ಹಳೆ ನೋಟು ಸ್ವೀಕರಿಸದ ಆರ್​ಬಿಐ: ರೊಚ್ಚಿಗೆದ್ದ ಜನ

ಬೆಂಗಳೂರು, ಡಿಸೆಂಬರ್ 02 : “ನನ್ನ ಅಜ್ಜಿ ಯಾವುದೋ ಧ್ಯಾನದಲ್ಲಿ 500 ರು. ಹಳೆಯ ನೋಟುಗಳ 3000 ರು. ನಗದನ್ನು ಎಲ್ಲೋ ಇಟ್ಟಿದ್ದಳು. ಬ್ಯಾಂಕಿನಲ್ಲಿ ವಿನಿಮಯ ಮಾಡಿಕೊಳ್ಳುವುದನ್ನು ಮರೆತಿದ್ದಳು. ಈಗ ಯಾವ ಬ್ಯಾಂಕೂ ಅವನ್ನು ಸ್ವೀಕರಿಸುತ್ತಿಲ್ಲ, ರಿಸರ್ವ್ ಬ್ಯಾಂಕ್ ಕೂಡ ಪಡೆಯುತ್ತಿಲ್ಲ. ಏನು ಮಾಡುವುದು?”
ಇದು ಮಂಡ್ಯದಿಂದ 3000 ರು. ನಗದನ್ನು ಹೊಸ ನೋಟುಗಳಿಗೆ ವಿನಿಮಯ ಮಾಡಿಕೊಳ್ಳಲು ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ, ಯವನಿಕಾ ಪಕ್ಕದಲ್ಲಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಬಂದಿದ್ದ ಇರ್ಫಾನ್ ಅವರ ಅಳಲು. ಇದಕ್ಕೆ ಸರಕಾರವೇ ಪರಿಹಾರ ಸೂಚಿಸಬೇಕು ಎಂದು ಅವರ ಅಳಲು.
ಇದು ಇರ್ಫಾನ್ ಒಬ್ಬರ ಅಳಲು ಮಾತ್ರ ಆಗಿರಲಿಲ್ಲ. ಅಲ್ಲಿ ನೂರಾರು ಜನರು ನೆರೆದಿದ್ದರು, ನಾನಾ ಜಿಲ್ಲೆಗಳಿಂದ ಬಂದಿದ್ದರು. ಪ್ರತಿಯೊಬ್ಬರಲ್ಲಿಯೂ ಗೊಂದಲ, ಆಕ್ರೋಶ, ನಿರಾಶೆ, ಹತಾಶೆ ಮಡುಗಟ್ಟಿತ್ತು. ಇದು ಬೆಂಗಳೂರಿನ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮುಂದೆ ಸೋಮವಾರ ಕಂಡುಬಂದ ದೃಶ್ಯ.
ಹಳೆ 500 ಮತ್ತು 1000 ನೋಟುಗಳನ್ನು ವಿನಿಮಯಿಸಿಕೊಳ್ಳಲು ನೀಡಿದ್ದ ಡಿಸೆಂಬರ್ 30ರ ಗಡಿ ಮುಗಿದಿದೆ. ಆದರೆ, ನಾಗರಿಕರಿಗೆ ಅನುಕೂಲವಾಗಲೆಂದು ಮಾರ್ಚ್ 31ರವರೆಗೆ ರಿಸರ್ವ್ ಬ್ಯಾಂಕ್ ನಲ್ಲಿ ಮಾತ್ರ ಹಳೆ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದೆಂದು ಕೂಡ ಹೇಳಿತ್ತು.
“ಮೋದಿ ಹೇಳಿದ್ದರೂ ಹಳೆ ನೋಟುಗಳನ್ನು ವಿನಿಮಯಕ್ಕೆ ಇಸಿದುಕೊಳ್ಳುವುದಿಲ್ಲವೆಂದು ಆರ್ಬಿಐ ಅಧಿಕಾರಿಗಳು ಹೇಳುತ್ತಿದ್ದಾರೆ. ಯಾಕೆ ಈ ಗೊಂದಲ? ಇದನ್ನು ಮೊದಲೇ ನಾಗರಿಕರಿಗೆ ತಿಳಿಸಬಹುದಾಗಿತ್ತು. ಈಗ ನಮ್ಮ ಬಳಿಯಿರುವ ಹಣ ಕೇವಲ ಬೆಲೆಯಿಲ್ಲದ ಹಾಳೆಯಂತಾಗಿದೆ” ಎಂದು ಬೆಂಗಳೂರಿನ ನಿವಾಸಿ ಸತ್ಯನಾರಾಯಣ ಆಕ್ರೋಶ ಹೊರಹಾಕಿದರು.
ಹಳೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳೋಣವೆಂದು ನೂರಾರು ನಾಗರಿಕರು ಸಾಲಿನಲ್ಲಿ ನಿಂತಿದ್ದರು. ಆದರೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಸಿಬ್ಬಂದಿ, ಹಳೆಯ ನೋಟುಗಳನ್ನು ಇಸಿದುಕೊಳ್ಳುವುದಿಲ್ಲವೆಂದು ನೋಟೀಸ್ ಬೋರ್ಡ್ ಮೇಲೆ ಅಂಟಿಸಿದರು. ಇದು ಗೊತ್ತಾಗುತ್ತಿದ್ದಂತೆ ಗಲಾಟೆ ಆರಂಭವಾಯಿತು. ಜನರನ್ನು ಚೆದುರಿಸಲು ಪೊಲೀಸರನ್ನು ಕರೆಸಿಕೊಳ್ಳಬೇಕಾಯಿತು.

1+

Leave a Reply

Your email address will not be published. Required fields are marked *