ಚೆನ್ನೈ: 2019ರ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಒಂದೆಡೆ ಸಿದ್ಧತೆ ನಡೆಸಿದ್ದರೆ, ಮೈತ್ರಿ ಕೂಟ ರಚನೆಯತ್ತ ಕೂಡ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅನೇಕ ನಿಟ್ಟಿನಲ್ಲಿ ಯತ್ನಿಸುತ್ತಿದ್ದಾರೆ. ಈ ನಡುವೆ ತಮಿಳುನಾಡಿನಲ್ಲಿ ಮಕ್ಕಳ್ ನೀಧಿ ಮಯ್ಯಂ ಪಕ್ಷದ ಸಂಸ್ಥಾಪಕ ಮತ್ತು ಟಾಲಿವುಡ್ನ ಪ್ರತಿಭಾವಂತ ನಟ ಕಮಲ್ ಹಾಸನ್ ಕಾಂಗ್ರೆಸ್ ಜೊತೆ ಮೈತ್ರಿಗೆ ಸಿದ್ಧ ಎಂಬ ಸೂಚನೆ ನೀಡಿದ್ದಾರೆ.
ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಅವರು, 2019ರ ಲೋಕಸಭೆ ಚುನಾವಣೆಯಲ್ಲಿ ಡಿಎಂಕೆ ಪಕ್ಷದೊಂದಿಗೆ ಮೈತ್ರಿ ಕಡಿದುಕೊಂಡಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿಗೆ ಸಿದ್ಧ ಎಂದು ಹೇಳಿದ್ದಾರೆ. ಅಲ್ಲದೇ, ಲೋಕಸಭೆ ಚುನಾವಣೆಗೂ ಮುನ್ನ ಎರಡೂ ಪಕ್ಷಗಳ ನಡುವಿನ ಮೈತ್ರಿ ಅಂತ್ಯವಾಗುವ ಸಾಧ್ಯತೆ ಇದೆ. ಒಂದು ವೇಳೆ ಮೈತ್ರಿ ಮುರಿದುಬಿದ್ದಲ್ಲಿ ಮಕ್ಕಳ್ ನೀಧಿ ಮಯ್ಯಂ ಪಕ್ಷ ಮೈತ್ರಿಗೆ ಸಿದ್ಧ ಎಂದು ಅವರು ಹೇಳಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಕಮಲ್ ಹಾಸನ್ ಭೇಟಿಯಾಗಿ ಕೆಲವು ಕಾಲ ಚರ್ಚೆ ನಡೆಸಿದ್ದರು. ಈ ವೇಳೆ ರಾಜ್ಯ ರಾಜಕಾರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾತುಕತೆ ನಡೆಸಲಾಗಿದೆ ಎಂದು ಹೇಳಲಾಗಿತ್ತು. ಆದರೆ, ಈ ಕುರಿತು ಪ್ರತಿಕ್ರಿಯಿಸಿದ ಕಮಲ್, ರಾಹುಲ್ ಭೇಟಿ ವೇಳೆ ರಾಜಕೀಯ ಕುರಿತು ಚರ್ಚಿಸಲಾಯಿತು. ಆದರೆ, ನೀವು ಆಲೋಚಿಸುವ ಮಾರ್ಗದಲ್ಲಿ (ಮೈತ್ರಿ ಕುರಿತು) ಚರ್ಚೆ ನಡೆದಿಲ್ಲ ಎಂದಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ನೂತನ ಪಕ್ಷ ಸ್ಥಾಪಿಸಿದ್ದ ಕಮಲ್ ಹಾಸನ್, ಮಕ್ಕಳ್ ನೀಧಿ ಮಯ್ಯಂ ಪಕ್ಷ ಭ್ರಷ್ಟಾಚಾರದ ವಿರುದ್ಧ ಮತ್ತು ಯಾವುದೇ ದೋಷಪೂರಿತ ಪಕ್ಷದ ವಿರುದ್ಧ ಹೋರಾಟ ನಡೆಸಲಿದೆ ಎಂದಿದ್ದರು. ಕೆಲವು ಪಕ್ಷಗಳು ಮಾಫಿಯಾದೊಂದಿಗೆ ಸೇರಿಕೊಂಡು ಕಳಂಕಮಯವಾಗಿವೆ. ಕಳಂಕಿತರೊಂದಿಗೆ ನೀವು ಕೈಕುಲುಕಿದ ಕ್ಷಣದಲ್ಲೇ ನೀವೂ ಕಳಂಕಿತರಾಗುತ್ತೀರಿ ಎಂದಿದ್ದರು. ಈ ಮೂಲಕ ಆಡಳಿತಾರೂಢ ಎಐಎಡಿಎಂಕೆ ಮತ್ತು ವಿಪಕ್ಷ ಡಿಎಂಕೆ ವಿರುದ್ಧ ಅವರು ಕಿಡಿಕಾರಿದ್ದರು.
ದೇಶಾದ್ಯಂತ 2019ರ ಲೋಕಸಭೆ ಚುನಾವಣೆ ಕುರಿತು ತೀವ್ರ ಆಸಕ್ತಿ ಮೂಡಿದ್ದು, ವಿಪಕ್ಷಗಳು ಮೈತ್ರಿಕೂಟದ ಗಟ್ಟಿತನದ ಮೇಲೆ ಆಡಳಿತಾರೂಢ ಎನ್ಡಿಎ ಮೈತ್ರಿಕೂಟದ ಅಸ್ತಿತ್ವ ನಿರ್ಧಾರವಾಗಲಿದೆ. ದೇಶಾದ್ಯಂತ ಬಿಜೆಪಿ ಮತ್ತು ಅದರ ಮೈತ್ರಿಕೂಟದ ವಿರುದ್ಧ ಒಗ್ಗಟ್ಟಿನ ಹೋರಾಟ ಅಗತ್ಯ ಎಂದು ದೇಶದ ಬಹುತೇಕ ನಾಯಕರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮಹಾಮೈತ್ರಿ ಕುರಿತು ಗಂಭೀರವಾಗಿ ಪ್ರಯತ್ನಿಸುತ್ತಿದೆ. ಆದರೆ, ಪಂಚರಾಜ್ಯಗಳಿಗೆ ಚುನಾವಣೆ ನಡೆಯುತ್ತಿದ್ದು, ಮಾಯಾವತಿ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಳ್ಳದೇ, ಕಾಂಗ್ರೆಸ್ಸೇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೊಸ ಪಕ್ಷ ಮೈತ್ರಿಯ ಭಾಗವಾಗುವುದಾಗಿ ಹೇಳಿದಂತಾಗಿದೆ.
ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