ಕಾಡಾನೆ ದಾಳಿಯಿಂದ ಓರ್ವನಿಗೆ ಗಂಭೀರ ಗಾಯ

ಕೊಡಗು: ಎರಡು ದಿನಗಳ ಹಿಂದೆ ಕೊಡಗು ಜಿಲ್ಲೆಯಲ್ಲಿ ಕಾಡಾನೆ ದಾಳಿಯಿಂದ ಕೆಂಚ ಎಂಬ ವ್ಯಕ್ತಿ ಗಂಭಿರವಾಗಿ ಗಾಯಗೊಂಡಿದ್ದಾರೆ. ವೀರಾಜಪೇಟೆ ತಾಲೂಕಿನ ದೊಡ್ಡರೇಷ್ಮೆ ಹಾಡಿಯಲ್ಲಿ ಘಟನೆ ನಡೆದಿದ್ದು‌ ಕೆಂಚನ ಬಲಗೈ ತುಂಡು ತುಂಡಾಗಿದೆ. ಆದರೆ ಅರಣ್ಯ ಇಲಾಖೆಯವರು ಕೇವಲ ಸಾವಿರ ರೂಗಳನ್ನು ನೀಡಿ ಕೈತೊಳೆದುಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. 70 ವರ್ಷದ ಕೆಂಚನನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿದೆಯಾದರೂ ಅಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿಲ್ಲ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಕುಟುಂಬದ ಮನವಿಗೆ ಸ್ಪಂದಿಸಿರುವ ಸಮಾಜ ಸೇವಕ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಆಸ್ಪತ್ರೆಗೆ ತೆರಳಿ 10,000 ರೂಗಳನ್ನು ಚಿಕಿತ್ಸೆಗಾಗಿ ನೀಡಿದ್ದಾರೆ. ಶೀಘ್ರ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚನೆ ಸಹ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸಂಕೇತ್ ಪೂವಯ್ಯ ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಒಂದು ವಾರದ ಹಿಂದೆ ಕಾಡಾನೆಯಿಂದ ಕಾಫಿ ಬೆಳೆಗಾರ ಮೋಹನ್ ದಾಸ್ ಎಂಬವವರು ಮೃತಪಟ್ಟ ಸಂದರ್ಭ ಮೂವರು ಅರಣ್ಯಾದಿಕಾರಿಗಳ ವಿರುದ್ದ ಎಫ್​​ಐಆರ್ ದಾಖಲು ಮಾಡಲಾಯಿತು. ಆದರೆ ಅವರನ್ನು ಬಂಧಿಸುವ ಕೆಲಸ ಆಗಿಲ್ಲ ಎಂದು ಸಂಕೇತ್ ಪೂವಯ್ಯ ಆರೋಪಿಸಿದ್ದಾರೆ.

0

Leave a Reply

Your email address will not be published. Required fields are marked *