ಸಿಎಂ ಪಳನಿಸ್ವಾಮಿಯವರೊಂದಿಗೆ ಭಿನ್ನಾಭಿಪ್ರಾಯವಿಲ್ಲ: ಪನ್ನೀರ್ ಸೆಲ್ವಂ

ಚೆನ್ನೈ: ಸಿಎಂ ಪಳನಿಸ್ವಾಮಿಯವರು ಮತ್ತು ತಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಉಪಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ ಹೇಳಿದ್ದಾರೆ. ಇಂದು ಮಧ್ಯಾಹ್ನ ದೆಹಲಿಗೆ ತೆರಳಿದ್ದ ಅವರು, ಕೆಲಕಾಲ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತುಕತೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಎಐಎಡಿಎಂಕೆಯ ಉಭಯ ಬಣಗಳ ವಿಲೀನದ ನಂತರ ಕೂಡ ಮುನಿಸು ಮುಂದುವರೆದಿದೆ ಎಂಬ ಶಂಕೆ ವ್ಯಕ್ತವಾಗಿತ್ತು.

ನನ್ನ ಮತ್ತು ಸಿಎಂ ನಡುವೆ ಭಿನ್ನಾಭಿಪ್ರಾಯಗಳಿರುವ ಮಾತುಗಳು ಸಂಪೂರ್ಣ ಸುಳ್ಳು. ಉಭಯ ಬಣಗಳು ಯಾವುದೇ ಪೂರ್ವ ಷರತ್ತುಗಳಿಲ್ಲದೇ ವಿಲೀನವಾಗಿದ್ದೇವೆ ಎಂದು ಕೂಡ ಅವರು ಸ್ಪಷ್ಟೀಕರಣ ನೀಡಿದರು. ಉಭಯ ಪಕ್ಷಗಳು ವಿಲೀನಗೊಂಡ ನಂತರ ಕೂಡ ಪಕ್ಷದಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ ಎಂದು ಕೂಡ ವರದಿಯಾಗಿತ್ತು.

ಡಿಸೆಂಬರ್ 5, 2016ರಂದು ಜಯಲಲಿತಾ ಸಾವಿನ ನಂತರ ಎಐಎಡಿಎಂಕೆ ಪಕ್ಷದಲ್ಲಿ ಬಿಕ್ಕಟ್ಟು ಆರಂಭವಾಗಿತ್ತು. ಆಗಸ್ಟ್​​ನಲ್ಲಿ ಉಭಯ ಬಣಗಳು ವಿಲೀನವಾಗಿ ಒಗ್ಗಟ್ಟು ಪ್ರದರ್ಶಿಸಿದ್ದವು. ಅಲ್ಲದೇ, ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಮಧ್ಯಂತರ ಪ್ರಧಾನ ಕಾರ್ಯದರ್ಶಿಯಾಗಿದ್ದ ವಿ ಕೆ ಶಶಿಕಲಾ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿತ್ತು.

ಈ ನಡುವೆ ಶಶಿಕಲಾ ಅವರ ಸೋದರ ಸಂಬಂಧಿ ಟಿ ಟಿ ವಿ ದಿನಕರನ್ ಅವರನ್ನು ತೆರೆಮರೆಗೆ ತಳ್ಳಲಾಗಿತ್ತು. ಅದಾದ ನಂತರ ದಿನಕರನ್ ಅವರ 18 ಬೆಂಬಲಿಗ ಶಾಸಕರು ಪಳನಿಸ್ವಾಮಿ ಸರ್ಕಾರದ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಿದ್ದರು. ಅಲ್ಲದೇ, ತಮಿಳುನಾಡು ಮತ್ತು ಕರ್ನಾಟಕದ ರೆಸಾರ್ಟ್​​​ನಲ್ಲಿ ತಂಗಿರುವ ಅವರು ತಕ್ಷಣ ಪಳನಿಸ್ವಾಮಿಯವರು ಸದನದಲ್ಲಿ ಬಹುಮತ ಸಾಬೀತುಪಡಿಸುವಂತೆ ಆಗ್ರಹಿಸಿದ್ದರು.

ಈ ನಡುವೆ ದಿನಕರನ್ ಬೆಂಬಲಿಗ 18 ಶಾಸಕರನ್ನು ಸ್ಪೀಕರ್ ಧನ್​ಪಾಲ್ ಶಾಸಕ ಸ್ಥಾನದಿಂದ ವಜಾಗೊಳಿಸಿದ್ದರು. ಸ್ಪೀಕರ್ ಕ್ರಮವನ್ನು ಪ್ರಶ್ನಿಸಿದ್ದ ಸದಸ್ಯತ್ವ ಕಳೆದುಕೊಂಡ ಶಾಸಕರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅವರ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್​, ಅಂತಿಮ ತೀರ್ಪು ನೀಡುವವರೆಗೆ ಬಹುಮತ ಸಾಬೀತುಪಡಿಸುವಂತಿಲ್ಲ ಎಂದು ಹೇಳಿತ್ತು.

ಈ ನಡುವೆ ತಮ್ಮ ಪತಿ ನಟರಾಜನ್ ಅವರ ಅನಾರೋಗ್ಯದ ಕಾರಣದಿಂದಾಗಿ ಶಶಿಕಲಾ ಅವರು ಕಳೆದ ಶುಕ್ರವಾರ ಪೆರೋಲ್ ಮೇಲೆ ಬಿಡುಗಡೆಯಾಗಿದ್ದರು. ಆದರೆ, ಅವರ ಅವಧಿ ಇಂದಿಗೆ ಮುಕ್ತಾಯವಾದ ಕಾರಣದಿಂದಾಗಿ ಪರಪ್ಪನ ಅಗ್ರಹಾರದ ಸೆರೆಮನೆಗೆ ಹಿಂದಿರುಗಿದರು.

ಇಂದು ಎಐಎಡಿಎಂಕೆಯ ಪನ್ನೀರ್​ ಸ್ವಾಮಿಯವರೊಂದಿಗೆ ಮುನುಸ್ವಾಮಿ, ಮನೋಜ್ ಪಾಂಡಿಯನ್ ಮತ್ತು ಮೈತ್ರೇಯನ್ ಅವರು ಕೂಡ ಪ್ರಧಾನಿಯವರನ್ನು ಭೇಟಿಯಾದರು. ಈ ವೇಳೆ ರಾಜ್ಯದಲ್ಲಿ ತಾಂಡವವಾಡುತ್ತಿರುವ ಡೆಂಘೀ ಸಮಸ್ಯೆ ಕುರಿತು ಚರ್ಚಿಸಿದರು. ಡೆಂಘೀ ನಿಯಂತ್ರಿಸಲು ಎಲ್ಲ ಅಗತ್ಯವಾದ ಕ್ರಮ ಕೈಗೊಳ್ಳುವುದಾಗಿ ಪ್ರಧಾನಿ ಭರವಸೆ ನೀಡಿದ್ದಾರೆ ಎಂದು ಪನ್ನೀರ್ ಸೆಲ್ವಂ ಹೇಳಿದ್ದಾರೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *