ಬಾಬ್ರಿ ಮಸೀದಿ ತ್ವರಿತ ವಿಚಾರಣೆ ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್​​

ನವದೆಹಲಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಕುರಿತು ತ್ವರಿತ ವಿಚಾರಣೆ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ರಾಮಮಂದಿರ ಕಟ್ಟುವ ನಿಟ್ಟಿನಲ್ಲಿ ತ್ವರಿತವಾಗಿ ವಿಚಾರಣೆ ನಡೆಸಬೇಕೆಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಮನವಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಜೆ ಎಸ್ ಖೇಹರ್ ನೇತೃತ್ವದ ನ್ಯಾಯಪೀಠ, ಸದ್ಯದ ದಾವೆಯಲ್ಲಿ ನೀವು ಕಕ್ಷಿದಾರರಲ್ಲ ಎಂದು ಹೇಳಿತು. ನೀವು ಈ ದೂರಿನಲ್ಲಿ ಕಕ್ಷಿದಾರರಲ್ಲ. ನೀವು ನಮಗೆ ಏನನ್ನೂ ಹೇಳಬೇಡಿ. ನಮಗೆ ಎಲ್ಲವೂ ಅರಿವಾಗುತ್ತದೆ ಎಂದು ಸುಬ್ರಮಣಿಯನ್ ಸ್ವಾಮಿಯವರಿಗೆ ಪೀಠ ಖಾರವಾಗಿ ಪ್ರತಿಕ್ರಿಯಿಸಿತು.

ಇದಕ್ಕೆ ಪ್ರತಿಕ್ರಿಯಿಸಿದ ಸುಬ್ರಮಣಿಯನ್ ಸ್ವಾಮಿ, ಪೂಜಿಸುವ ಮೂಲಭೂತ ಹಕ್ಕಿನಿಂದಾಗಿ ನಾನು ವಂಚಿತನಾಗಿದ್ದೇನೆ. ಆದ್ದರಿಂದ ಈ ವಿಷಯದಲ್ಲಿ ಮಧ್ಯಪ್ರವೇಶಿಸಿರುವುದಾಗಿ ಹೇಳಿದರು. ನನ್ನ ಪೂಜಿಸುವ ಹಕ್ಕು ಮೊಟಕುಗೊಂಡಿದೆ. ಆದ್ದರಿಂದ ಮಧ್ಯಂತರ ಅರ್ಜಿ ಸಲ್ಲಿಸಿದ್ದೇನೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಕೋರ್ಟ್ ತ್ವರಿತ ವಿಚಾರಣೆ ಸಾಧ್ಯವಿಲ್ಲ ಎಂದು ಖಡಕ್ಕಾಗಿ ಹೇಳಿತು.

ಸುಪ್ರೀಂ ಕೋರ್ಟ್​  ಮಾ. 21ರಂದು ನಡೆಸಿದ ವಿಚಾರಣೆ ವೇಳೆ, ಬಾಬ್ರಿ ಮಸೀದಿ – ರಾಮ ಮಂದಿರ ವಿವಾದ ಧಾರ್ಮಿಕ ಮತ್ತು ಭಾವನಾತ್ಮಕ ವಿಷಯವಾಗಿದೆ. ಆದ್ದರಿಂದ ಈ ವಿವಾದವನ್ನು ಎರಡೂ ಪಕ್ಷದವರು ಮಾತುಕತೆಯ ಮೂಲಕ ನ್ಯಾಯಾಲಯದ ಹೊರಗೆ ಪರಿಹರಿಸಿಕೊಳ್ಳಿ ಎಂದು ಸಲಹೆ ನೀಡಿತ್ತು.

ಇಂದಿನ ವಿಚಾರಣೆ ವೇಳೆ ನ್ಯಾಯಪೀಠದ ನೇತೃತ್ವ ವಹಿಸಿದ್ದ ಮುಖ್ಯ ನ್ಯಾ. ಜೆ ಎಸ್ ಖೇಹರ್, ವಿವಾದವನ್ನು ಪರಿಹರಿಸಕೊಳ್ಳುವ ಸಲುವಾಗಿ ಪ್ರಾಮಾಣಿಕವಾಗಿ ಮಾತುಕತೆ ನಡೆಸಿ. ಚೂರು ಕೊಡು, ಚೂರು ಕೊಳುವುದಕ್ಕೆ ಸಿದ್ಧರಾಗಿ ಎಂದು ಎರಡೂ ಪಕ್ಷದವರಿಗೆ ಸಲಹೆ ನೀಡಿದರು.

ಲಖ್ನೋದ ಅಲಹಾಬಾದ್​ ಹೈಕೋರ್ಟ್​​ 2010ರಲ್ಲಿ ವಿವಾದಿತ 2.77 ಎಕರೆ ಸ್ಥಳವನ್ನು 3 ಭಾಗವಾಗಿ ವಿಭಜಿಸಿತ್ತು. 3 ನ್ಯಾಯಮೂರ್ತಿಗಳ ಪೀಠ 2:1ರಷ್ಟು ಪ್ರದೇಶ ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾಡ ಮತ್ತು ರಾಮ್ ಲಲ್ಲಗಳಿಗೆ ಸೇರಬೇಕು ಎಂದು ತೀರ್ಪು ನೀಡಿತ್ತು.

ಕಳೆದ ವರ್ಷದ ಫೆ. 26ರಂದು ಸುಬ್ರಮಣಿಯನ್ ಸ್ವಾಮಿಯವರು ಸುಪ್ರೀಂ ಕೋರ್ಟ್​ನಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಅಯೋಧ್ಯೆ ವಿವಾದವನ್ನು ಪರಿಹರಿಸಿ, ಇದೇ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅವಕಾಶ ಕೊಡಬೇಕು ಎಂದು ಅವರು ಮನವಿ ಮಾಡಿದ್ದರು. ಅಲ್ಲದೇ, ಸಾರ್ವಜನಿಕ ಉದ್ದೇಶಕ್ಕಾಗಿ (ಉದಾಹರಣೆಗೆ ರಸ್ತೆ) ಮಸೀದಿಯನ್ನು ಎಲ್ಲಿಯಾದರೂ ವರ್ಗಾಯಿಸುವ ರೂಢಿ ಮುಸ್ಲಿಂರಲ್ಲಿದೆ. ಇದರಂತೆ ಮಂದಿರ ನಿರ್ಮಾಣಕ್ಕಾಗಿ ಅವರು ಸ್ಥಳವನ್ನು ಬಿಟ್ಟುಕೊಡಲಿ ಎಂದು ವಾದಿಸಿದ್ದರು. ಅಲ್ಲದೇ, ಈ ವಿಷಯಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಚುರುಕುಗೊಳಿಸಬೇಕು ಎಂದು ಕೂಡ ಅವರು ಮನವಿ ಮಾಡಿದ್ದರು.

0

Leave a Reply

Your email address will not be published. Required fields are marked *