ತಮಿಳುನಾಡು 18 ಶಾಸಕರ ವಜಾ ವಿಭಿನ್ನ ತೀರ್ಪು: ತ್ರಿಸದಸ್ಯ ಪೀಠದಿಂದ ವಿಚಾರಣೆ

ಚೆನ್ನೈ: ತಮಿಳುನಾಡಿನ 18 ಶಾಸಕರ ಅನರ್ಹತೆ ಆದೇಶದ ಕುರಿತು ವಿಭಿನ್ನ ತೀರ್ಪು ಪ್ರಕಟವಾಗಿದ್ದು, ಮದ್ರಾಸ್ ಹೈಕೋರ್ಟ್​ ಮುಖ್ಯ ನ್ಯಾಯಮೂರ್ತಿ ಶಾಸಕರ ಅನರ್ಹತೆಯನ್ನು ಎತ್ತಿ ಹಿಡಿದರೆ, ಇನ್ನೊಬ್ಬ ನ್ಯಾಯಮೂರ್ತಿ ಸುಂದರ್, ಸ್ಪೀಕರ್ ಆದೇಶ ತಪ್ಪು ಎಂದರು. ಈ ಮೂಲಕ ಅಲ್ಪಮತಕ್ಕೆ ಕುಸಿಯುವ ಭೀತಿಯಲ್ಲಿ ಸಿಎಂ ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಸರ್ಕಾರ ತೂಗುಗತ್ತಿಯಿಂದ ಪಾರಾದಂತಾಗಿದೆ. ಕಳೆದ ಫೆಬ್ರವರಿಯಲ್ಲಿ ಎಐಎಡಿಎಂಕೆ ಸರ್ಕಾರ ಬಹುಮತ ಸಾಬೀತುಪಡಿಸುವ ಮುನ್ನ, ಟಿ ಟಿ ವಿ ದಿನಕರನ್ ಬೆಂಬಲಿಗ 18 ಶಾಸಕರನ್ನು ಸ್ಪೀಕರ್ ಧನಪಾಲ್ ಅನರ್ಹತೆಗೊಳಿಸಿ ಆದೇಶ ಹೊರಡಿಸಿದ್ದರು.

ಈ ಆದೇಶ ಪ್ರಶ್ನಿಸಿದ್ದ ಶಾಸಕರು ಹೈಕೋರ್ಟ್​ ಮೆಟ್ಟಿಲೇರಿದ್ದರು. ಈ ಕುರಿತು ಸುದೀರ್ಘ ವಿಚಾರಣೆ ನಡೆಸಿದ್ದ ಹೈಕೋರ್ಟ್​ ಇಂದು ಮಹತ್ವದ ತೀರ್ಪು ನೀಡಿದ್ದು, ಇಬ್ಬರು ನ್ಯಾಯಮೂರ್ತಿಗಳು ವಿಭಿನ್ನ ನಿಲುವು ತಳೆದಿದ್ದಾರೆ. ಈ ಹಿನ್ನೆಲೆಯಲ್ಲಿ ತ್ರಿಸದಸ್ಯ ಪೀಠಕ್ಕೆ ವಿಚಾರಣೆಯನ್ನು ವರ್ಗಾಯಿಸಲಾಗಿದ್ದು, ಈ ಕುರಿತು ಅಂತಿಮ ತೀರ್ಪು ಪ್ರಕಟವಾಗುವವರೆ ಸರ್ಕಾರ ಬಹುಮತ ಸಾಬೀತುಪಡಿಸುವಂತಿಲ್ಲ ಮತ್ತು 18 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆಸುವಂತಿಲ್ಲ ಎಂದು ನ್ಯಾಯಪೀಠ ಆದೇಶಿಸಿದೆ. ಈ ಮೂಲಕ ಪಳನಿಸ್ವಾಮಿ ಮತ್ತು ಪನ್ನೀರ್ ಸೆಲ್ವಂ ಸರ್ಕಾರಕ್ಕೆ ಎದುರಾಗಿದ್ದ ಆತಂಕ ನಿವಾರಣೆಯಾಗಿದ್ದು, ಬಂಡಾಯ ನಾಯಕ ಟಿ ಟಿ ವಿ ದಿನಕರನ್​​ಗೆ ಹಿನ್ನಡೆಯಾಗಿದೆ.

ಹೈ ಕೋರ್ಟ್ ತೀರ್ಪು ಕುರಿತು ಪ್ರತಿಕ್ರಿಯಿಸಿದ ಟಿ ಟಿ ವಿ ದಿನಕರನ್, ಇಡೀ ತಮಿಳುನಾಡಿನ ಜನತೆ ನಮ್ಮೊಂದಿಗಿದ್ದಾರೆ ಎಂದಿದ್ದಾರೆ. ಕೋರ್ಟ್ ತೀರ್ಪಿನ ಕುರಿತು ಅಸಮಧಾನ ವ್ಯಕ್ತಪಡಿಸಿರುವ ಅವರು, ತೀರ್ಪು ಜನರ ಹತಾಶೆಗೆ ಕಾರಣವಾಗಿದೆ. ನ್ಯಾಯಮೂರ್ತಿಗಳು ಸರಿಯಾದ ತೀರ್ಪನ್ನು ನೀಡಿದ್ದಾರೆ. ನನ್ನೊಂದಿಗಿರುವ ಶಾಸಕರಿಗೆ ಲಾಭಾಕಾಂಕ್ಷೆ ಇದ್ದಲ್ಲಿ, ಅವರು ವಿಪಕ್ಷಗಳೊಂದಿಗೆ ಗುರುತಿಸಿಕೊಳ್ಳಬೇಕಿತ್ತು. ಅವರು ಹೋರಾಟಗಾರರು. ನಾವೆಲ್ಲ ಅಮ್ಮ (ಜಯಲಲಿತಾ) ಸರ್ಕಾರವನ್ನು ರಚಿಸುತ್ತೇವೆ ಎಂದಿದ್ದಾರೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *