2016 ರಿಂದ ಸಾಲ ತೀರಿಸಲು ಯತ್ನಿಸುತ್ತಿದ್ದೇನೆ: ವಿಜಯ್ ಮಲ್ಯ

ಲಂಡನ್/ದೆಹಲಿ: ಕೆಲವರು ಈಗ ಯಾಕೆ ಹೇಳಿಕೆ ನೀಡುತ್ತಿದ್ದೀರಿ ಎಂದು ನನ್ನನ್ನು ಪ್ರಶ್ನಿಸಿದ್ದಾರೆ. ನಾನು ಈಗ ಈ ವಿಷಯ ಪ್ರಸ್ತಾಪಿಸಲು ಕಾರಣ ಇದೆ ಎಂದು ಉದ್ಯಮಿ ವಿಜಯ್ ಮಲ್ಯ ಸ್ಪಷ್ಟೀಕರಣ ನೀಡಿದ್ದಾರೆ. ಇದೇ ಜೂನ್ 22ರಂದು ಕರ್ನಾಟಕ ಹೈಕೋರ್ಟ್​​ನಲ್ಲಿ ಯುಬಿಎಚ್​ಎಲ್ ಮತ್ತು ನಾನು ಅರ್ಜಿ ಸಲ್ಲಿಸಿದ್ದೇವೆ. 13,900 ಕೋಟಿ ರೂ. ಮೌಲದ್ಯ ಆಸ್ತಿಯನ್ನು ಮಾರಿ, ಸಾಲ ಮರು ಪಾವತಿಗೆ ಅವಕಾಶ ಕೊಡಿ ಎಂದು ಮನವಿ ಸಲ್ಲಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಮೂಲಕ ಹಳೆಯ ಪತ್ರ ಬಿಡುಗಡೆ ಟೀಕಿಸಿದವರಿಗೆ ಪ್ರತ್ಯುತ್ತರ ನೀಡಿದ್ದಾರೆ.

2016ರಿಂದ ಸಾಲ ತೀರಿಸಲು ನಾನು ಪ್ರಯತ್ನಿಸುತ್ತಿದ್ದೇನೆ ಎಂದು ಸಾಲ ಮತ್ತು ಬಡ್ಡಿ ಸೇರಿ 9,000 ಕೋಟಿ ರೂ. ಬಾಕಿ ಪಾವತಿಸಬೇಕಿರುವ ಮದ್ಯ ಉದ್ಯಮಿ ವಿಜಯ್ ಮಲ್ಯ ಹೇಳಿದ್ದಾರೆ. ಈಗ ನಾನು ಎಲ್ಲವನ್ನೂ ಗೌರವಾರ್ಹ ಕರ್ನಾಟಕ ಹೈಕೋರ್ಟ್​ ಮುಂದೆ ಇಟ್ಟಿದ್ದೇನೆ ಎಂದಿರುವ ಅವರು, ಇದರಲ್ಲಿ ದುರುದ್ದೇಶ ಏನಿದೆ? ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಅವರು, ಎಂ ಜೆ ಅಕ್ಬರ್ ಅವರ ಹೇಳಿಕೆಯ ಪ್ರಕಾರ, ನಾನು ಹಣ ಪಾವತಿಸಲು ವರ್ಷಗಳೇ ಬೇಕು. ನಾನು ಪಾವತಿಸಬೇಕಿರುವ ಮೊತ್ತದ ಕುರಿತು 2016ರಲ್ಲಿ ಪ್ರಕ್ರಿಯೆ ಆರಂಭಿಸಿದ್ದೆ. 2018ರಲ್ಲಿ ನನ್ನ ಆಸ್ತಿಯ ಮೌಲ್ಯ 2016ರಲ್ಲಿ ಇದ್ದಕ್ಕಿದ್ದಂಥ ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ.

ನನ್ನ ಆಸ್ತಿಗಳನ್ನು ನ್ಯಾಯಾಂಗದ ಮೇಲುಸ್ತುವಾರಿಯಲ್ಲಿ ಮಾರಾಟ ಮಾಡಿ, ಸಾಲ ತೀರಿಸಲು ನಾನು ಮನವಿ ಸಲ್ಲಿಸಿದ್ದೇನೆ ಎಂದಿರುವ ಅವರು, ಕೋರ್ಟ್ ಸಾರ್ವಜನಿಕ ಬ್ಯಾಂಕ್​ಗಳಿಗೆ ಪಾವತಿಸಬೇಕು ಎಂದು ಸೂಚಿಸಿದಷ್ಟು ಮೊತ್ತವನ್ನು ಪಾವತಿಸುತ್ತೇನೆ. ಕ್ರಿಮಿನಿಲ್ ಏಜೆನ್ಸಿಗಳಾದ ಜಾರಿ ನಿರ್ದೇಶನಾಲಯ ಮತ್ತು ಸಿಬಿಐಗಳು ಆಸ್ತಿ ಮಾರಾಟದ ಕುರಿತು ತಕರಾರು ತೆಗೆದಲ್ಲಿ, ನನ್ನನ್ನು ಪೋಸ್ಟರ್ ಬಾಯ್ ಮಾಡಲು ಅಜೆಂಡಾ ರೂಪಿಸಿರುವ ಸ್ಪಷ್ಟವಾಗಲಿದೆ ಎಂದು ಅವರು ಆರೋಪಿಸಿದ್ದಾರೆ.

ನಾನು ಸಾಲ ತೀರಿಸಲು ಎಲ್ಲ ಪ್ರಯತ್ನಗಳನ್ನೂ ಮುಂದುವರೆಸುತ್ತೇನೆ. ರಾಜಕೀಯ ಪ್ರೇರಿತ ಸಂಗತಿಗಳು ಮಧ್ಯಪ್ರವೇಶಿಸಿದಲ್ಲಿ ನಾನು ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಈ ಮೂಲಕ ಕೇಂದ್ರ ಹಣಕಾಸು ರಾಜ್ಯ ಖಾತೆ ಸಚಿವರಿಗೆ ತಿರುಗೇಟು ನೀಡಿದ್ದಾರೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *