ಹಿರಿಯ ನಟ ಅಂಕಲ್ ಲೋಕನಾಥ್ ಕಾಲವಶ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ (90) ನಿನ್ನೆ ರಾತ್ರಿ 12:15ಕ್ಕೆ ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಸು. 650ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಒಂದು ಸಾವಿರಕ್ಕೂ ಹೆಚ್ಚು ನಾಟಕಗಳಲ್ಲಿ ಅವರು ತಮ್ಮ ಕಲಾಸೇವೆಯನ್ನು ನಡೆಸಿದ್ದರು. 1970ರಲ್ಲಿ ತೆರೆಕಂಡಿದ್ದ ಸಂಸ್ಕಾರ ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ಅವರು ಪ್ರವೇಶಿಸಿದ್ದರು. ಭೀಮಾ ತೀರದಲ್ಲಿ ಮತ್ತು ಏಕೆ 56 ಅವರ ಅಭಿನಯದ ಕಡೆಯ ಚಿತ್ರಗಳಾಗಿವೆ. 

ಚಂದನವನದಲ್ಲಿ ಅಂಕಲ್ ಎಂದೇ ಹೆಸರಾಗಿದ್ದ ಅವರು, ಶಂಕರ್ ನಾಗ್ ಮತ್ತು ಅನಂತ್ ನಾಗ್ ಅಭಿನಯದ ಮಿಂಚಿನ ಓಟ ಚಿತ್ರದ ಮೂಲಕ ಈ ಖ್ಯಾತಿಗೆ ಪಾತ್ರವಾಗಿದ್ದರು. ನಂತರ ನೋಡಿ ಸ್ವಾಮಿ ನಾವಿರೋದೆ ಹೀಗೆ ಚಿತ್ರದಲ್ಲೂ ಅವರ ಅಭಿನಯ ಗಮನ ಸೆಳೆದಿತ್ತು. ನಾಗರಹಾವಿನ ಪ್ರಾಧ್ಯಾಪಕ, ರಾಜ್​ಕುಮಾರ್ ಅಭಿನಯದ ಬಂಗಾರದ ಪಂಜರದ ಅಪ್ಪನ ಪಾತ್ರ ಜನಮಾನಸದಲ್ಲಿ ಮರೆಯಾಗದೆ ನಿಂತಿವೆ

ರಂಗಭೂಮಿಯಲ್ಲಿ ಸಕ್ರಿಯವಾಗಿದ್ದ ಅವರು, ನಟರಂಗದ ಪ್ರಮುಖ ನಟನಾಗಿ ‘ಸಮುದಾಯ’  ‘ಸೂತ್ರಧಾರ’ ತಂಡಗಳ ಸುಮಾರು 1000 ಪ್ರದರ್ಶನಗಳಲ್ಲಿ ಭಾಗವಹಿಸಿದ್ದರು. ಕನ್ನಡ ಚಿತ್ರರಂಗದಲ್ಲಿ ಪೋಷಕ ಪಾತ್ರಗಳ ಮೂಲಕ ಲೋಕನಾಥ್ ಹೆಸರುವಾಸಿಯಾಗಿದ್ದರು. ಸೋಮವಾರ ಮಧ್ಯಾಹ್ನ 11 ರಿಂದ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಲೋಕನಾಥ್ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. 2 ಗಂಟೆಯವರೆಗೆ ಅಂತಿಮ ದರ್ಶನದ ನಂತರ ಸಂಜೆ 4 ಗಂಟೆಗೆ ಬನಶಂಕರಿಯಲ್ಲಿರುವ ಚಿತಾಗಾರದಲ್ಲಿ ಅಂತಿಮ ವಿಧಿವಿಧಾನ ನಡೆಸಲಾಗುತ್ತದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ಸಮುದಾಯದ ಹುತ್ತವ ಬಡಿದರೆ ಮತ್ತು ಗೆಲಿಲಿಯೋ ನಾಟಕಗಳ ಪ್ರಮುಖ ಪಾತ್ರಧಾರಿ. ಎರಡೂ ನಾಟಕಗಳು ಹೆಚ್ಚು ಪ್ರದರ್ಶನ ಗಳನ್ನು ಕಂಡ ನಾಟಕ; ಎಲ್ಲ ಪ್ರದರ್ಶನಗಳಲ್ಲೂ ಲೋಕನಾಥ್ ಅಭಿನಯಿಸಿದ್ದರು. ಅವರು ಬೆಂಗಳೂರು ಸಮುದಾಯದ ಪ್ರಥಮ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. ರಂಗಭೂಮಿ ಯ ಬಗ್ಗೆ ಅಪಾರ ಕಾಳಜಿಯನ್ನು ಇಟ್ಟುಕೊಂಡಿದ್ದ ಲೋಕನಾಥ್ ಅವರು, ಚಿತ್ರರಂಗದಲ್ಲಿ ಬಿಡುವು ಸಿಕ್ಕಾಗ ಅಥವಾ ರಂಗಭೂಮಿಯಲ್ಲಿ ಪ್ರಮುಖ ಪಾತ್ರ ಸಿಕ್ಕಾಗ, ಆದ್ಯತೆ ಮೇಲೆ ಅವರು ರಂಗಭೂಮಿಯಲ್ಲಿ ಸಕ್ರಿಯರಾಗುತಿದ್ದರು. ಅತ್ಯಂತ ಸ್ನೇಹ ಮಯಿ ಮತ್ತು ಶಿಸ್ತಿನ ಕಲಾವಿದರು ಲೋಕನಾಥ್. 650ಕ್ಕೂ ಹೆಚ್ಚಿನ ಸಿನೆಮಾಗಳಲ್ಲಿ ಅಭಿನಯಿಸಿರುವ ಲೋಕನಾಥ್, ಭೂತಯ್ಯನ ಮಗ ಅಯ್ಯು, ಮಿಂಚಿನ ಓಟ ಮುಂತಾದ ಸಿನೆಮಾಗಳಲ್ಲಿ ತಮ್ಮ  ಅಚ್ಚಳಿಯದ ಅಭಿನಯದಿಂದ ಪ್ರಖ್ಯಾತರಾಗಿದ್ದರು. ಅವರ ಅಗಲಿಕೆ ಸಮುದಾಯ ತಂಡಕ್ಕೆ ಹಾಗೂ ವೈಯಕ್ತಿಕವಾಗಿ ನನಗೆ ತುಂಬಲಾರದ ನಷ್ಟ. 90ರ ಅಂಚಿನಲ್ಲಿ ಅಗಲಿದ ಲೋಕನಾಥ್ ಅವರಿಗೆ ಸಮುದಾಯ ತಂಡದಿಂದ ಮತ್ತು ನನ್ನ ಕುಟುಂಬದ ಸದಸ್ಯರ ಪರವಾಗಿ ಅಂತಿಮ ನಮನಗಳು.

– ಗುಂಡಣ್ಣ ಚಿಕ್ಕಮಗಳೂರು

0

Leave a Reply

Your email address will not be published. Required fields are marked *