ಶಕ್ತಿಕಾಂತ್ ದಾಸ್​​ಗೆ ಆರ್​ಬಿಐ ಮುಖ್ಯಸ್ಥ ಹುದ್ದೆ: ಕೇಂದ್ರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಗೇಲಿ

ಶಕ್ತಿಕಾಂತ್ ದಾಸ್ ಅವರನ್ನು ಆರ್​ಬಿಐ ಗವರ್ನರ್ ಆಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೇಮಿಸಿ ಆದೇಶ ಹೊರಡಿಸಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾದ ಟೀಕೆಗೆ ಗುರಿಯಾಗಿದೆ. ಸಾಮಾಜಿಕ ಜಾಲತಾಣಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದುವರೆಗೆ ಆರ್​ಬಿಐ ಗವರ್ನರ್ ಹುದ್ದೆ ನಿರ್ವಹಿಸಿದ ಬಹುತೇಕರು ಆರ್ಥಿಕ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪಿಎಚ್​.ಡಿ., ಪದವಿ ಪಡೆದಿದ್ದರು. ಅವರ ಪೈಕಿ ವೈ ವಿ ರೆಡ್ಡಿ, ಪಿಎಚ್​.ಡಿ. ಇನ್ ಎಕನಾಮಿಕ್ಸ್, ಡಿ ಸುಬ್ಬರಾವ್, ಪಿಎಚ್​.ಡಿ. ಇನ್ ಎಕನಾಮಿಕ್ಸ್, ಮನಮೋಹನ್ ಸಿಂಗ್, ಪಿಎಚ್​.ಡಿ. ಇನ್ ಎಕನಾಮಿಕ್ಸ್, ರಘುರಾಮ್​ ರಾಜನ್, ಪಿಎಚ್​.ಡಿ. ಇನ್ ಎಕನಾಮಿಕ್ಸ್, ಉರ್ಜಿತ್ ಪಟೇಲ್, ಪಿಎಚ್​.ಡಿ. ಇನ್ ಎಕನಾಮಿಕ್ಸ್ ಮತ್ತು ಬಿಮಲ್ ಜಲನ್ ಸೇರಿದಂತೆ ಬಹುತೇಕರು ಅರ್ಥಶಾಸ್ತ್ರ ಅಥವಾ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದರು. ಆದರೆ, ಶಕ್ತಿಕಾಂತ್ ದಾಸ್ ಅವರು ಇತಿಹಾಸ ವಿಷಯದಲ್ಲಿ ಎಂ.ಎ., ಪಡೆದಿದ್ದು, ಐಎಎಸ್ ಅಧಿಕಾರಿಯಾಗಿ ಅವರು ಸೇವೆ ನಿರ್ವಹಿಸಿದ್ದಾರೆ.

ಶಕ್ತಿಕಾಂತ್ ಅವರ ವಿದ್ಯಾಭ್ಯಾಸ ಏನು, ಎಲ್ಲಿ?

ಭುವನೇಶ್ವರದ ಡೆಮಾನ್ಸ್ಟೇಷನ್ ಸ್ಕೂಲ್​ನಲ್ಲಿ ವಿದ್ಯಾಭ್ಯಾಸ, ಇತಿಹಾಸ ವಿಷಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ ಇವರು, ದೆಹಲಿ ವಿಶ್ವವಿದ್ಯಾಲಯದ ಸೇಂಟ್ ಸ್ಟೀಫನ್​ ಕಾಲೇಜಿನಲ್ಲಿ ಈ ಪದವಿ ಪಡೆದಿದ್ದಾರೆ. ಜೊತೆಗೆ ಬೆಂಗಳೂರಿನ ಐಐಎಂಬಿಯಲ್ಲಿ ಅಡ್ವಾನ್ಸ್​ಡ್ ಫೈನಾನ್ಷಿಯಲ್ ಮ್ಯಾನೇಜ್​ಮೆಂಟ್ ಕೋರ್ಸ್​​ ಅಧ್ಯಯನ ನಡೆಸಿದ್ದಾರೆ. ಇನ್ನಿತರ ಕೋರ್ಸ್​ಗಳನ್ನು ಕೂಡ ಅವರು ಪೂರೈಸಿದ್ದಾರೆ.

ಇದೇ ಡಿಸೆಂಬರ್ 10ರಂದು ಉರ್ಜಿತ್ ಪಟೇಲ್ ಆರ್​ಬಿಐ ಗವರ್ನರ್ ಹುದ್ದೆಗೆ ದಿಡೀರ್ ರಾಜಿನಾಮೆ ಸಲ್ಲಿಸಿ ಅವಧಿಗೂ ಮುನ್ನವೇ ನಿರ್ಗಮಿಸಿದ್ದರು. ಇದಕ್ಕೆ ಕಾರಣ ಕೇಂದ್ರ ಸರ್ಕಾರದ ನಗದು ಮೀಸಲು ಅನುಪಾತ ಮೀರಲು ಹೇರಿರುವ ಒತ್ತಡ ಎಂಬ ಆರೋಪ ಕೂಡ ಕೇಳಿಬಂದಿತ್ತು. ಇದಕ್ಕೂ ಮುನ್ನ ಸಂಸತ್ತಿನ ಆರ್ಥಿಕ ಸ್ಥಾಯಿ ಸಮಿತಿ ಗರಿಷ್ಠ ಮುಖಬೆಲೆಯ ನೋಟು ನಿಷೇಧ ಕುರಿತು ಉರ್ಜಿತ್ ಪಟೇಲ್ ಅವರನ್ನು ಕೆಲವು ಬಾರಿ ವಿಚಾರಣೆ ನಡೆಸಿತ್ತು. ನಂತರ ದೇಶದ ಜಿಡಿಪಿ ದರ 2 ಅಂಶ ಕುಸಿದು, ಬರೋಬ್ಬರಿ 3 ಲಕ್ಷ ಕೋಟಿ ರೂ. ನಷ್ಟವಾಗಿತ್ತು. ( ಕರ್ನಾಟಕದ ಬಜೆಟ್ ಗಾತ್ರ 1 ಲಕ್ಷ + ಚಿಲ್ಲರೆ ಇದೆ. ಇದಕ್ಕೆ ಹೋಲಿಸಿದರೆ ಕರ್ನಾಟಕದ ಸುಮಾರು 3 ವರ್ಷಗಳಷ್ಟು ಮೊತ್ತ ನಷ್ಟವಾಗಿತ್ತು.) ಆರ್ಥಿಕ ತಜ್ಞರ ಪ್ರಕಾರ, ಗರಿಷ್ಠ ಮುಖಬೆಲೆಯ ನೋಟುಗಳ ನಿಷೇಧ ಮತ್ತು ತರಾತುರಿಯಲ್ಲಿ ಜಿಎಸ್​​ಟಿಯನ್ನು ಜಾರಿಗೆ ತಂದ ದುಷ್ಪರಿಣಾಮವೇ ಜಿಡಿಪಿ ದರ ಕುಸಿತಕ್ಕೆ ಕಾರಣ. ಇಷ್ಟು ಬೃಹತ್ ಪ್ರಮಾಣದ ಆರ್ಥಿಕ ನಷ್ಟವನ್ನು ಮರುಭರ್ತಿ ಮಾಡಲು ಎಷ್ಟು ವರ್ಷಗಳು ಬೇಕು ಎಂದು ಹೇಳಲು ಲೆಕ್ಕ ಹಾಕಲು ಕೂಡ ಸಾಧ್ಯವಿಲ್ಲ ಎಂದು ಕೂಡ ಕೆಲವು ಅರ್ಥತಜ್ಞರು ಅಭಿಪ್ರಾಯಪಟ್ಟಿದ್ದರು. ಈ ಎಲ್ಲ ಬೆಳವಣಿಗೆಗಳ ನಂತರ ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳು, ಅಂತಾರಾಷ್ಟ್ರೀಯ ಆರ್ಥಿಕ ತಜ್ಞರು ಕೂಡ ಕಿಡಿಕಾರಿದ್ದರು. ಒಟ್ಟಿನಲ್ಲಿ ಆರ್​ಬಿಐ ಗವರ್ನರ್ ಆಗಿದ್ದ ಉರ್ಜಿತ್ ಪಟೇಲ್ ಅವರು ಇದರಿಂದ ತೀವ್ರ ಮುಜುಗರಕ್ಕೆ ಒಳಗಾಗಿದ್ದರು. ಕಡೆಗೆ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ನಿರ್ಗಮಿಸಿದ್ದಾರೆ.

ಶಕ್ತಿಕಾಂತ್ ದಾಸ್ ಅವರು ಫೆಬ್ರವರಿ 26, 1957ರಂದು ಭುವನೇಶ್ವರದಲ್ಲಿ ಜನಿಸಿದ್ದಾರೆ. 1980ರ ಐಎಎಸ್ ಬ್ಯಾಚ್​​ನಲ್ಲಿ ಸೇವೆಗೆ ನಿಯೋಜನೆಯಾಗಿದ್ದರು. ಇದೀಗ ಅವರು 25ನೇ ಗವರ್ನರ್ ಆಗಿ ಆರ್​ಬಿಐಗೆ ನೇಮಕವಾಗಿದ್ದಾರೆ. ಇದಕ್ಕೂ ಮುನ್ನ ಅವರು 15ನೇ ಹಣಕಾಸು ಆಯೋಗದ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ತಮ್ಮ ಅಧಿಕಾರದ ಅವಧಿಯಲ್ಲಿ ಅವರು ಭಾರತ ಮತ್ತು ತಮಿಳುನಾಡು ಸರ್ಕಾರಗಳ ಅಡಿಯಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದು, ಇದುವರೆಗೆ ಆರ್ಥೀಕ ವ್ಯವಹಾರಗಳ ಕಾರ್ಯದರ್ಶಿ, ರಸಗೊಬ್ಬರ ಇಲಾಖೆಯ ಕಾರ್ಯದರ್ಶಿಗಳಾಗಿ ಅಧಿಕಾರ ನಡೆಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಶಕ್ತಿಕಾಂತ್ ದಾಸ್ ಅವರನ್ನು ಆರ್​ಬಿಐನ ಉನ್ನತ ಹುದ್ದೆಗೆ ನೇಮಿಸಿರುವುದಕ್ಕೆ ತರಹೇವಾರಿ ಟೀಕೆಗಳು ವ್ಯಕ್ತವಾಗಿವೆ. ಕಾನೂನು ಓದಿದವರು ಅರ್ಥ ಸಚಿವ, ಇತಿಹಾಸ ಓದಿದವರು ಆರ್​ಬಿಐ ಗವರ್ನರ್, ಏನನ್ನೂ ಓದದವರು ದೇಶದ ಪ್ರಧಾನಿ ಎಂದು ಸಾಮಾಜಿಕ ಜಾಲತಾಣಿಗರು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದಕ್ಕೂ ಮುನ್ನ ನೋಟು ನಿಷೇಧದ ಐಡಿಯಾ ಕೊಟ್ಟವರನ್ನು ಹುಡುಕಲಾಗುತ್ತಿದೆ. ಅವರನ್ನು ಆರ್​ಬಿಐ ಗವರ್ನರ್ ಸ್ಥಾನಕ್ಕೆ ನೇಮಿಸಲಾಗುತ್ತದೆ ಎಂದು ಜಾಲತಾಣದಲ್ಲಿ ಟ್ರೋಲ್ ಮಾಡಲಾಗಿತ್ತು. ಜಾಲತಾಣಿಗರ ಆಕ್ಷೇಪಗಳ ನಡುವೆ ಕೇಂದ್ರ ಸರ್ಕಾರ ಶಶಿಕಾಂತ್ ದಾಸ್ ಅವರನ್ನು ನೇಮಿಸಿತ್ತು. ಒಟ್ಟಿನಲ್ಲಿ ಕೇಂದ್ರದಲ್ಲಿ ಮೋದಿ ನೇತೃತ್ವದಲ್ಲಿ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಟೀಕೆಗೆ ಗುರಿಯಾಗುತ್ತಿದೆ. ಮೊದಲ ಅವಧಿ ಮುಗಿಯಲು ಕೇವಲ 5 ತಿಂಗಳು ಬಾಕಿ ಇರುವಾಗ ಮತ್ತೊಂದು ವಿವಾದಾಸ್ಪದ ನೇಮಕವನ್ನು ದೇಶ ಕಂಡಿದೆ. ಇದನ್ನು ಸಹಿಸದ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *