25ನೇ ಅಸಿಯಾನ್ ಸಮ್ಮೇಳನದಲ್ಲಿ ರಾರಾಜಿಸಲಿವೆ ರಾಮಾಯಣ ಉತ್ಸವ, ಖಾದಿ ಜಾಕೆಟ್

ಅಸಿಯಾನ್ ಬೆಳ್ಳಿ ಹಬ್ಬಕ್ಕೆ ಭಾರತ ಸಜ್ಜು
ರಾಮಾಯಣ ಉತ್ಸವ ನಡೆಸಲಿರುವ ಭಾರತ
ಉತ್ಸವದ ಮೂಲಕ ಚೀನಾಗೆ ತಿರುಗೇಟು ನೀಡಲು ಸಜ್ಜಾದ ಭಾರತ 
ದೆಹಲಿಯಲ್ಲಿ ಭಾಗವಹಿಸಲಿವೆ ರಾಮಾಯಣಕ್ಕೆ ಸಂಬಂಧಿಸಿದ 8 ರಾಷ್ಟ್ರಗಳು

ನವದೆಹಲಿ: ನವದೆಹಲಿಯಲ್ಲಿ ನಡೆಯಲಿರುವ 25ನೇ ಅಸಿಯಾನ್ ಸಮ್ಮೇಳನದಲ್ಲಿ ರಾಮಾಯಣ ಹಬ್ಬ, ವಿಶೇಷವಾಗಿ ರೂಪಿಸಲಾಗಿರುವ ರಾಮಾಯಣ ಅಂಚೆ ಚೀಟಿ ಮತ್ತು ಖಾದಿ ಜಾಕೆಟ್​​ಗಳು ರಾರಾಜಿಸಲಿವೆ. ಬಂದ ಅತಿಥಿಗಳಿಗೆ ಖಾದಿ ಜಾಕೆಟ್ ಧರಿಸುವ ಅವಕಾಶವನ್ನು ನೀಡುವುದಾಗಿ ಭಾರತ ಘೋಷಿಸಿದೆ. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಮಾಯಣ ಮತ್ತು ಖಾದಿಯನ್ನು ಪ್ರತಿಪಾದಿಸಲು ಕೇಂದ್ರ ಸರ್ಕಾರ ಸಜ್ಜಾಗಿದೆ.

ಭಾರತ – ಚೀನಾ ನಡುವಿನ ಬಿಕ್ಕಟ್ಟಿನ ಸಂದರ್ಭದಲ್ಲಿ ಮತ್ತು 69ನೇ ಗಣರಾಜ್ಯೋತ್ಸವಕ್ಕೂ ಮುನ್ನಾ ದಿನ ಅಸಿಯಾನ್​​ನ 25ನೇ ಸಮ್ಮೇಳನ ನಡೆಯುತ್ತಿರುವುದು ವಿಶೇಷವಾಗಿದೆ. ಇನ್ನೊಂದು ಕುತೂಹಲಕರ ಸಂಗತಿ ಅಂದ್ರೆ, ಅಸಿಯಾನ್​ನಲ್ಲಿ ಭಾಗವಹಿಸಲು ಆಗಮಿಸಲಿರುವ ಅಸಿಯಾನ್ ರಾಷ್ಟ್ರಗಳ ನಾಯಕರು 26ರಂದು ನಡೆಯಲಿರುವ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಗಣರಾಜ್ಯೋತ್ಸವ ದಿನದ ಅಭೂತಪೂರ್ವ ಮತ್ತು ಮಹತ್ವದ ಮೈಲುಗಲ್ಲಾದ ಪೆರೇಡ್​​ನಲ್ಲಿ ಅಸಿಯಾನ್ ನಾಯಕರು ಭಾಗವಹಿಸಲಿದ್ದಾರೆ ಎಂದು ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ಪ್ರೀತಿ ಸರನ್ ಹೇಳಿದ್ದಾರೆ. 24ರಂದೇ ಗಣ್ಯ ಅತಿಥಿಗಳು ಭಾರತಕ್ಕೆ ಆಗಮಿಸಲಿದ್ದಾರೆ ಎಂದು ಕೂಡ ಅವರು ಮಾಹಿತಿ ನೀಡಿದ್ದಾರೆ.

ರಾಮಾಯಾಣ ಆಗ್ನೇಯ ಏಷ್ಯಾ ರಾಷ್ಟ್ರಗಳನ್ನು ಬೆಸೆಯುವ ಸಂಸ್ಕೃತಿಯ ಸಾಮಾನ್ಯ ಕೊಂಡಿ ಎಂದ ಅವರು, ಅಸಿಯಾನ್​​​ನ 25ನೇ ಸಮ್ಮೇಳನದಲ್ಲಿ ನಡೆಯಲಿರುವ ರಾಮಾಯಣ ಉತ್ಸವದಲ್ಲಿ ಭಾಗವಹಿಸಲು  10 ರಾಷ್ಟ್ರಗಳಿಗೆ ಆಹ್ವಾನ ನೀಡಲಾಗಿದೆ ಎಂದು ಅವರು ಹೇಳಿದರು. ಅಂದಹಾಗೆ, ನವೆಂಬರ್ 2017ರಲ್ಲಿ ರಾಮಾಯಣ ಉತ್ಸವ ಆಯೋಜಿಸುವಂತೆ ಕಾಂಬೋಡಿಯಾದ ಪ್ರಧಾನಿ ಹುನ್ ಸೇನ್ ಸೂಚಿಸಿದ್ದರು ಎಂದು ಹೇಳಲಾಗಿದೆ. ಉದ್ದೇಶಿತ ಉತ್ಸವದಲ್ಲಿ ಹಿರಿಯ ಕಲಾವಿದರು ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ.

ಥೈಲ್ಯಾಂಡ್​​ನ ರಾಮ್ಕಿಯಾನ್, ಲಾವೋಸ್​​ನ ಫಾ ಲಾಕ್​ ಫಾ ಲಾಮ್​​, ಮಯನ್ಮಾರ್​​ನ ಯಾಮ ಜತ್ವಾ, ಇಂಡೋನೇಷ್ಯಾದ ಕಕವಿನ್ ರಾಮಾಯಣ ಮತ್ತು ಮಲೇಷ್ಯಾದ ಹಿಕಾಯತ್ ರಾಮ ನೃತ್ಯವನ್ನು ರಾಮಾಯಣ ಉತ್ಸವದಲ್ಲಿ ಪ್ರದರ್ಶಿಸಲಾಗುತ್ತದೆ. ಇದರೊಂದಿಗೆ ದೆಹಲಿಯ ಕಮಾನಿ ಸಭಾಂಗಣದಲ್ಲಿ ಅಸಿಯಾನ್ ದೇಶಗಳು ಮತ್ತು ಭಾರತದ ಮುದ್ರಾವನ್ನು ಕೂಡ ಇದೇ ವೇಳೆ ಪ್ರದರ್ಶಿಸಲಾಗುವುದು. ಇದರೊಂದಿಗೆ ರಾಮಾಯಣ ಕುರಿತ ಸ್ಮರಣಾರ್ಥ ಅಂಚೆ ಚೀಟಿಗಳನ್ನು ಕೂಡ ಬಿಡುಗಡೆ ಮಾಡಲಾಗುತ್ತದೆ.

ಅಸಿಯಾನ್ ಸಮ್ಮೇಳನಕ್ಕೂ ಮುನ್ನ ವಾಯು ಮತ್ತು ಕಡಲತೀರದ ಸಂಬಂಧ ಕುರಿತು ಚರ್ಚಿಸಲಾಗುವುದು ಎಂದು ಸರನ್ ಹೇಳಿದ್ದಾರೆ. ಥೈಲ್ಯಾಂಡ್, ವಿಯೆಟ್ನಾಂ, ಇಂಡೋನೇಷ್ಯಾ, ಮಲೇಷ್ಯಾ, ಫಿಲಿಪ್ಪೀನ್ಸ್, ಸಿಂಗಪುರ, ಮಯನ್ಮಾರ್, ಕಾಂಬೋಡಿಯಾ, ಲಾವೋಸ್ ಮತ್ತು ಬ್ರುನೇಯಿ ದೇಶಗಳ ಮುಖಂಡರು ಅಸಿಯಾನ್ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೆಲ ದೇಶಗಳ ನಾಯಕರು ಪತಿ/ಪತ್ನಿ ಸಮೇತರಾಗಿ ಆಗಮಿಸಲಿದ್ದಾರೆ. ಜೊತೆಗೆ, ಅಸಿಯಾನ್​ ಸಮ್ಮೇಳನದಲ್ಲಿ ಸಮಗ್ರ ಚರ್ಚೆ ನಡೆದ ನಂತರ ಜನವರಿ 25ರಂದು ಔತಣಕೂಟವನ್ನು ಆಯೋಜಿಸಲಾಗಿದೆ. ಈ ವೇಳೆ ಬಂದ ಅತಿಥಿಗಳಿಗೆ ಖಾದಿ ಜಾಕೆಟ್​​ಗಳನ್ನು ಧರಿಸುವ ಆಯ್ಕೆಯನ್ನು ಗಣ್ಯರಿಗೆ ನೀಡಲಾಗುವುದು ಅಧಿಕಾರಿಗಳು ಹೇಳಿದ್ದಾರೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *