕ್ಕೆ 3,60,000 ರೂ.ಗಳನ್ನು ಪಾವತಿಸುವ ಯೋಜನೆ ಕುರಿತು, ನಾನು ಅತ್ಯುತ್ತಮ ಆರ್ಥಿಕ ತಜ್ಞರ ಸಮಿತಿಯನ್ನು ರಚಿಸಿದೆ. ಅವರೊಂದಿಗೆ ಈ ಯೋಜನೆಯ ಕಾರ್ಯಸಾಧ್ಯತೆಯ ಕುರಿತು ಚರ್ಚಿಸಿ, ಈ ಕುರಿತು ಅಂತಿಮ ನಿರ್ಧಾರಕ್ಕೆ ಬರಲಾಗಿದೆ ಎಂದು ಅವರು ವಿವರಿಸಿದರು. ದೇಶದ ಬಡ ಜನರಿಗೆ ಹಣವನ್ನು ನೀಡುವುದರಿಂದ ಆರ್ಥಿಕತೆ ನಷ್ಟವಾಗುವುದಿಲ್ಲ. ಕಾರಣ ನಮ್ಮ ದೇಶದಲ್ಲಿ ಬಡ ಜನರಿಗೆ ನೀಡುವಷ್ಟು ಹಣದ ಸಾಮರ್ಥ್ಯವನ್ನು ನಮ್ಮ ದೇಶ ಹೊಂದಿದೆ. ಈ ಕುರಿತು ವಿಷಯ ತಜ್ಞರೊಂದಿಗೆ ಈಗಾಗಲೇ ಚರ್ಚಿಸಲಾಗಿದೆ ಎಂದರು.

ನ್ಯಾಯ್ ಯೋಜನೆಯ ಹಣ ನೇರವಾಗಿ ಕುಟುಂಬದ ಮಹಿಳೆಯರ ಖಾತೆಗೆ ಜಮಾ ಆಗುತ್ತದೆ. ಮೋದಿಯವರು ನಿಮ್ಮಿಂದ ಹಣವನ್ನು ತೆಗೆದುಕೊಂಡರು ಮತ್ತು ಅದನ್ನು 15 ಸಿರಿವಂತರಿಗೆ ಕೊಟ್ಟರು. ನಾವು ಜನರಿಗೆ ಹಣವನ್ನು ಹಿಂದಿರುಗಿಸುತ್ತೇವೆ. ವಿಶೇಷವಾಗಿ ವಿಧಾನಸಭೆ, ಲೋಕಸಭೆ ಮತ್ತು ಸರ್ಕಾರಿ ಉದ್ಯೋಗದಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ನೀಡುತ್ತೇವೆ ಎಂದರು.

ನಮ್ಮೆದುರು ಎರಡು ರೀತಿಯ ಶಕ್ತಿಗಳಿವೆ. ಈ ಪೈಕಿ ಕಾಂಗ್ರೆಸ್ ಶಕ್ತಿಯು ದೇಶವನ್ನು ಜೋಡಿಸುವ ಮತ್ತು ಮುನ್ನಡೆಸುವ ಕಾರ್ಯಕ್ರಮಗಳನ್ನು ಜನರ ಮುಂದೆ ಇಡುತ್ತಿದ್ದರೆ ಇನ್ನೊಂದೆಡೆ ಬಿಜೆಪಿ ಎನ್ನುವ ಮತ್ತೊಂದು ಶಕ್ತಿಯು ದೇಶವನ್ನು ಒಡೆಯುವಂತಹ ಕೆಲಸ ಮಾಡುತ್ತಿದೆ. ದೇಶದ ಜನರು ಇದನ್ನ ಗಮನಿಸುತ್ತಿದ್ದಾರೆ ಎಂದರು.

ಇತ್ತೀಚಿನ ದಿನಗಳಲ್ಲಿ ಮೋದಿಯವರ ಭಾಷಣದಲ್ಲಿ, ಬಿಜೆಪಿಯ ಪ್ರಣಾಳಿಕೆಯಲ್ಲಿ ಯುವಕರ ಉದ್ಯೋಗ ಸೃಷ್ಟಿಯ ಕುರಿತಾಗಲೀ ತಮ್ಮ 2014ರ ಭರವಸೆಗಳ ಸ್ಥಿತಿಗತಿಯ ಕುರಿತಾಗಲೀ ಪ್ರಸ್ತಾಪವಿಲ್ಲ. ಮೋದಿಯವರು ಕಾವಲುಗಾರ ಎಂದು ಹೇಳಿಕೊಂಡು ದೇಶದ ಜನತೆಗೆ ಸುಳ್ಳು ಹೇಳುತ್ತಿದ್ದು ಜನರಿಗೆ ಯಾವುದೇ ಅನುಕೂಲ ಮಾಡಲಿಲ್ಲ ಎಂದರು.

ಇದೇ ಮೊಟ್ಟಮೊದಲ ಬಾರಿ ನಾವು ರೈತರಿಗೆ ಪ್ರತ್ಯೇಕ ಬಜೆಟ್ ನೀಡುವುದಾಗಿ ಘೋಷಿಸಿದ್ದೇವೆ. ಯುಪಿಎ ಕೇಂದ್ರದಲ್ಲಿ ಈ ಬಾರಿ ಅಧಿಕಾರಕ್ಕೆ ಬಂದ ನಂತರ ಮೊದಲ ಬಜೆಟ್ ನಲ್ಲೇ ರೈತರಿಗೆ ಎಷ್ಟು ಪ್ರಮಾಣದ ಬೆಂಬಲ ಬೆಲೆ ದೊರೆಯಲಿದೆ? ರೈತರ ಸಮಸ್ಯೆಗೆ ಯಾವೆಲ್ಲಾ ಪರಿಹಾರ ಸಿಗಲಿದೆ? ಎಂಬ ಅಂಶ ತಿಳಿಯಲಿದೆ ಎಂದರು.

ಮೋದಿಯವರು ನೀಡಿದ್ದ 2 ಕೋಟಿ ಉದ್ಯೋಗದ ವಿಷಯದಲ್ಲಿ ಯುವಕರು ನಲುಗಿದ್ದಾರೆ. ನಾವು ಸುಳ್ಳು ಹೇಳುವುದಿಲ್ಲ. ಮಾರ್ಚ್ 2020ರ ಒಳಗೆ 24 ಲಕ್ಷ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತೇವೆ. ಯುವಕರಿಗೆ ಮತ್ತು ಪಂಚಾಯತಿ ಮಟ್ಟದಲ್ಲಿ ಹೆಚ್ಚುವರಿಯಾಗಿ 10 ಲಕ್ಷ ಹುದ್ದೆಗಳನ್ನು ಸೃಷ್ಟಿಸುತ್ತೇವೆ. ಜೊತೆಗೆ ಮೊದಲ ಮೂರು ವರ್ಷಗಳ ಅವಧಿಯಲ್ಲಿ ಸ್ಟಾರ್ಟ್ ಅಪ್​ಗೆ ಅನುಮತಿಯ ಅವಶ್ಯಕತೆಯೂ ಇಲ್ಲ ಎಂದು ಅವರು ಹೇಳಿದರು.

ಇದು ಎರಡು ಸಿದ್ಧಾಂತಗಳ ನಡುವಿನ ಸಂಘರ್ಷ. ಒಂದೆಡೆ ದ್ವೇಷ ಮತ್ತು ವಿನಾಶ ಹಾಗೂ ಇನ್ನೊಂದೆಡೆ ಪ್ರೀತಿ, ಸಾಮರಸ್ಯಗಳಿವೆ. ಈ ಬಾರಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟ ಕರ್ನಾಟಕದ ಚುನಾವಣೆಯಲ್ಲಿ ಜಯಭೇರಿ ಬಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾವು ನ್ಯಾಯ್ ಯೋಜನೆ ಘೋಷಿಸುತ್ತಿದ್ದಂತೆಯೇ ನರೇಂದ್ರ ಮೋದಿಯವರ ಮುಖಚರ್ಯೆಯೇ ಬದಲಾಯಿತು. ಈ ಯೋಜನೆಗಾಗಿ ಎಲ್ಲಿಂದ ಹಣ ತರುತ್ತೀರಿ ಎಂದು ಕೇಳುತ್ತಾರೆ. ನಾವು ಬಡವರಿಗೆ, ರಫೇಲ್ ವ್ಯವಹಾರದಲ್ಲಿ 30,000 ಕೋಟಿ ಕೊಳ್ಳೆಹೊಡೆದು ಕೊಟ್ಟಿರಲ್ಲಾ ಅದೇ ನಿಮ್ಮ ಸ್ನೇಹಿತ ಅನಿಲ್ ಅಂಬಾನಿಯ ಜೇಬಿನಿಂದಲೇ ತೆಗೆದುಕೊಡುತ್ತೇವೆ ಎಂದು ಅವರು ಹೇಳಿದರು.

ನಮ್ಮ ಅರ್ಥಿಕ ತಜ್ಞರು ಭಾರತದ 20% ಬಡವರ ಕುಟುಂಬಕ್ಕೆ ವರ್ಷಕ್ಕೆ 72,000 ರೂಪಾಯಿಗಳನ್ನು ಹಾಕಬಹುದು ಎಂದಿದ್ದಾರೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಯಥಾ ಪ್ರಕಾರ ವ್ಯವಸ್ಥಿತವಾಗಿ ಕುಟುಂಬದ ಮಹಿಳೆಯರ ಖಾತೆಗೆ ಹಣವನ್ನು ನೇರವಾಗಿ ವರ್ಗಾವಣೆ ಮಾಡಲಿದೆ ಎಂದರು.

ದೇಶದಲ್ಲಿ ಈಗಾಗಲೇ ಮೋದಿಯವರ ಹೆಸರಲ್ಲಿ ಕಳ್ಳರು ಹೊರಗೆ ಬರುತ್ತಿದ್ದಾರೆ. ಬಹುಶಃ ಸರಿಯಾಗಿ ಹುಡುಕಿದರೆ ಮೋದಿಯವರ ಹೆಸರಿನ ಇನ್ನಷ್ಟು ಜನ ಕಳ್ಳರು ಹೊರಗೆ ಬರುತ್ತಾರೆ ಎನಿಸುತ್ತದೆ ಎಂದು ಅವರು ಕುಟುಕಿದರು.

ಬಡ ಜನರಿಗೆ ಹಣ ನೀಡುತ್ತೇನೆ ಎಂದಾಗ ದುಃಖಿಸುವ ನರೇಂದ್ರ ಮೋದಿಯವರು ಶ್ರೀಮಂತರ ಸಾಲವನ್ನು ಸಂತೋಷದಿಂದ ಮನ್ನಾ ಮಾಡುತ್ತಿದ್ದಾರೆ. ಮೋದಿಯವರೇ ಅನಿಲ್ ಅಂಬಾನಿಯನ್ನು ಅಪ್ಪಿಕೊಳ್ಳುತ್ತೀರ, ರೈತರನ್ನು ಅಪ್ಪಿಕೊಳ್ಳಲು ನಿರಾಕರಿಸುತ್ತೀರ. ನೀರವ್ ಮೋದಿ ಜೊತೆ ಫೋಟೋ ತೆಗೆಸಿಕೊಳ್ಳುತ್ತೀರಿ, ಬಡವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಹಿಂಜರಿಯುತ್ತೀರಿ. ಇದಕ್ಕೆ ಕಾರಣವೇನೆಂದು ಹೇಳುತ್ತೀರಾ? ಎಂದು ಅವರು ಪ್ರಶ್ನಿಸಿದರು.

ಮೋದಿಯವರು ತಮ್ಮನ್ನ ತಾವು ದೇಶಭಕ್ತ ಎಂದು ಸುಳ್ಳು ಹೇಳಿಕೊಳ್ಳುತ್ತಿದ್ದಾರೆ. ಬಹುಶಃ ನನಗೆ ತಿಳಿದಂತೆ ಯಾವ ದೇಶ ಭಕ್ತರೂ ಸಹ ದೇಶದ ವಿಷಯದಲ್ಲಿ ಸುಳ್ಳು ಹೇಳುವುದಿಲ್ಲ ಎಂದ ಅವರು, ಮೋದಿಯವರು ಕಳ್ಳರಾಗಿರುವುದು ನೂರಕ್ಕೆ ನೂರರಷ್ಟು ಸತ್ಯವಾಗಿದೆ. ಹೀಗಾಗಿಯೇ ನಾನು ಹಾಗೂ ಈ ದೇಶದ ಜನ ಚೌಕೀದಾರ್ ಚೋರ್ ಹೈ ಎಂದು ಧೈರ್ಯವಾಗಿ ಹೇಳುತ್ತೇವೆ ಎಂದು ಕಿಡಿಕಾರಿದರು.

ಇದೇ ವೇಳೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ರಾಹುಲ್ ಗಾಂಧಿಯವರು ನುಡಿದಂತೆ ನಡೆಯುವಂತಹ ನಾಯಕರಾಗಿದ್ದಾರೆ. ದೇಶದ ರೈತರು, ಮಹಿಳೆಯರು ಹಾಗೂ ಯುವಕರ ಪಾಲಿಗೆ ಅವರು ಆಶಾದಾಯಕ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದಾರೆ ಎಂದರು.

ನ್ಯಾಯ್ ಯೋಜನೆ ಕ್ರಾಂತಿಕಾರಿ ಎಂದ ಲೋಕಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ, ಈ ಯೋಜನೆ ಬಡತನ ನಿರ್ಮೂಲನೆಗೆ ದೊಡ್ಡ ಹೆಜ್ಜೆ. ಬೃಹತ್ ಜನಸ್ತೋಮದ ಉದ್ದಾರಕ್ಕಾಗಿ ಇಂತಹ ಅಭೂತಪೂರ್ವ ಯೋಜನೆಗಳು ಅಗತ್ಯ ಎಂದರು.

0

Leave a Reply

Your email address will not be published. Required fields are marked *