ಸಾಮಾನ್ಯ ವರ್ಗದವರಿಗೆ ಮೀಸಲು ವಿಧೇಯಕ: ಸುಪ್ರೀಂ ಕೋರ್ಟ್​​ನಲ್ಲಿ ತಕರಾರು ಅರ್ಜಿ

ದೆಹಲಿ: ವಾರ್ಷಿಕ 8 ಲಕ್ಷ ರೂ.ವರೆಗೆ ಆದಾಯ ಹೊಂದಿರುವ ಮೇಲ್ವರ್ಗದರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.10ರಷ್ಟು ಮೀಸಲು ಕಲ್ಪಿಸುವ ಕೇಂದ್ರ ಸರ್ಕಾರದ ನಡೆಯನ್ನು ಸುಪ್ರೀಂ ಕೋರ್ಟ್​​ನಲ್ಲಿ ಪ್ರಶ್ನಿಸಿಲಾಗಿದೆ. ಲೋಕಸಭೆ ಚುನಾವಣೆಗೆ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಹೊತ್ತಿನಲ್ಲಿ ತರಾತುರಿಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಕುರಿತು ನಿರ್ಧಾರ ತೆಗೆದುಕೊಂಡಿತ್ತು. ಲೋಕಸಭೆಯಲ್ಲಿ ಮಸೂದೆ ಮಂಡಿಸಿ ಅಂಗೀಕಾರ ಪಡೆದಿತ್ತು. ಆದರೆ, ರಾಜ್ಯಸಭೆಯಲ್ಲಿ ಮಸೂದೆಯನ್ನು ಮಂಡಿಸಿರಲಿಲ್ಲ. ಆದರೆ, ಇದೇ ಅವಧಿಯಲ್ಲಿ ಮಸೂದೆಗೆ ಅಂಗೀಕಾರ ಪಡೆಯುವ ಸಲುವಾಗಿ ಜನವರಿ 8ರಂದು ರಾಜ್ಯಸಭೆ ಕಲಾಪದ ನಿಗದಿತ ಕಾಲಾವಧಿ ಮುಗಿದಿತ್ತು. ಅವಧಿ ಮುಗಿದ ನಂತರ ಕಲಾಪದ ಅವಧಿಯನ್ನು ವಿಸ್ತರಿಸಿ, ರಾಜ್ಯಸಭೆಯಲ್ಲಿ ಕೂಡ ಸರ್ಕಾರ ಮಸೂದೆಗೆ ಅಂಗೀಕಾರ ಪಡೆದಿತ್ತು.

ಆದರೆ, ಕೇಂದ್ರದ ಮೇಲ್ಜಾತಿಯವರ ವಿಧೇಯಕ ಪ್ರಶ್ನಿಸಿ ಯೂತ್‌ ಫಾರ್‌ ಈಕ್ವಾಲಿಟಿ ಸಂಸ್ಥೆ ಮತ್ತು ಕೌಶಲ್‌ ಕಾಂತ್‌ ಮಿಶ್ರಾ ಸುಪ್ರೀಂ ಕೋರ್ಟ್‌ನಲ್ಲಿ ತಕಾರಾರು ಅರ್ಜಿ ಸಲ್ಲಿಸಿದ್ದಾರೆ. ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿದ ಆದೇಶ ಅನುಸಾರ ಮೀಸಲು ಪ್ರಮಾಣ ಶೇ.50ಕ್ಕಿಂತ ಹೆಚ್ಚಾಗುವಂತಿಲ್ಲ. ಆದರೆ ಮೇಲ್ಜಾತಿ ಮೀಸಲು ವಿಧೇಯಕ ಜಾರಿಯಾದಲ್ಲಿ ಕೋರ್ಟ್ ಆದೇಶ ಉಲ್ಲಂಘನೆಯಾದಂತೆ ಎಂದು ದೂರುದಾರರು ವಾದಿಸಿದ್ದಾರೆ.

ಮೇಲ್ಜಾತಿಯವರ ಮೀಸಲು ವಿಧೇಯಕ ರಾಷ್ಟ್ರಪತಿ ಅಂಗಳಕ್ಕೆ ತಲುಪಿದ್ದು, ರಾಷ್ಟ್ರಪತಿ ಮಸೂದೆಗೆ ಅಂಕಿತ ಹಾಕಿದ ನಂತರ ಸರ್ಕಾರ ಗೆಜೆಟಿಯರ್​ನಲ್ಲಿ ಪ್ರಕಟಿಸಲು ಸಜ್ಜಾಗಿದೆ. ಮಸೂದೆಯ ಪ್ರಕಾರ ಶಿಕ್ಷಣ, ಕೇಂದ್ರ, ರಾಜ್ಯ ಸರ್ಕಾರಗಳ ಉದ್ಯೋಗಗಳಲ್ಲಿ ಸಾಮಾನ್ಯ ವರ್ಗದ ಬಡವರಿಗೆ ಶೇ.10ರಷ್ಟು ಮೀಸಲು ನೀಡಲು ಅವಕಾಶ ಇದೆ. ಈಗಾಗಲೇ ಈ ವಿಧೇಯಕದ ವಿರುದ್ಧ ವಿಪಕ್ಷಗಳು ವ್ಯಾಪಕ ಟೀಕೆ ವ್ಯಕ್ತಪಡಿಸಿವೆ. ಆದರೆ, ಕೆಲವು ನಾಯಕರು (ಉದಾ: ಎಚ್ ಡಿ ದೇವೇಗೌಡ, ಮಾಯಾವತಿ) ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಬಿಜೆಪಿ ತನ್ನ ಮಸೂದೆಯನ್ನು ಐತಿಹಾಸಿಕ ವಿಧೇಯಕ ಎಂದು ತನ್ನ ಭುಜವನ್ನು ತಾನೇ ತಟ್ಟಿಕೊಂಡರೆ, ಇದು ರಾಜಕೀಯ ಗಿಮಿಕ್‌ ಎಂದು ಕಾಂಗ್ರೆಸ್‌ ಕೇಂದ್ರದ ನಡೆಯನ್ನು ವಿರೋಧಿಸಿದೆ.  ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಕೇಂದ್ರ ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತವಾಗಿದೆ. ದಲಿತರ ಮತ್ತು ದಮನಿತರ ಪರವಾಗಿದ್ದ ಮೀಸಲಾತಿಯನ್ನು 8 ಲಕ್ಷ ಆದಾಯ ಹೊಂದಿರುವ ಸಾಮಾನ್ಯ ವರ್ಗದವರಿಗೆ ವಿಸ್ತರಿಸುವುದು ತಪ್ಪು ಎಂದು ಕೆಲವರು ವಾದಿಸಿದ್ದಾರೆ. ಉದ್ದೇಶಿತ ಮಸೂದೆಯನ್ನು 2019ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಾರಿಗೆ ತರಲಾಗಿದೆ ಎಂದು ಕೂಡ ವ್ಯಾಖ್ಯಾನಿಸಲಾಗುತ್ತಿದೆ. ಆದರೆ, ವಾಸ್ತವದಲ್ಲಿ ಕೇಂದ್ರ ಸರ್ಕಾರ ಸರ್ಕಾರಿ ಸಂಸ್ಥೆಗಳನ್ನು ಹಂತಹಂತವಾಗಿ ಖಾಸಗೀಕರಿಸುವತ್ತ ಗಮನ ಹರಿಸುತ್ತಿದೆ. ಏರ್ ಇಂಡಿಯಾವನ್ನು ಖಾಸಗಿಯವರಿಗೆ ಮಾರಾಟ ಮಾಡಲು ಕೇಂದ್ರ ಯತ್ನಿಸುತ್ತಿದ್ದು, ಎಚ್​ಎಎಲ್​ನಂತಹ ಸಂಸ್ಥೆಗಳಿಗೆ ವೇತನ ನೀಡಲು ಹಣವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ನಡುವೆ ಆಪ್ ಪ್ರಧಾನಿ ಮೋದಿಯವರು ಮೀಸಲಾತಿ ವಿರುದ್ಧ ನೀಡಿರುವ ಹೇಳಿಕೆಯನ್ನು ಆಪ್ ಟ್ವೀಟ್ ಮಾಡಿದೆ. ಈಗಲೂ ಅವರನ್ನು ನಂಬಬಹುದೇ? ಎಂದು ಆಪ್ ಪ್ರಶ್ನಿಸಿದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *