ನಿರ್ದಿಷ್ಟ ದಾಳಿ: ಸೋಲಾ? ಗೆಲುವಾ?

ಭಾರತದ ಭದ್ರತೆಗೆ ಧಕ್ಕೆಯಾದಲ್ಲಿ ನಿರ್ದಿಷ್ಟ ದಾಳಿ ಸೇರಿದಂಥೆ ಅದಕ್ಕಿಂಥ ಒಂದು ಹೆಜ್ಜೆ ಮುಂದೆ ಹೋಗಿ ದಾಳಿ ನಡೆಸುವ ಕುರಿತು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಗೃಹ ಖಾತೆಯ ರಾಜ್ಯ ಸಚಿವ ಹನ್ಸ್​ರಾಜ್ ಆಹಿರ್, ದೇಶದ ರಕ್ಷಣೆಗಾಗಿ ಸೇನೆ ಕೈಗೊಳ್ಳುವ ಕ್ರಮಗಳನ್ನು ಬೆಂಬಲಿಸುವುದಾಗಿ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ಸೆಪ್ಟಂಬರ್​ನಲ್ಲಿ ಭಾರತೀಯ ಸೇನೆ ನಡೆಸಿದ ನಿರ್ದಿಷ್ಟ ದಾಳಿ ಕುರಿತು ಮತ್ತೊಮ್ಮೆ ಚಿಂತನೆ ನಡೆಸುವಂತೆ ಮಾಡಿದೆ.
ಭಾರತದಲ್ಲಿ ಭಯೋತ್ಪಾದನೆಯ ತಾಯ್ನೆಲ ಕಾಶ್ಮೀರ ಅಂತಲೇ ಹೆಸರಾಗಿಹೋಗಿದೆ. ದೇಶ ವಿಭಜನೆ ಆದಾಗಿನಿಂದ ಈ ಪ್ರದೇಶ ಹಲವು ವಿವಾದ, ಪ್ರಕ್ಷೋಭೆಗಳ ತಾಣವಾಗಿದೆ. ಭಾರತದ ಭಯೋತ್ಪಾದನೆಗೆ ಈ ಎರಡು ದೇಶಗಳ ವೈಮನಸ್ಸಿನ ಇತಿಹಾಸವೂ ಇದೆ. ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಈ ವರ್ಷ ಕೂಡ ಕಾಶ್ಮೀರದಲ್ಲಿ ಅನೇಕ ಕಾರಣಗಳಿಗೆ ಕ್ಷೋಭೆ ಉಂಟಾಗಿತ್ತು. ಈ ನಡುವೆ ಭಾರತೀಯ ಸೇನೆ ನಡೆಸಿದ ನಿರ್ದಿಷ್ಟ ದಾಳಿಯಿಂದ ಪಾಕ್ ಬುದ್ಧಿ ಕಲೀತಾ? ದೇಶದಲ್ಲಿ ಭಯೋತ್ಪಾದನಾ ದಾಳಿಗಳು ನಿಯಂತ್ರಣಕ್ಕೆ ಬಂದ್ವಾ? ಅನ್ನೋ ಪ್ರಶ್ನೆಗೆ ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರ ಬಳಿಯಾಗಲಿ, ಪ್ರಧಾನಿ ನರೇಂದ್ರ ಮೋದಿಯವರ ಬಳಿಯಾಗಲಿ, ಗೃಹ ಸಚಿವ ರಾಜನಾಥ್ ಸಿಂಗ್ ಅವರ ಬಳಿಯಲ್ಲಾಗಲಿ ಸಕಾರಾತ್ಮಕ ಉತ್ತರ ಸಿಕ್ಕಿಲ್ಲ. ಇಷ್ಟೆಲ್ಲಾ ಆದ್ರೂ ನಿರ್ದಿಷ್ಟ ದಾಳಿ… ಸೋಲಾ? ಗೆಲುವಾ? ಅನ್ನೋ ಪ್ರಶ್ನೆ ಕಾಡದೇ ಇರದು.
ಹೊಸ ವರ್ಷದ ಕೊಡುಗೆ ಪಠಾಣ್ ಕೋಟ್ ದಾಳಿ 
ಜನವರಿ 1, 2016ರ ಮುಂಜಾನೆ, ಜಗತ್ತು ಚುಮುಮಚುಮು ಚಳಿ ಮತ್ತು ಹೊಸ ವರ್ಷಾಚರಣೆಯ ಸಂಭ್ರಮದ ಮೂಡ್​ನಿಂದ ಇನ್ನೂ ಹೊರಬಂದಿರ್ಲಿಲ್ಲ. ಆದರೆ, ಭಾರತೀಯರ ಸವಿ ನಿದ್ದೆಗೆ ಶಾಕ್ ಕೊಟ್ಟಿದ್ದು ಜೈಷ್ ಎ ಮೊಹಮದ್ ಭಯೋತ್ಪಾದಕರು. ಭಾರೀ ಶಸ್ತ್ರಾಸ್ತ್ರಗಳೊಂದಿಗೆ ಭಾರತದ ಗಡಿ ಪ್ರವೇಶಿಸಿದ ಉಗ್ರರು, ಪಂಜಾಬ್​ನ ಪಠಾಣ್​​ಕೋಟ್​ ವಾಯುನೆಲೆಯ ಮೇಲೆ ದಾಳಿ ನಡೆಸಿದರು. 2015ರ ಡಿಸೆಂಬರ್ 25ರಂದು ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಅಚ್ಚರಿಯ ಭೇಟಿ ನೀಡಿದ ಬೆನ್ನಲ್ಲೇ ಈ ದಾಳಿ ನಡೆದಿತ್ತು. ದಾಳಿಯ ರೂವಾರಿ ಜೆಇಎಂ ಮುಖ್ಯಸ್ಥ ಮೌಲಾನಾ ಅಜರ್ ಮಸೂದ್.
