ಆರು ಅಡಿ ಮೂರಿಂಚು ಎತ್ತರದ ಅಪರೂಪದ ನಟ ರಾಣಾ ದಗ್ಗುಬಾಟಿ…

ಆರು ಅಡಿ ಮೂರಿಂಚು ಎತ್ತರದ ಅಪರೂಪದ ನಟ ರಾಣಾ ದಗ್ಗುಬಾಟಿ. ಚೆನ್ನೈನಲ್ಲಿ ಹುಟ್ಟಿದರೂ ಕೂಡ ತೆಲುಗು ಚಿತ್ರರಂಗದ ದಿಗ್ಗಜರ ಸಂಬಂಧಿಯಾದ ಈತ ಕರ್ನಾಟಕದೊಂದಿಗೂ ಆತ್ಮೀಯ ಸಂಬಂಧ ಹೊಂದಿದ್ದಾರೆ.ರಾಣಾ ದಗ್ಗುಬಾಟಿಯ ಬಗ್ಗೆ ಎಲ್ಲರೂ ಗಮನ ಕೊಟ್ಟು ನೋಡಲು ಶುರು ಮಾಡಿದ್ದು ಬಾಹುಬಲಿ ಎಂಬ ಮಹಾನ್ ಚಿತ್ರದ ಬಳಿಕ ಎನ್ನಬಹುದು. ಅದಕ್ಕೆ ಕಾರಣ ನಿರ್ದೇಶಕ ರಾಜಮೌಳಿ ನೀಡಿದಂಥ ಬಲ್ಲಾಳ ದೇವನ ಪಾತ್ರ ಎಂದೇ ಹೇಳಬಹುದು..

ರಾಜಮೌಳಿ ಯಾವಾಗಲೂ ತಮ್ಮ ಚಿತ್ರಗಳಲ್ಲಿ ನಾಯಕನಷ್ಟೇ ಪ್ರಾಧಾನ್ಯತೆಯನ್ನು ಖಳನಾಯಕನಿಗೂ ನೀಡುತ್ತಾರೆ. ಅದೇ ರೀತಿ ಬಾಹುಬಲಿ ಒಂದು ಮತ್ತು ಎರಡರಲ್ಲಿ ರಾಣಾ ದಗ್ಗುಬಾಟಿ ನೀಡಿದ ನಟನೆ ಅವರನ್ನು ಜನಪ್ರಿಯ ತಾರೆಗಳ ಸಾಲಿನಲ್ಲಿ ತಂದು ನಿಲ್ಲಿಸಿತು. ಚಿತ್ರದಲ್ಲಿ ಅವರ ಪಾತ್ರದ ಇಂಟ್ರಡಕ್ಷನ್ ದೃಶ್ಯದಿಂದ ಕೊನೆಯತನಕವೂ ನೆನಪುಳಿಯಂಥ ಪಾತ್ರವನ್ನು ರಾಣಾ ನಿರ್ವಹಿಸಿದ್ದರು.ಆದರೆ ಅದಕ್ಕೂ ಮೊದಲು ಲೀಡರ್ ಎಂಬ ತೆಲುಗು ಚಿತ್ರದ ಮೂಲ‌ಕ‌ ಚಿತ್ರರಂಗ ಪ್ರವೇಶಿಸಿದಾಗಲೇ ಬೆಸ್ಟ್ ಮೇಲ್ ಡೆಬ್ಯುಟ್ ಫಿಲ್ಮ್ ಫೇರ್ ಅವಾರ್ಡ್ ಪಡೆದ ಕೀರ್ತಿ ಅವರದಾಗಿತ್ತು. ಬಾಲಿವುಡ್ ನಲ್ಲಿಯೂ ‘ಧಮ್ ಮಾರೋ ಧಮ್’ ಚಿತ್ರದ ನಟನೆಗಾಗಿ ಪ್ರಶಂಸೆ ಗಳಿಸಿದ್ದರು.

 ಗಾಝಿ ಅಟ್ಯಾಕ್, ನೇನೇ ರಾಜ ನೇನೇ ಮಂತ್ರಿ ಚಿತ್ರದ ಮೂಲಕವೂ ರಾಣಾನ ಸಕ್ಸಸ್ ಫುಲ್ ಕೆರಿಯರ್ ಮುಂದುವರಿಯಿತು. ಇವುಗಳೊಂದಿಗೆ ಕಿರುತೆರೆ ಪ್ರೇಕ್ಷಕರಿಗೂ ಆಪ್ತರಾಗಿದ್ದು ತಮ್ಮ ನಂಬರ್ ಒನ್ ಯಾರ್ರೀ ಶೋ ಮೂಲಕ. ಹೌದು ಪ್ರಸ್ತುತ ಕನ್ನಡದಲ್ಲಿ ಶಿವರಾಜ್ ಕುಮಾರ್ ನಿರ್ವಹಿಸುತ್ತಿರುವ ನಂಬರ್ ಒನ್ ಯಾರ್ರೀ ಕಾರ್ಯಕ್ರಮದ ಮೂಲ ತೆಲುಗು ಮಾದರಿಯಲ್ಲಿ‌ ರಾಣಾ ನಿರೂಪಕರಾಗಿ ಗಮನ ಸೆಳೆದಿರುವುದನ್ನು ಮರೆಯಲಾಗದು..ಕನ್ನಡದಲ್ಲಿ ಈ ವರ್ಷ ತೆರೆಕಂಡು ಸುದ್ದಿಯಾದ ರಾಜರಥ ಚಿತ್ರದ ತೆಲುಗು ಅವತರಣಿಕೆಯಲ್ಲಿ ರಾಜರಥ ಬಸ್ ಗೆ ಇವರೇ ಧ್ವನಿಯಾಗಿದ್ದರು. ಅಂದರೆ ಕನ್ನಡಲ್ಲಿ ಪುನೀತ್ ರಾಜಕುಮಾರ್ ನಿರೂಪಣೆ ಮಾಡಿದ್ದ ಭಾಗಕ್ಕೆ ತೆಲುಗಿನಲ್ಲಿ ರಾಣಾ ಕಂಠವಿತ್ತು. ಒಟ್ಟಿನಲ್ಲಿ ಕನ್ನಡದ ಇಬ್ಬರು ದೊಡ್ಡ ಸ್ಟಾರ್ ಗಳ ಸ್ಥಾನಕ್ಕೆ ತೆಲುಗಲ್ಲಿ ರಿಪ್ಲೇಸ್ಮೆಂಟಾಗಿ ಗುರುತಿಸಿಕೊಳ್ಳುವುದು ಸಣ್ಣ ವಿಚಾರವಲ್ಲ ಎನ್ನಬಹುದು.ಸಿನಿಮಾರಂಗದಲ್ಲಿ ನಟನಾಗಿ ಮಾತ್ರವಲ್ಲದೆ ನಿರ್ಮಾಪಕ, ವಿತರಕ, ವಾಯ್ಸ್ ಓವರ್ ಆರ್ಟಿಸ್ಟ್ ಮತ್ತು ಹಲವು ವಿಭಾಗಗಳಲ್ಲಿ ಕೆಲಸ ಮಾಡಿ ಸೈ ಎನಿಸಿಕೊಂಡಿರುವ ಈ ದೈತ್ಯ ಪ್ರತಿಭೆಯಲ್ಲಿಯೂ ಬೃಹತ್ ವ್ಯಕ್ತಿ ಎಂದು ಸಾಬೀತು ಪಡಿಸಿದ್ದಾರೆ.

ಅಕ್ಷತಾ ಗೌಡ, ಫಿಲ್ಮ್ ಬ್ಯೂರೋ ಸುದ್ದಿ ಟಿವಿ

0

Leave a Reply

Your email address will not be published. Required fields are marked *