ಗ್ರಾಮೀಣ ಮಹಿಳಾ ಪೋಟೋಗ್ರಾಫರ್ 

ಪಕ್ಕಾ ಹಳ್ಳಿಗಾಡಿನ ಪ್ರದೇಶ. ಅಲ್ಲಿ ಹೆಣ್ಣು ಮಕ್ಕಳು ಮನೆ ಬಿಟ್ಟು ಹೊರಗೆ ಹೋಗಲೂ ಹಿಂಜರಿಯೋ ಕಾಲವೊಂದಿತ್ತು. ಅಂತಹ ಕಾಲದಲ್ಲೂ ಆ ಮಹಿಳೆ ಜನಜಂಗುಳಿಯಲ್ಲಿ ಸಂಚರಿಸುತ್ತಿದ್ದರು. ಯಾರು ಏನು ಅಂದರೇನು ನನಗೆ ನನ್ನ ಜೀವನ ಮುಖ್ಯ ಎಂದು ಹೋರಾಟ ನಡೆಸಿದ್ದರು. ನಗರದಲ್ಲೇ ಮಹಿಳೆಯರು ಆ ಕ್ಷೇತ್ರದಲ್ಲಿ ಕೆಲಸ ಮಾಡುವುದು ಕಮ್ಮಿ. ಆದರೆ ಹಳ್ಳಿಗಾಡಿನಲ್ಲಿದ್ದ  ಆ ಮಹಿಳೆ ನಿರಂತರವಾಗಿ ಜನರ ಚಿತ್ರಗಳನ್ನು ತನ್ನ ಕ್ಯಾಮೆರಾ ಕಣ್ಣಿಂದ ಬರೆಯುತ್ತಿದ್ದಾರೆ. ಇದು ಲೇಡಿ ಪೊಟೋಗ್ರಾಫರ್ ಒಬ್ಬರ ಸ್ಪೂರ್ತಿದಾಯಕ ಸ್ಟೋರಿ.

ಅಂದ ಹಾಗೆ ಈ ಮಹಿಳೆಯ ಹೆಸರು ಸಂಗೀತಾ ಮರೆಗುದ್ದಿ. ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ರಬಕವಿ ಮೂಲದವರು.ಇವರು ಇಂದು ಓರ್ವ ಪಕ್ಕಾ  ಪ್ರೊಫೆಷನಲ್ ಪೊಟೊಗ್ರಾಫರ್ ಆಗಿ ಹೊರಹೊಮ್ಮಿದ್ದಾರೆ. ಸಾಮಾನ್ಯವಾಗಿ ಹಳ್ಳಿಭಾಗದಲ್ಲಿ ಪೊಟೊಗ್ರಫಿ ವೃತ್ತಿಯನ್ನು ಮಹಿಳೆಯರು ಆಯ್ದುಕೊಳ್ಳೋದು ತುಂಬಾನೆ ವಿರಳ.ಆದರೆ ಸಂಗೀತಾ ಮರೆಗುದ್ದಿ ಮಾತ್ರ ಸುಮಾರು 25 ವರ್ಷಗಳಿಂದ ಪೊಟೊಗ್ರಫಿ ಮೂಲಕ ತಮ್ಮ ಜೀವನ ಕಟ್ಟಿಕೊಂಡಿದ್ದಾರೆ.

ಯಾವುದೇ ಕಾರ್ಯಕ್ರಮ,.ಮದುವೆ-ಮುಂಜಿ,ರಾಜಕೀಯ ಕಾರ್ಯಕ್ರಮ ಏನೇ ಇದ್ದರೂ ಅಲ್ಲಿ ಇವರು ಹಾಜರಿರಲೇಬೇಕು. ಅಷ್ಟೊಂದು ಬೇಡಿಕೆ ಇವರ ಪೊಟೊಗ್ರಫಿಗೆ ಇದ್ದು ಪುರುಷರಿಗೆ ಸರಿಸಮನಾಗಿ ಸಂಗೀತಾ ಮರೆಗುದ್ದಿ ಕಾರ್ಯ ಮಾಡಿ ಜನಪ್ರಿಯರಾಗಿದ್ದಾರೆಸಂಗೀತಾ ಮರೆಗುದ್ದಿ ಮೂಲತಃ ಮಹಾರಾಷ್ಟ್ರದವರು.ಮದುವೆಯಾಗಿ ಸದ್ಯ  ರಬಕವಿ ಪಟ್ಟಣದಲ್ಲಿದ್ದಾರೆ.ಮದುವೆಗೂ ಮುಂಚಿನಿಂದಲೂ ಪೊಟೊಗ್ರಫಿಯಲ್ಲಿ ವಿಶೇಷ ಆಸಕ್ತಿ ಹೊಂದಿರುವ ಸಂಗೀತಾ ಮದುವೆ ನಂತರವೇ ಪೊಟೊಗ್ರಫಿಯನ್ನು ವೃತ್ತಿಯಾಗಿ ಮಾಡಿಕೊಂಡಿದ್ದಾರೆ.

ದಿನಾಲು ಪೊಟೊ ಸ್ಟುಡಿಯೊದಲ್ಲಿ ಕಾರ್ಯ .ಜೊತೆಗೆ ಯಾವುದೇ ಸಭೆ ಸಮಾರಂಭವಿದ್ದರೂ ಸ್ಕೂಟಿ ಏರಿ ತಕ್ಷಣ ಅಲ್ಲಿ ಹಾಜರಿರುತ್ತಾರೆ.ಪ್ರಕೃತಿ ಚಿತ್ರ, ಹೊರಾಂಗಣ ಪೊಟೊಗ್ರಫಿ, ಭಾವಚಿತ್ರ ತೆಗೆಯೋದು ಇವರ ಹವ್ಯಾಸ.ಕುಟುಂಬದ ಜೊತೆಗೆ ವೃತ್ತಿಯನ್ನು ನಿಭಾಯಿಸಿಕೊಂಡು ಹೋಗುತ್ತಿರುವ ಸಂಗೀತಾ ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ.ಇವರ ಈ ಕಾರ್ಯ ಇತರೆ ಮಹಿಳೆಯರು ಮತ್ತು ಯುವತಿಯರಿಗೆ ಮಾದರಿಯಾಗಿದ್ದು,ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇಂದು ಮಹಿಳೆಯರು ಭೂಮಿಯಿಂದ ಬಾನಿಗೆ ಕೈ ಚಾಚಿದ್ದಾರೆ. ಎಲ್ಲ ಕ್ಷೇತ್ರದಲ್ಲೂ ಪುರುಷರಿಗೆ ಸಮನಾಗಿ ನಿಂತಿದ್ದಾರೆ. ಆದರೆ ಹಳ್ಳಿ ಭಾಗದಲ್ಲಿ ಈ ಸಂಖ್ಯೆ ಕೊಂಚ ಕಡಿಮೆ ಅನ್ನಬಹುದು. ಆದರೆ ಹಳ್ಳಿಭಾಗದಲ್ಲಿದ್ದುಕೊಂಡು ಸಂಗೀತಾ ಮರೆಗುದ್ದಿ ಪೊಟೊಗ್ರಫಿ ಮೂಲಕ ಜೀವನ ಕಂಡುಕೊಂಡಿದ್ದಾರೆ. ಇವರ ಈ ಕಾರ್ಯ ಎಲ್ಲ ಮಹಿಳೆಯರಿಗೂ ಸ್ಪೂರ್ತಿದಾಯಕ.  ಸುರೇಶ್ ಕಡ್ಲಿಮಟ್ಟಿ,  ಸುದ್ದಿಟಿವಿ ಬಾಗಲಕೋಟೆ

0

Leave a Reply

Your email address will not be published. Required fields are marked *