ಅಂದ್ಹಾಗೆ, ಕಾಂದಹಾರ್ ವಿಮಾನ ಅಪಹರಣದ ಸಂದರ್ಭದಲ್ಲಿ, ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್​ಡಿಎ ಸರ್ಕಾರ ಬಿಡುಗಡೆ ಮಾಡಿದ ಉಗ್ರಗಾಮಿಗಳಲ್ಲಿ ಈ ಅಜರ್ ಮಸೂದ್​ ಕೂಡ ಒಬ್ಬ. ಮಸೂದ್ ಯೋಜನೆಯ ಪ್ರಕಾರವೇ ಪಠಾಣ್ ಕೋಟ್ ದಾಳಿ ನಡೀತು. ದಾಳಿ ಸಂದರ್ಭದಲ್ಲಿ ಮೂವರು ಮತ್ತು ನಂತರ ನಡೆದ ಕಾರ್ಯಾಚರಣೆಯಲ್ಲಿ ಇನ್ನೂ ಮೂವರು ಸೈನಿಕರು ಸೇರಿ ಒಟ್ಟು ಆರು ಯೋಧರು ಬಲಿಯಾದ್ರು. ಜನವರಿ 5ರವರೆಗೆ ಮುಂದುವರೆದ ಕಾರ್ಯಾಚರಣೆಯಲ್ಲಿ ಆರು ಮಂದಿ ಭಯೋತ್ಪಾದಕರನ್ನು ಮಟ್ಟ ಹಾಕಲಾಯ್ತು. ಇನ್ನು, ಬರೋಬ್ಬರಿ 11 ತಿಂಗಳ ನಂತ್ರ, ಡಿಸೆಂಬರ್​ 17ರಂದು ಮಸೂದ್ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆಯಾಯ್ತು.
ಸಿಆರ್​​ಪಿಎಫ್​ ವಾಹನದ ಮೇಲಿನ ದಾಳಿ
ಜೂನ್ 25ರಂದು ಜಮ್ಮು ಕಾಶ್ಮೀರದ ಪ್ಯಾಂಪೋರ್​ ಪಟ್ಟಣದ ಬಳಿ ಸೈನಿಕರು ಪ್ರಯಾಣಿಸ್ತಿದ್ದ ಬಸ್​ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ರು. ಈ ದಾಳಿಗೆ ಎಂಟು ಯೋಧರು ಬಲಿಯಾದ್ರು. ಪ್ರತಿ ದಾಳಿ ನಡೆಸಿದ ಯೋಧರು ಇಬ್ಬರು ಉಗ್ರರನ್ನು ಹತ್ಯೆಗೈಯುವಲ್ಲಿ ಯಶಸ್ವಿ ಕೂಡ ಆದ್ರು. ಸಿಆರ್‌ಪಿಎಫ್ ಬಸ್ ಮೇಲೆ ನಡೆದ ದಾಳಿಯ ಹೊಣೆಯನ್ನು ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆ ಹೊತ್ತುಕೊಂಡಿತ್ತು. ಅಲ್ದೇ, ಮುಂದಿನ ದಿನಗಳಲ್ಲಿ ಇನ್ನಷ್ಟು ದಾಳಿಗಳನ್ನು ಮಾಡೋದಾಗಿ ಕೂಡ ಬೆದರಿಕೆ ಒಡ್ಡಿತ್ತು.
ಕಾಶ್ಮೀರದ ನಿದ್ದೆಗೆಡಿಸಿದ ಬುರ್ಹಾನ್ ವಾನಿ
2016ರ ಮಧ್ಯಭಾಗದಿಂದ ಕಾಶ್ಮೀರದಲ್ಲಿ ನಡೆದ ಹಿಂಸಾಚಾರದ ಕೇಂದ್ರಬಿಂದು  ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಕಮಾಂಡರ್ ಬುರ್ಹಾನ್ ವಾನಿ. ಈತನಿಗೆ ಕೇವಲ 21ರ ಹರೆಯ. ಆದ್ರೆ, ಈತ ಸೇನೆಯ ಮೋಸ್ಟ್​ ವಾಂಟೆಡ್ ಪಟ್ಟಿಯಲ್ಲಿದ್ದ. ಸೇನೆ ಮತ್ತು ಪೊಲೀಸರ ನಿದ್ದೆಗೆಡಿಸಿದ್ದ ವಾನಿ, ಪುಲ್ವಾಮ ಜಿಲ್ಲೆಯ ಟ್ರಾಲ್​​ ನಗರದ ನಿವಾಸಿಯಾಗಿದ್ದ. ಅಲ್ದೇ, ಪ್ರತ್ಯೇಕತವಾದಿಯಾಗಿದ್ದ ಇವನನ್ನು ಹುಡುಕಿಕೊಟ್ಟೋರಿಗೆ 10 ಲಕ್ಷ ರೂ. ಬಹುಮಾನವನ್ನು ಕೂಡ ಘೋಷಿಸಲಾಗಿತ್ತು.
ಬುರ್ಹಾನ್ ವಾನಿ ಜುಲೈ 8ರಂದು ಸೇನೆ ನಡೆಸಿದ ಎನ್​ಕೌಂಟರ್​ನಲ್ಲಿ ಹತ್ಯೆಯಾದ. ನಂತರ ಕಾಶ್ಮೀರದಲ್ಲಿ ಹಿಂಸಾಚಾರ ಭುಗಿಲೆದ್ದಿತು. ಬುರ್ಹಾನ್ ವಾನಿ ಹತ್ಯೆ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆಗಳು ನಡೆದ್ವು. ಈತನ ಅಂತ್ಯ ಸಂಸ್ಕಾರದಲ್ಲಿ ಬರೋಬ್ಬರಿ 15 ಸಾವಿರ ಜನ ಭಾಗವಹಿಸಿದ್ರು. ಈತನ ಜೀವನ ಮತ್ತು ಹೋರಾಟವನ್ನು ಕುರಿತು ಪ್ರತ್ಯೇಕತಾವಾದಿಗಳು ಹೊಸ ಜಾನಪದ ಗೀತೆಗಳನ್ನೇ ಸೃಷ್ಟಿಸಿದ್ರು. 15ರ ಹರೆಯದಲ್ಲೇ ಹಿಜ್ಬುಲ್ ಮುಜಾಹಿದ್ದೀನ್ ಸೇರಿದ್ದ ವಾನಿಗೆ ಜಮ್ಮು ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದನೆಂಬ ಹುತಾತ್ಮ ಪಟ್ಟ ನೀಡಲಾಯ್ತು.
ವಾನಿ ಹತ್ಯೆ ವಿರೋಧಿಸಿದ ಲಷ್ಕರ್ ಎ ತೊಯ್ಬಾ ಸಂಘಟನೆಯ ಮುಖಂಡ ಹಫೀಜ್ ಸಯೀದ್ ಮತ್ತು ಹಿಜ್ಬುಲ್ ಮುಜಾಹಿದೀನ್ ಸಂಘಟನೆ ಮುಖಂಡ ಸೈಯದ್ ಸಲಾವುದ್ದೀನ್‌, ಕಾಶ್ಮೀರ ಹಾಗೂ ದೇಶದ ವಿವಿಧೆಡೆ ಇರುವ ಸೇನಾ ಶಿಬಿರಗಳ ಮೇಲೆ ದಾಳಿ ನಡೆಸೋದಾಗಿ ಬೆದರಿಕೆಯನ್ನು ಕೂಡಾ ಹಾಕಿದ್ರು. ಅಲ್ದೇ, ಕಾಶ್ಮೀರದ ಇನ್ನಷ್ಟು ಜನರನ್ನು ಆತ್ಮಹತ್ಯಾ ಬಾಂಬರ್‌ ಆಗಿಸೋಕೆ ತರಬೇತಿ ನೀಡ್ತೀವಿ. ಕಾಶ್ಮೀರವನ್ನು ಭಾರತೀಯ ಸೇನೆಯ ಪಾಲಿಗೆ ಖಾಯಂ ಸ್ಮಶಾನವನ್ನಾಗಿಸ್ತೀವಿ ಅಂತ ಧಮ್ಕಿ ಹಾಕಿದ್ರು.
ವಾನಿ ಹತ್ಯೆ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರ, ಕಲ್ಲುತೂರಾಟ, ಸೆಕ್ಷನ್ 144, ಬಂದ್​ಗಳದ್ದೇ ಸಾಮ್ರಾಜ್ಯ ನಿರ್ಮಾಣವಾಗಿಬಿಟ್ಟಿತ್ತು. ಶಾಲಾಕಾಲೇಜು ಮತ್ತು ಸರ್ಕಾರಿ ಕಚೇರಿಗಳಲ್ಲಿ ಕೂಡ ಕರ್ತವ್ಯ ನಿರ್ವಹಿಸೋದಕ್ಕೆ ಅವಕಾಶ ಸಿಗಲಿಲ್ಲ. ವಾನಿ ಹತ್ಯೆಯ ನಂತರ ಉಂಟಾದ ಕ್ಷೋಭೆಯನ್ನು ನಿಯಂತ್ರಿಸೋ ಸಲುವಾಗಿ ಪೊಲೀಸರು ಪೆಲೆಟ್​ಗನ್​ ದಾಳಿಯ ಮೊರೆ ಹೋದ್ರು. ಈ ದಾಳಿಗೆ 85ಕ್ಕೂ ಹೆಚ್ಚು ಜನ ಸಾವಿಗೀಡಾದ್ರು. ಅಲ್ದೇ, ಸಾವಿರಾರು ಜನ ದೃಷ್ಟಿ ಕಳ್ಕೊಂಡ್ರು. ಇನ್ನು 13 ಸಾವಿರ ನಾಗರಿಕರು, 4 ಸಾವಿರ ಭದ್ರತಾ ಸಿಬ್ಬಂದಿ ಗಾಯಗೊಂಡ್ರು. 23 ದಿನಗಳ ಕಾಲ ಸತತವಾಗಿ ಕರ್ಫ್ಯೂ ವಿಧಿಸಲಾಗಿತ್ತು.
ಸೇನೆ ಜಮ್ಮು ಮತ್ತು ಕಾಶ್ಮೀರದಲ್ಲಿ ಪೆಲೆಟ್ ಗನ್ ಬಳಸುತ್ತಿರೋದರ ವಿರುದ್ಧ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಕೆಯಾಯ್ತು. ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಟಿ. ಎಸ್. ಠಾಕೂರ್ ಅವರಿದ್ದ ಪೀಠ, ಪೆಲೆಟ್ ಗನ್ ಬಳಕೆ ಮಾಡುವುದಕ್ಕೂ ಮುನ್ನ ಭದ್ರತಾ ಸಿಬ್ಬಂದಿ ಆಲೋಚಿಸಬೇಕು. ಬೀದಿ ಗಲಾಟೆಗಳನ್ನೆಲ್ಲ ನಿಯಂತ್ರಿಸೋಕೆ ಪೆಲೆಟ್ ಗನ್ ಗಳನ್ನು ಬಳಸಬಾರದು ಅಂತ ಖಡಕ್ ನಿರ್ದೇಶನ ನೀಡಿತ್ತು.
ಉರಿ ಸೇನಾನೆಲೆಯಲ್ಲಿ ಅಟ್ಟಹಾಸ ಮೆರೆದ ಉಗ್ರರು
ಇಸ್ಲಾಮಿಕ್ ಸ್ಟೇಟ್ ಉಗ್ರರು ಕಣಿವೆ ರಾಜ್ಯ ಉರಿ ಪಟ್ಟಣದ ಸಮೀಪ, 18 ಸೆಪ್ಟೆಂಬರ್ 2016ರಂದು ಗುಂಡಿನ ಮಳೆಗರೆದ್ರು. ಅಂದ್ಹಾಗೆ, ಗಡಿನಿಯಂತ್ರಣ ರೇಖೆ ಬಳಿ ಇರುವ ಉರಿ ಸೇನಾ ಶಿಬಿರ ಶ್ರೀನಗರದಿಂದ ಕೇವಲ 70 ಕಿ.ಮೀ. ದೂರದಲ್ಲಿದೆ. ಬೆಳ್ಳಂಬೆಳಗ್ಗೆ ಸುಮಾರು 5.30ರ ವೇಳೆಗೆ, ಉರಿಯ 12ನೇ ಬ್ರಿಗೇಡ್​ನ ಕೇಂದ್ರ ಕಚೇರಿ ಮೇಲೆ ದಾಳಿ ನಡೆಸಿದ ಉಗ್ರರು, ಮನಸೋ ಇಚ್ಛೆ ಗುಂಡಿನ ದಾಳಿ ನಡೆಸಿ, ಸೈನಿಕರ ಮಾರಣಹೋಮ ನಡೆಸಿದ್ರು.
ಹಠಾತ್ ಆಗಿ ಎದುರಾದ ವೈರಿಗಳ ದಾಳಿಗೆ ಒಟ್ಟು 18 ಯೋಧರು ಸಾವಿಗೀಡಾಗಿ, 20 ಯೋಧರು ಗಂಭೀರವಾಗಿ ಗಾಯಗೊಂಡ್ರು. ಎರಡು ದಶಕಗಳಲ್ಲೇ ಭಾರತೀಯ ಭದ್ರತಾ ಸಿಬ್ಬಂದಿ ಮೇಲೆ ನಡೆದ ಅತಿದೊಡ್ಡ ದಾಳಿ ಇದಾಗಿತ್ತು. ಭಾರೀ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಜೈಷ್‌–ಎ– ಮೊಹಮ್ಮದ್ ಸಂಘಟನೆಯ 4 ಉಗ್ರರು ದಾಳಿ ನಡೆಸಿದ್ರು. ದಾಳಿ ನಡೆಸಿದ ಉಗ್ರರು ಶಿಕ್ಷೆಯಿಂದ ತಪ್ಪಿಸಿಕೊಳ್ಳೋದಕ್ಕೆ ಸಾಧ್ಯವಿಲ್ಲ ಅಂತ ಪ್ರಧಾನಿ ನರೇಂದ್ರ ಮೋದಿ ಹೇಳಿದ್ರು. ಆದ್ರೆ, ಇದುವರೆಗೆ ಉಗ್ರರನ್ನು ನಿಯಂತ್ರಿಸೋಕೆ ಸಾಧ್ಯವಾಗಿಲ್ಲ.
ಇನ್ನು ಉರಿದಾಳಿ ಕುರಿತು ಗುಪ್ತಚರ ಸಂಸ್ಥೆಗಳಿಂದ ಸಿಕ್ಕ ಮಾಹಿತಿಯನ್ನು ಕಡೆಗಣಿಸಲಾಗಿತ್ತು. ನವದೆಹಲಿಯ ಸೇನಾಪಡೆಗಳ ಪ್ರಮುಖರೇ ಈ ಮಾಹಿತಿಯನ್ನು  ನಿರ್ಲಕ್ಷಿಸಿಬಿಟ್ಟಿದ್ರು. ಪಾಕಿಸ್ತಾನದ ಉಗ್ರರು ಭಾರೀ ಸಂಖ್ಯೆಯಲ್ಲಿ ಕಾಶ್ಮೀರಕ್ಕೆ ಆಗಸ್ಟ್‌ನಲ್ಲೇ ಅಕ್ರಮವಾಗಿ ನುಸುಳಿಬಿಟ್ಟಿದ್ರು.
ಅಂದ್ಹಾಗೆ, ಉರಿ ಸೇನಾನೆಲೆ ಮೇಲೆ ದಾಳಿ ನಡೆಸಿದ 4 ಉಗ್ರರು ಲಷ್ಕರ್‌–ಎ–ತೊಯ್ಬಾ ಸಂಘಟನೆಗೆ ಸೇರಿದವರು ಅನ್ನೋ ಮಾಹಿತಿ ತನಿಖೆಯಿಂದ ಬಯಲಾಯ್ತು.  ನಿಯಂತ್ರಣ ರೇಖೆಯ ಸಮೀಪದಲ್ಲಿರೋ ಸೇನಾ ನೆಲೆ ಕುರಿತು ಉಗ್ರರಿಗೆ ಸಂಪೂರ್ಣ ಮಾಹಿತಿ ಇತ್ತು. ಅಡುಗೆ ಮನೆ, ದಾಸ್ತಾನು ಕೋಣೆಗೆ ಬೆಂಕಿ ಹಚ್ಚಿದ ಉಗ್ರರು, ಹೊರಗಿನಿಂದ ಬೀಗ ಹಾಕಿ, ಸೈನಿಕರು ಹೊರಬರದಂತೆ ವ್ಯೂಹ ಹೂಡಿದ್ರು ಅಂತ ಕೂಡ ತನಿಖಾ ವರದಿ ಹೇಳ್ತು. ಸೇನಾ ಶಿಬಿರದ ಮೇಲೆ ಉಗ್ರರು ನಿಖರವಾಗಿ ಕಾರ್ಯಾಚರಣೆ ನಡೆಸಿದ್ರು. ಆದ್ರಿಂದಾಗಿ ಈ ಪ್ರಕರಣದಲ್ಲಿ ಸ್ಥಳೀಯರ ನೆರವೂ ಇತ್ತು ಅನ್ನೋ ಅನುಮಾನ ಕೂಡ ವ್ಯಕ್ತವಾಯ್ತು. ಆದ್ರೆ, ಇದುವರೆಗೆ ತನಿಖೆಯ ನಿಟ್ಟಿನಲ್ಲಿ ಮಹತ್ವದ ಪ್ರಗತಿ ಕಂಡಿಲ್ಲ.
ಇನ್ನು ಭಯೋತ್ಪಾದನೆಯ ವಿಷಯ ಆಗಿದ್ರಿಂದ ಈ ಘಟನೆಯನ್ನು ವಿಶ್ವಸಮುದಾಯ ಉಗ್ರವಾಗಿ ಖಂಡಿಸ್ತು. ಯಥಾರೀತಿಯಲ್ಲಿ ಭಾರತ ಮತ್ತು ಪಾಕಿಸ್ತಾನ ದೇಶಗಳು ಪರಸ್ಪರರ ಮೇಲೆ ಆರೋಪ – ಪ್ರತ್ಯಾರೋಪಗಳಲ್ಲಿ ನಿರತವಾದ್ವು. ಆದ್ರೆ, ಈ ದಾಳಿಯಲ್ಲಿ ಬಲಿಯಾದ ಯೋಧರ ಸಾವಿಗೆ ಏನರ್ಥ ಅನ್ನೋ ಪ್ರಶ್ನೆಗೆ ಮಾತ್ರ ಇನ್ನೂ ಉತ್ತರ ಸಿಕ್ಕಿಲ್ಲ. ಇಷ್ಟೆಲ್ಲ ಬೆಳವಣಿಗೆಗಳ ನಂತರ ಭಾರತೀಯ ಸೇನೆ ನಿರ್ದಿಷ್ಟ ದಾಳಿ ನಡೆಸಿರೋದಾಗಿ ಹೇಳಿತು.
ರಾಜಕೀಯ ಬಣ್ಣ ಪಡೆದ ನಿರ್ದಿಷ್ಟ ದಾಳಿ
2016ರ ಸೆಪ್ಟಂಬರ್ 28ರಂದು ಮಧ್ಯರಾತ್ರಿ ಲೆಫ್ಟಿನೆಂಟ್ ಜನರಲ್ ಬಿಪಿನ್ ರಾವತ್ ಯೋಜನೆಯ ಪ್ರಕಾರ, ವಾಯುಸೇನೆ ಮತ್ತು ಭೂಸೇನೆಗಳ ಜಂಟಿ ಕಾರ್ಯಾಚರಣೆಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಿರ್ದಿಷ್ಟ ದಾಳಿ ನಡೆಸಲಾಯ್ತು. ಈ ದಾಳಿ ನಡೆದೇ ಇಲ್ಲ ಅಂತ ಪಾಕಿಸ್ತಾನ ಹಾಗೂ ಉಗ್ರ ಸಂಘಟನೆಗಳು ವಾದಿಸಿದ್ವು.
ನಿರ್ದಿಷ್ಟ ದಾಳಿಯ ನಂತ್ರ ಕೇಂದ್ರ ಸರ್ಕಾರ ಸೇನೆಯ ಕ್ರಮವನ್ನು ತನ್ನದೇ ಪರಾಕ್ರಮ ಎಂಬಂತೆ ಜಂಭ ಕೊಚ್ಚಿಕೊಳ್ತು. ಹಿಂದೆಂದೂ ನಿರ್ದಿಷ್ಟ ದಾಳಿ ನಡೆದೇ ಇಲ್ಲ ಎನ್ನುವಷ್ಟರಮಟ್ಟಿಗೆ ಕೇಂದ್ರ ಸರ್ಕಾರ ಬೊಬ್ಬೆ ಹೊಡೀತು. ಇದಕ್ಕೂ ಮೊದ್ಲು ಕೂಡ ನಾಗಾ ಬಂಡುಕೋರರ ವಿರುದ್ಧ ಬಾಂಗ್ಲಾದಲ್ಲಿ, ಅಸ್ಸಾಂನಲ್ಲಿ ಭಯೋತ್ಪಾದಕರ ವಿರುದ್ಧ ಮತ್ತು ಪಾಕಿಸ್ತಾನದ ವಿರುದ್ಧ ಕೂಡ ಭಾರತೀಯ ಸೇನೆ ದಾಳಿ ನಡೆಸಿತ್ತು. ಆದ್ರೆ, ಈ ಎಲ್ಲ ಅಂಕಿಅಂಶಗಳೆಡೆಗೆ ಜಾಣಕುರುಡು ಪ್ರದರ್ಶಿಸಿದ ಕೇಂದ್ರ ಸರ್ಕಾರ, ಯೋಧರ ಶ್ರಮವನ್ನು ತನ್ನ ಸಾಧನೆ ಅಂತ ಹೇಳಿಕೊಂಡು, ಸೇನಾ ಕಾರ್ಯಾಚರಣೆಗೆ ರಾಜಕೀಯ ಬಣ್ಣಕೊಡೋ ಪ್ರಯತ್ನ ಮಾಡ್ತು.
ಇನ್ನು, ಭಾರತೀಯ ಸೇನೆ ನಿರ್ದಿಷ್ಟ ದಾಳಿ ನಡೆಸಿರೋದು ಇದೇ ಮೊದಲು ಅಂತ ಭಾರತೀಯ ಸೇನಾ ಪಡೆಯ ಲೆಫ್ಟಿನೆಂಟ್ ಜನರಲ್ ರಣವೀರ್ ಸಿಂಗ್ ಕೂಡ ಹೇಳಿಕೆ ಕೊಟ್ರು. ಈ ದಾಳಿಯಲ್ಲಿ ಏಳು ಉಗ್ರರ ನೆಲೆಗಳು ಮತ್ತು ಪಾಕಿಸ್ತಾನೀ ಸೈನಿಕರ ಕೆಲವು ಬಿಡಾರಗಳನ್ನು ನಾಶಪಡಿಸಲಾಗಿದೆ ಅಂತ ಹೇಳಿಕೆ ನೀಡಿದ್ರು. ದಾಳಿಯಲ್ಲಿ 38 ಉಗ್ರರು ಮತ್ತು ಪಾಕ್ ನ ಇಬ್ಬರು ಸೈನಿಕರನ್ನು ಹತ್ಯೆಗೈಯಲಾಗಿದೆ ಅಂತ ಕೂಡ ಹೇಳಲಾಯ್ತು.
ನಿರ್ದಿಷ್ಟ ದಾಳಿ ಕತೆ ಇರ್ಲಿ. 1965ರಲ್ಲಿ ಪಾಕ್ ವಿರುದ್ಧ ಯುದ್ಧ ನಡೀತು. ಈ ಸಂದರ್ಭದಲ್ಲಿ ಪಾಕ್​​ ಹುಟ್ಟಡಗಿಸೋ ಸಲುವಾಗಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವ್ರು, ಲಾಹೋರ್​ಗೆ ಸೈನ್ಯವನ್ನು ನುಗ್ಗಿಸೋಕೆ ಆಜ್ಞೆ ನೀಡಿದ್ರು. ಆದ್ರೆ, ಸೋಲಿನ ಆತಂಕದಿಂದಾಗಿ ಪಾಕಿಸ್ತಾನ ಒಪ್ಪಂದಕ್ಕೆ ಬಂದಿತ್ತು. ಇಂಥ ದಿಟ್ಟತನವನ್ನು ಮುಂದಿನ ಯಾವ ಪ್ರಧಾನಿಗಳೂ ಪ್ರದರ್ಶಿಸಿಲ್ಲ.
ಇನ್ನು ನಿರ್ದಿಷ್ಟ ದಾಳಿ ನಡೆಸಿದ ನಂತರ ವೀರಾವೇಶದ ಹೇಳಿಕೆ ನೀಡಿದ್ದ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮತ್ತು ಕೇಂದ್ರ ಮಂತ್ರಿಗಳು ಕೆಲವೇ ದಿನಗಳಲ್ಲಿ ಸುಮ್ಮನಾದ್ರು. ಆದ್ರೆ, ಭಯೋತ್ಪಾದಕರು ಭಾರತದೊಳಗೆ ನುಗ್ಗಿ ಸೇನಾ ನೆಲೆಗಳ ಮೇಲೆ ಮತ್ತೆಮತ್ತೆ ದಾಳಿ ನಡೆಸಿದ್ರು. ಪಾಕಿಸ್ತಾನ ಕೂಡ ಕದನವಿರಾಮ ಉಲ್ಲಂಘಿಸ್ತಾನೇ ಇದೆ. ನಿರ್ದಿಷ್ಟ ದಾಳಿ ನಡೆಸಿ, ಪಾಕಿಸ್ತಾನಕ್ಕೆ ಬುದ್ಧಿ ಕಲಿಸಿದೀನಿ ಅಂಥಾ ಕೇಂದ್ರ ಸರ್ಕಾರ ಮತ್ತು ಬಿಪಿನ್ ರಾವತ್ ಹೇಳ್ಕೊಳ್ತಾರೆ. ಆದರೆ, ಅದಾದ ನಂತರ ಕೂಡ ಪಾಕಿಸ್ತಾನದ ಅಟ್ಟಹಾಸಕ್ಕೆ ತಡೆ ಬಿದ್ದಿಲ್ಲ.
ನಗ್ರೋಟಾ ಸೇನಾಧಿಕಾರಿಗಳ ವಸತಿಗೃಹದ ಮೇಲೆ ದಾಳಿ
ನಿರ್ದಿಷ್ಟ ದಾಳಿ ನಡೆಸಿದ 2 ತಿಂಗಳ ನಂತರ, ನವೆಂಬರ್ 29ರಂದು ಜಮ್ಮು ಕಾಶ್ಮೀರದ ನಗ್ರೋಟಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಇಬ್ಬರು ಅಧಿಕಾರಿಗಳು ಸೇರಿದಂತೆ ಒಟ್ಟು 7 ಯೋಧರು ಸಾವಿಗೀಡಾದ್ರು. ಪೊಲೀಸ್ ವೇಷದಲ್ಲಿ ಗಡಿ ದಾಟಿ ಬಂದ ಉಗ್ರರ ಗುಂಪು, ನಗ್ರೋಟಾದಲ್ಲಿ ಸೇನಾಧಿಕಾರಿಗಳ ಕುಟುಂಬಗಳ ಮೇಲೆ ನಡೆಸಿದ ಆತ್ಮಾಹುತಿ ದಾಳಿಗೆ 7 ಸೈನಿಕರು ಬಲಿಯಾದ್ರು. ಕೆಲವು ಗಂಟೆಗಳ ಕಾಲ ನಡೆದ ಗುಂಡಿನ ಚಕಮಕಿಯ ಬಳಿಕ 12 ಸೈನಿಕರು ಮತ್ತು ಇಬ್ಬರು ಮಹಿಳೆಯರು ಹಾಗೂ ಇಬ್ಬರು ಮಕ್ಕಳನ್ನು ರಕ್ಷಿಸಲಾಯ್ತು.
ಪಾಂಪೋರ್ ದಾಳಿ
ಡಿಸೆಂಬರ್ 18ರಂದು ಜಮ್ಮು ಮತ್ತು ಕಾಶ್ಮೀರದ ಪಾಂಪೋರ್ ನಲ್ಲಿರುವ ಸರ್ಕಾರಿ ಉದ್ಯಮಶೀಲತೆ ಅಭಿವೃದ್ಧಿ ಸಂಸ್ಥೆ ಕಟ್ಟಡದಲ್ಲಿ ಅಡಗಿಕೊಂಡ ಉಗ್ರರು ಮೂರು ದಿನಗಳ ಕಾಲ ಅಲ್ಲಿಂದಲೇ ಸೈನಿಕರ ಮೇಲೆ ದಾಳಿ ನಡೆಸಿದ್ರು. ಉಗ್ರ ನಿಗ್ರಹಕ್ಕಾಗಿ ನಡೆದ ಕಾರ್ಯಾಚರಣೆಯಲ್ಲಿ ಮೂರು ಉಗ್ರರನ್ನು ಸೈನಿಕರು ಹತ್ಯೆಗೈದ್ರು.
2016 ನವೆಂಬರ್ 20ರವರೆಗೆ ಒಟ್ಟು 233 ನಾಗರಿಕರು ಬಲಿಯಾಗಿದ್ದಾರೆ. 2016 ಜನವರಿಯಿಂದ 2016 ನವೆಂಬರ್ ವರೆಗೆ, ಭಾರತೀಯ ಸೇನಾಪಡೆಗಳು ಒಟ್ಟು 148 ಭಯೋತ್ಪಾದಕರನ್ನು ಕೊಂದಿದೆ. ಇದೇ ಅವಧಿಯಲ್ಲಿ ಭಾರತೀಯ ಸೇನೆ 74 ಯೋಧರನ್ನು ಕಳೆದುಕೊಂಡಿದೆ. ಇನ್ನು ನಿರ್ದಿಷ್ಟ ದಾಳಿಯ ನಂತರ ಡಿಸೆಂಬರ್ 2016ರವರೆಗೆ ಒಟ್ಟು 37 ಸೈನಿಕರು ಬಲಿಯಾಗಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ 2010ರ ನಂತರ, 2016ರಲ್ಲೇ ಅತಿ ಹೆಚ್ಚು ಯೋಧರು ಸಾವಿಗೀಡಾಗಿದ್ದಾರೆ. ಈ ವರ್ಷ ಮೃತಪಟ್ಟ ಯೋಧರ ಸಂಖ್ಯೆ 70ನ್ನು ದಾಟುತ್ತಿದೆ. ಇನ್ನು 2016ರಲ್ಲಿ ಗಡಿನಿಯಂತ್ರಣ ರೇಖೆಯ ಬಳಿ ಒಟ್ಟು 31 ಬಾರಿ ಒಳನುಸುಳುವ ಪ್ರಯತ್ನಗಳು ನಡೆದಿವೆ. ಈ ಅವಧಿಯಲ್ಲಿ ಒಟ್ಟು 17 ನುಸುಳುವಿಕೆಗಳನ್ನು ತಡೆಯೋದ್ರಲ್ಲಿ ಸೇನೆ ಯಶಸ್ವಿ ಕೂಡ ಆಗಿದೆ. ಅಲ್ದೇ, ಇಂತಹ ಅಕ್ರಮ ನುಸುಳುಕೋರ ಉಗ್ರರನ್ನು ಭಾರತೀಯ ಸೇನಾಪಡೆ ಹತ್ಯೆಗೈದಿದೆ.
ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಾಕ್ ಸೇನೆ ಮಾಡಿಕೊಂಡಿದ್ದ ಸೇನಾನೆಲೆಗಳನ್ನು ಧ್ವಂಸಗೊಳಿಸಿದ ನಿರ್ದಿಷ್ಟ ದಾಳಿ ಬಳಿಕ ಕೂಡ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿ ನಿಯಂತ್ರಣವಾಗಿಲ್ಲ. ಸೆಪ್ಟಂಬರ್ 28ರ ನಂತ್ರ ಪಾಕ್ ಕದನ ವಿರಾಮ ಉಲ್ಲಂಘಿಸಿದ್ರಿಂದಾಗಿ ಒಟ್ಟು 17 ಸೈನಿಕರು ಬಲಿಯಾಗಿದ್ದಾರೆ. ಮೂರು ನಾಗರಿಕರು 8 ಭದ್ರತಾ ಸಿಬ್ಬಂದಿ ಸೇರಿ ಒಟ್ಟು 40 ಜನ ಬಲಿಯಾದ್ರು.
ನಿರ್ದಿಷ್ಟ ದಾಳಿ ಬಳಿಕ ಕೂಡ ಪಾಕ್ ಕದನ ವಿರಾಮ ಉಲ್ಲಂಘಿಸ್ತಿದೆ. ಜಮ್ಮು ಕಾಶ್ಮೀರದ ಮಾಚಲ್, ರಾಜೌರಿ ಜಿಲ್ಲೆಯ ತಾರ್ಕುಂಡಿ, ಮಾಚಿಲ್​​ ಸೆಕ್ಟರ್​, ನೌಷೇರಾ, ಪೂಂಚ್, ಮೆಂದರ್ ಸೆಕ್ಟರ್, ಆರ್​ಎಸ್​ ಪುರ, ಕಥುವಾ ಮೊದಲಾದ ಜಿಲ್ಲೆಗಳಲ್ಲಿ ಭಯೋತ್ಪಾದಕರು ನಡೆಸಿದ ದಾಳಿಗೆ ಸೈನಿಕರ ಮತ್ತು ನಾಗರಿಕರ ಬಲಿ ಮುಂದುವರೀತು.
ನಿರ್ದಿಷ್ಟ ದಾಳಿ ನಡೆದ ನಂತರ ಕೂಡ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿ ಕಡಿಮೆ ಆಗಿಲ್ಲ ಅನ್ನೋದು ಮಾತ್ರ ಸುಳ್ಳಲ್ಲ. ಆದ್ರಿಂದ ನಿರ್ದಿಷ್ಟ ದಾಳಿ ನಿಜವಾಗಿಯೂ ಗೆಲುವಾ ಅಥವಾ ಸೋಲಾ ಅನ್ನೋ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಆದರೆ, ಮತ್ತೊಮ್ಮೆ ನಿರ್ದಿಷ್ಟ ದಾಳಿ ನಡೆಸ್ತೀನಿ ಅಂತಿದಾರೆ ಬಿಪಿನ್ ರಾವತ್.
ಪ್ರದೀಪ್ ಮಾಲ್ಗುಡಿ ಹಿರಿಯ ಉಪ ಸಂಪಾದಕ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *