ಕೇರಳ ಸಂತ್ರಸ್ತರಿಗೆ ನೆರವಾಗಿ ಎಂದು ಮನವಿ ಮಾಡಿದ ರಾಹುಲ್ ಗಾಂಧಿ

ತಿರುವತಂತಪುರ/ದೆಹಲಿ: ಕೇರಳದಲ್ಲಿ ಸುರಿಯುತ್ತಿರುವ ಭಾರೀ ಮಳೆ ಆಗಸ್ಟ್ 15ರವರೆಗೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ನಡುವೆ ರಾಹುಲ್ ಗಾಂಧಿ ಪಕ್ಷದ ಕಾರ್ಯಕರ್ತರಿಗೆ ಸಂಕಷ್ಟದಲ್ಲಿರುವ ಕೇರಳಿಗರಿಗೆ ನೆರವಾಗಿ ಎಂದು ಮನವಿ ಮಾಡಿದ್ದಾರೆ. ಜೊತೆಗೆ ಅಗತ್ಯ ನೆರವು ನೀಡಿ ಎಂದು ಪ್ರಧಾನಿಗೆ ಪತ್ರ ಬರೆದಿದ್ದಾರೆ. ಇನ್ನು ಸಿಎಂ ಪಿಣರಾಯಿ ವಿಜಯನ್ ಹಣದ ನೆರವು ನೀಡಿ ಎಂದು ಮನವಿ ಮಾಡಿದ್ದಾರೆ. ಕಳೆದ ಮೂರು ದಿನಗಳಿಂದ ಪ್ರವಾಹಕ್ಕೆ ಸಿಲುಕಿ ಮಡಿದವರ ಸಂಖ್ಯೆ 29ಕ್ಕೆ ಏರಿಕೆಯಾಗಿದ್ದು, ರಕ್ಷಣಾ ಕಾರ್ಯವನ್ನು ಮುಂದುವರೆಸಲಾಗಿದೆ.

ಕೇರಳದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಸಂತ್ರಸ್ತರಾಗಿರುವ ನಾಗರಿಕರಿಗೆ ನೆರವಾಗುವಂತೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ತಮ್ಮ ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ. ಆಗಸ್ಟ್ 8ರಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಕೇರಳದಲ್ಲಿ ಸಾವಿಗೀಡಾದವರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವನ್ನೂ ಬರೆದಿರುವ ಅವರು, ಕಳೆದ ಐದು ದಶಕದಲ್ಲಿ ಕೇರಳ ಕಂಡು ಕೇಳರಿಯದಂಥ ಮಳೆ, ಪ್ರವಾಹ, ಭೂಕುಸಿತಕ್ಕೆ ಸಾಕ್ಷಿಯಾಗಿದೆ. ಇದರ ಪರಿಣಾಮದಿಂದಾಗಿ ಅಪಾರ ಆಸ್ತಿಪಾಸ್ತಿ, ಜೀವ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎಲ್ಲ ಅಗತ್ಯ ನೆರವನ್ನೂ ರಾಜ್ಯಕ್ಕೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕಾರ್ಯಕರ್ತರಿಗೆ ಕೇರಳ ಸಂತ್ರಸ್ತರಿಗೆ ನೆರವಾಗುವಂತೆ ಮನವಿ ಮಾಡಿ ಟ್ವೀಟ್ ಮಾಡಿರುವ ಅವರು, ಕಂಡು ಕೇಳರಿಯದಷ್ಟು ಭಾರೀ ಮಳೆ ಕೇರಳದಲ್ಲಿ ವಿನಾಶಕ್ಕೆ ಕಾರಣವಾಗಿದೆ. ಜನರ ಆಸ್ತಿ ನಷ್ಟವಾಗಿದೆ ಮತ್ತು ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ ಎಂದು ಅವರು ಹೇಳಿದ್ದಾರೆ. ಕಾಂಗ್ರೆಸ್​​ನ ಎಲ್ಲ ಕಾರ್ಯಕರ್ತರೂ ಕೇರಳದಲ್ಲಿ ಸಂತ್ರಸ್ತರಿಗೆ ನೆರವಾಗಬೇಕು ಎಂದು ಅವರು ಮನವಿ ಮಾಡಿದ್ದಾರೆ. ಕೇರಳದಲ್ಲಿ ಸಂಕಷ್ಟದಲ್ಲಿರುವವರಿಗಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಇನ್ನು ಇಡುಕಿ, ವೈನಾಡಿನಲ್ಲಿ ಭಾರೀ ಮಳೆ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದ್ದು, ಆಗಸ್ಟ್ 14ರವರೆಗೆ ರೆಡ್ ಅಲರ್ಟ್, 15ರವರೆಗೆ ಅರೇಂಜ್ ಅಲರ್ಟ್ ಮತ್ತು ಕಣ್ಣೂರು ಜಿಲ್ಲೆಯಾದ್ಯಂತ ಆಗಸ್ಟ್ 13ರವರೆಗೆ ರೆಡ್ ಅಲರ್ಟ್​ ಹಾಗೂ ಆಗಸ್ಟ್ 15ರವರೆಗೆ ಅರೇಂಜ್ ಅಲರ್ಟ್ ಘೋಷಿಸಿದೆ. ಈ ನಡುವೆ ವೈನಾಡಿನ ಮನಂತವಾಡಿಯಲ್ಲಿ ಪ್ರವಾಹದ ಸುಳಿಗೆ ಸಿಲುಕಿದ 3 ಮಕ್ಕಳು ಸೇರಿ 6 ಜನರನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ ರಕ್ಷಿಸಿದೆ. ಭಾರೀ ಮಳೆ ಮುಂದುವರೆದ ಹಿನ್ನೆಲೆಯಲ್ಲಿ ವೈನಾಡು ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರೆದಿದೆ.

