ಮಹಿಳೆಯರ ದೇಗುಲ ಪ್ರವೇಶ ವಿಚಾರ: ಮುಗಿಯದ ಗೊಂದಲ

ಸುಪ್ರೀಂಕೋರ್ಟ್ ಆದೇಶವಿದ್ದರೂ ಪ್ರವೇಶ ನಿರಾಕರಣೆ
ರಾಜ್ಯ ಸರ್ಕಾರದ ಆದೇಶಕ್ಕೂ ಕಿಮ್ಮತ್ತಿಲ್ಲ ಎಂಬ ಪರಿಸ್ಥಿತಿ
ಮಹಿಳೆಯರ ಪ್ರವೇಶ ವಿರೋಧಿಸಿ ಆತ್ಮಹತ್ಯೆಗೆ ಯತ್ನ

ತಿರುವನಂತಪುರ: ಕೇರಳದ ಶಬರಿ ಮಲೆ ಸ್ವಾಮಿ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ ಅವಕಾಶ ನೀಡಿದರೂ ಮಹಿಳಾ ಭಕ್ತೆಯರಿಗೆ ಅವಕಾಶ ನಿರಾಕರಿಸಲಾಗಿದೆ. ಇದರೊಂದಿಗೆ ದೇವಸ್ವಂ ಸಮಿತಿ ಸುಪ್ರೀಂ ನಲ್ಲಿ ಮೇಲ್ಮನವಿ ಸಲ್ಲಿಸಬೇಕು ಎಂದು ಕೆಲವರು ಒತ್ತಾಯಿಸಿದರೆ, ಇನ್ನು ಕೆಲವರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಮಹಿಳೆಯರ ಪ್ರವೇಶಕ್ಕೆ ಅಗತ್ಯವಾದ ಎಲ್ಲ ಕ್ರಮಗಳನ್ನೂ ಕೈಗೊಳ್ಳುವುದಾಗಿ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಶಬರಿ ಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿರುವ ಸುಪ್ರೀಂ ಕೋರ್ಟ್ ಮತ್ತು ಕೋರ್ಟ್ ಆದೇಸ ಪಾಲಿಸುತ್ತೇವೆ ಎಂದ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಇಂದು ಕೇರಳದಲ್ಲಿ ಹಿನ್ನಡೆಯಾಗಿದೆ. ದೇವಾಲಯ ಪ್ರವೇಶಕ್ಕೆ ಆಗಮಿಸುತ್ತಿದ್ದ ಮಹಿಳೆಯರನ್ನು ಶಬರಿಮಲೆಯ ನೀಲಕಂಠದಲ್ಲಿ ಕೆಎಸ್​​​ಆರ್​​​ಟಿಸಿ ಬಸ್​​​ನಿಂದ ಮಹಿಳಾ ಭಕ್ತೆಯರನ್ನು ಪ್ರತಿಭಟನಾಕಾರರೇ ಹೊರದಬ್ಬಿ, ಗೂಂಡಾತನ ಪ್ರದರ್ಶಿಸಿದ್ದಾರೆ.

ಶಬರಿ ಮಲೆಯ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಿರುವ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವಂತೆ ದೇವಸ್ವಂ ಮಂಡಳಿಗೆ ನಾವು ಒತ್ತಾಯಿಸಿದ್ದೇವೆ ಎಂದು ಪಂಡಲಮ್ ಅರಮನೆಯ ಕಾರ್ಯಕಾರಿ ಸಮಿತಿ ಅಧ್ಯಕ್ಷ ಪಿ ಜಿ ಶಶಿಕುಮಾರ್ ಹೇಳಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಮಂಡಳಿ ಅಕ್ಟೋಬರ್ 19ರಂದು ಚರ್ಚಿಸುವುದಾಗಿ ಹೇಳಿದೆ. ಇಂದೇ ಈ ಕುರಿತು ಚರ್ಚಿಸದೇ ಇರುವುದು ನಮ್ಮ ಅಸಮಧಾನಕ್ಕೆ ಕಾರಣವಾಗಿದೆ. ಸಭೆ ನಮಗೆ ತೃಪ್ತಿ ತಂದಿಲ್ಲ ಎಂದು ಅವರು ಹೇಳಿದ್ದಾರೆ.

ಈ ನಡುವೆ ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ವಿಚಾರವನ್ನು ವಿರೋಧಿಸಿ ತಿರುವನಂತಪುರದಲ್ಲಿ ಮಹಿಳೆಯರು ಮುಷ್ಕರ ನಡೆಸಿದರು. ಮಹಿಳೆಯರ ದೇವಾಲಯ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು, ನೇಣು ಬಿಗಿದುಕೊಂಡು ಆತ್ಯಹತ್ಯೆಗೆ ಯತ್ನಿಸಿದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಮತ್ತು ಸ್ಥಳೀಯರು ಮಹಿಳೆಯನ್ನು ರಕ್ಷಿಸಿದ್ದರು.

ನಾಳೆಯಿಂದ ಆರಂಭವಾಗಲಿರುವ ತುಳ್ಳಂ ಪೂಜೆಗಾಗಿ ದೇವಸ್ಥಾನ ಪುನಾರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಯಾರೊಬ್ಬರೂ ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಸಿಎಂ ಪಿಣರಾಯಿ ವಿಜಯನ್ ಎಚ್ಚರಿಕೆ ನೀಡಿದ್ದರು. ಜೊತೆಗೆ, ಎಲ್ಲ ಮಹಿಳೆಯರಿಗೆ ಪೂಜೆಗೆ ಅವಕಾಶ ಒದಗಿಸಲಾಗುವುದು ಮತ್ತು ರಕ್ಷಣೆಯ ಜವಾಬ್ದಾರಿ ನಿರ್ವಹಿಸುವುದಾಗಿ ಹೇಳಿದರು. ಜೊತೆಗೆ ಸುಪ್ರೀಂ ಕೋರ್ಟ್ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸುವುದಿಲ್ಲ ಎಂದು ಅವರು ಪುನರುಚ್ಛರಿಸಿದರು. ಒಟ್ಟಿನಲ್ಲಿ ದೇಗುಲ ಪ್ರವೇಶ ವಿಚಾರದ ಕಗ್ಗಂಟು ಇನ್ನೂ ಬಗೆ ಹರಿಯವಂತೆ ಕಾಣುತ್ತಿಲ್ಲ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *