ಶಬರಿಮಲೆ ದೇಗುಲಕ್ಕೆ ಮಹಿಳಾ ಪ್ರವೇಶ: ಮುಂದುವರೆದ ಪ್ರತಿಭಟನೆ

ತಿರುವನಂತಪುರ: ಶಬರಿ ಮಲೆಯ ಸ್ವಾಮಿ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶ ವಿಚಾರದಲ್ಲಿ ಗೊಂದಲ ಮುಂದುವರೆದಿದ್ದು, ನಿಳಕ್ಕಲ್​​ನಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇಷ್ಟು ದಿನಗಳ ಕಾಲ ದೇವಾಲಯದ ಆವರಣದಲ್ಲಿ ಮಹಿಳೆಯರಿಗೆ ಪ್ರವೇಶಕ್ಕೆ ಅವಕಾಶ ಇಲ್ಲ ಎಂಬ ಸೂಚನೆಯನ್ನು ದೇವಾಲಯ ತೆರವುಗೊಳಿಸಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ಪ್ರತಿಭಟನಾಕಾರರು ಅಯ್ಯಪ್ಪ ಮಂತ್ರ ಪಠಿಸುವ ಮೂಲಕ ವಿರೋಧ ವ್ಯಕ್ತಪಡಿಸಿದರು. ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಮತ್ತು ರಾಜ್ಯ ಸರ್ಕಾರದ ನಡೆ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಈ ನಡುವೆ ಪ್ರತಿಭಟನಾ ನಿರತ 11 ಜನರನ್ನು ಬಂಧಿಸಲಾಗಿದೆ.

ನಿಳಕ್ಕಲ್ ಮತ್ತು ಪಂಪ ಶಿಬಿರದ ಬಳಿ ಒಟ್ಟು 1,000 ಭದ್ರತಾಪಡೆಗಳನ್ನು ನಿಯೋಜಿಸಲಾಗಿದ್ದು, 800 ಪುರುಷ, 200 ಮಹಿಳಾ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಬರಿಮಲೆ ಸನ್ನಿಧಾನದಲ್ಲಿ 500 ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಈ ನಡುವೆ ಪಂಪ ಶಿಬಿರದ ಬಳಿ 10-50 ಜನರ ಗುಂಪುಗಳು ಅಲ್ಲಲ್ಲಿ ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ.

ಮುಂಜಾನೆ ಕೇರಳದ ನಿಳಕ್ಕಲ್​​​ನ ಶಬರಿಮಲೆ ದೇಗುಲದ ಆವರಣ ಪ್ರದೇಶಿಸಿದ ಪ್ರತಿಭಟನಾಕಾರರು ಟೆಂಟ್​ಗಳನ್ನು ನಿರ್ಮಿಸಿ ಪ್ರತಿಭಟನೆಗೆ ವೇದಿಕೆ ನಿರ್ಮಿಸಿಕೊಂಡರು. ಆದರೆ, ಪೊಲೀಸರು ಟೆಂಟ್​ಗಳನ್ನು ತೆರವುಗೊಳಿಸಿದರು ಮತ್ತು ಪ್ರತಿಭಟನಾಕಾರರಿಗೆ ಎಚ್ಚರಿಕೆ ನೀಡಿದರು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಶಬರಿಮಲೆಯಿಂದ 20 ಕಿಮೀ ದೂರದವರೆಗೆ ಭಾರೀ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿದೆ. ಜೊತೆಗೆ ಶಬರಿಮಲೆ ಆಚಾರ ಸಂರಕ್ಷಣಾ ಸಮಿತಿ ನಿರ್ಮಿಸಿರುವ ಷೆಲ್ಟರ್​ಗಳನ್ನು ತೆರವುಗೊಳಿಸಲಾಗಿದೆ.

0

Leave a Reply

Your email address will not be published. Required fields are marked *