ಇನ್ನು ವಿಪತ್ತು ನಿರ್ವಹಣೆ ಕಾರ್ಯದ ಕುರಿತು ಟ್ವೀಟ್ ಮಾಡಿರುವ ಸಿಎಂ ಪಿಣರಾಯಿ ವಿಜಯನ್, ಸಿಎಂ ವಿಪತ್ತು ನಿರ್ವಹಣಾ ನಿಧಿಗೆ ಸ್ವತಃ ಒಂದು ಲಕ್ಷ ರೂ. ದೇಣಿಗೆ ನೀಡಿರುವ ಸಂಗತಿಯನ್ನು ಹಂಚಿಕೊಂಡಿದ್ದಾರೆ. ನಮ್ಮ ರಾಜ್ಯ ಹಿಂದೆಂದೂ ಕಂಡು ಕೇಳರಿಯದಂತ ಪ್ರವಾಹ ಪರಿಸ್ಥಿತಿಯ ಸಮಸ್ಯೆಯನ್ನು ಎದುರಿಸುತ್ತಿದೆ. ಪ್ರವಾಹ ಪೀಡಿತ ಪ್ರದೇಶಗಳನ್ನು ಮರುನಿರ್ಮಿಸುವುದು ಭಗೀರಥ ಪ್ರಯತ್ನ. ಎಲ್ಲರೂ ಉದಾರವಾಗಿ ಪರಿಹಾರ ನಿಧಿಗೆ ದೇಣಿಗೆ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಕೆ ಜೆ ಆಲ್ಫೋನ್ಸೋ, ಕೇರಳದ 14 ಜಿಲ್ಲೆಗಳ ಪೈಕಿ 11 ಜಿಲ್ಲೆಗಳು ಜಲಾವೃತವಾಗಿವೆ. ಕೇಂದ್ರ ಸರ್ಕಾರ ಸಶಸ್ತ್ರ ಪಡೆಗಳನ್ನು ರಾಜ್ಯಕ್ಕೆ ಕಳುಹಿಸಿದೆ. 3 ದಿನಗಳಿಂದ ರಕ್ಷಣಾ ಕಾರ್ಯ ನಡೆಯುತ್ತಿದೆ. ರಾಜ್ಯ ಸರ್ಕಾರಕ್ಕೆ ಕೇಂದ್ರ ನೆರವು ನೀಡಿದೆ. ಎನ್​ಡಿಆರ್​​ಎಫ್​ ತಂಡವನ್ನು ಕೂಡ ಕಳುಹಿಸಲಾಗಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ, ಸಿಎಂ ಪಿಣರಾಯಿ ವಿಜಯನ್ ಜೊತೆಗೆ ಮಾತಾಡಿದ್ದಾರೆ ಎಂದಿದ್ದಾರೆ.

ಕಳೆದ ಕೆಲ ದಿನಗಳಿಂದ ಕೇರಳದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಉತ್ತರ ಮತ್ತು ಮಧ್ಯ ಕೇರಳದಲ್ಲಿ ಜನ ಜೀವನ ಅತಂತ್ರವಾಗಿದೆ. 50,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದ್ದು, ತಾತ್ಕಾಲಿಕ ಷೆಡ್​ಗಳನ್ನು ನಿರ್ಮಿಸಿ, ಊಟ, ವಸತಿಗೆ ಅವಕಾಶ ಕಲ್ಪಿಸಲಾಗಿದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *