ನಿಗೂಢವಾಗಿ ಹೇಳಿದ್ರು ಟೆಸ್ಟ್​ ಕ್ರಿಕೆಟ್​ಗೂ ವಿದಾಯ…!

2014 ಡಿಸೆಂಬರ್ 30… ಅದು ಮೂರನೇ ಟೆಸ್ಟ್ ಪಂದ್ಯದ ಕೊನೆಯ ದಿನ. ಮೆಲ್ಬರ್ನ್ ಕ್ರೀಡಾಂಗಣ ಇತಿಹಾಸಕ್ಕೆ ಸಾಕ್ಷಿಯಾಗುತ್ತಿದೆ ಎಂದು ಅಂದುಕೊಂಡಿರಲಿಲ್ಲ. ಯಾಕಂದ್ರೆ ಮೂರನೇ ಟೆಸ್ಟ್ ಪಂದ್ಯ ಆಗಲೇ ಮುಗಿದಿತ್ತು.. ಸೂರ್ಯ ತನ್ನ ಎಂದಿನ ದಿನಚರಿ ಮುಗಿಸಿದ್ದ. ಟೀಮ್ ಇಂಡಿಯಾ ಆಟಗಾರರು ಪಂದ್ಯವನ್ನು ಡ್ರಾ ಮಾಡಿಕೊಂಡ ಸಂತೃಪ್ತಿಯಲ್ಲಿದ್ರು. ಆಸ್ಟ್ರೇಲಿಯಾ ಆಟಗಾರರು ಸರಣಿ ಗೆದ್ದ ಖುಷಿಯಲ್ಲಿದ್ರು. ದಿನವಿಡಿ ಪಂದ್ಯ ನೋಡಿದ್ದ ಅಭಿಮಾನಿಗಳು ಮನೆ ದಾರಿ ಹಿಡಿದಿದ್ರು. ಮೆಲ್ಬರ್ನ್ ಕ್ರೀಡಾಂಗಣದ ಸಿಬ್ಬಂದಿಗಳು ಅಂಗಣವನ್ನು ಕ್ಲೀನ್ ಮಾಡುತ್ತಿದ್ರು. ಕ್ರೀಡಾಪತ್ರಕರ್ತರು ಪಂದ್ಯದ ವರದಿ ಸಿದ್ದಪಡಿಸುತ್ತಿದ್ರು.

ಆದ್ರೆ ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಹೊಟೇಲ್ ಕೊಠಡಿಯಲ್ಲಿ ಏಕಾಂಗಿಯಾಗಿ ಕುಳಿತು ಯೋಚನಾ ಲಹರಿಯಲ್ಲಿದ್ರು. ಅಷ್ಟರಲ್ಲೇ ತನ್ನ ಟೆಸ್ಟ್ ಕ್ರಿಕೆಟ್ ಭವಿಷ್ಯದ ನಿರ್ಧಾರಕ್ಕೆ ಅಂತಿಮ ಫುಲ್ಸ್ಟಾಫ್ ಹಾಕಿಬಿಟ್ಟಿದ್ರು. ಕಣ್ಣೀರಿನೊಂದಿಗೆ ತನ್ನ ಆಪ್ತಮಿತ್ರ ಸುರೇಶ್ ರೈನಾಗೆ ನಿರ್ಧಾರವನ್ನು ಮೊದಲು ಹೇಳಿದ್ರು. ಬಳಿಕ ದೂರವಾಣಿ ಮೂಲಕ ಬಿಸಿಸಿಐ ಕಾರ್ಯದರ್ಶಿ ಸಂಜಯ್ ಪಟೇಲ್ ತನ್ನ ನಿರ್ಧಾರವನ್ನು ತಿಳಿಸಿದ್ರು. ಆಗ ಸಂಜಯ್ ಪಟೇಲ್ ಧೋನಿಯವರನ್ನು ವಿಚಾರಿಸಿಕೊಂಡು ನಿರ್ಧಾರದ ಬಗ್ಗೆ ಇನ್ನೊಂದು ಸಲ ಯೋಚನೆ ಮಾಡು ಅಂತ ಸಲಹೆ ನೀಡಿದ್ರು. ಎರಡೇ ಎರಡು ನಿಮಿಷಗಳಲ್ಲಿ ನನ್ನ ನಿರ್ಧಾರವನ್ನು ಹೇಳುತ್ತೇನೆ ಎಂದು ಧೋನಿ ಫೋನ್ ಇಟ್ರು. ತಕ್ಷಣವೇ ಹೊಟೇಲ್ ಕೊಠಡಿಗೆ ಸಹ ಆಟಗಾರರನ್ನು ಬರಮಾಡಿಕೊಂಡ್ರು. ಎಲ್ಲರೂ ಪಂದ್ಯದ ಬಗ್ಗೆ ನಾಯಕ ಏನು ಹೇಳುತ್ತಿರಬೇಕು ಎಂದು ಅಂದುಕೊಂಡಿದ್ರು. ಆದ್ರೆ ಎಲ್ಲರ ಲೆಕ್ಕಾಚಾರಗಳು ಬುಡಮೇಲು ಆಗಿದ್ದವು.

ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳುತ್ತಿದ್ದೇನೆ. ಟೆಸ್ಟ್ ಕ್ರಿಕೆಟ್ನಲ್ಲಿ ಇನ್ನು ಮುಂದೆ ನಿಮ್ಮ ಜತೆ ಭಾಗಿಯಾಗಿರುವುದಿಲ್ಲ. . ಏಕದಿನ ಮತ್ತು ಟಿ-ಟ್ವೆಂಟಿ ಕ್ರಿಕೆಟ್ನಲ್ಲಿ ನಿಮ್ಮ ಜತೆ ಭಾಗಿಯಾಗಿರುತ್ತೇನೆ. ಆಲ್ ದಿ ಬೆಸ್ಟ್.. ಈ ಮಾತುಗಳನ್ನು ಹೇಳಿದಾಗ ಧೋನಿ ಗದ್ಗದಿತರಾಗಿದ್ರು. ಧೋನಿಯ ಮಾತುಗಳನ್ನು ಕೇಳಿದ ಸಹ ಆಟಗಾರರು ಒಂದು ಕ್ಷಣ ಆಘಾತಗೊಂಡ್ರು. ಜಸ್ಟ್ 120 ಸೆಕೆಂಡ್ಗಳಲ್ಲಿ ಧೋನಿ ತನ್ನ ನಿರ್ಧಾರವನ್ನು ಸಹ ಆಟಗಾರರಿಗೆ ಹೇಳಿದ್ರು. ಬಳಿಕ ಧೋನಿ ಬಿಸಿಸಿಐ ಕಾರ್ಯದರ್ಶಿ ಸಂಜಯ್ ಪಾಟೀಲ್ಗೆ ನನ್ನ ನಿರ್ಧಾರ ಅಚಲ ಎಂದಷ್ಟೇ ಹೇಳಿ ಫೋನ್ ಕಟ್ ಮಾಡಿದ್ರು. ಕೇವಲ ಹತ್ತು ಹದಿನೈದು ನಿಮಿಷಗಳಲ್ಲಿ ತನ್ನ ವರ್ಣ ರಂಚಿತ ಕ್ರಿಕೆಟ್ ಬದುಕಿಗೆ ಧೋನಿ ವಿದಾಯ ಹೇಳುವ ಕೆಲಸವನ್ನು ಪೂರ್ಣಗೊಳಿಸಿದ್ರು. ಅಲ್ಲಿ ಯಾವುದೇ ನಟನೆ ಇರಲಿಲ್ಲ. ಒಲೈಕೆ ಇರಲಿಲ್ಲ. ಏನಿದ್ರೂ ನೇರ ನೇರ ಮಾತು… ಅಷ್ಟರ ಮಟ್ಟಿಗೆ ಧೋನಿ ಪರ್ಫೆಕ್ಟ್.

ಅಂದ ಹಾಗೇ, ಧೋನಿಯ ಈ ನಿರ್ಧಾರದ ಹಿಂದೆ ಹಲವಾರು ಕಾರಣಗಳಿವೆ. ಇದು ಏಕಾಏಕಿಯಾಗಿ ತೆಗೆದುಕೊಂಡ ನಿರ್ಧಾರವಲ್ಲ. ಬಹಳಷ್ಟು ಯೋಚನೆ ಮಾಡಿ ಕೈಗೊಂಡ ನಿರ್ಧಾರವಾಗಿದೆ. ಲೆಕ್ಕಾಚಾರ ಹಾಕಿಕೊಂಡೇ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಮುಖ್ಯವಾಗಿ ಮಹೇಂದ್ರ ಸಿಂಗ್ ಧೋನಿ ಮಾನಸಿಕವಾಗಿ ಧೃತಿಗೆಟ್ಟಿದ್ದಾರೆ. ವಿದೇಶಿ ನೆಲದಲ್ಲಿ ಸಾಲು ಸಾಲು ಸೋಲು ಕಂಗೆಡುವಂತೆ ಮಾಡಿದೆ. ಕೂಲ್ ಆಗಿ ತಂಡವನ್ನು ಮುನ್ನಡೆಸುತ್ತಿದ್ದ ಧೋನಿಗೆ ಎಲ್ಲೋ ಎಡವುತ್ತಿದ್ದೇನೆ ಎಂದು ಅನ್ನಿಸಿರಬೇಕು. ಅದ್ರಲ್ಲೂ ವಿರಾಟ್ ಕೊಹ್ಲಿಯ ಅಬ್ಬರ ಒಂದು ಕಡೆಯಾದ್ರೆ, ಟೀಮ್ ಇಂಡಿಯಾದ ಡ್ರೆಸಿಂಗ್ ರೂಂನ ವಾತಾವರಣ ಮೊದಲಿನಂತಿಲ್ಲ ಎಂಬುದನ್ನು ಧೋನಿ ಚೆನ್ನಾಗಿ ಅರಿತುಕೊಂಡಿದ್ರು.

ಅದ್ರಲ್ಲೂ ಹೊಸ ಹುಡುಗರು ತನ್ನ ಹಿಡಿತಕ್ಕೆ ಸಿಗುತ್ತಿಲ್ಲ ಅನ್ನೋ ಭಾವನೆ ಬಂದುಬಿಟ್ಟಿದೆ. ಮತ್ತೊಂದೆಡೆ, ತರಬೇತುದಾರ ಡಂಕನ್ ಫ್ಲೇಚರ್ ಪವರ್ ಕೂಡ ಕಡಿಮೆಯಾಗಿತ್ತು. ತಂಡದ ನಿರ್ದೇಶಕರಾಗಿದ್ದ ರವಿಶಾಸ್ತ್ರಿಯ ವಿರಾಟ್ ಕೊಹ್ಲಿಗೆ ಹೆಚ್ಚು ಸಪೋರ್ಟ್ ಮಾಡುತ್ತಿದ್ರು. ಅಷ್ಟೇ ಅಲ್ಲ. ಬಿಸಿಸಿಐ ಅಧ್ಯಕ್ಷರಾಗಿದ್ದ ಶ್ರೀನಿವಾಸನ್ ಶ್ರೀರಕ್ಷೆ ಕೂಡ ಇಲ್ಲ. ಜತೆಗೆ ಐಪಿಎಲ್ ಸ್ಟಾಟ್ ಫಿಕ್ಸಿಂಗ್, ಇಂಡಿಯನ್ ಸಿಮೆಂಟ್ ಉಪಾಧ್ಯಕ್ಷ ಹುದ್ದೆಯ ರಂಪಾಟ ಹೀಗೆ ಸಾಕಷ್ಟು ಆರೋಪಗಳು ಧೋನಿಯನ್ನು ಜರ್ಜರಿತಗೊಳಿಸುವಂತೆ ಮಾಡಿದ್ದವು. ಹಾಗೇ ಕಳಪೆ ಫಾರ್ಮ್, ಗಾಯದ ಸಮಸ್ಯೆ, ಫಿಟ್ ಸಮಸ್ಯೆ ಹೀಗೆ ಧೋನಿಗೆ ಕ್ರಿಕೆಟ್ಟೇ ಸಾಕು ಅನ್ನೋ ಮನೋಭಾವನೆ ಬಂದುಬಿಟ್ಟಿತ್ತು. ಅದಕ್ಕಾಗಿಯೇ ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳಿದ್ರು.

ಅದೇನೇ ಇರಲಿ, ಧೋನಿಯ ನಾಯಕತ್ವ ಅರ್ಥಪೂರ್ಣವಾಗಿ..ಪರಿಪಕ್ವವಾಗಿದೆ. ರಾಂಚಿಯ ಸಣ್ಣಪಟ್ಟಣದ ಹುಡುಗನೊಬ್ಬ ವಿಶ್ವ ಕ್ರಿಕೆಟ್​ ಶ್ರೇಷ್ಠ ನಾಯಕನಾಗುತ್ತಾನೆ ಅಂತ ಯಾರು ಕೂಡ ಅಂದುಕೊಂಡಿರಲಿಲ್ಲ. ಫುಟ್ಬಾಲ್ ಪ್ರೇಮಿಯಾಗಿದ್ದ ಧೋನಿ ಅಕಸ್ಮಿಕವಾಗಿ ಕ್ರಿಕೆಟ್ನತ್ತ ಆಕರ್ಷಿತರಾಗಿದ್ರು. ಶಾಲಾ ಕ್ರಿಕೆಟ್ ತಂಡಕ್ಕೆ ವಿಕೆಟ್ ಕೀಪರ್ ಇರಲಿಲ್ಲ ಅನ್ನೋ ಕಾರಣಕ್ಕೆ ಫುಟ್ಬಾಲ್ ಗೋಲ್ ಕೀಪರ್ ಆಗಿದ್ದ ಧೋನಿ ಕ್ರಿಕೆಟ್ನಲ್ಲಿ ವಿಕೆಟ್ ಕೀಪರ್ ಅದ್ರು. ನಂತರ ಹಿಂತಿರುಗಿ ನೋಡಲೇ ಇಲ್ಲ. 2004ರಲ್ಲಿ ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಧೋನಿ, ಟೀಮ್ ಇಂಡಿಯಾಗೆ ವಿಕೆಟ್ ಕೀಪರ್ ಕೊರತೆಯನ್ನು ನೀಗಿಸಿದ್ರು.

ಹೊಡಿಬಡಿ ಆಟದ ಮೂಲಕವೇ ಗಮನ ಸೆಳೆದ ಧೋನಿ ಟೀಮ್ ಇಂಡಿಯಾದ ಖಾಯಂ ಅಟಗಾರರಾದ್ರು. ಮೊದಲ ನಾಯಕತ್ವದಲ್ಲೇ ಟಿ-ಟ್ವೆಂಟಿ ವಿಶ್ವಕಪ್ ಗೆದ್ದ ಧೋನಿಗೆ ತಾನಾಗಿಯೇ ಏಕದಿನ ಕ್ರಿಕೆಟ್ನ ಕಪ್ತಾನನಾಗುವ ಯೋಗವೂ ಬಂತು. ಹಾಗೇ ಹಿರಿಯ ಆಟಗಾರರ ಸಲಹೆಯಂತೆ ಟೆಸ್ಟ್ ಕ್ರಿಕೆಟ್ಗೂ ನಾಯಕನಾದ್ರು. ಅಷ್ಟೇ ಅಲ್ಲ, ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ಧೋನಿ ತಂಡವನ್ನು ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ನಂಬರ್ 1 ಪಟ್ಟಕ್ಕೇರಿಸಿದ್ರು.

ಟೆಸ್ಟ್​ ಕ್ರಿಕೆಟ್​ನಲ್ಲಿ ಎಂಎಸ್​ಡಿ ಸಾಧನೆ

ಕಳೆದ ಹತ್ತು ವರ್ಷಗಳಲ್ಲಿ 90 ಟೆಸ್ಟ್ ಪಂದ್ಯಗಳನ್ನು ಆಡಿರುವ ಧೋನಿ, 60 ಟೆಸ್ಟ್ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. 27 ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ. 15 ಪಂದ್ಯಗಳನ್ನು ಡ್ರಾ ಮಾಡಿಕೊಂಡಿರುವ ಧೋನಿ, 18 ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದಾರೆ. ಈ ಮೂಲಕ ಟೀಮ್ ಇಂಡಿಯಾದ ಶ್ರೇಷ್ಠ ನಾಯಕ ಎಂಬುದನ್ನು ಸಾಬೀತುಪಡಿಸಿದ್ದಾರೆ. ಇನ್ನು ವಿದೇಶಿ ನೆಲದಲ್ಲಿ ಧೋನಿ ಸಾಧನೆ ಅಷ್ಟಕ್ಕಷ್ಟೇ. 30 ಪಂದ್ಯಗಳಲ್ಲಿ ಮುನ್ನಡೆಸಿರುವ ಧೋನಿ 6 ಪಂದ್ಯಗಳಲ್ಲಿ ಮಾತ್ರ ಜಯ ಸಾಧಿಸಿದ್ದಾರೆ. 15 ಪಂದ್ಯಗಳಲ್ಲಿ ಸೋಲು, 9 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದಾರೆ. ಒಟ್ಟಾರೆ, 90 ಟೆಸ್ಟ್ ಪಂದ್ಯಗಳನ್ನು ಆಡಿರುವ ಧೋನಿ, 4876 ರನ್ ಪೇರಿಸಿದ್ದಾರೆ. ಇದರಲ್ಲಿ ಆರು ಶತಕ ಹಾಗೂ 33 ಅರ್ಧಶತಕಗಳಿವೆ. 224 ರನ್ ದಾಖಲಿಸಿರುವುದು ಧೋನಿಯ ಗರಿಷ್ಠ ರನ್. ಇನ್ನು ವಿಕೆಟ್ ಕೀಪರ್ ಆಗಿ 38 ಸ್ಟಂಪ್ ಹಾಗೂ 256 ಕ್ಯಾಚ್​ಗಳನ್ನು ಹಿಡಿದಿದ್ದಾರೆ.

0

Leave a Reply

Your email address will not be published. Required fields are marked *