ಹಿಂಸಾರೂಪ ಪಡೆದ ಅಯ್ಯಪ್ಪ ಸ್ವಾಮಿ ಭಕ್ತರ ಪ್ರತಿಭಟನೆ

ಶಬರಿಮಲೆಗೆ ಮಹಿಳೆಯರ ಪ್ರವೇಶ ವಿವಾದ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಶಬರಿಮಲೆಗೆ ಮಹಿಳೆಯರ ಪ್ರವೇಶ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರು ನಿಳಕ್ಕಲ್ ನಲ್ಲಿ ಮಹಿಳೆಯರ ಮತ್ತು ವರದಿಗಾರರ ಮೇಲೆ ದಾಳಿ ನಡೆಸಿದ್ದು, ಹಲವು ವಾಹನಗಳನ್ನು ಜಖಂಗೊಳಿಸಿದ್ದಾರೆ. ಅಯ್ಯಪ್ಪ, ಅಯ್ಯಪ್ಪ ಎಂದು ಘೋಷಣೆ ಕೂಗುತ್ತಿದ್ದ ಸುಮಾರು 50ಕ್ಕೂ ಹೆಚ್ಚು ಪ್ರತಿಭಟನಾಕಾರರು ಹಲವು ಮಹಿಳೆಯರ ಮತ್ತು ಪತ್ರಕರ್ತೆಯರ ಮೇಲೆ ದಾಳಿ ನಡೆಸಿದ್ದು, ವಾಹನಗಳನ್ನು ಧ್ವಂಸಗೊಳಿಸಿದ್ದಾರೆ.

ನಿಳಕ್ಕಲ್ ಶಬರಿಮಲೆಯಿಂದ 20 ಕಿ.ಮೀ. ದೂರದಲ್ಲಿದ್ದು, ಪಂಪಾ ನದಿ ತಲುಪಲು ಇದೊಂದೇ ಮಾರ್ಗ. ಹೀಗಾಗಿ ಪ್ರತಿಭಟನಾಕಾರರು ಇಲ್ಲಿ ಜಮಾಯಿಸಿ ಮಹಿಳೆಯರು ಅಯ್ಯಪ್ಪಸ್ವಾಮಿ ದೇವಸ್ಥಾನ ಪ್ರವೇಶಿಸದಂತೆ ತಡೆಯುತ್ತಿದ್ದಾರೆ. ಕಳೆದ ಸೆಪ್ಟೆಂಬರ್ 28ರಂದು ಸುಪ್ರೀಂ ಕೋರ್ಟ್ ಶಬರಿಮಲೆಗೆ ಎಲ್ಲಾ ವಯಸ್ಸಿನ ಮಹಿಳೆಯರ ಮುಕ್ತ ಪ್ರವೇಶಕ್ಕೆ ಅವಕಾಶ ನೀಡಿ ತೀರ್ಪು ನೀಡಿದ್ದು, ತೀರ್ಪು ಪ್ರಕಟವಾದ ನಂತರ ಇಂದು ಮೊದಲ ಬಾರಿಗೆ ಅಯ್ಯಪ್ಪಸ್ವಾಮಿ ದೇಗುಲದ ಬಾಗಿಲು ತೆರೆಯಲಾಗಿದೆ. ಹೀಗಾಗಿ ಇಂದು ಮಹಿಳೆಯರ ಪ್ರವೇಶಕ್ಕೆ ಅಯ್ಯಪ್ಪ ಸ್ವಾಮಿ ಭಕ್ತರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಮಾತ್ರ ಸುಪ್ರೀಂಕೋರ್ಟ್ ತೀರ್ಪು ಪಾಲನೆಗೆ ರಾಜ್ಯಸರ್ಕಾರ ಬದ್ಧವಾಗಿದ್ದು, ದೇಗುಲ ಪ್ರವೇಶ ಮಾಡುವವರಿಗೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಶಬರಿಮಲೆಗೆ ಮಹಿಳೆಯರ ಪ್ರವೇಶ ವಿವಾದ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಭಕ್ತರಿಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಅಯ್ಯಪ್ಪಸ್ವಾಮಿ ದೇಗುಲದ ಮಾಜಿ ಮುಖ್ಯ ಅರ್ಚಕರ ಮೊಮ್ಮಗ ರಾಹುಲ್ ಈಶ್ವರ್ ಅವರನ್ನು ಕೇರಳ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ 10 ರಿಂದ 50 ವರ್ಷದ ಮಹಿಳೆಯರ ಪ್ರವೇಶ ವಿರೋಧಿಸಿ ಸಾವಿರಾರು ಭಕ್ತರು ಪಂಪ ನದಿ ತೀರದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಇದುವರೆಗೆ ಪೊಲೀಸರು 30 ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ. ಬಂಧಿತ 30 ಪ್ರತಿಭಟನಾಕಾರರ ಪೈಕಿ ಮೂವರಿಗೆ ಜಾಮೀನು ದೊರೆತಿದೆ. ಐದು ದಿನಗಳ ತುಲ ಪೂಜೆ ಮುಕ್ತಾಯದ ನಂತರ ದೇವಸ್ಥಾನ ಬಂದ್ ಆಗುವವರೆಗೂ ನಿಳಕ್ಕಲ್ ನಲ್ಲಿ ಪ್ರತಿಭಟನೆ ಮುಂದುವರೆಸುವುದಾಗಿ ಹಿಂದೂ ಐಕ್ಯ ವೇದಿಕೆ ತಿಳಿಸಿದೆ.

ತ್ರಿವಳಿ ತಲ್ಲಾಖ್ ತೀರ್ಪಿಗೆ ಸ್ವಾಗತ ಕೋರಿದ್ದವರು ಎಂದು ಶಬರಿಮಲೆ ತೀರ್ಪಿನ ಬಳಿಕ ಬೀದಿಗಿಳಿದಿದ್ದಾರೆ ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. ಶಬರಿಮಲೆಗೆ ಮಹಿಳೆಯರ ಪ್ರವೇಶ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ವಿರೋಧಿಸಿ ಕೇರಳದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಸುಬ್ರಮಣಿಯನ್ ಸ್ವಾಮಿ ಕಿಡಿಕಾರಿದ್ದಾರೆ. ದೇಶದ ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಿದ್ದು ಅದನ್ನು ಪಾಲಿಸಬೇಕಿದೆ. ಸುಪ್ರೀಂ ಕೋರ್ಟ್ ತೀರ್ಪು ನಮ್ಮ ಸಂಸ್ಕೃತಿಗೆ ವಿರುದ್ಧವಾದದ್ದು ಎಂದು ಹೇಳುತ್ತಿದ್ದೀರೆ. ಆದರೆ ಇದೇ ಸುಪ್ರೀಂ ಕೋರ್ಟ್ ತ್ರಿವಳಿ ತಲಾಖ್ ಬಗ್ಗೆ ತೀರ್ಪು ನೀಡಿದ್ದಾಗ ಸಂತಸ ಮತ್ತು ಪ್ರಶಂಸೆ ವ್ಯಕ್ತಪಡಿಸಿದ್ದಿರಿ. ಶಬರಿಮಲೆ ವಿವಾದ ನಿಮ್ಮ ಸಂಸ್ಕೃತಿಯಾದರೆ, ತ್ರಿವಳಿ ತಲಾಖ್ ಅವರ ಸಂಸ್ಕೃತಿ ಎಂದು ಹೇಳಿದ್ದಾರೆ.

0

Leave a Reply

Your email address will not be published. Required fields are marked *