ಎಲ್ಲೆಡೆ ಕೇಸರೀಕರಣಕ್ಕೆ ಮುಂದಾದ ಯುಪಿ ಸಿಎಂ ಆದಿತ್ಯನಾಥ್

ಲಖ್ನೋ: ಉತ್ತರ ಪ್ರದೇಶದಲ್ಲಿ ಎಲ್ಲವನ್ನೂ ಕೇಸರೀಕರಣಗೊಳಿಸಲಾಗುತ್ತಿದೆ. ಇದಕ್ಕೆ ಸಿಎಂ ಆದಿತ್ಯನಾಥ್ ಅವರೇ ಸ್ವತಃ ಚಾಲನೆ ನೀಡಿದ್ದು, ತಮ್ಮ ಕುರ್ಚಿ ಹಾಗೂ ಕಾರಿನ ಸೀಟಿನಲ್ಲಿ ಕೇಸರಿ ಟವೆಲ್ ಹಾಕಿಕೊಳ್ಳುವ ಮೂಲಕ ಕೇಸರೀಕರಣಕ್ಕೆ ಚಾಲನೆ ನೀಡಿದ್ದರು. ಅದಾದ ನಂತರ ಹಂತಹಂತವಾಗಿ ಆರಂಭವಾಗಿದ್ದ ಕೇಸರೀಕರಣ ಪ್ರಕ್ರಿಯೆಯನ್ನು ಇನ್ನಷ್ಟು ತೀವ್ರಗೊಳಿಸಿರುವ ಸರ್ಕಾರ, ಇದೀಗ ಸರ್ಕಾರೀ ಪುಸ್ತಕಗಳು, ಶಾಲಾ ವಿದ್ಯಾರ್ಥಿಗಳ ಬ್ಯಾಗುಗಳು ಹಾಗೂ ಬಸ್ಸುಗಳಿಗೂ ಕೇಸರಿ ಬಣ್ಣ ಬಳಿಯತೊಡಗಿದೆ.

ನಿನ್ನೆಯಷ್ಟೇ ರಾಜ್ಯ ರಸ್ತೆ ಸಾರಿಗೆ ನಿಗಮದ ಕೇಸರಿ ಲೇಪಿತ 50 ಬಸ್​​ಗಳಿಗೆ ಚಾಲನೆ ನೀಡಿದ್ದರು. ಸಂಕಲ್ಪ್ ಸೇವಾ ಹೆಸರಿನ ಈ ಬಸ್ಸುಗಳು ಗ್ರಾಮೀಣ ಭಾಗಗಳಿಗೆ ಸಂಪರ್ಕ ಒದಗಿಸಲಿವೆ. ಬಸ್ ಹಸ್ತಾಂತರ ಸಮಾರಂಭ ಸಂಪೂರ್ಣವಾಗಿ ಕೇಸರಿಮಯವಾಗಿದ್ದಲ್ಲದೇ, ಬಸ್ಸುಗಳಷ್ಟೇ ಅಲ್ಲದೇ, ಅವುಗಳ ಪರದೆಗಳಿಗೆ ಕೂಡ ಕೇಸರಿ ಬಣ್ಣ ಬಳಿದು, ಕೇಸರಿ ಬಣ್ಣದ ಬಲೂನುಗಳಿಂದಲೇ ವಾಹನಗಳನ್ನು ಅಲಂಕರಿಸಲಾಗಿತ್ತು. ಇನ್ನಷ್ಟು ಕೇಸರಿ ಬಸ್​​ಗಳನ್ನು ರಸ್ತೆಗೆ ಇಳಿಸಲು ರಾಜ್ಯ ಸಾರಿಗೆ ಇಲಾಖೆ ಸಿದ್ಧತೆ ನಡೆಸಿದೆ.

ಇವೆಲ್ಲದರ ನಡುವೆ ಪ್ರಾಥಮಿಕ ಮಕ್ಕಳ ಮನಸಿನಲ್ಲೂ ಕೇಸರಿ ಬಣ್ಣದ ಅಚ್ಚೊತ್ತುವುದಕ್ಕೆ ಪ್ರಾಥಮಿಕ ಶಿಕ್ಷಣ ಇಲಾಖೆ ಕಾರ್ಯತಂತ್ರಗಳನ್ನು ರೂಪಿಸಿದೆ. ಇದರ ಮುಂದುವರೆದ ಭಾಗವಾಗಿ ಮಾಜಿ ಸಿಎಂ ಅಖಿಲೇಶ್ ಯಾದವ್ ಭಾವಚಿತ್ರಗಳನ್ನು ಮುದ್ರಿಸಿ ವಿತರಿಸಲಾಗಿದ್ದ ಬ್ಯಾಗ್​ಗಳನ್ನು ಹಿಂಪಡೆದು ಕೇಸರಿ ಬಣ್ಣದ ಬ್ಯಾಗುಗಳನ್ನು ನೀಡಲಿದೆ.

ಇನ್ನು ಆಗಸ್ಟ್ 29ರಂದು ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಲಕ್ಷ್ಮಣ್ ಮತ್ತು ರಾಣಿ ಲಕ್ಷ್ಮಿ ಬಾಯ್ ಪ್ರಶಸ್ತಿಗಳನ್ನು ವಿತರಿಸಲಾಗಿತ್ತು. ಈ ಸಮಾರಂಭದಲ್ಲಿ ನೀಡಲಾದ ಪ್ರಮಾಣ ಪತ್ರಗಳಿಗೂ ಕೇಸರಿ ಬಣ್ಣವನ್ನೇ ಬಳಿಯಲಾಗಿತ್ತು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದ ಸರ್ಕಾರಿ ಅಧಿಕಾರಿಗಳು ಪ್ರಶಸ್ತಿ ವಿಜೇತರ ವಿವರಗಳಿರುವ ಪುಸ್ತಕವನ್ನೂ ಕೇಸರಿಮಯಗೊಳಿಸಿದ್ದರು.

ಉಳಿದಂತೆ ಸರ್ಕಾರದ ಕೃಷಿ ಸಾಲ ಮನ್ನಾ ಯೋಜನೆಯ ಫಲಾನುಭವಿಗಳಿಗೆ ನೀಡಿರುವ ಪ್ರಮಾಣಪತ್ರಗಳಿಗೂ ಕೇಸರಿಯ ಲೇಪನ ನೀಡಲಾಗಿದೆ. ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರಕ್ಕೆ 100 ದಿನ ಮತ್ತು ಆರು ತಿಂಗಳು ತುಂಬಿದ ಸಂದರ್ಭದಲ್ಲಿ ಬಿಡುಗಡೆ ಮಾಡಿದ್ದ ಸ್ಮರಣ ಸಂಚಿಕೆಗಳು ಕೂಡ ಕೇಸರಿಯಲ್ಲಿ ಕಂಗೊಳಿಸಿದ್ದವು.

ಮಾಹಿತಿ ಇಲಾಖೆಯ ಡೈರಿ ಮುಖಪುಟಕ್ಕೂ ಕೇಸರಿ ಬಣ್ಣವನ್ನೇ ಮೆತ್ತಲಾಗಿದೆ. ಇದರೊಂದಿಗೆ ದಿವಂಗತ ದೀನ್ ದಯಾಳ್ ಉಪಾಧ್ಯಾಯ, ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಆದಿತ್ಯನಾಥ್ ಅವರ ಚಿತ್ರಗಳನ್ನೂ ಮುದ್ರಿಸಲಾಗಿದೆ. ಈ ಮೂಲಕ ರಾಜ್ಯದ ಎಲ್ಲ ಸರ್ಕಾರಿ ಯೋಜನೆಗಳು, ಸೌಲಭ್ಯಗಳಿಗೂ ಕೇಸರಿಯನ್ನು ವ್ಯವಸ್ಥಿತವಾಗಿ ಬಳಿಯಲಾಗುತ್ತಿದೆ.

ಅಖಿಲೇಶ್ ಯಾದವ್ ಸಿಎಂ ಆಗಿದ್ದ ಅವಧಿಯಲ್ಲಿ ಕೆಂಪು ಬಣ್ಣದ ಡೈರಿಗಳನ್ನು ಉತ್ತರಪ್ರದೇಶದಲ್ಲಿ ಹಂಚಲಾಗುತ್ತಿತ್ತು. ಮಾಯಾವತಿ ಅವರ ಅವಧಿಯಲ್ಲಿ ಇವುಗಳ ಬಣ್ಣ ನೀಲಿಯಾಗಿರುತ್ತಿತ್ತು. ಇದೀಗ ಅವರದೇ ಹಾದಿಯಲ್ಲಿ ನಡೆಯುತ್ತಿರುವ ಆದಿತ್ಯನಾಥ್ ತಮ್ಮ ಪಕ್ಷದ ಸಂಕೇತವಾದ ಕೇಸರಿ ಬಣ್ಣವನ್ನು ಎಲ್ಲೆಡೆ ಬಳಿಯತೊಡಗಿದ್ದಾರೆ.

ಇನ್ನು ಸೆಕ್ರಟೇರಿಯೇಟ್ ಆಡಳಿತ ಇಲಾಖೆಯ ಗುರುತಿನ ಪತ್ರಗಳಿಗೂ ಕೇಸರಿ ಭಾಗ್ಯವನ್ನು ಕರುಣಿಸಲಾಗಿದೆ. ಕೇಸರೀಕರಣ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಸರ್ಕಾರದ ವಕ್ತಾರ ಶ್ರೀಕಾಂತ್ ಶರ್ಮ, ನಮಗೆ ಎಲ್ಲ ಬಣ್ಣಗಳೂ ಇಷ್ಟ. ಕೇಸರಿ ಬಣ್ಣ ತ್ಯಾಗ, ಬಲಿದಾನ ಮತ್ತು ಶೌರ್ಯದ ಸಂಕೇತವಾಗಿದೆ. ಆದ್ದರಿಂದ ಅದು ನಮ್ಮ ಅಚ್ಚುಮೆಚ್ಚಿನ ಬಣ್ಣ ಎಂದು ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ ಎಲ್ಲೆಡೆ ಕೇಸರೀಕರಣವನ್ನು ಬಿಜೆಪಿ ಸರ್ಕಾರ ನಡೆಸುತ್ತಿರುವುದಕ್ಕೆ ನೂರಾರು ಸಾಕ್ಷಿಗಳು ಉತ್ತರಪ್ರದೇಶದಲ್ಲಿ ಸಿಗುತ್ತಿವೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್​​ ಸುದ್ದಿ ಟಿವಿ

0

Leave a Reply

Your email address will not be published. Required fields are marked *