ತೇಜ್ ಬಹದ್ದೂರ್ ನಾಮಪತ್ರ ತಿರಸ್ಕಾರ: ಸೈನಿಕನನ್ನು ವಜಾಗೊಳಿಸಿದವರು ನೈಜ ದೇಶಭಕ್ತರೇ?: ಅಖಿಲೇಶ್ ಯಾದವ್

ಲಖ್ನೋ: ಸೈನಿಕರಿಗೆ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ ವಿಡಿಯೋ ಸಾಕ್ಷಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸೇವೆಯಿಂದ ವಜಾಗೊಂಡಿದ್ದ ತೇಜ್ ಬಹದ್ದೂರ್ ನಾಮಪತ್ರ ತಿರಸ್ಕಾರವಾಗಿದೆ. ಸೇನೆಯಿಂದ ವಜಾಗೊಂಡ ಬಹದ್ದೂರ್ ಅವರಿಗೆ ಸಮಾಜವಾದಿ ಪಕ್ಷ ಟಿಕೆಟ್ ನೀಡಿ ಪ್ರಧಾನಿ ಮೋದಿ ವಿರುದ್ಧ ಕಣಕ್ಕಿಳಿಸಿತ್ತು.

ನಾಮಪತ್ರ ತಿರಸ್ಕಾರ ಕುರಿತು ಪ್ರತಿಕ್ರಿಯಿಸಿರುವ ವಾರಾಣಸಿಯ ಚುನಾವಣಾ ಅಧಿಕಾರಿ, 5 ವರ್ಷಗಳ ಒಳಗೆ ರಾಜ್ಯ ಅಥವಾ ಕೇಂದ್ರ ಸರ್ಕಾರದ ಸೇವೆಯಿಂದ ಅಮಾನತಾದ ವ್ಯಕ್ತಿ, ಚುನಾವಣಾ ಆಯೋಗದಿಂದ ನಂಬಿಕೆದ್ರೋಹ ಅಥವಾ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ ಎಂದು ಪ್ರಮಾಣ ಪತ್ರವನ್ನು ಪಡೆಯಬೇಕು. ಇಂದು ಬೆಳಿಗ್ಗೆ 11 ಗಂಟೆಯ ಒಳಗೆ ಪ್ರಮಾಣ ಪತ್ರವನ್ನು ಸಲ್ಲಿಸಿಲ್ಲ. ಆದ್ದರಿಂದ ಅವರ ನಾಮಪತ್ರವನ್ನು ತಿರಸ್ಕರಿಸಲಾಗಿದೆ ಎಂದಿದ್ದಾರೆ.

ನಾಮಪತ್ರ ತಿರಸ್ಕಾರ ಕ್ರಮವನ್ನು ಖಂಡಿಸಿರುವ ಎಸ್‍ಪಿ ಅಧ್ಯಕ್ಷ ಅಖಿಲೇಶ್ ಯಾದವ್, ರಾಷ್ಟ್ರೀಯತೆಯ ಹೆಸರಿನಲ್ಲಿ ಮತ ಕೇಳುವ ಬಿಜೆಪಿಗರು ಸೈನಿಕನನ್ನು ಚುನಾವಣೆಯಲ್ಲಿ ಎದುರಿಸಬೇಕು ಎಂದಿದ್ದಾರೆ. ಜೊತೆಗೆ, ಕಳಪೆ ಗುಣಮಟ್ಟದ ಆಹಾರ ನೀಡಲಾಗಿದೆ ಎಂದು ಆರೋಪಿಸಿದ ಕಾರಣಕ್ಕೆ ಸೈನಿಕನನ್ನು ಸೇನೆಯಿಂದ ಅಮಾನತು ಮಾಡುವ ವ್ಯಕ್ತಿಗಳು ಹೇಗೆ ನೈಜ ದೇಶಭಕ್ತರಾಗಲು ಸಾಧ್ಯ? ಎಂದು ಕೂಡ ಪ್ರಶ್ನಿಸಿದ್ದಾರೆ.

0

Leave a Reply

Your email address will not be published. Required fields are marked *