ಕಲಾಗ್ರಾಮದಲ್ಲಿ ಇಂದು ಷರೀಫನ ಕಲರವ

ಬೆಂಗಳೂರು: ತರವಲ್ಲ ತಗಿ ನಿನ್ನ ತಂಬೂರಿ ಸ್ವರ ಎಂದು ಹಾಡಿದ ಷರೀಫ ಇಂದು ಬೆಂಗಳೂರಿನ ಕಲಾಗ್ರಾಮಕ್ಕೆ ಬರುತ್ತಿದ್ದಾನೆ. ಪೀಪಲ್ಸ್ ಫಾರ್ ಪೀಪಲ್ ತಂಡದವರು ಆಯೋಜಿಸಿರುವ ಕೊಡಗಿಗಾಗಿ ರಂಗ ಸಪ್ತಾಹದ ಪ್ರಯುಕ್ತ ಇಂದು ಸಂಜೆ ಬೆಂಗಳೂರು ವಿಶ್ವವಿದ್ಯಾಲಯದ ಪಕ್ಕದಲ್ಲಿರುವ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಸಾತ್ವಿಕ ರಂಗ ತಂಡಕ್ಕಾಗಿ ರಾಜಗುರು ಹೊಸಕೋಟೆ ನಿರ್ದೇಶಿಸಿ, ಅಭಿನಯಿಸಿರುವ ನಾಟಕ ಪ್ರಯೋಗವಾಗಲಿದೆ. ಸಂಜೆ 5:30ಕ್ಕೆ ಪ್ರವೀಣ್ ಬಿ ವಿ ಮತ್ತು ಪ್ರದೀಪ್ ಬಿ ವಿ ಸೋದರರು ಅವತರಿಸು ಬಾ ಭಾವಗುಚ್ಛವನ್ನು ಪ್ರಸ್ತುತ ಪಡಿಸಲಿದ್ದಾರೆ. ಶತಮಾನಗಳ ಕಾಲ ಕಂಡು ಕೇಳರಿಯದ ಭೀಕರ ಪ್ರವಾಹಕ್ಕೆ ಸಿಲುಕಿ ನರಳಿದ, ಜೀವ ಕಳೆದುಕೊಂಡ, ಆಸ್ತಿಪಾಸ್ತಿ, ಮನೆಮಠ, ನೆಮ್ಮದಿ ಕಳೆದುಕೊಂಡು, ನಿರಾಶ್ರಿತರಂತೆ ಆಗಿರುವ ಜನ ಮತ್ತು ಅಲ್ಲಿನ ಸುಮಾರು 700ಕ್ಕೂ ಹೆಚ್ಚು ಮಕ್ಕಳ ವಿದ್ಯಾಭ್ಯಾಸದ ಹೊಣೆಯನ್ನು ನಿರ್ವಹಿಸುವ ಹಾಗೂ ಹಾಳಾಗಿರುವ ಕೊಡಗನ್ನು ಪುನರ್ನಿರ್ಮಾಣದ ಆಶಯದೊಂದಿಗೆ ಇದೇ ನವೆಂಬರ್ 11ರಿಂದ ಆರಂಭವಾಗಿರುವ ಕೊಡಗಿಗಾಗಿ ರಂಗ ಸಪ್ತಾಹಕ್ಕೆ ಇದುವರೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ನಟನ ತಂಡದ ಚೋರ ಚರಣದಾಸ, ಬೆನಕ ತಂಡದ ಹಯವದನ, ದೃಶ್ಯಕಾವ್ಯ ತಂಡದ ಹುಲಿ ಹಿಡಿದ ಕಡಸು ನಾಟಕಗಳು ಪ್ರದರ್ಶನವಾಗಿವೆ. ಇಂದು ಸಂತ ಶಿಶುನಾಳ ಷರೀಫರ ಜೀವನ ಮತ್ತು ಗೀತೆಗಳನ್ನು ಆಧರಿಸಿ, ಮಂಜುನಾಥ ಬೆಳಕೆರೆಯವರು ಬರೆದಿರುವ ಷರೀಫ ನಾಟಕ ಪ್ರದರ್ಶನವಾಗಲಿದೆ.

ಶಿಶುನಾಳ ಶರೀಫರು ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ಶಿಶುವಿನಾಳ ಗ್ರಾಮದಲ್ಲಿ  1819ರ ಮಾರ್ಚ್ 7 ರಂದು ಜನಿಸಿದರು. ತಂದೆ ದೇವಕಾರ ಮನೆತನದ ಇಮಾಮ್ ಹಜರತ್ ಸಾಹೇಬ, ತಾಯಿ ಹಜ್ಜೂಮಾ. ಮಹಮ್ಮದ ಶರೀಫ ಇವರ ಪೂರ್ಣ ಹೆಸರು. ಮುಲ್ಕಿ ಪರೀಕ್ಷೆ ತೇರ್ಗಡೆ ಹೊಂದಿದ ನಂತರ ಅವರು, ಕೆಲ ಕಾಲ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರಾಗಿ ಕೆಲಸ ನಿರ್ವಹಿಸಿದರು. ನಂತರ ಶಿಕ್ಷಕ ವೃತ್ತಿಯನ್ನು ತ್ಯಜಿಸಿ, ಗೋವಿಂದಭಟ್ಟರ ಶಿಷ್ಯತ್ವ ಸ್ವೀಕರಿಸುತ್ತಾರೆ. ಈ ನಡುವೆ ಷರೀಫರಿಗೆ ಫಾತಿಮಾ ಅವರೊಡನೆ ವಿವಾಹವಾಗಿ, ಹೆಣ್ಣು ಮಗುವೊಂದು ಜನಿಸಿ, ಹೆಂಡತಿಯ ಅಕಾಲಿಕ ಸಾವು ಇತ್ಯಾದಿಗಳು ನಡೆದಿವೆ ಎಂದು ಕೆಲವು ಇತಿಹಾಸಕಾರರು ಉಲ್ಲೇಖಿಸಿದ್ದಾರೆ. ಶಿಶುನಾಳ ಶರೀಫರ ಜೀವನದಲ್ಲಿ ನಡೆದ ಕಹಿ ಘಟನೆಗಳ ನಡುವೆ ಅವರು ಆಧ್ಯಾತ್ಮದತ್ತ ಸಂಪೂರ್ಣವಾಗಿ ತೊಡಗಿಸಿಕೊಂಡರು.

ಗೋವಿಂದಭಟ್ಟರದು ಜಾತ್ಯತೀತ, ಮತಾತೀತ, ಧರ್ಮಾತೀತ ಮತ್ತು ಮೂಢನಂಬಿಕೆರಹಿತ ವ್ಯಕ್ತಿತ್ವ. ಅವರ ಸಾನ್ನಿಧ್ಯ, ಬೋಧನೆ, ಸಹಚರ್ಯದಿಂದಾಗಿ ಶಿಶುನಾಳ ಷರೀಫರಿಗೆ ತಮ್ಮ ದಾರಿ, ನಿಲುವು, ನಡೆಗಳು ಸ್ಪಷ್ಟವಾದವು. ಹಿಂದೂ – ಮುಸ್ಲಿಂ ಎಂಬ ಭೇದವಿಲ್ಲದೆ ಜೀವನ ನಡೆಸುತ್ತಿದ್ದ ಈ ಎರಡು ಧರ್ಮಗಳ ಗುರು ಶಿಷ್ಯರು ಸಮಾಜದಲ್ಲಿ ಧಾರ್ಮಿಕ ವೈಷಮ್ಯಕ್ಕೆ ಇಂದಿಗೂ ಮದ್ದಿನಂತಿದ್ದಾರೆ. ಅವರ ಸಂಬಂಧದ ಪರಿಣಾಮದಿಂದಾಗಿ ಷರೀಫರು ತತ್ವಪದಗಳನ್ನು ರಚಿಸತೊಡಗಿದರು. ಷರೀಫರ ಕವಿತೆಗಳು ಮೇಲ್ನೋಟಕ್ಕೆ ಸರಳವಾಗಿ ಕಂಡರೂ ಪಾರಮಾರ್ಥಿಕ ಅರ್ಥವನ್ನು ಅಡಕವಾಗಿರಿಸಿಕೊಂಡಿರುತ್ತವೆ. ತರವಲ್ಲ ತಗಿ ನಿನ್ನ ತಂಬೂರಿ, ಅಳಬೇಡ ತಂಗಿ ಅಳಬೇಡ, ಗುಡಿಯ ನೋಡಿರಣ್ಣ ಮೊದಲಾದ ಹಾಡುಗಳಾಗಲಿ ಅಥವಾ ಕೋಡಗನ ಕೋಳಿ ನುಂಗಿತ್ತಯಂತಹ ಗೀತೆಗಳಾಗಲಿ ಮೇಲ್ನೋಟಕ್ಕೆ ಕಾಣದ ಆಧ್ಯಾತ್ಮಿಕ ಅರ್ಥಗಳನ್ನು ಧ್ವನಿಸುತ್ತವೆ. ಕನ್ನಡದಲ್ಲಿ ಇವರ ಪಾರಮಾರ್ಥಿಕ ಅರ್ಥವನ್ನು ಚಲನ ಚಿತ್ರದಲ್ಲಿ ಹಿಡಿಯಲು ವಿಫಲ ಯತ್ನ ನಡೆಸಲಾಗಿದೆ. ಬದುಕಿನ ಕಷ್ಟಕಾರ್ಪಣ್ಯಗಳ ಬೇಗುದಿಗೆ ಷರೀಫ ಸಿಲುಕಿರುವಂತೆ ಚಿತ್ರ ನಿರ್ಮಾಣವಾಗಿದೆ. ಆದರೆ, ಶಿಶುನಾಳ ಷರೀಫ ಎಲ್ಲವನ್ನೂ ಮೀರಿದ ಆಧ್ಯಾತ್ಮ ಸಂದೇಶವನ್ನು ತನ್ನ ಗೀತೆಗಳ ಮೂಲಕ ನೀಡಿದ್ದಾನೆ. ಇಂತಹ ಷರೀಫನ ಕುರಿತ ನಾಟಕ ಇಂದು ಕಲಾಗ್ರಾಮದಲ್ಲಿ ಅನಾವರಣವಾಗಲಿದೆ.

ಭಾರತದಲ್ಲಿ ಕರ್ನಾಟಕ ಸರ್ವಧರ್ಮ ಸಮನ್ವಯತೆಗೆ ಷರೀಫ ಕೊಂಡಿಯಂತಿದ್ದಾನೆ. ವಚನಕಾರರು, ಕೀರ್ತನಕಾರರು, ಕಬೀರ, ಮೀರಾ ಮೊದಲಾದವರ ಸಾಲಿನಲ್ಲಿ ಷರೀಫ ಸ್ಥಾನ ಪಡೆದುಕೊಂಡಿದ್ದಾನೆ. ಅವನ ತತ್ವಪದಗಳು ಸಮನ್ವಯತೆ, ಚಿಂತನ ಪ್ರಧಾನವಾಗಿವೆ. ಜೊತೆಗೆ ಸಾಮಾನ್ಯ ಸಂಗತಿಯೊಂದನ್ನು ಹೇಳುತ್ತಲೇ ಆಧ್ಯಾತ್ಮವನ್ನು ಧ್ವನಿಸುವ, ಉದಾತ್ತ ಚಿಂತನೆಗಳತ್ತ ಹೊರಳಿಸುವ ಪ್ರಯತ್ನವಿದೆ. ಅಳಬೇಡ ತಂಗಿ ಅಳಬೇಡ ಕವಿತೆಯಲ್ಲಿ ತಂಗಿ ಎಂಬ ಪದ ಬಳಕೆ ಇದೆ. ಕನ್ನಡದಲ್ಲಿ ತಂಗು ಎಂಬ ಪದವಿದೆ. ಇದರರ್ಥ ನಿಲ್ಲು ಎಂದು. ಉನ್ನತ ಸಾಧನೆ ಮಾಡಬೇಕಾದ ವ್ಯಕ್ತಿ ನಿಂತು ಅಳಬಾರದು ಎಂದು ಷರೀಫರು ಹೇಳುತ್ತಿದ್ದಾರೆ. ಇನ್ನು ಮೋಹದ ಹೆಂಡತಿ ತೀರಿದ ಬಳಿಕ ಎಂಬ ಗೀತೆ ಕೂಡ ಇಂತದ್ದೇ ಮತ್ತೊಂದು ಗೀತೆ. ದೇಹದ ಮೇಲಿನ ಮೋಹವನ್ನು ಕಳೆದುಕೊಂಡ ಇಹಲೋಕದ ಮೇಲೆ ವ್ಯಾಮೋಹ ಏಕೆ? ಎಂಬರ್ಥದ ಗಂಭೀರ ಪ್ರಶ್ನೆಗಳನ್ನು ಷರೀಫರು ಅಡಗಿಸಿಟ್ಟಿದ್ದಾರೆ. ಸಾವು ನೋವುಗಳ ಕುರಿತು ಯಾವೊಂದು ಸುಳಿವನ್ನೂ ನೀಡದ ದೇಹದ ಮೇಲೆ ವ್ಯಾಮೋಹ ಏಕೆ? ಎಂಬುದು ಅವರ ಪ್ರಶ್ನೆಯಾಗಿದೆ. ಕಲಾಗ್ರಾಮಕ್ಕೆ ಬಂದರ ಶಿಶುನಾಳ ಷರೀಫನ ಇಂತಹ ವಿಶಿಷ್ಟ ವ್ಯಕ್ತಿತ್ವದ ನಾಟಕವನ್ನು ಕಣ್ತುಂಬಿಕೊಳ್ಳಬಹುದು.

– ಪ್ರದೀಪ್ ಮಾಲ್ಗುಡಿ

0

Leave a Reply

Your email address will not be published. Required fields are marked *