ತ್ರಿವಿಕ್ರಮ ಸಾಧಿಸಿದ ಟೀಮ್​ ಇಂಡಿಯಾ

ಟೀಮ್​ ಇಂಡಿಯಾ ಲಂಕಾ ವಿರುದ್ಧ ತವರಿನಲ್ಲಿ ಅಬ್ಬರದ ಪ್ರದರ್ಶನ ನೀಡಿದೆ. ಭಾರತದಲ್ಲಿ ನಡೆದ ಮೂರು ಪಂದ್ಯಗಳ ಟೆಸ್ಟ್​ ಸರಣಿಯನ್ನು ಗೆದ್ದು ಬೀಗಿದೆ. ಅಲ್ಲದೆ ಕೊಹ್ಲಿ ಪಡೆ ಇತಿಹಾಸ ನಿರ್ಮಿಸಿದೆ. ಅಲ್ಲದೆ ಸತತ 9 ಸರಣಿ ಗೆದ್ದು ಇಂಗ್ಲೆಂಡ್​ ಹಾಗೂ ಆಸ್ಟ್ರೇಲಿಯಾ ತಂಡಗಳ ದಾಖಲೆಯನ್ನು ಸರಿಗಟ್ಟಿದೆ. ತವರಿನಲ್ಲಿ ಕೊಹ್ಲಿ ಪಡೆ ಅದ್ಭುತ ಪ್ರದರ್ಶನ ನೀಡಿದ್ದು. ರನ್​ಗಳನ್ನು ಗುಡ್ಡೆ ಹಾಕಿ ಆರ್ಭಟಿಸಿರುವ ಕೊಹ್ಲಿ ಆಟಗಾರರು, ನವ್ಯ ಇತಿಹಾಸ ಬರೆದಿದ್ದಾರೆ. ಕೋಲ್ಕಾತ್ತಾದಲ್ಲಿ ಮಾಯಾ ಜಿಂಕೆಯಂತೆ ಕಾಡಿದ ಗೆಲುವಿನ ಕಹಿ ಮರೆತು, ನಾಗ್ಪುರ್​ದಲ್ಲಿ ಅಬ್ಬರಿಸಿದ್ದಾರೆ. ಅಲ್ಲದೆ, ದೆಹಲಿಯಲ್ಲಿ ತ್ರಿವಿಕ್ರಮ ಸಾಧಿಸಿದ್ದಾರೆ.

ನಾಗ್ಪುರ್​​ ಹಾಗೂ ದೆಹಲಿ ಅಂಗಳದಲ್ಲಿ ದ್ವಿಶತಕ ಸಾಧನೆ ಮಾಡಿ, ನಾಯಕನಾಗಿ 6 ದ್ವಿಶತಕ ಬಾರಿಸಿದ ಹಿರಿಮೆಗೆ ಕೊಹ್ಲಿ ಪಾತ್ರರಾದರು. ಒಟ್ಟಾರೆ ಸರಣಿಯಲ್ಲಿ ಕೊಹ್ಲಿ 610 ರನ್​ ಸೇರಿಸಿ ದಾಖಲೆ ನಿರ್ಮಿಸಿದರು. ಟೀಮ್​ ಇಂಡಿಯಾದ ಸ್ಪಿನ್​ ಮಾಂತ್ರಿಕ ಅಶ್ವಿನ್​​ 3 ಪಂದ್ಯಗಳಲ್ಲಿ 12 ವಿಕೆಟ್​ ಪಡೆದು ಅಬ್ಬರಿಸಿದರು. ಇನ್ನು ಎಡಗೈ ಸ್ಪಿನ್​ ಬೌಲರ್​​ ರವೀಂದ್ರ ಜಡೇಜಾ 10 ವಿಕೆಟ್​ ಪಡೆದರು. ವೇಗದ ಬೌಲರ್​ಗಳ ಪರ ಮೊಹಮ್ಮದ್​ ಶಮಿ 9, ಇಶಾಂತ್​ ಶರ್ಮಾ, ಭುವನೇಶ್ವರ್​ ಕುಮಾರ್​ ತಲಾ 8 ವಿಕೆಟ್​ ಪಡೆದರು. ಇನ್ನು ಲಂಕಾ ತಂಡದ ಪರ ಅಧಿಕ ವಿಕೆಟ್​ ಕಬಳಿಸಿದ ಕೀರ್ತಿ ಲಕ್ಮಲ್​ಗೆ ಸಲ್ಲುತ್ತದೆ. ಲಕ್ಮಲ್​​ ಹಾಗೂ ಪೆರೆರಾ ತಲಾ 8 ವಿಕೆಟ್​ ಕಬಳಿಸಿದರು.

ವಿರಾಟ್​ ಕೊಹ್ಲಿ ಮೂರು ಟೆಸ್ಟ್​​ಗಳ ಸರಣಿಯಲ್ಲಿ 610 ರನ್​ ಬಾರಿಸಿ ರನ್​ ಸಾಧಕರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಶ್ರೀಲಂಕಾ ತಂಡದ ನಾಯಕ ದಿನೇಶ್​ ಚಾಂಡಿಮಲ್​ ಇದ್ದರೆ, ನಂತರದ ಸ್ಥಾನದಲ್ಲಿ ಮುರಳಿ ವಿಜಯ್​, ಚೇತೇಶ್ವರ್​ ಪೂಜಾರ, ರೋಹಿತ್​ ಶರ್ಮಾ ಇದ್ದಾರೆ. ಸತತ ಎರಡು ವರ್ಷಗಳಿಂದ ಸರಣಿ ಗೆಲುವಿನ ನಾಗಾಲೋಟವನ್ನು ಮುಂದುವರಿಸಿರುವ ಟೀಮ್​ ಇಂಡಿಯಾ ಟೆಸ್ಟ್​ ಕ್ರಿಕೆಟ್​ನಲ್ಲಿ ಹೊಸ ನಕ್ಷತ್ರದಂತೆ ಪ್ರಜ್ವಲಿಸುತ್ತಿದೆ.

ವಿನಾಯಕ ಲಿಮಯೆ, ಸ್ಪೋರ್ಟ್ಸ್​ ಬ್ಯೂರೋ ಸುದ್ದಿ ಟಿವಿ

 

0

Leave a Reply

Your email address will not be published. Required fields are marked *