ಮೆವಾನಿ ಭಾಷಣಕ್ಕೆ ಮುಂಬೈನಲ್ಲಿ ತಡೆ: ವಿದ್ಯಾರ್ಥಿಗಳಿಂದ ವ್ಯಾಪಕ ಪ್ರತಿಭಟನೆ

ಮುಂಬೈ: ಭಾರತೀಯ ವಿದ್ಯಾರ್ಥಿ ಸಮ್ಮೇಳನದಲ್ಲಿ ಮಾತನಾಡಬೇಕಿದ್ದ ದಲಿತ ಹೋರಾಟಗಾರ ಜಿಗ್ನೇಶ್ ಮೆವಾನಿ ಮತ್ತು ವಿದ್ಯಾರ್ಥಿ ಮುಖಂಡ ಉಮರ್ ಖಾಲಿದ್​ ಅವರ​ ಭಾಷಣಕ್ಕೆ ಮುಂಬೈ ಪೊಲೀಸರು ತಡೆ ಹಾಕಿದ್ದಾರೆ. ಇಂದು ನಿಗದಿಯಾಗಿದ್ದ ಸಮ್ಮೇಳನವನ್ನು ತಡೆದ ಕ್ರಮ ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಛಾತ್ರ ಭಾರತಿ ವಿದ್ಯಾರ್ಥಿ ಸಂಘಟನೆ ಈ ಸಮ್ಮೇಳನವನ್ನು ಆಯೋಜಿಸಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಸಂಘಟನೆಯ ಉಪಾಧ್ಯಕ್ಷ ಮತ್ತು ಸಮ್ಮೇಳನದ ಸಂಯೋಜಕ ಸಾಗರ್ ಭಲೆರಾವ್​​, ಕೋರೆಗಾಂವ್ ಗಲಭೆಗೂ ಮುನ್ನವೇ ಮೆವಾನಿ ಮತ್ತು ಖಾಲಿದ್​ರನ್ನು ಆಹ್ವಾನಿಸಲಾಗಿತ್ತು ಎಂದಿದ್ದಾರೆ.

ಭೈದಾಸ್​ ಹಾಲ್​​ನಲ್ಲಿ ನಡೆಯಬೇಕಿದ್ದ ಸಮ್ಮೇಳನಕ್ಕೆ ಆಗಮಿಸಿದ ವಿದ್ಯಾರ್ಥಿಗಳನ್ನು ಪೊಲೀಸರು ಬಲವಂತವಾಗಿ ಹೊರದೂಡಿದ ಘಟನೆ ನಡೆದಿದ್ದು, ಪೊಲೀಸರ ಈ ಕ್ರಮದ ವಿರುದ್ಧ ಕೂಡ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಕೆಲಕಾಲ ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ವಾಗ್ವಾದ ನಡೆಯಿತು. ಜಿಗ್ನೇಶ್ ಮೆವಾನಿ, ಉಮರ್ ಖಾಲಿದ್ ಭಾಷಣಕ್ಕೆ ಅಡ್ಡಿ ವಿಚಾರವನ್ನು ವಿರೋಧಿಸಿದ ಕೆಲವು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದರು. ಈ ಹಿನ್ನೆಲೆಯಲ್ಲಿ ಛಾತ್ರ ಭಾರತಿ ವಿದ್ಯಾರ್ಥಿ ಸಂಘಟನೆಯಿಂದ ಜುಹು ಪೊಲೀಸ್ ಠಾಣೆ ಎದುರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಈ ನಡುವೆ ಪುಣೆಯ ವಿಶ್ರಮಬಾಗ್​ ಪೊಲೀಸ್ ಠಾಣೆಯಲ್ಲಿ ಜಿಗ್ನೇಶ್ ಮೆವಾನಿ ಮತ್ತು ಉಮರ್ ಖಾಲಿದ್ ವಿರುದ್ಧ ಸೆಕ್ಷನ್ 152(ಎ), 505 ಮತ್ತು 117 ಅಡಿಯಲ್ಲಿ ದೂರು ದಾಖಲಿಸಲಾಗಿದೆ.

0

Leave a Reply

Your email address will not be published. Required fields are marked *