ಕೆ ಜಿ ಬೋಪಯ್ಯ ಹಂಗಾಮಿ ಸ್ಪೀಕರ್: ನೇಮಕ ವಿರೋಧಿಸಿದ ಕಾಂಗ್ರೆಸ್

ನಿಯಮ ಉಲ್ಲಂಘಿಸಿ ಸ್ಪೀಕರ್ ನೇಮಕ ಎಂದ ಕಾಂಗ್ರೆಸ್
ಎಲ್ಲವೂ ಕಾನೂನು ಬದ್ಧ ಎಂದ ಬಿಜೆಪಿ
ಬೋಪಯ್ಯ ಇತಿಹಾಸದಲ್ಲಿದೆ ತಪ್ಪು ನಿರ್ಣಯದ ಉದಾಹರಣೆ

ಬೆಂಗಳೂರು/ದೆಹಲಿ: ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಹಿಂಬಾಗಿಲಿಂದ ಯತ್ನಿಸುತ್ತಿದೆಯೇ? ಎಂಬ ಅನುಮಾನ ಮೂಡುವಂತೆ ಇಂದು ಹಂಗಾಮಿ ಸ್ಪೀಕರ್ ನೇಮಕವಾಗಿದೆ. ನೇಮಕವನ್ನು ಕಾಂಗ್ರೆಸ್ ಪಕ್ಷ ವಿರೋಧಿಸಿದ್ದು, ಬಿಜೆಪಿ ಸಮರ್ಥಿಸಿಕೊಂಡಿದೆ. ಅಂದ್ಹಾಗೆ ಈ ನೇಮಕ ಯಾವುದು ಅಂತೀರಾ ನೀವೇ ನೋಡಿ….

ಹಂಗಾಮಿ ಸ್ಪೀಕರ್​​ ಆಗಿ ಕೆ ಜಿ ಬೋಪಯ್ಯ ಅವರನ್ನು ರಾಜ್ಯಪಾಲ ವಜೂಭಾಯಿ ವಾಲಾ ನೇಮಿಸಿದ್ದಾರೆ. ಆದರೆ, ಈ ನೇಮಕವನ್ನು ಕಾಂಗ್ರೆಸ್ ವಿರೋಧಿಸಿದೆ. ಕೆ ಜಿ ಬೋಪಯ್ಯ ನೇಮಕದ ಮೂಲಕ ಸದನದ ಹಿರಿಯ ಸದಸ್ಯರನ್ನು ಕಡೆಗಣಿಸಲಾಗಿದೆ ಎಂದಿರುವ ಕಾಂಗ್ರೆಸ್ ನಾಯಕ ಅಭೀಷೇಕ್ ಮನು ಸಂಘ್ವಿ, ಬಿಜೆಪಿ ಪರ ವ್ಯಕ್ತಿಯನ್ನು ಸ್ಪೀಕರ್ ಆಗಿ ನೇಮಿಸಲಾಗಿದೆ ಎಂದು ಕಿಡಿಕಾರಿದ್ದಾರೆ. ಅಲ್ಲದೇ, ಕಾನೂನು ಹೋರಾಟದ ಸುಳಿವನ್ನು ಕೂಡ ಅವರು ನೀಡಿದ್ದಾರೆ.

ನೇಮಕ ಕುರಿತು ಪ್ರತಿಕ್ರಿಯಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಗೌರವಾನ್ವಿತ ರಾಜ್ಯಪಾಲರಿಂದ ಶಾಕಿಂಗ್ ನಿರ್ಧಾರ ಎಂದು ಟ್ವೀಟ್ ಮಾಡಿದ್ದಾರೆ. ಸಂವಿಧಾನದ ಪ್ರಕಾರ, ಸದನದ ಹಿರಿಯ ಸದಸ್ಯರನ್ನು ನೇಮಿಸಬೇಕಿತ್ತು ಎಂದಿರುವ ಅವರು, ಆರ್ ವಿ ದೇಶಪಾಂಡೆಯವರು ಹಂಗಾಮಿ ಸ್ಪೀಕರ್ ಆಗಬೇಕಿತ್ತು ಎಂದಿದ್ದಾರೆ. ವಜುಭಾಯಿ ವಾಲಾ ಬಿಜೆಪಿಯ ಏಜೆಂಟ್​ರಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಟ್ವೀಟ್ ಮೂಲಕ ಅಸಮಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ವಕ್ತಾರ ಪ್ರೊ. ಕೆ. ಇ. ರಾಧಾಕೃಷ್ಣ, ವಿ ಎಸ್ ಉಗ್ರಪ್ಪ ಕೂಡ ವಿರೋಧಿಸಿದ್ದಾರೆ.

ಹಂಗಾಮಿ ಸ್ಪೀಕರ್ ಆಗಿ ಕೆ ಜಿ ಬೋಪಯ್ಯ ನೇಮಕವನ್ನು ವಿರೋಧಿಸಿದ ಕಾಂಗ್ರೆಸ್​​​ನ ಕ್ರಮವನ್ನು ಬಿಜೆಪಿ ಖಂಡಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಪ್ರಕಾಶ್ ಜಾವಡೇಕರ್, 2008ರಲ್ಲೂ ಬೋಪಯ್ಯ ಹಂಗಾಮಿ ಸ್ಪೀಕರ್ ಆಗಿದ್ದರು. ಆಗ ಬೋಪಯ್ಯ ಇಂದಿಗಿಂಥ 10 ವರ್ಷ ಕಿರಿಯರಾಗಿದ್ದರು ಎನ್ನುವ ಮೂಲಕ, ರಾಜ್ಯಪಾಲರ ನೇಮಕ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೇ, ಕಾಂಗ್ರೆಸ್ ತಮಾಷೆಗಾಗಿ ಆರೋಪ ಮಾಡುತ್ತಿದೆ ಎಂದ ಅವರು, ನಿಯಮಾನುಸಾರ ಬೋಪಯ್ಯ ನೇಮಕವಾಗಿದೆ ಎಂದಿದ್ದಾರೆ.

2009ರ ವಿಧಾನಸಭೆ ಅವಧಿಯಲ್ಲಿ ಬಿ ಎಸ್ ಯಡಿಯೂರಪ್ಪ ವಿರುದ್ಧ 11 ಶಾಸಕರು ಬಂಡಾಯ ಎದ್ದಿದ್ದರು. ಈವೇಳೆ ಬಂಡಾಯವೆದ್ದಿದ್ದ ಶಾಸಕರನ್ನು ಬೋಪಯ್ಯ ಅಮಾನತುಗೊಳಿಸಿದ್ದರು. ಈ ಮೂಲಕ ಅಲ್ಪ ಮತಕ್ಕೆ ಕುಸಿದಿದ್ದ ಬಿಜೆಪಿ ಸರ್ಕಾರವನ್ನು ರಕ್ಷಿಸಿದ ಕೀರ್ತಿ ಕೆ ಜಿ ಬೋಪಯ್ಯನವರಿಗೆ ಸಲ್ಲುತ್ತದೆ. ಆದರೆ, ಸ್ಪೀಕರ್​​ರ ಈ ನಿರ್ಧಾರವನ್ನು ಪ್ರಶ್ನಿಸಿದ ಅಮಾನತಾದ ಶಾಸಕರು, ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಈ ವೇಳೆ ಬಂಡಾಯ ಶಾಸಕರ ಅಮಾನತು ಕ್ರಮ ಸಂವಿಧಾನ ವಿರೋಧಿ ಎಂದು ಸುಪ್ರೀಂ ಕೋರ್ಟ್​ನಿಂದ ಛೀಮಾರಿಗೆ ಬೋಪಯ್ಯ ಒಳಗಾಗಿದ್ದರು. ಇಂಥ ವಿವಾದಾತ್ಮಕ ಹಿನ್ನೆಲೆಯುಳ್ಳ ಬೋಪಯ್ಯ, ನಾಳೆ ಹೇಗೆ ಸದನವನ್ನು ನಿರ್ವಹಿಸುತ್ತಾರೆ ಎಂಬ ಕುತೂಹಲ ಮೂಡಿದೆ.

ಕರ್ನಾಟಕ ರಾಜ್ಯಪಾಲ ವಜೂಭಾಯಿವಾಲಾ ಮತ್ತೊಮ್ಮೆ ಸಂವಿಧಾನದ ಮೇಲೆ ಎನ್​ಕೌಂಟರ್ ನಡೆಸಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲ ಆರೋಪಿಸಿದ್ದಾರೆ. ನಾಳೆ ಬಿಎಸ್​ವೈ ಬಹುಮತ ಸಾಬೀತು ಹಿನ್ನೆಲೆಯಲ್ಲಿ ಇಂದು ಹಂಗಾಮಿ ಸ್ಪೀಕರ್ ಆಗಿ ಬೋಪಯ್ಯ ಅವರನ್ನು ವಾಲಾ ನೇಮಿಸಿದ್ದರು. ಈ ನೇಮಕವನ್ನು ವಿರೋಧಿಸಿರುವ ಸುರ್ಜೆವಾಲ, ಕೋರ್ಟ್​​​ನಲ್ಲಿ ನೇಮಕವನ್ನು ಪ್ರಶ್ನಿಸಲಾಗುವುದು. ಕಾನೂನು ಹೋರಾಟಕ್ಕೆ ಅವಕಾಶ ಮುಕ್ತವಾಗಿದೆ. ಈ ಕುರಿತು ನಿಮಗೆ ಆದಷ್ಟು ಶೀಘ್ರದಲ್ಲೇ ತಿಳಿಸುತ್ತೇವೆ ಎಂದಿದ್ದಾರೆ.

ಇನ್ನು ಬೋಪಯ್ಯ ನೇಮಕ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಜೆಡಿಎಸ್ ನಾಯಕ ಎಚ್ ಡಿ ರೇವಣ್ಣ, ಕೆ ಜಿ ಬೋಪಯ್ಯ ನೇಮಕ ವಿರೋಧಿಸಿ ಎಚ್.ಡಿ. ರೇವಣ್ಣ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಬೋಪಯ್ಯ ವಿರುದ್ಧ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ ಎಂದಿರುವ ಅವರು, 13ನೇ ವಿಧಾನಸಭೆ ಅವಧಿಯಲ್ಲಿ ಬೋಪಯ್ಯ ಶಾಸಕರನ್ನು ಅಮಾನತು ಮಾಡುವ ಮೂಲಕ ತಪ್ಪು ನಿರ್ಧಾರ ಕೈಗೊಂಡಿದ್ದರು. ಇದರ ಆಧಾರದಲ್ಲಿ ಬೋಪಯ್ಯ ಬದಲಿಗೆ ಹಿರಿಯ ಸದಸ್ಯರನ್ನು ಸಭಾಧ್ಯಕ್ಷರನ್ನಾಗಿ ನೇಮಿಸಿ ಎಂದು ಅವರು ಒತ್ತಾಯಿಸಿದ್ದಾರೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *