ಭೂಮಿಯಿಂದ ಮೇಲೆದ್ದು ಬಂದ ದೇವಿ ಭಕ್ತ

ಕಲಬುರಗಿ: ಕಳೆದ ಮೂರು ದಿನಗಳಿಂದ ನಾಲ್ಕು ಅಡಿ ಆಳದ ಭೂಮಿಯಲ್ಲಿ ಅನುಷ್ಠಾನಕ್ಕೆ ಕುಳಿತಿದ್ದ ಭಕ್ತ ಇಂದು ಬೆಳಗ್ಗೆ ಭೂಮಿಯಿಂದ ಮೇಲೆ ಎದ್ದು ಬಂದಿದ್ದಾನೆ. ಕಲಬುರಗಿ ತಾಲೂಕಿನ ಕೊಟನೂರ- ಉದನೂರ ಸೀಮೆಯ ಕರಿಬಸಮ್ಮ‌ ದೇವಿ ದೇವಸ್ಥಾನದ ಮುಂಭಾಗದಲ್ಲಿ ವಿಜಯಕುಮಾರ್ ಪವಾರ್ ಎಂಬ ಭಕ್ತ ಅನುಷ್ಠಾನಕ್ಕೆ ಕುಳಿತಿದ್ದ. ಕನಸಿನಲ್ಲಿ  ದೇವಿ ಬಂದು ಹೇಳಿದ್ದಾಳೆ ಎಂಬ ಕಾರಣಕ್ಕೆ ಮೊನ್ನೆ ಸಂಜೆ 5ಗಂಟೆಗೆ ನಾಲ್ಕು ಅಡಿ ಆಳದ ತಗ್ಗು ತೆಗೆದು ಅದರಲ್ಲಿ ಭಕ್ತ ವಿಜಯಕುಮಾರ್ ಕುಳಿತಿದ್ದ. ವಿಭೂತಿ, ಕುಂಕುಮ, ಭಂಡಾರ ಹಾಕಿ ತಲೆಯವರೆಗೂ ಮಣ್ಣು ಮುಚ್ಚಿ ಆ ನಂತರ ಅರ್ಧ ಭೂ ಭಾಗದಿಂದ ಹಿಡಿದು ಮೇಲ್ಭಾಗದ ನಾಲ್ಕು ಅಡಿವರೆಗೂ ಬೇವಿನ ತಪ್ಪಲಿನಿಂದ ಮುಚ್ಚಲಾಗಿತ್ತು. ಇಂದು ಬೆಳಗ್ಗೆ 8.30ಕ್ಕೆ ಅನುಷ್ಠಾನ ಮುಗಿದು ಅದ್ಧೂರಿಯಾಗಿ ವಿಜಯಕುಮಾರ್ ಅವರ ಅನುಷ್ಠಾನ ಸಮಾರೋಪ ನಡೆಯಿತು. ಭೂಮಿಯ ಆಳದಿಂದ ಹೊರ ಬಂದ ವಿಜಯಕುಮಾರ್ ಕಲಬುರಗಿಯ ನಂದಿಕೂರ್ ಗ್ರಾಮದ ನಿವಾಸಿಯಾಗಿದ್ದು, ಕಟ್ಟಡಗಳ ಕಾಂಟ್ರಾಕ್ಟರ್ ಆಗಿ ಕೆಲಸ‌ ಮಾಡುತ್ತಿದ್ದಾರೆ. ಮದುವೆಯಾಗಿ ಎರಡು ಮಕ್ಕಳು ಕೂಡ ಇವರಿಗಿದ್ದಾರೆ. ದೇವಿ ಕರಿಬಸಮ್ಮ ಆಜ್ಞೆ ಆಗಿದೆಯಂತೆ. ಹೀಗಾಗಿ ಅದನ್ನ ಪಾಲಿಸಬೇಕು ಇಲ್ಲವಾದರೆ ಮೂರು ದಿನಗಳಲ್ಲಿ ಲಿಂಗೈಕ್ಯ ಆಗುತ್ತೇನೆ ಎಂದು ಹೇಳಿದ್ದರಿಂದ ಈ ರೀತಿ‌ ಮಣ್ಣಿನ ಆಳದಲ್ಲಿ ಕೂರಿಸಲು ಮನೆಯವರು ಒಪ್ಪಿದ್ದಾರೆ. ಆದರೆ ಇದಕ್ಕೂ ಮುನ್ನ ಮನೆಯವರ ವಿರೋಧ ಇದ್ದರೂ ವಿಜಯಕುಮಾರ್ ದೇವಿ ಆಜ್ಞೆ ಪಾಲಿಸೋಕೆ ಮುಂದಾಗಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ಮನೆಯವರು ಅನುಷ್ಠಾನಕ್ಕೆ ಒಪ್ಪಿದರು. ಮೊನ್ನೆ ಸಂಜೆಯಿಂದ ಎಲ್ಲರೂ ವಿಜಯಕುಮಾರ್ ಅವರ ಬಳಿಯೇ ಅನುಷ್ಠಾನಕ್ಕೆ ಕುಳಿತಿದ್ದು, ಭಕ್ತರಿಗಾಗಿ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.

ಸುದ್ದಿ ಟಿವಿ, ಕಲಬುರ್ಗಿ.

0

Leave a Reply

Your email address will not be published. Required fields are marked *