ಇಂಗ್ಲೆಂಡ್​ ಬೌಲರ್​​ಗಳನ್ನು ಕಾಡಿದ ಸ್ಮಿತ್​​

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್​ ನಡುವಣ ನಾಲ್ಕನೇ ಟೆಸ್ಟ್​​ ಪಂದ್ಯದ ಕೊನೆಯ ದಿನದಾಟ ಆರಂಭಿಸಿದ ಆಸೀಸ್​​, ಇಂಗ್ಲೆಂಡ್​​ಗೆ ಭರ್ಜರಿ ತಿರುಗೇಟು ನೀಡಿತು. ಎರಡನೇ ಇನ್ನಿಂಗ್ಸ್​​ನಲ್ಲಿ 2 ವಿಕೆಟ್​​ಗೆ 103 ರನ್​​ಗಳಿಂದ ಇನ್ನಿಂಗ್ಸ್​​ ಆರಂಭಿಸಿದ ಸ್ಮಿತ್​ ಪಡೆ ಆತ್ಮ ವಿಶ್ವಾಸದಿಂದ ಬ್ಯಾಟಿಂಗ್ ಆರಂಭಿಸಿತು. ಇಂಗ್ಲೆಂಡ್​ ತಂಡದ ವೇಗದ ಬೌಲರ್​ಗಳ ಹೆಡೆಮುರಿ ಕಟ್ಟಿದ ಈ ಜೋಡಿ ರನ್​ ಹೊಳೆ ಹರಿಸಿತು. ಮನಸೋ ಇಚ್ಚೆ ಬ್ಯಾಟ್​ ಮಾಡಿದ ಆರಂಭಿಕ ಆಟಗಾರ ಡೇವಿಡ್​ ವಾರ್ನರ್​ ತಮ್ಮ ನೈಜ ಆಟ ಆಡಿದರು. 227 ಎಸೆತಗಳನ್ನು ಎದುರಿಸಿದ ವಾರ್ನರ್​​ 8 ಬೌಂಡರಿ ಸೇರಿದಂತೆ 86 ರನ್ ಬಾರಿಸಿದರು. ಆದರೆ ಜೋ ರೂಟ್​ ಎಸೆತವನ್ನು ತಪ್ಪಾಗಿ ಅರ್ಥೈಸಿಕೊಂಡ ವಾರ್ನರ್​​ ಔಟಾದರು.

ಇನ್ನು ಮಧ್ಯಮ ಕ್ರಮಾಂಕದ ಶಾನ್​ ಮಾರ್ಶ್​​ ದೊಡ್ಡ ಇನ್ನಿಂಗ್ಸ್​ ಕಟ್ಟಲಿಲ್ಲ. ಸ್ಟೀವನ್​ ಸ್ಮಿತ್​​ ತಮ್ಮ ಅನುಭವ ಬಳಿಸಿ ಬ್ಯಾಟಿಂಗ್ ಮಾಡಿದರು. ಒತ್ತಡವನ್ನು ಮೆಟ್ಟಿನಿಂತ ಸ್ಮಿತ್​, ರೂಟ್​ ಪಡೆಗೆ ಕಂಟಕವಾದರು. ಸ್ಮಿತ್​ ತಮ್ಮ ಶತಕಕ್ಕೆ ಮತ್ತೊಂದು ಸಂಖ್ಯೆ ಸೇರಿಸಿದರು. ಸ್ಮಿತ್​​ ಮನಮೋಹಕ ಇನ್ನಿಂಗ್ಸ್​​ನಲ್ಲಿ 6 ಬೌಂಡರಿ ಸೇರಿವೆ. ಸ್ಮಿತ್​ ತಮ್ಮ ವೃತ್ತಿ ಜೀವನದ 23ನೇ ಶತಕ ದಾಖಲಿಸಿದರು. ಅಂತಿಮವಾಗಿ ಆಸೀಸ್​​ 4 ವಿಕೆಟ್​ ನಷ್ಟಕ್ಕೆ 263 ರನ್​ ಸೇರಿಸಿ ಡಿಕ್ಲೇರ್​ ಮಾಡಿಕೊಂಡಿತು. ಈಗಾಗಲೇ 5 ಸರಣಿಯಲ್ಲಿ 3-0 ಮುನ್ನಡೆ ಸಾಧಿಸಿದ್ದ ಆಸ್ಟ್ರೇಲಿಯಾಗೆ ಶಾಕ್​ ನೀಡುವ ಇಂಗ್ಲೆಂಡ್​ ಯೋಜನೆ​ ಎಲ್ಲಾ ಉಲ್ಟಾ ಆಯಿತು. ಪರಿಣಾಮ ನಾಲ್ಕನೇ ಟೆಸ್ಟ್​ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ. ಜನವರಿ 4ರಿಂದ ಸಿಡ್ನಿಯಲ್ಲಿ ಆ್ಯಶಸ್​​ ಸರಣಿಯ ಕೊನೆಯ ಟೆಸ್ಟ್​ ಆರಂಭವಾಗಲಿದ್ದು, ಇಂಗ್ಲೆಂಡ್​ ಗೆಲುವಿನ ಟ್ರ್ಯಾಕ್​ಗೆ ಮರಳಲು ಪ್ಲ್ಯಾನ್​ ಮಾಡಿಕೊಂಡಿದೆ.

ಸ್ಪೋರ್ಟ್ಸ್​​ ಬ್ಯೂರೋ, ಸುದ್ದಿ ಟಿವಿ

0

Leave a Reply

Your email address will not be published. Required fields are marked *