ಕೊಡಗಿಗೆ ನೆರವಾಗಲು ಸಾವಿತ್ರಿ ಬಾಯಿ ಫುಲೆ ಚಿತ್ರ ಪ್ರದರ್ಶನ

ಬೆಂಗಳೂರು: ಕೊಡಗಿಗಾಗಿ ರಂಗ ಸಪ್ತಾಹ ನಡೆಸುವ ಮೂಲಕ ಕೊಡಗಿನ ಸಂತ್ರಸ್ತರ 719 ಮಕ್ಕಳಿಗೆ ನೆರವಾಗಿದ್ದ ಪೀಪಲ್​​ ಫಾರ್ ಪೀಪಲ್ ತಂಡ ಬೆಂಗಳೂರಿನಲ್ಲಿ ಇದೇ ತಿಂಗಳ 23ರಂದು ಸಾವಿತ್ರಿ ಬಾಯಿ ಫುಲೆ ಚಲನಚಿತ್ರ ಪ್ರದರ್ಶನವನ್ನು ಆಯೋಜಿಸಿದೆ. ಕರ್ನಾಟಕ ಚಲನಚಿತ್ರ ಕಲಾವಿದರ ಒಕ್ಕೂಟದ ಆಡಿಟೋರಿಯಂ, ಚಾಮರಾಜಪೇಟೆ, ಬೆಂಗಳೂರಿನಲ್ಲಿ ಸಂಜೆ 6 ಗಂಟೆಗೆ ಚಿತ್ರ ಪ್ರದರ್ಶನ ಆಗಲಿದೆ.

ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟ ವಸ್ತುವೊಂದನ್ನು ಸಾವಿತ್ರಿ ಬಾಯಿ ಫುಲೆ ಚಿತ್ರದಲ್ಲಿ ನಿರ್ವಹಿಸಲಾಗಿದೆ. ಸಾವಿತ್ರಿಬಾಯಿ ಫುಲೆ 1831-1897ರವರೆಗೆ ಜೀವಿಸಿದ್ದರು. ದಲಿತರು, ಬಡವರು, ದೀನದಲಿತರಿಗಾಗಿ ಶಿಕ್ಷಣ ನೀಡುವ ಮೂಲಕ ಸಾಮಾಜಿಕ ಕ್ರಾಂತಿಯನ್ನು ನಡೆಸಿದ ಸಾಧಕಿಯಾಗಿ ಅವರು ಇತಿಹಾಸದಲ್ಲಿ ದಾಖಲಾಗಿದ್ದಾರೆ. ಸಾಂಪ್ರದಾಯಿಕ ಸಮಾಜದಲ್ಲಿ ಕೆಳ ವರ್ಗದವರಿಗೆ ಶಿಕ್ಷಣವನ್ನು ನಿರಾಕರಿಸಲಾಗಿತ್ತು. ಮನು ಧರ್ಮಶಾಸ್ತ್ರದ ಪ್ರಕಾರ ದಲಿತರು ಮತ್ತು ಮಹಿಳೆಯರು ಶಿಕ್ಷಣ ಪಡೆಯುವಂತಿರಲಿಲ್ಲ. ಇದನ್ನು ಯಥಾವತ್ತಾಗಿ ಪಾಲಿಸಿಕೊಂಡು ಬರಲಾಗುತ್ತಿತ್ತು. ಆದರೆ, ಜಡ ಸಂಪ್ರದಾಯಗಳನ್ನು ಧಿಕ್ಕರಿಸಿದ ಸಾವಿತ್ರಿ ಬಾಯಿ ಫುಲೆ ಬಡವರು, ಶೋಷಿತರು, ದಲಿತರು, ಮಹಿಳೆಯರಿಗೆ ಶಿಕ್ಷಣ ಕೊಟ್ಟರು. ಈ ಸಮಾಜ ಸುಧಾರಣೆಯನ್ನು ವಿರೋಧಿಸಿದ ಪುರೋಹಿತ ಸಮಾಜದಿಂದ ಸಾವಿತ್ರಿಯವರು ತೀವ್ರ ವಿರೋಧ, ಮಾನಸಿಕ ಮತ್ತು ದೈಹಿಕ ಕಿರುಕುಳಕ್ಕೂ ಒಳಗಾಗುವ ದೃಶ್ಯಗಳನ್ನು ಚಿತ್ರ ಒಳಗೊಂಡಿದೆ. ತಾರಾ, ಸುಚೇಂದ್ರ ಪ್ರಸಾದ್ ಮೊದಲಾದ ಪ್ರತಿಭಾವಂತರ ಪಡೆಯೇ ಚಿತ್ರದಲ್ಲಿ ದುಡಿದಿದೆ.

ಸರಜೂ ಕಾಟ್ಕರ್ ಅವರ ಕಾದಂಬರಿ ಆಧರಿಸಿ ವಿಶಾಲ್ ರಾಜ್ ನಿರ್ದೇಶಿಸಿರುವ ಈ ಚಿತ್ರವನ್ನು ಬಸವರಾಜ್ ವಿ ಭೂತಾಳಿಯವರು ನಿರ್ಮಿಸಿದ್ದಾರೆ. ಸಂಗೀತ ಕಟ್ಟಿ ಕುಲಕರ್ಣಿ ಸಂಗೀತ, ಶಿರೀಶ ಜೋಷಿಯವರ ಸಂಭಾಷಣೆ, ಸತೀಶ್ ಕುಲಕರ್ಣಿಯವರ ಸಾಹಿತ್ಯ, ನಾಗರಾಜ್ ಆದೋನಿಯವರ ಛಾಯಾಗ್ರಹಣ, ಬಿ ಎಸ್ ಕೆಂಪರಾಜು ಅವರ ಸಂಕಲನ, ಡಾ.ನಾಗರಾಜ್ ಅವರ ಕಲೆ ಈ ಚಿತ್ರಕ್ಕಿದೆ. ಕೆಂಪೇಗೌಡ ಪಾಟೀಲ್, ಗಗನ್​​ದೀಪ್, ವಿನಾಯಕ ಬೋಗುರ ಅವರು ಸಹಾಯಕ ನಿರ್ದೇಶಕರಾಗಿ ಈ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ.

ಭಾರತದ ಮೊಟ್ಟ ಮೊದಲ ಶಿಕ್ಷಕಿಯಾದ ಸಾವಿತ್ರಿ ಬಾಯಿ ಫುಲೆಯವರು ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಎಂದೇ ಪರಿಗಣಿತರಾಗಿದ್ದಾರೆ. ಅವರು 1831ರಲ್ಲಿ ಮಹಾರಾಷ್ಟ್ರದ ಸತಾರ ಜಿಲ್ಲೆಯ ನೈಗಾಂನ್​​ನಲ್ಲಿ ಜನಿಸಿದರು. ಬಾಲ್ಯದಲ್ಲೇ ಅವರಿಗೆ ಜ್ಯೋತಿಬಾ ಫುಲೆಯವರೊಂದಿಗೆ ವಿವಾವನ್ನು ಮಾಡಲಾಗಿತ್ತು. ಪತ್ನಿಯ ಎಲ್ಲ ಕೈಂಕರ್ಯಗಳಿಗೂ ಹೆಗಲು ಕೊಟ್ಟವರು ಜ್ಯೋತಿಬಾ. ಆಡಿಕೊಂಡಿರಬೇಕಿದ್ದ 8ರ ಹರೆಯದಲ್ಲಿದ್ದ ಸಾವಿತ್ರಿ, 13 ವರ್ಷದ ಜ್ಯೋತಿಬಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

ಸ್ವತಃ ಜ್ಯೋತಿಬಾ ಸಾವಿತ್ರಿಯವರಿಗೆ ಗುರುಗಳಾದರು. 1847ರಲ್ಲಿ ಶಿಕ್ಷಕಿಯಾಗಿ ತರಬೇತಿ ಪಡೆದರು. ಮೊಟ್ಟ ಮೊದಲ ಶಿಕ್ಷಕಿಯಾಗಿ ಅಕ್ಷರದವ್ವ ಎಂದೇ ಅವರು ಹೆಸರಾದರು. ಇವರನ್ನು ಆಧುನಿಕ ಶಿಕ್ಷಣದ ತಾಯಿ ಎಂದೇ ಕರೆಯಲಾಗುತ್ತದೆ. 150 ವರ್ಷಗಳ ಹಿಂದೆಯೇ ಶಾಲೆ ತೊರೆದ ಮಕ್ಕಳಿಗೆ ಪ್ರೋತ್ಸಾಹಧನ ನೀಡುವ ಮೂಲಕ ಶಿಕ್ಷಣ ಪಡೆಯಲು ಉತ್ತೇಜಿಸುವ ಕೆಲಸವನ್ನು ಇವರು ಮಾಡಿದ್ದಾರೆ. ಆಧುನಿಕ ಕಾಲದಲ್ಲಿ ಬಿಸಿಯೂಟ ಯೋಜನೆಯನ್ನು ನಾವಿಂದು ಕಾಣುತ್ತಿದ್ದೇವೆ. ಆದರೆ, ಒಂದೂವರೆ ಶತಮಾನಗಳಷ್ಟು ಹಿಂದೆಯೇ ಶಿಕ್ಷಣಕ್ಕೆ ಯಾವೆಲ್ಲ ಬಗೆಯಲ್ಲಿ ಉತ್ತೇಜನ ನೀಡಲು ಸಾಧ್ಯವೋ ಅವೆಲ್ಲ ಕ್ರಮಗಳನ್ನು ಅವರು ಜಾರಿಗೆ ತಂದಿದ್ದರು. ವಿಧವೆಯರಿಗೆ ತಲೆ ಬೋಳಿಸುವ ಕೆಟ್ಟ ಸಂಪ್ರದಾಯವನ್ನು ಅವರು ವಿರೋಧಿಸಿ ಸಾಂಪ್ರದಾಯಿಕ ಸಮಾಜವನ್ನು ಎದುರುಹಾಕಿಕೊಂಡರು.

ವಿಧವೆಯರಿಗೆ ಮತ್ತು ಯಾವುದೋ ಕಾರಣದಿಂದ ಗರ್ಭಿಣಿಯಾದವರಿಗೆ ಆಶ್ರಮಗಳನ್ನು ಸ್ಥಾಪಿಸಿ, ಜೀವನ ನಡೆಸಲು ಅವಕಾಶ ಕೊಟ್ಟಿದ್ದರು. ಸತ್ಯಶೋಧಕ ಸಮಾಜದ ಅಧ್ಯಕ್ಷೆಯಾಗಿದ್ದ ಅವರು, ಪುರೋಹಿತರಿಲ್ಲದೇ ಮದುವೆಗಳನ್ನು ಮಾಡುವ ಮೂಲಕ ಮತ್ತೊಂದು ಹಂತದಲ್ಲಿ ಕ್ರಾಂತಿಕಾರಕ ಹೆಜ್ಜೆಗಳನ್ನು ಇಟ್ಟ ದಿಟ್ಟ ಮಹಿಳೆ. ಚಿತ್ರದಲ್ಲಿ ಅವರು ಶಿಕ್ಷಣ ಕೊಡಲು ಮುಂದಾದಾಗ ಎದುರಾದ ಅಡ್ಡಿ ಆತಂಕಗಳೇನು? ಅವುಗಳನ್ನು ಮೆಟ್ಟಿ ನಿಂತು ಶಿಕ್ಷಣ ಕೊಟ್ಟ ಸಂಗತಿಗಳು ಯಾವುವು? ಎಂಬ ಅಂಶಗಳನ್ನು ಮನಮುಟ್ಟುವಂತೆ ಚಿತ್ರಿಸಲಾಗಿದೆ. ಸಾವಿತ್ರಿ ಬಾಯಿ ಫುಲೆ ಪಾತ್ರದಲ್ಲಿ ತಾರಾ ಅನುರಾಧ ಪರಕಾಯ ಪ್ರವೇಶ ಮಾಡಿದಂತೆ ನಟಿಸಿದ್ದಾರೆ. ಜೊತೆಗೆ ಉತ್ತರ ಕರ್ನಾಟದ ಭಾಷೆಯ ಸೊಗಡು ನೋಡುಗರನ್ನು ಸೆಳೆಯುತ್ತದೆ. ಇಂತಹ ವಿಶಿಷ್ಟತೆಗಳಿರುವ ಈ ಚಿತ್ರವನ್ನು ಕಣ್ತುಂಬಿಕೊಳ್ಳಬಹುದು.

ನಾಡಿನ ವಿಚಾರವಾದಿಗಳು, ಪ್ರಗತಿಪರ ಹೋರಾಟಗಾರರರು, ದಲಿತಪರ ಚಿಂತಕರು ಮತ್ತು ನಾಡಿನ ವಿವಿಧ ಕ್ಷೇತ್ರದ ಗಣ್ಯರು ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ. ಜೊತೆಗೆ ಕೊಡಗಿನ ಸಂತ್ರಸ್ತ ಕುಟುಂಬಗಳು ಕೂಡ ಹಾಜರಿದ್ದು, ಇದುವರೆಗೆ ಕೊಡಗಿನಲ್ಲಿ ಆಗಿರುವುದು ಏನು? ಆಗಬೇಕಿರುವುದು ಏನು? ಎಂಬ ಸಂಗತಿಗಳನ್ನು ತೆರೆದೆಡಲಿದ್ದಾರೆ. ಪ್ರದರ್ಶನದಲ್ಲಿ ಪಾಲ್ಗೊಳ್ಳುವವರು ಪೀಪಲ್ಸ್  ಫಾರ್ ಪೀಪಲ್​ ತಂಡದವರನ್ನು ಸಂಪರ್ಕಿಸಬಹುದು. ಸಂಪರ್ಕ ಸಂಖ್ಯೆ 9008033336/9916486566

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *