ಕಾಲಾ ನಿಗದಿಯಂತೆ ಬಿಡುಗಡೆಯಾಗಲಿ ಎಂದ ಕೋರ್ಟ್: ಮುಂಗಡ ಬುಕಿಂಗ್​ನಲ್ಲಿ ಇಳಿಕೆ

ನಿಗದಿಯಂತೆ ಚಿತ್ರ ಬಿಡುಗಡೆಯಾಗಲಿ ಎಂದ ಕೋರ್ಟ್​
ಕರ್ನಾಟಕದಲ್ಲಿ ಕಾಲಾ ಚಿತ್ರದ ವಿರುದ್ಧ ಮುಂದುವರೆದ ಪ್ರತಿರೋಧ

ದೆಹಲಿ/ಚೆನ್ನೈ/ಬೆಂಗಳೂರು: ಸೂಪರ್ ಸ್ಟಾರ್ ರಜಿನಿಕಾಂತ್, ಕಾಲಾ ಚಿತ್ರಕ್ಕೆ ಸಂಬಂಧಿಸಿದಂತೆ ಇಂದು ಸಿಹಿ ಮತ್ತು ಕಹಿ ಸಂಗತಿಗಳಿಗೆ ಮುಖಾಮುಖಿಯಾಗಿದ್ದಾರೆ. ಸುಪ್ರೀಂ ಕೋರ್ಟ್, ಮದ್ರಾಸ್ ಹೈ ಕೋರ್ಟ್ ನಿಗದಿಯಂತೆ ಚಿತ್ರ ಬಿಡುಗಡೆಯಾಗಲಿ ಎಂದು ಆದೇಶಿಸಿವೆ. ಈ ನಡುವೆ, ಕರ್ನಾಟಕದಲ್ಲಿ ಚಿತ್ರ ಬಿಡುಗಡೆ ಮಾಡಬಾರದು ಅಂಥಾ ಪ್ರತಿಭಟನೆ ಮುಂದುವರೆದಿದೆ.

ಕಾಲಿವುಡ್ ನಟ ರಜಿನಿಕಾಂತ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕಾಲಾ ಬಿಡುಗಡೆಗೆ ಸುಪ್ರೀಂ ಕೋರ್ಟ್ ಮತ್ತು ಮದ್ರಾಸ್ ಹೈಕೋರ್ಟ್ ಹಸಿರು ನಿಶಾನೆ ತೋರಿವೆ. ಕಾಲಾ ಚಿತ್ರದ ಬಿಡುಗಡೆಗೆ ತಡೆ ಕೋರಿ ಕೆ ಎಸ್ ರಾಜಶೇಖರನ್, ತಮ್ಮ ಕತೆಗೆ ಸಂಬಂಧಿಸಿದ ದೃಶ್ಯ, ಹಾಡುಗಳನ್ನು ತಮ್ಮ ಅನುಮತಿ ಪಡೆಯದೇ ಕಾಲಾ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ರಜಾ ಕಾಲದ ನ್ಯಾ. ಎ ಕೆ ಗೋಯಲ್, ನ್ಯಾ. ಅಶೋಕ್ ಭೂಷಣ್ ಅವರನ್ನು ಒಳಗೊಂಡ ನ್ಯಾಯಪೀಠ, ಕಾಲಾ ಚಿತ್ರದ ಬಿಡುಗಡೆಗೆ ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ. ಆದ್ದರಿಂದ ಸುಪ್ರೀಂ ಕೋರ್ಟ್ ಈ ವಿಚಾರದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದಿದೆ. ಇನ್ನು ಈ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್, ನಿಗದಿಯಂತೆ ಚಿತ್ರ ಬಿಡುಗಡೆಯಾಗಲಿ ಎಂದು ಅಭಿಪ್ರಾಯಪಟ್ಟಿದೆ.

ಆದರೆ, ನಾಳೆ ಕಾಲಾ ಚಿತ್ರ ಯಾವುದೇ ಕಾರಣಕ್ಕೂ ಬಿಡುಗಡೆಗೆಯಾಗಬಾರದು ಎಂದು ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಅಲ್ಲದೇ, ಸಾ ರಾ ಗೋವಿಂದು ಜೊತೆ ಈ ಕುರಿತು ಚರ್ಚಿಸಿದರು. ಚಲನ ಚಿತ್ರ ವಾಣಿಜ್ಯ ಮಂಡಳಿಗೆ ಭೇಟಿ ನೀಡಿದ ಕಾರ್ಯಕರ್ತರು ಚಿತ್ರ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದು, ಎಲ್ಲಾ ಮಾಲ್ ಗಳಿಗೆ ತೆರಳಿ ಚಿತ್ರ ಪ್ರದರ್ಶನ ಮಾಡಬಾರದೆಂದು ಮನವಿ ಮಾಡಿದರು.

ಚಿತ್ರ ಬಿಡುಗಡೆ ವಿವಾದ ಕುರಿತು ಪ್ರತಿಕ್ರಿಯಿಸಿದ ನಟ ರಜಿನಿಕಾಂತ್, ಸಿನಿಮಾ ಮತ್ತು ರಾಜಕಾರಣವನ್ನು ಬೆಸೆಯಬಾರದು. ಕಾವೇರಿ ವಿಷಯಕ್ಕೆ ಸಂಬಂಧಿಸಿದಂತೆ ನಾನು ಕೋರ್ಟ್ ತೀರ್ಮಾನವನ್ನು ಜಾರಿಗೊಳಿಸಿ ಎಂದು ಒತ್ತಾಯಿಸಿದ್ದೇನೆ. ಕೋರ್ಟ್ ತನ್ನ ಆದೇಶದಲ್ಲಿ ಪ್ರಾಧಿಕಾರ ರಚನೆಯನ್ನು ಉಲ್ಲೇಖಿಸಿತ್ತು. ಅದನ್ನೇ ನಾನು ಪುನರುಚ್ಛರಿಸಿದ್ದೇನೆ ಎಂದರು. ಅಲ್ಲದೇ, ಜಲಾಶಯಗಳನ್ನು ವಶಕ್ಕೆ ಪಡೆಯಲು ನಾನು ಆಗ್ರಹಿಸಿಲ್ಲ. ಈ ಕುರಿತು ಕನ್ನಡಿಗರಲ್ಲಿ ತಪ್ಪು ಗ್ರಹಿಕೆ ಉಂಟಾಗಿದೆ ಎಂದರು. ಜೊತೆಗೆ, ಚಲನ ಚಿತ್ರ ವಾಣಿಜ್ಯ ಮಂಡಳಿ ಚಿತ್ರ ಬಿಡುಗಡೆಗೆ ತಡೆ ನೀಡುವಂತಿಲ್ಲ ಎಂದ ಅವರು, ಕರ್ನಾಟಕ ಸಿಎಂ ಕುಮಾರಸ್ವಾಮಿಯವರಿಗೂ ಚಲನ ಚಿತ್ರದ ಕುರಿತು ಅರಿವಿದೆ. ಅವರು ಬಿಡುಗಡೆಗೆ ಅವಕಾಶ ಮಾಡಿಕೊಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಈ ನಡುವೆ ತಮಿಳುನಾಡಿನಲ್ಲಿ ಕಾಲಾ ಚಿತ್ರದ ಮುಂಗಡ ಬುಕಿಂಗ್​​ನಲ್ಲಿ ಭಾರೀ ಕುಸಿತವಾಗಿದೆ. ಜುಲೈ 2016ರಲ್ಲಿ ಕಬಾಲಿ ಚಿತ್ರ ಬಿಡುಗಡೆ ವೇಳೆ ಒಂದು ವಾರದ ಮುಂಗಡ ಟಿಕೆಟ್​​ಗಳನ್ನು ಬುಕಿಂಗ್ ಮಾಡಲಾಗಿತ್ತು. ಆದರೆ, ಈ ಬಾರಿ ಅಷ್ಟು ಪ್ರಮಾಣದ ಬೇಡಿಕೆ ಇಲ್ಲ ಎಂದು ತಮಿಳುನಾಡಿನ ಚಿತ್ರಮಂದಿರದ ಮಾಲೀಕರು ಹೇಳಿದ್ದಾರೆ. ಒಟ್ಟಿನಲ್ಲಿ ನಾಳೆ ಏನಾಗಲಿದೆಯೋ ಕಾದು ನೋಡಬೇಕಿದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *