ರಾಹುಲ್ ಪಟ್ಟಾಭಿಷೇಕಕ್ಕೆ ವೇದಿಕೆ ಸಿದ್ಧ: ರಾಹುಲ್ ಮುಂದಿವೆ ಸವಾಲುಗಳ ಸರಣಿಗಳು

ಶತಮಾನಗಳ ಇತಿಹಾಸ ಇರುವ ಕಾಂಗ್ರೆಸ್ ಪಕ್ಷಕ್ಕೆ ಹೊಸ ಸಾರಥಿಯಾಗಿ ರಾಹುಲ್ ಗಾಂಧಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲು ವೇದಿಕೆ ಸಿದ್ಧವಾಗಿದೆ. ಈಗ ಕುಟುಂಬ ರಾಜಕಾರಣವನ್ನ ಮೀರಿ ಕಾಂಗ್ರೆಸ್ ಬೆಳೆಯುತ್ತಾ? ಮತ್ತೆ ಕುಟುಂಬದ ಸುಳಿಗೇ ಸಿಲುಕುತ್ತಾ? ಅನ್ನೋ ಪ್ರಶ್ನೆಗಳನ್ನೆಲ್ಲ ಪಕ್ಷ ಹಿನ್ನೆಲೆಗೆ ತಳ್ಳಿದೆ. ಸದ್ಯಕ್ಕೆ ಭಾರತದ ರಾಜಕೀಯ ಪಡಸಾಲೆಯನ್ನು ರಾಹುಲ್ ಯಾವ ಹಂತಕ್ಕೆ ಕೊಂಡೊಯ್ತಾರೆ?
ಮುಂಬರುವ ಚುನಾವಣೆಗಳಲ್ಲಿ ರಾಹುಲ್ ಕಮಾಲ್ ಮಾಡ್ತಾರಾ? ಅನ್ನೋ ಪ್ರಶ್ನೆಗಳು ಸದ್ಯಕ್ಕೆ ಕೇಳಿ ಬರುತ್ತಿವೆ.

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಹುದ್ದೆಗೆ ಉಪಾಧ್ಯಕ್ಷ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷದ ಹಿರಿಯ ನಾಯಕರಾದ ಕಮಲ್​​​ನಾಥ್, ಶೀಲಾ ದೀಕ್ಷಿತ್, ಮೋತಿಲಾಲ್ ವೋರಾ ಮತ್ತು ತರುಣ್ ಗೊಗೋಯ್ ಅವರು ಮೊದಲ ಸೆಟ್ ನಾಮಪತ್ರಕ್ಕೆ ಸೂಚಕರಾಗಿ ಸಹಿಹಾಕಿದ್ದಾರೆ.

ಈ ವೇಳೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಹಿರಿಯ ನಾಯಕರಾದ ಕಮಲ್​​ನಾಥ್, ಮೊಹ್ಸಿನಾ ಕಿದ್ವಾಯಿ, ಮಾಜಿ ಸಿಎಂ ಶೀಲಾ ದೀಕ್ಷಿತ್ ಮತ್ತು ಯುವ ನಾಯಕರಾದ ಜ್ಯೋತಿರಾದಿತ್ಯ ಸಿಂಧಿಯಾ, ಆಸ್ಕರ್ ಫರ್ನಾಂಡಿಸ್, ಅಶೋಕ್ ಗೆಹ್ಲೋಟ್, ಸುಶಿಲ್ ಕುಮಾರ್ ಶಿಂಧೆ, ನಾರಾಯಣ ಸ್ವಾಮಿ ಕೂಡ ಹಾಜರಿದ್ದರು. ಇನ್ನು ದೇಶದಾದ್ಯಂತ ಕಾಂಗ್ರೆಸ್ ನಾಯಕರು ರಾಹುಲ್ ಅವರ ನಾಯಕತ್ವವನ್ನು ಸ್ವಾಗತಿಸಿದ್ದಾರೆ.

ಇನ್ನು ರಾಹುಲ್ ಗಾಂಧಿಯವರ ಆಯ್ಕೆ ಕುರಿತು ಬಿಜೆಪಿ ತಕರಾರಿನ ಕುರಿತು ಬಹುತೇಕ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದರು. ಅಧ್ಯಕ್ಷ ಹುದ್ದೆಗೆ ಯಾರಾದರೂ ಸ್ಪರ್ಧಿಸಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅಲ್ಲದೇ, ಕಾಂಗ್ರೆಸ್ ಪಕ್ಷದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಕಾರ ಅಧ್ಯಕ್ಷರ ಆಯ್ಕೆ ನಡೆಯಲಿದೆ ಎಂದರು. ಅಲ್ಲದೇ, ರಾಹುಲ್ ಗಾಂಧಿಯವರು ಸರ್ವಾನುಮತದಿಂದ ಆಯ್ಕೆಯಾಗುವುದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ. ಈ ಕುರಿತು ಪ್ರಧಾನಿ ಮೋದಿಯವರು ಮಾತನಾಡಬೇಕಿಲ್ಲ ಎಂದು ಅವರು ಕಿಡಿಕಾರಿದರು.

ಬಿಜೆಪಿ ಅಧ್ಯಕ್ಷರು ಚುನಾವಣೆಯ ಮೂಲಕ ಆಯ್ಕೆಯಾಗಿದ್ದಾರೆಯೇ? ಎಂದು ಕಾಂಗ್ರೆಸ್​​ನ ಹಿರಿಯ ನಾಯಕ ಕಮಲ್ ನಾಥ್ ಪ್ರಶ್ನಿಸಿದ್ದಾರೆ. ಅಲ್ಲದೇ, ನಿತಿನ್ ಗಡ್ಕರಿ ಚುನಾವಣೆಯ ಮೂಲಕ ಆಯ್ಕೆಯಾಗಿದ್ದರೆ? ಈ ಪ್ರಶ್ನೆಗಳಿಗೆ ಉತ್ತರಿಸಿ ಎಂದು ಅವರು ಬಿಜೆಪಿಗೆ ಸವಾಲು ಹಾಕಿದ್ದಾರೆ. ಈ ಮೂಲಕ ಎಐಸಿಸಿ ಅಧ್ಯಕ್ಷ ಹುದ್ದೆಗೆ ಏರಲು ಸಜ್ಜಾಗಿರುವ ರಾಹುಲ್ ಗಾಂಧಿಯವರ ವಿರುದ್ಧ ಸಂಘ ಪರಿವಾರದ ಆರೋಪಗಳಿಗೆ ಪ್ರತ್ಯುತ್ತರ ನೀಡಿದ್ದಾರೆ.

ರಾಹುಲ್ ಗಾಂಧಿಯವರ ಫೋಬಿಯಾದಿಂದ ಪ್ರಧಾನಿ ನರೇಂದ್ರ ಮೋದಿಯವರು ಬಳಲುತ್ತಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ, ಬಿಜೆಪಿ ಆಂತರಿಕ ಚುನಾವಣೆಯನ್ನೇ ನಡೆಸಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ. ಇನ್ನು ರಾಹುಲ್ ನಾಮಪತ್ರ ಸಲ್ಲಿಸಿದ ನಂತರ ಪ್ರತಿಕ್ರಿಯಿಸಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ರಾಹುಲ್ ಗಾಂಧಿ ಕಾಂಗ್ರೆಸ್​ಗೆ ಪ್ರಿಯವಾದ ವ್ಯಕ್ತಿ ಎಂದರು. ಅಲ್ಲದೇ, ದೊಡ್ಡ ಪರಂಪರೆ ಇರುವ ಕಾಂಗ್ರೆಸ್ ಪಕ್ಷದ ಪರಂಪರೆಯನ್ನು ರಾಹುಲ್ ಮುಂದುವರೆಸಲಿದ್ದಾರೆ ಎಂದು ಅಭಿಪ್ರಾಯಪಟ್ಟರು.

ರಾಹುಲ್ ಆಯ್ಕೆ ಕುರಿತು ಬಿಜೆಪಿ ನಾಯಕರು ಲೇವಡಿ, ವ್ಯಂಗ್ಯವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ  ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್​ನ ಔರಂಗಜೇಬ್ ರಾಜ್​​ಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ, ನಮಗೆ 125 ಕೋಟಿ ಭಾರತೀಯರೇ ಹೈಕಮಾಂಡ್ ಎಂದು ಅಭಿಪ್ರಾಯಪಟ್ಟಿದ್ದಾರೆ. ರಾಹುಲ್ ಗಾಂಧಿಯವರ ಪದೋನ್ನತಿ ಕುರಿತು ಅವರು ಗುಜರಾತ್ ಚುನಾವಣಾ ಪ್ರಚಾರದ ಪ್ರಯುಕ್ತ ವಲ್ಸದ್​ನಲ್ಲಿ ನಡೆದ ಸಭೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ಜೊತೆಗೆ ಕಾಂಗ್ರೆಸ್​​ನಲ್ಲಿ ನಾಲ್ಕನೇ ತಲೆಮಾರು ಅಧಿಕಾರ ಹಿಡಿಯುವ ಕನಸು ಕಾಣುತ್ತಿದೆ ಎಂದರು. ರಾಹುಲ್​ ಗಾಂಧಿಯವರಿಗೆ ಪಟ್ಟಾಭಿಷೇಕವೇ ಹೊರತು ಚುನಾವಣೆಯಲ್ಲ ಎಂದು ಕುಟುಕಿದ ಅವರು, ರಾಹುಲ್ ಆಯ್ಕೆಯಲ್ಲಿ ಅರ್ಹತೆ ಗೆದ್ದಿಲ್ಲ, ಬದಲಾಗಿ ವಂಶಪಾರಂಪರ್ಯ ರಾಜಕಾರಣ ಗೆದ್ದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ದಶಕಗಳಿಂದಲೂ ಒಂದೇ ಕುಟುಂಬ ದೇಶವನ್ನು ಕೊಳ್ಳೆ ಹೊಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

ಪ್ರದರ್ಶನವಿಲ್ಲದೇ ಬಡ್ತಿಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಲಿರುವ ರಾಹುಲ್ ಗಾಂಧಿಯವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. ಇಂಥ ಘಟನೆ ನಡೆಯುವುದು ಜಮೀನ್ದಾರಿ ಪದ್ಧತಿಯಲ್ಲಿ ಮಾತ್ರ ಎಂದು ಅವರು ಕಾಂಗ್ರೆಸ್ ಪಕ್ಷವನ್ನು ತೆಗಳಿದ್ದಾರೆ.

ಕಚೇರಿಯ ಆವರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮ ಆಚರಿಸಿದರು. ಇಂದಿನ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಮತ್ತೊಬ್ಬ ಅಧ್ಯಕ್ಷ ಹುದ್ದೆ ಆಕಾಂಕ್ಷಿತರು ನಾಮಪತ್ರ ಸಲ್ಲಿಸುವ ಸಾಧ್ಯತೆ ಕಡಿಮೆ ಇದ್ದು, ಬಹುತೇಕ ಸರ್ವಾನುಮತದಿಂದ ರಾಹುಲ್ ಆಯ್ಕೆಯಾಗಲಿದ್ದಾರೆ.

ಹತ್ತೊಂಬತ್ತು ವರ್ಷಗಳಿಂದ ಸೋನಿಯಾ ಗಾಂಧಿ ಕಾಂಗ್ರೆಸ್‌ನ ಅಧ್ಯಕ್ಷೆಯಾಗಿ ಪಕ್ಷವನ್ನು ಮುನ್ನಡೆಸಿದ್ರು. ಈ ಅವಧಿಯಲ್ಲಿ ಒಂದು ದಶಕಗಳ ಕಾಲ ಪಕ್ಷಕ್ಕೆ ಅಧಿಕಾರದ ರುಚಿ ಕೂಡ ತೋರಿಸಿದಾರೆ. ಆದ್ರೆ, ಯುಪಿಎ ಸರ್ಕಾರದ ಎರಡನೇ ಅವಧಿ ಸಂಪೂರ್ಣವಾಗಿ ಹಗರಣಗಳ ಆರೋಪಗಳಿಂದ ಜರ್ಜರಿತವಾಗಿತ್ತು. ಸದ್ಯದ ಕಾಂಗ್ರೆಸ್​ನ ಸ್ಥಿತಿಗತಿ ಮತ್ತು ಭವಿಷ್ಯದ ರಾಹುಲ್ ಗಾಂಧಿಯ ಹಾದಿ ಹೇಗಿರುತ್ತೆ? ಅನ್ನೋ ಕುತೂಹಲ ಸದ್ಯಕ್ಕೆ ಮೂಡಿದೆ.

ಯುವರಾಜನಿಗೆ ಪಟ್ಟಾಭಿಷೇಕಕ್ಕೆ ಮುಹೂರ್ತ ನಿಗದಿ
ಡಿಸೆಂಬರ್ 19ರಂದು ರಾಹುಲ್​​ ಗಾಂಧಿಗೆ ಪಟ್ಟ
ಮತ್ತೊಂದು ಗಾಂಧಿ ಕುಡಿಗೆ ಒಲಿಯಲಿದೆ ಅಧ್ಯಕ್ಷಗಾದಿ

2014ರಲ್ಲಿ ಕೇಂದ್ರದಲ್ಲಿ ಅಧಿಕಾರ ಕಳೆದುಕೊಂಡ ನಂತರ, ವಿವಿಧ ರಾಜ್ಯಗಳಲ್ಲಿ ನಡೆದ ಚುನಾವಣೆಗಳಲ್ಲೂ ಕಾಂಗ್ರೆಸ್ ಅಧಿಕಾರ ಕಳ್ಕೊಂಡಿದೆ. ಸದ್ಯಕ್ಕೆ ಕಾಂಗ್ರೆಸ್ ಅಧಿಕಾರದಲ್ಲಿರೋದು ಬೆರಳೆಣಿಕೆಯ ರಾಜ್ಯಗಳಲ್ಲಿ ಮಾತ್ರ. ಅದರಲ್ಲೂ ಕಾಂಗ್ರೆಸ್ ಅಧಿಕಾರದಲ್ಲಿರೋ ಏಕೈಕ ದೊಡ್ಡ ರಾಜ್ಯ ಅಂದ್ರೆ ಕರ್ನಾಟಕ ಮಾತ್ರ. ಲೋಕಸಭೆ ಚುನಾವಣೆ ಮತ್ತು ಅದರ ನಂತರ ನಡೆದ ಅರುಣಾಚಲ ಪ್ರದೇಶ, ಆಂಧ್ರಪ್ರದೇಶ, ಅಸ್ಸಾಂ, ಹರಿಯಾಣ, ಕೇರಳ, ಮಹಾರಾಷ್ಟ್ರ ಮತ್ತು ಉತ್ತರಾಖಂಡ್ ರಾಜ್ಯಗಳ ಚುನಾವಣೆಗಳಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ. ಇದರ ಪರಿಣಾಮದಿಂದಾಗಿ, ಪಕ್ಷದ ಬಲ ದಿನೇದಿನೇ ಕುಸೀತಿದೆ ಎನ್ನುವ ವ್ಯಾಖ್ಯಾನಗಳು ಕೇಳಿಬಂದಿವೆ. ಈ ಕುಸಿತವನ್ನ ಹೇಗಾದ್ರೂ ತಡೀಲೇಬೇಕು ಅನ್ನೋದು ಕಾಂಗ್ರೆಸ್ ಪಕ್ಷದ ಲೆಕ್ಕಾಚಾರ.

ರಾಹುಲ್ ಗಾಂಧಿ ಅಥವಾ ಪ್ರಿಯಾಂಕ ಗಾಂಧಿ ಪಕ್ಷದ ನೇತೃತ್ವ ವಹಿಸಿಕೊಳ್ಳಲಿ ಅನ್ನೋದು ಇದುವರೆಗೆ ಕೆಲವರ ಆಗ್ರಹವಾಗಿತ್ತು. ಆದರೆ, ಎಲ್ಲ ಊಹಾಪೋಹಗಳಿಗೂ ತೆರೆಬಿದ್ದಿದ್ದು, ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ರಾಹುಲ್ ಗಾಂಧಿಯವರಿಗೆ ಅಧ್ಯಕ್ಷ ಹುದ್ದೆ ನೀಡೋಕೆ ಸರ್ವಾನುಮತದಿಂದ ನಿರ್ಧರಿಸಲಾಗಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಸಂಸದ ಮಲ್ಲಿಕಾರ್ಜುನ ಖರ್ಗೆ, ಹಿರಿಯ ನಾಯಕ ಸುಶಿಲ್ ಕುಮಾರ್ ಶಿಂಧೆ ಸೇರಿದಂತೆ ಪಕ್ಷದ ಮುಖಂಡರು ಸೇರಿದ್ದ ಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈ ಮೂಲಕ ಶತಮಾನದ ಪಕ್ಷಕ್ಕೆ ಯುವಕರೊಬ್ಬರು ಅಧ್ಯಕ್ಷರಾಗಲು ವೇದಿಕೆ ಸಿದ್ಧವಾಗಿದೆ.

ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಚುನಾವಣೆ ನಡೆಸಲು ಪಕ್ಷ ಉದ್ದೇಶಿಸಿದ್ದು, ಪ್ರಜಾಸತ್ತಾತ್ಮಕವಾಗಿ ಮುಂದಿನ ಅಧ್ಯಕ್ಷರ ಆಯ್ಕೆ ನಡೆಯಲಿ ಎಂಬ ಕಾರಣಕ್ಕೆ ಡಿಸೆಂಬರ್ 4ರಂದು ನಾಮ ಪತ್ರ ಸಲ್ಲಿಸಲು ಅವಕಾಶ ನೀಡಲಾಗಿದೆ. ಒಬ್ಬರಿಗಿಂಥ ಹೆಚ್ಚು ಅಭ್ಯರ್ಥಿಗಳು ಕಣಕ್ಕೆ ಇಳಿದಲ್ಲಿ ಡಿಸೆಂಬರ್ 8ರಂದು ಚುನಾವಣೆ ನಡೆಯಲಿದ್ದು, 16ರಂದು ಮತ ಎಣಿಕೆ ನಡೆಯಲಿದೆ. ರಾಹುಲ್ ಗಾಂಧಿಯವರನ್ನು ಹೊರತುಪಡಿಸಿ ಯಾರೂ ನಾಮಪತ್ರ ಸಲ್ಲಿಸದಿದ್ದಲ್ಲಿ ಡಿಸೆಂಬರ್ 19ರಂದು ರಾಹುಲ್ ಗಾಂಧಿಯವರಿಗೆ ಅಧ್ಯಕ್ಷರಾಗಲಿದ್ದಾರೆ. ಆದರೆ, ಸದ್ಯಕ್ಕೆ ಯಾರೊಬ್ಬರೂ ನಾಮಪತ್ರ ಸಲ್ಲಿಸಲು ಮುಂದಾಗುವ ಲಕ್ಷಣಗಳಿಲ್ಲ. ಈ ಮೂಲಕ ರಾಹುಲ್ ಗಾಂಧಿ ಅಧ್ಯಕ್ಷರಾಗುವುದಕ್ಕೆ ಯಾವ ಅಡೆತಡೆಯೂ ಇಲ್ಲ.

ಇನ್ನು ಲೋಕಸಭೆಯ ನಾಯಕನ ಸ್ಥಾನವನ್ನು ರಾಹುಲ್ ಗಾಂಧಿಯವರಿಗೆ ನೀಡುವ ಸಾಧ್ಯತೆ ಇದೆ. ಜೊತೆಗೆ ಸದ್ಯಕ್ಕೆ ಲೋಕಸಭೆಯ ನಾಯಕರಾಗಿರುವ ಸಂಸದ ಮಲ್ಲಿಕಾರ್ಜುನ ಖರ್ಗೆಯವರಿಗೆ ಪಕ್ಷದ ಉಪಾಧ್ಯಕ್ಷ ಹುದ್ದೆ ನೀಡಲು ಕೂಡ ಚಿಂತನೆ ನಡೆದಿದೆ.

ರಾಹುಲ್ ಮುಂದಿದೆ ಸಾಲುಸಾಲು ಸವಾಲು

2014ರಿಂದ ರಾಜ್ಯಗಳಲ್ಲಿ ಕೂಡ ಅಧಿಕಾರ ಕಳ್ಕೊಳ್ತಿರೋ ಪಕ್ಷಕ್ಕೆ ಹೊಸ ವರ್ಚಸ್ಸು ತರೋದು ನಿರೀಕ್ಷಿಸಿದಷ್ಟು ಸುಲಭ ಅಲ್ಲ. ಸದ್ಯಕ್ಕೆ ಪಕ್ಷ ನಂಬಿಕೊಂಡಿರೋದು ಸಾಂಪ್ರದಾಯಿಕ ಮತದಾರರನ್ನ. ಆದರೆ, ದೇಶದಲ್ಲಿ ಯುವಕರ ಸಂಖ್ಯೆ ಹೆಚ್ಚಿದೆ. ಅಲ್ದೇ, ಕಾಂಗ್ರೆಸ್ ಪಕ್ಷ ಬಿಜೆಪಿಯಂತೆ ಆಧುನಿಕ ತಂತ್ರಜ್ಞಾನ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಪ್ರಚಾರಕ್ಕೆ ತೆರೆದುಕೊಂಡಿರಲಿಲ್ಲ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳನ್ನು ಕಾಂಗ್ರೆಸ್ ಬಳಸಿಕೊಳ್ಳುವುದಕ್ಕೆ ಮುಂದಾಗಿದೆ. ಇನ್ನು ಕಾಂಗ್ರೆಸ್‌ಗೆ ಅಪಾರ ವರ್ಚಸ್ಸಿನ ಜನನಾಯಕನ ಕೊರತೆ ಎಂಬ ಆರೋಪ ಕೂಡ ಕೇಳಿಬಂದಿದೆ.

ಯುವಜನಾಂಗದ ನಾಡಿಮಿಡಿತವನ್ನ ಅರಿಯುವ ಮತ್ತು ಅವರ ಆಶಯಗಳಿಗೆ ಪೂರಕವಾಗಿ ಸ್ಪಂದಿಸುವ ನಾಯಕರ ಕೊರತೆ ಸದ್ಯದ ಕಾಂಗ್ರೆಸ್‌ನ ಸಮಸ್ಯೆ. ಇದಕ್ಕೆ ಬೇರಾರೂ ಹೊಣೆಯಲ್ಲ ಅನ್ನೋದು ಕಾಂಗ್ರೆಸ್‌ನಿಂದ ಸಿಡಿದು ದೂರಾಗಿರೋ ನಾಯಕರ ಆರೋಪ. ಕೌಟುಂಬಿಕ ರಾಜಕಾರಣಕ್ಕೆ ಕಾಂಗ್ರೆಸ್ ಒತ್ತು ನೀಡಿದ ಪರಿಣಾಮವನ್ನ ಇವತ್ತು ಕಾಂಗ್ರೆಸ್ ಅನುಭವಿಸ್ತಿದೆ. ಎರಡನೇ ಹಂತದ ನಾಯಕರ ಬೆಳವಣಿಗೆಗೆ ನೀರೆರೆಯೋದ್ರ ಬದಲು, ಬಲವಂತವಾಗಿ ಹತ್ತಿಕ್ಕುವ ತಂತ್ರವನ್ನು ರೂಪಿಸಿದ್ದೇ ಇದಕ್ಕೆಲ್ಲ ಕಾರಣ ಎಂದು ಕೆಲವರು ಆರೋಪಿಸ್ತಾರೆ.

ಇನ್ನು ಸದ್ಯಕ್ಕೆ ದೇಶದಲ್ಲಿ ಬೆರಳೆಣಿಕೆಯಷ್ಟು ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿದೆ. ಇಂಥ ವಿಷಮ ಸಂದರ್ಭದಲ್ಲಿ ಇಡೀ ದೇಶವನ್ನು ದಣಿವರಿಯದೇ ಸುತ್ತುವ ಮತ್ತು ಪಕ್ಷ ಹಾಗೂ ಕಾರ್ಯಕರ್ತರಿಗೆ ಏಕಕಾಲಕ್ಕೆ ಮತ್ತೆ ವಿಶ್ವಾಸವನ್ನು ತುಂಬುವ ಕೆಲಸ ಅಗತ್ಯವಾಗಿದೆ. ಅಲ್ದೇ, ಬದಲಾಗ್ತಿರೋ ಜನರ ಆಶೋತ್ತರಗಳಿಗೆ ಕಾಂಗ್ರೆಸ್ ಬೆಲೆ ಕೊಡಬೇಕಿದೆ. ಇದು ನಿಜಕ್ಕೂ ರಾಹುಲ್ ಮುಂದಿರುವ ದೊಡ್ಡ ಸವಾಲು.

ಪ್ರಸ್ತುತ ಕಾಂಗ್ರೆಸ್ ಹಿಮಾಚಲ ಪ್ರದೇಶ, ಕರ್ನಾಟಕ, ಮಣಿಪುರ, ಮೇಘಾಲಯ, ಮಿಜೋರಾಂ, ಪುದುಚೆರಿ ಮತ್ತು ಪಂಜಾಬ್​ ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಹಿಮಾಚಲ ಪ್ರದೇಶದ ಚುನಾವಣೆ ಈಗಾಗಲೇ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಇನ್ನು ಸದ್ಯದಲ್ಲೇ ಕೆಲವು ರಾಜ್ಯಗಳ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಈ ಹೊತ್ತಿನಲ್ಲಿ ಕಾಂಗ್ರೆಸ್ ಶತಾಯಗತಾಯ ತನ್ನ ಅಸ್ತಿತ್ವನ್ನ ಉಳಿಸಿಕೊಳ್ಳೋದಕ್ಕೆ ಹೋರಾಡ್ಬೇಕಿದೆ. ಹಾಗಂತ ಹೇಳ್ತಿರೋದು ಸದ್ಯಕ್ಕೆ ಕಾಂಗ್ರೆಸ್‌ನಲ್ಲೇ ಇರೋ ಕೆಲವು ಹಿರಿ ಮತ್ತು ಕಿರಿ ತಲೆಗಳು. ಇವರ ಪ್ರಕಾರ, ಸೋನಿಯಾ ಗಾಂಧಿಯವ್ರು ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ರಾಹುಲ್ ಗಾಂಧಿಯವರಿಗೆ ಬಿಟ್ಟುಕೊಡೋದ್ರಿಂದ ಕಾಂಗ್ರೆಸ್‌ಗೆ ಲಾಭವಾಗಲಿದೆ ಎಂಬ ಲೆಕ್ಕಾಚಾರವೂ ಇದೆ.

ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್​​ನ ಸ್ಥಿತಿಗತಿ ಮತ್ತು ಪಕ್ಷವನ್ನು ತಳಮಟ್ಟದಿಂದ ಕಟ್ಟೋ ಮಹತ್ವದ ಜವಾಬ್ದಾರಿಯನ್ನು ಹೊರೋಕೆ ರಾಹುಲ್ ಗಾಂಧಿ ಸಿದ್ಧವಾಗಿದ್ದಾರೆ. ಅವರ ಮುಂದಿನ ನಡೆ ಹೇಗಿರಬಹುದು? ಅನ್ನೋ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.

ವಿಧಾನಸಭೆಗೆ ಚುನಾವಣೆ ನಡೆಯಲಿರುವ ರಾಜ್ಯಗಳು

ಇದೀಗ ಹಿಮಾಚಲ ಪ್ರದೇಶದ ಚುನಾವಣೆ ಮುಗಿದಿದ್ದು, ಗುಜರಾತ್​ನಲ್ಲಿ ಡಿಸೆಂಬರ್ 9 ಮತ್ತು 14ರಂದು ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ಮುಂದಿನ ವರ್ಷ ಕರ್ನಾಟಕ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಕಳೆದ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯ ಪೈಕಿ ಉತ್ತರಪ್ರದೇಶ, ಗೋವಾ, ಮಣಿಪುರ ಮತ್ತು ಉತ್ತರಾಖಂಡ್ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ. ಇವುಗಳ ಪೈಕಿ ಅತಿಹೆಚ್ಚು ಸ್ಥಾನಗಳನ್ನು ಗೆದ್ದ ಗೋವಾ ಮತ್ತು ಮಣಿಪುರ ರಾಜ್ಯಗಳಲ್ಲಿ ಅಧಿಕಾರ ಹಿಡಿಯುವಲ್ಲಿ ಕೂಡ ಕಾಂಗ್ರೆಸ್ ಸೋತಿದೆ. ಇನ್ನು ಪಂಜಾಬ್​​ನಲ್ಲಿ ಅಧಿಕಾರ ಹಿಡಿಯೋದ್ರಲ್ಲಿ ಕಾಂಗ್ರೆಸ್ ಸಫಲವಾಗಿದೆ.

ಈ ಎಲ್ಲ ಸಮಸ್ಯೆಗಳ ನಡುವೆ ಪಕ್ಷದ ಚುಕ್ಕಾಣಿಯನ್ನ ರಾಹುಲ್ ಗಾಂಧಿಯವ್ರಿಗೆ ವಹಿಸಿ ಅಂತಾ ಕಾಂಗ್ರೆಸ್ಸಿಗರು ಹೇಳಿದ್ರೆ, ಇದಕ್ಕೆ ಪ್ರತಿಯಾಗಿ ಬಿಜೆಪಿಯ ಕೆಲ ನಾಯಕ್ರು, ರಾಹುಲ್ ಗಾಂಧಿಯವ್ರಿಗೆ ಅಧ್ಯಕ್ಷ ಸ್ಥಾನ ಕೊಟ್ರೆ ಬಿಜೆಪಿಯ ’ಕಾಂಗ್ರೆಸ್ ಮುಕ್ತ ಭಾರತ’ದ ಕನಸನ್ನ ಈಡೇರಿಸಿಕೊಳ್ಳೋದು ಸುಲಭ ಅಂತ ವಾದಿಸ್ತಿದಾರೆ. ಆದರೆ, ವಾಸ್ತವದಲ್ಲಿ ಕಾಂಗ್ರೆಸ್ ಪಕ್ಷ ಈಗ ಅತ್ಯಂತ ದೊಡ್ಡ ಸವಾಲು ಎದುರಿಸುತ್ತಿದೆ. ಹಲವು ರಾಜ್ಯಗಳಲ್ಲಿ ಪಕ್ಷ ಅಧಿಕಾರ ಕಳೆದುಕೊಂಡಿದ್ದು, ಪ್ರತಿಪಕ್ಷ ಸ್ಥಾನಕ್ಕೇರಲು ಕೂಡಾ ಪರದಾಡುವ ಸ್ಥಿತಿ ಎದುರಾಗಿದೆ.

ಇಂತಾ ಟ್ರ್ಯಾಕ್ ರೆಕಾರ್ಡ್ ಇರೋ ರಾಷ್ರ್ಟೀಯ ಪಕ್ಷದ ಸಾರಥ್ಯ ವಹಿಸ್ಕೊಳ್ಳೋರಿಗೆ ನಿಜಕ್ಕೂ ಎಂಟೆದೆ ಇರಲೇಬೇಕು. ಇಷ್ಟು ದಿನಗಳ ಕಾಲ ಅನೇಕ ಕಾಂಗ್ರೆಸ್ಸಿಗರು ಸುಮ್ಮನಿರೋದು ಕೂಡ ಇದೇ ಕಾರಣಕ್ಕೆ. ಅಲ್ದೇ, ಈಗ ರಾಹುಲ್ ಗಾಂಧಿಯವ್ರನ್ನ ಅಧ್ಯಕ್ಷರನ್ನಾಗಿಸಿ, ಪಕ್ಷಕ್ಕೆ ಮತ್ತೆ ಹಳೇ ವರ್ಚಸ್ಸನ್ನ ಮರಳಿಸೋದಕ್ಕೆ ಸಾಧ್ಯವೇ ಅನ್ನೋ ಪ್ರಶ್ನೆಯಂತೂ ಸದ್ಯಕ್ಕೆ ಮಿಲಿಯನ್ ಡಾಲರ್ ಪ್ರಶ್ನೆಯೇ ಹೌದು. ಡಿಸೆಂಬರ್ ಒಂದರಂದು ಗಾಂಧಿ ವಿರುದ್ಧ ಯಾರೂ ನಾಮಪತ್ರ ಸಲ್ಲಿಸದೇ ಇದ್ದರೆ ಅಂದೇ ಬಹುತೇಕ ರಾಹುಲ್ ಅಧ್ಯಕ್ಷರಾಗೋದು ಖಚಿತವಾಗುತ್ತೆ.

ನಲ್ವತ್ತೈದು ವರ್ಷದ ಅವಿವಾಹಿತ ರಾಹುಲ್ ಗಾಂಧಿಯವ್ರನ್ನ ಕಾಂಗ್ರೆಸ್ ಪಕ್ಷದ ಅಧ್ಯಕ್ಷರನ್ನಾಗಿಸಿದರೆ ಲಾಭ ಇದೆಯೇ ಅನ್ನೋ ಪ್ರಶ್ನೆಗೆ, ಮುಂಬರುವ ಮೂರು ರಾಜ್ಯಗಳ ವಿಧಾನಸಭೆ ಚುನವಾಣಾ ಫಲಿತಾಂಶವೇ ಉತ್ತರವಾಗಲಿದೆ. ಕಾಂಗ್ರೆಸ್ ಪಕ್ಷಕ್ಕಿರೋ ಸವಾಲುಗಳನ್ನ ರಾಹುಲ್ ಹೇಗೆ ಎದುರಿಸುತ್ತಾರೆ? ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಮಾಡೋ ಕಾರ್ಯತಂತ್ರಗಳೇನು? ಕಾಂಗ್ರೆಸ್‌ನಿಂದ ದೂರವಾಗಿರೋ ಯುವ ಮತದಾರರನ್ನ ಸೆಳೆಯೋಕೆ ಕಾಂಗ್ರೆಸ್ ಯಾವ ತಂತ್ರ ರೂಪಿಸುತ್ತೆ? ಪಕ್ಷದಿಂದ ದೂರವಾಗಿರೋ ಹಿರಿ, ಕಿರಿಯ ನಾಯಕ್ರು, ಕಾರ್ಯಕರ್ತರನ್ನ ತನ್ನತ್ತ ಸೆಳೆಯೋಕೆ ಏನು ಮಾಡುತ್ತೆ? ಅನ್ನುವುದರ ಮೇಲೆ ಕಾಂಗ್ರೆಸ್‌ನ ಭವಿಷ್ಯ ನಿರ್ಧಾರವಾಗತ್ತೆ.

ಕಾಂಗ್ರೆಸ್‌ಗೆ ಸದ್ಯಕ್ಕೆ ಕೇಂದ್ರದಲ್ಲಿ ಅಧಿಕೃತ ವಿರೋಧ ಪಕ್ಷದ ಸ್ಥಾನವೂ ಸಿಕ್ಕಿಲ್ಲ. ಇನ್ನು ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ಬಿಹಾರ, ಜಮ್ಮು ಕಾಶ್ಮೀರದಲ್ಲಿ ಬಿಜೆಪಿ ಅಥವಾ ಅದರ ಮೈತ್ರಿಪಕ್ಷಗಳು ಅಧಿಕಾರದಲ್ಲಿದ್ರೆ, ಅರುಣಾಚಲ ಪ್ರದೇಶ, ಅಸ್ಸಾಂ, ಚತ್ತೀಸ್‌ಗಡ, ಗೋವಾ, ಗುಜರಾತ್, ಹರಿಯಾಣ, ಜಾರ್ಖಂಡ್, ಮಧ್ಯಪ್ರದೇಶ, ರಾಜಸ್ಥಾನ, ಸಿಕ್ಕಿಂ, ಉತ್ತರಾಖಂಡ್, ಉತ್ತರಪ್ರದೇಶ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣಗಳಲ್ಲಿ ಕೂಡ ಸದ್ಯಕ್ಕೆ ಕಾಂಗ್ರೆಸ್ ನೆಲೆ ಭದ್ರವಾಗಿಲ್ಲ. ಈ ಸಮಸ್ಯೆ ನಿಜಕ್ಕೂ ಪಕ್ಷ ಸಂಘಟನೆಗೆ ದೊಡ್ಡ ಸವಾಲಾಗಲಿದೆ.

ಇನ್ನೊಂದು ಪ್ರಮುಖ ತೊಡಕು ಅಂದ್ರೆ, ಕಾಂಗ್ರೆಸ್ ಇನ್ನೂ ಸಾಂಪ್ರದಾಯಿಕ ತಂತ್ರಗಳನ್ನೇ ನಂಬಿಕೊಂಡು ಚುನಾವಣೆಗಳ್ನ ಎದುರಿಸ್ತಿರೋದು. ಇದ್ರಿಂದ ಕಾಂಗ್ರೆಸ್ ಪಕ್ಷ ಯುವಜನಾಂಗವನ್ನ ತಲುಪೋದ್ರಲ್ಲಿ ವಿಫಲವಾಗಿದೆ. ಅಲ್ದೇ, ಆಧುನಿಕ ಸಂದರ್ಭಕ್ಕೆ ತಕ್ಕಂತೆ ತನ್ನ ನಿಲುವನ್ನ ಬದಲಾಯಿಸಿಕೊಂಡಿಲ್ಲ. ಆದರೆ, ಇತ್ತೀಚೆಗೆ ಈ ಸಮಸ್ಯೆಯಿಂದ ಹೊರಬರೋಕೆ ಕಾಂಗ್ರೆಸ್ ಕಾರ್ಯತಂತ್ರಗಳನ್ನು ರೂಪಿಸ್ತಿದೆ.

ಎಐಸಿಸಿ ಜೊತೆಗೆ ಪ್ರಾದೇಶಿಕ ಘಟಕಗಳು, ಸಚಿವರು, ಶಾಸಕರು, ಸಂಸದರು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗ್ತಿದಾರೆ. ಈ ಮೂಲಕ ಬಿಜೆಪಿ ಮತ್ತು ಸಂಘ ಪರಿವಾರದ ತಂತ್ರಗಳನ್ನು ಎದುರಿಸುವ ಪಡೆಯನ್ನು ಕಟ್ಟಲಾಗ್ತಿದೆ. ಇನ್ನು ಸಾಮಾಜಿಕ ಜಾಲತಾಣಗಳ ಉಸ್ತುವಾರಿಯನ್ನು ಮಾಜಿ ಸಂಸದೆ ರಮ್ಯಾ ಅವರಿಗೆ ವಹಿಸಲಾಗಿದೆ. ಅವರು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ಬಿಜೆಪಿ ಮತ್ತು ಸಂಘ ಪರಿವಾರದ ವಿರುದ್ಧ ಹೋರಾಟವನ್ನು ನಡೆಸ್ತಿದಾರೆ.

ರಾಜಕಾರಣದಲ್ಲಿ ಒಮ್ಮೆ ಕುಸಿತ ಶುರುವಾದ್ರೆ ಅದು ನಿಲ್ಲೋದಕ್ಕೆ ಬಹಳ ಸಮಯ ತಗುಲುತ್ತೆ. ಆದ್ರೆ, ಈ ಅವಧಿಯಲ್ಲಿ ಪಕ್ಷವನ್ನ ಮತ್ತೆ ಅಧಿಕಾರದ ಜಾಡಿಗೆ ತರೋದಕ್ಕೆ ಸಮರ್ಥ ನಾಯಕರ ದುಡಿಮೆಯ ಅಗತ್ಯವಿರುತ್ತೆ. ಕಾಂಗ್ರೆಸ್ ಪಕ್ಷದಲ್ಲಿ ಸದ್ಯಕ್ಕೆ ಮುಖ್ಯಮಂತ್ರಿಗಳಾಗಿರುವವರು ಮತ್ತೆ ತಮ್ಮ ಪಕ್ಷವನ್ನ ತಮ್ಮ ರಾಜ್ಯಗಳಲ್ಲಿ ಅಧಿಕಾರಕ್ಕೆ ತರೋದಕ್ಕೂ ಅಸಮರ್ಥರಾಗ್ತಿದಾರೆ. ಇನ್ನು ಇವ್ರಿಂದ ರಾಷ್ಟ್ರ ರಾಜಕಾರಣಕ್ಕೆ ಕೊಡುಗೆ ಸಿಕ್ಕೋದು ಸಾಧ್ಯವೇ? ಅನ್ನೋ ಪ್ರಶ್ನೆ ಎದುರಾಗಿದೆ.

ದೇಶದಲ್ಲಿ ಯುವಕರ ಸಂಖ್ಯೆ ಹೆಚ್ಚಿದೆ. ಯುವಕರ ಆಶೋತ್ತರಗಳೆಡೆಗೆ ಸದ್ಯಕ್ಕೆ ಕಾಂಗ್ರೆಸ್ ಗಮನವನ್ನೇ ನೀಡಿಲ್ಲ. ಹೊಸ ಉದ್ಯೋಗ ಸೃಷ್ಟಿಯಲ್ಲಿ ಹಿಂದೆ, ಬಂಡವಾಳ ಕ್ರೂಡೀಕರಣದಲ್ಲಿ ಸೋಲು, ಸಂಪತ್ತಿನ ಹಂಚಿಕೆಯಲ್ಲಿ ದೇಶವನ್ನ ಹಿಂದುಳಿಸಿದ ಅಪಕೀರ್ತಿಯ ಆರೋಪವನ್ನು ಕಾಂಗ್ರೆಸ್ ಹೊತ್ತಿದೆ. ಇಂಥ ಸಂದರ್ಭದಲ್ಲಿ, ಈ ಎಲ್ಲ ಆಪಾದನೆಗಳಿಗೆ ಸೂಕ್ತ ಉತ್ತರವನ್ನ ನೂತನ ಅಧ್ಯಕ್ಷ ರಾಹುಲ್ ಗಾಂಧಿ ನೀಡಬೇಕಾಗಿದೆ.

ಕಳೆದ ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ ತಮ್ಮ ಸರ್ಕಾರದ ಸಾಧನೆಗಳನ್ನ ಸಮರ್ಥವಾಗಿ ಜನರ ಮುಂದಿಡುವಲ್ಲಿ ಸಂಪೂರ್ಣವಾಗಿ ಸೋತಿತ್ತು. ಅದ್ರ ಬದಲಾಗಿ, ನರೇಂದ್ರ ಮೋದಿಯವ್ರ ವಿರುದ್ಧ ವಾಗ್ದಾಳಿಗೆ ಪಕ್ಷ ಮತ್ತು ಮುಖಂಡರು ಸೀಮಿತವಾಗಿಬಿಟ್ಟಿದ್ರು. ಆಹಾರ ಭದ್ರತೆ ಕಾಯ್ದೆ, ಶಿಕ್ಷಣ ಹಕ್ಕು ಕಾಯ್ದೆ, ಮಾಹಿತಿ ಹಕ್ಕು ಕಾಯ್ದೆ, ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ, ನರೇಗ ಯೋಜನೆ, ಫುಟ್‌ಪಾತ್ ವ್ಯಾಪಾರಿಗಳಿಗೆ ಪರವಾನಗಿ ಮೊದಲಾದ ತಮ್ಮ ಸರ್ಕಾರದ ಜನೋಪಯೋಗಿ ಕಾರ್ಯಗಳನ್ನ ಸ್ವತಃ ಕಾಂಗ್ರೆಸ್ ಮರೆತುಬಿಟ್ಟಿತ್ತು. ಇದ್ರ ಪರಿಣಾಮದಿಂದಾಗಿ ಹೀನಾಯವಾಗಿ ಸೋತಿತ್ತು. ಬದಲಾದ ರಾಜಕೀಯ ಸಂದರ್ಭಕ್ಕೆ ಕಾಂಗ್ರೆಸ್ ಪಕ್ಷ ಮಾಡಿಕೊಳ್ತಿರುವ ಬದಲಾವಣೆ ಸೇರಿದಂತೆ ಅನೇಕ ಸವಾಲುಗಳಿಗೆ ಮುಖಾಮುಖಿಯಾಗ್ತಿದೆ.

ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಬೇಕು ಅನ್ನೋದು ರಾಹುಲ್ ಗಾಂಧಿ ವಾದ. ಆದರೆ, ಈ ಪ್ರಸ್ತಾವನೆಗೆ ಕೆಲವು ಹಿರಿಯರು ಅಸಮಾಧಾನ ಹೊಂದಿದ್ದಾರೆ ಅನ್ನೋ ಮಾತು ಕೂಡ ಕೇಳಿಬಂದಿದೆ. ಇನ್ನು ರಾಹುಲ್ ದೇಶದಲ್ಲಿ ಇರುವ ಜ್ವಲಂತ ಸಮಸ್ಯೆಗಳ ಕುರಿತು ದೇಶ ಸುತ್ತೋದ್ರ ಮೂಲಕ ಮತ್ತು ಯುವಕರೊಂದಿಗೆ ಸಂವಾದ ಮಾಡೋದ್ರ ಮೂಲಕ ತಿಳಿವಳಿಕೆ ಪಡೆಯೋಕೆ ಕೂಡ ಯತ್ನಿಸ್ತಿದಾರೆ.

ದೇಶ ಸುತ್ತುತ್ತಿರುವ ಯುವರಾಜ

ಗುಜರಾತ್ ಸೇರಿದಂತೆ ಅನೇಕ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗಳಿಗೆ ಕಾಲ ಸನ್ನಿಹಿತವಾಗಿದೆ. ಆದರೆ, ಕೇವಲ ಚುನಾವಣೆಗಾಗಿ ಅಷ್ಟೇ ಅಲ್ಲದೇ, ಸಂದರ್ಭ ಸಿಕ್ಕಾಗಲೆಲ್ಲ ರಾಹುಲ್ ಜನ, ಯುವಕರು, ರೈತರುಗಳನ್ನು ಭೇಟಿಯಾಗಿ ಅವರೊಂದಿಗೆ ಸಂವಾದ ನಡೆಸೋ ಕೆಲಸವನ್ನು ಮಾಡ್ತಿದಾರೆ. ಈ ಮೂಲಕ ಜನರ ಆಶೋತ್ತರಗಳೇನು? ಅನ್ನೋದನ್ನು ಸ್ವತಃ ತಿಳ್ಕೊಳ್ಳೋಕೆ ಯತ್ನಿಸ್ತಿದಾರೆ.

ದೇಶಕ್ಕೆ ಸುಂದರವಾದ ಮತ್ತು ಉಜ್ವಲವಾದ ಭವಿಷ್ಯವಿದೆ ಅಂಥಾ ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ, ಕೆಲವು ಮಿತಿಗಳೂ ಇವೆ. ಅವುಗಳನ್ನು ನಾವು ಒಪ್ಪಿಕೊಳ್ಳುತ್ತೇವೆ ಅನ್ನೋದ್ರ ಮೂಲಕ ದೇಶದ ಮಿತಿಗಳ ಕುರಿತು ಪೊಳ್ಳು ಭ್ರಮೆ ಇಟ್ಕೊಳ್ಳೋದು ಒಳ್ಳೇದಲ್ಲ ಅನ್ನೋ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ. ಇನ್ನು ದೇಶದಲ್ಲಿ ಅತಿ ದೊಡ್ಡ ಶಕ್ತಿ ಇದೆ. ಅದರ ಬಲದ ಆಧಾರದ ಮೇಲೆ ದೇಶವನ್ನು ಮುನ್ನಡೆಸಬೇಕು ಅಂಥಾ ಕರೆ ನೀಡಿರೋ ಅವರು, ದೇಶದ ಅತಿ ದೊಡ್ಡ ಶಕ್ತಿಯೆಂದರೆ ಸತ್ಯವನ್ನು ಒಪ್ಪಿಕೊಳ್ಳುವುದು. ಈ ದೇಶ ಮತ್ತು ಎಲ್ಲ ಧರ್ಮಗಳು ಸತ್ಯವನ್ನು ಹುಡುಕಿ, ಅದನ್ನು ಅನುಸರಿಸಿ ಎನ್ನತ್ತವೆ. ಆದರೆ, ಗುಜರಾತಿನಲ್ಲಿ ನರೇಂದ್ರ ಮೋದಿಯವರು ಸುಳ್ಳಿನ ರಾಜನೀತಿಯನ್ನು ಅನುಸರಿಸುತ್ತಿದ್ದಾರೆ. ಅವರು ಚುನಾವಣೆಯಲ್ಲಿ ಸೋಲುತ್ತಾರೆ ಅಂಥಾ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇತ್ತೀಚಿನ ರಾಹುಲ್ ಅವರ ನಡೆಯಲ್ಲಿ ಪ್ರಬುದ್ಧತೆ, ಮೊನಚು ಕಂಡು ಬರ್ತಿದೆ. ದೇಶವನ್ನು ನೋಟು ನಿಷೇಧ ಮತ್ತು ಜಿಎಸ್​ಟಿ ಮೂಲಕ ಇಕ್ಕಟ್ಟಿಗೆ ಸಿಲುಕಿಸಿದ ಪ್ರಧಾನಿ ಮೋದಿಯವರ ನಡೆಯನ್ನು ಅವರು ಕಟುವಾಗಿ ಟೀಕಿಸಿದ್ದಾರೆ. ಆದರೆ, ಸಭ್ಯತೆಯ ಎಲ್ಲೆಯನ್ನು ಮೀರದಂತೆ ಅವರು ಎಚ್ಚರವನ್ನೂ ವಹಿಸ್ತಾರೆ. ದೇಶಕ್ಕೆ ಐದು ಬಗೆಯ ತೆರಿಗೆಗಳು ಬೇಕಿಲ್ಲ ಎಂದು ಅವರು ಜಿಎಸ್​​ಟಿಯನ್ನು ಟೀಕಿಸಿದ್ದಾರೆ. ಅಲ್ದೇ, ಇಡೀ ದೇಶಕ್ಕೆ ಅನ್ವಯಿಸುವ ಒಂದೇ ತೆರಿಗೆ ಬೇಕು ಅಂಥಾ ಅವ್ರು ಆಗ್ರಹಿಸಿದ್ದಾರೆ. ಅಲ್ಲದೇ, ಜಿಎಸ್​​ಟಿಯಲ್ಲಿ ರಚನಾತ್ಮಕ ಬದಲಾವಣೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ದೇಶದ ಜನ ಮತ್ತು ಕಾಂಗ್ರೆಸ್ ಪಕ್ಷ ಬಿಜೆಪಿ ಮೇಲೆ ಒತ್ತಡ ಹೇರಿತ್ತು. ಇದರ ಪರಿಣಾಮದಿಂದಾಗಿ ಶೇ. 28ರಷ್ಟಿದ್ದ ಜಿಎಸ್​​ಟಿ ಶೇ. 18ಕ್ಕೆ ಇಳಿದಿದೆ ಎಂದು ರಾಹುಲ್, ಜಿಎಸ್ಟಿ ಇಳಿಕೆಯ ವಿಷಯವನ್ನು ವ್ಯಾಖ್ಯಾನಿಸಿದ್ದಾರೆ. ಇನ್ನು ದೇಶಕ್ಕೆ ಗಬ್ಬರ್ ಸಿಂಗ್ ಟ್ಯಾಕ್ಸ್​​ನ ಅಗತ್ಯವಿಲ್ಲ. ದೇಶಕ್ಕೆ ಬೇಕಿರುವುದು ಸರಳ ತೆರಿಗೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಕಾಂಗ್ರೆಸ್ ಮತ್ತು ಜನ ಹೋರಾಡಿ ತೆರಿಗೆಯ ಪ್ರಮಾಣವನ್ನು ಇಳಿಸಿದ್ದಾರೆ. ಸರ್ಕಾರ ಗರಿಷ್ಠ ತೆರಿಗೆಯನ್ನು ಶೇ.18ಕ್ಕೆ ನಿಗದಿಮಾಡಬೇಕು. ಸರ್ಕಾರ ತೆರಿಗೆ ಇಳಿಸದಿದ್ದಲ್ಲಿ ಕಾಂಗ್ರೆಸ್ ಇಳಿಸಿ ತೋರಿಸುತ್ತೆ ಅಂಥಾ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇನ್ನು ಬಿಜೆಪಿ ಪೇಯ್ಡ್​​ ಸಾಮಾಜಿಕ ಜಾಲತಾಣದ ತಂಡವನ್ನು ಹೊಂದಿದೆ ಅಂಥಾ ಕೂಡ ಅವರು ಆರೋಪಿಸಿದ್ದಾರೆ. ಮೋದಿವಯರು ವಿಪಕ್ಷದಲ್ಲಿದ್ದಾಗ ಪ್ರಧಾನಿಗೆ ಅವಮಾನ ಮಾಡಿದ್ದರು. ಆದರೆ, ನಾವು ಟೀಕಿಸುವ ಸಮಯದಲ್ಲಿ ಸಭ್ಯತೆಯ ಎಲ್ಲೆಯನ್ನು ಮೀರುವುದಿಲ್ಲ. ನಾವು ಅಸ್ತಿತ್ವದಲ್ಲಿರುವ ಸಮಸ್ಯೆಗಳನ್ನು ಮಾತ್ರ ಪ್ರಸ್ತಾಪಿಸುತ್ತೇವೆ. ಪ್ರಧಾನಿ ಸ್ಥಾನಕ್ಕೆ ಅಗೌರವ ತೋರಿಸುವುದಿಲ್ಲ ಎಂದು ಅವರು ಹೇಳಿದರು. ಈ ಮೂಲಕ ಪರೋಕ್ಷವಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ನಿಂದನೆಯಲ್ಲಿ ನಿರತವಾಗಿರುವ ಮೋದಿಯವರ ಬೆಂಬಲಿಗರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಹಂತಹಂತವಾಗಿ ತಮ್ಮ ವಿರೋಧಿಗಳಲ್ಲಿ ಪರಿವರ್ತನೆ ತರುವ ನಿಟ್ಟಿನಲ್ಲಿ ಯತ್ನಿಸ್ತಿದಾರೆ.

ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ ಮಹಾರಾಷ್ಟ್ರ ಮತ್ತು ದೆಹಲಿಗಳಲ್ಲಿ ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಯ ವಿರುದ್ಧ ಅನೇಕ ಹೋರಾಟಗಳು ನಡೆದವು. ಇಂಥ ಸಂದರ್ಭದಲ್ಲಿ ರಾಹುಲ್ ಗಾಂಧಿ ಸ್ವತಃ ರೈತರ ಪ್ರತಿಭಟನೆಗಳ ಸ್ಥಳಕ್ಕೆ ಹೋಗಿ ಅವರಿಗೆ ಸಾಂತ್ವನ ಹೇಳುವ ಕೆಲಸವನ್ನು ಮಾಡಿದ್ದಾರೆ. ಇನ್ನು ದಲಿತರು, ಅಲ್ಪಸಂಖ್ಯಾತರ ಮೇಲೆ ಗೋರಕ್ಷಕರು ದಾಳಿ ನಡೆಸಿ ಹತ್ಯೆಗೈದ ಸಂದರ್ಭದಲ್ಲಿ ಕೂಡ ಅವರು, ನೊಂದ ಕುಟುಂಬಗಳ ಕಣ್ಣೀರನ್ನು ಒರೆಸುವ ಕೆಲಸಗಳನ್ನು ಮಾಡಿದ್ದಾರೆ.

ಇನ್ನು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಗಳಿಗೂ ಚುನಾವಣೆ ನಡೆಸಲು ಕಾಂಗ್ರೆಸ್ ಪಕ್ಷ ಚಿಂತನೆ ನಡೆಸಿದೆ. ನಾಮಪತ್ರಗಳನ್ನು ಪಕ್ಷದ ರಾಜ್ಯದ ರಾಜಧಾನಿ ಅಥವಾ ಕಾಂಗ್ರೆಸ್ ಪಕ್ಷದ ಮುಖ್ಯ ಕಚೇರಿಗಳಲ್ಲಿ ಸಲ್ಲಿಸಲು ಸೂಚಿಸಲಾಗಿದೆ. ಈಗಾಗಲೇ ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿ ಚುನಾವಣಾ ಅಧಿಕಾರಿಯೊಂದಿಗೆ ಪರಿಶೀಲನೆ ಕಾರ್ಯವನ್ನು ಕೂಡ ನಡೆಸಿದೆ. ಇನ್ನು ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ಸಲುವಾಗಿ ಸ್ಥಳೀಯ ಚುನಾವಣೆ ಮೂಲಕ ಅಭ್ಯರ್ಥಿ ಆಯ್ಕೆ ಪದ್ಧತಿಯ ಪರ ರಾಹುಲ್ ಗಾಂಧಿ ನಿಲುವು ಹೊಂದಿದ್ದಾರೆ. ಈ ಮೂಲಕ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವವನ್ನು ಜಾರಿಗೆ ತರುವ ನಿಟ್ಟಿನಲ್ಲಿ ರಾಹುಲ್ ಚಿಂತನೆ ನಡೆಸಿದ್ದಾರೆ.

ಈ ಮೂಲಕ ಶತಮಾನಗಳ ಇತಿಹಾಸ ಇರುವ ಪಕ್ಷದಲ್ಲಿ ಮತ್ತೊಂದು ಸುತ್ತಿನ ಬದಲಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಕೆಲಸದಲ್ಲಿ ರಾಹುಲ್ ನಿರತರಾಗಿದ್ದಾರೆ. ರಾಹುಲ್ ಸ್ಥಳೀಯ ಅಭ್ಯರ್ಥಿ ಆಯ್ಕೆಗೂ ಚುನಾವಣೆಯ ಮೊರೆ ಹೋಗಬೇಕೆಂದು ಬಯಸಿದ್ದಾರೆ. ಆದರೆ, ಈ ಅಭಿಪ್ರಾಯಕ್ಕೆ ಪಕ್ಷದ ಹಿರಿಯರು ಅಸಮ್ಮತಿ ಸೂಚಿಸಿದ್ದಾರೆ ಎಂದು ವರದಿಯಾಗಿದೆ. ವಿಧಾನಸಭೆ, ಲೋಕಸಭೆ ಚುನಾವಣೆಗೆ ಸ್ಥಳೀಯವಾಗಿ ಚುನಾವಣೆ ನಡೆಸಿ ಆಯ್ಕೆ ಮಾಡುವ ಪದ್ಧತಿಯಲ್ಲಿ ಪಕ್ಷಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎನ್ನುವುದು ಹಿರಿಯರ ಅಭಿಪ್ರಾಯ. ಅವರ ಪ್ರಕಾರ, ಈ ಪದ್ಧತಿಯಿಂದ ಪಕ್ಷದಲ್ಲಿ ಆಂತರಿಕ ಕಚ್ಚಾಟ ಮತ್ತು ಭಿನ್ನಮತ ತೀವ್ರಗೊಳ್ಳುತ್ತವೆ. ಇದರಿಂದಾಗಿ ಭವಿಷ್ಯದಲ್ಲಿ ಪಕ್ಷಕ್ಕೆ ಮತ್ತಷ್ಟು ಹಾನಿಯಾಗುವ ಸಾಧ್ಯತೆ ಇದೆ ಎಂದು ಹಿರಿಯರು ವಾದಿಸುತ್ತಿದ್ದಾರೆ.

ಒಟ್ಟಿನಲ್ಲಿ ಸ್ಥಿತ್ಯಂತರ ಘಟ್ಟದಲ್ಲಿರುವ ದೇಶದ ಜನರ ಮನಃಸ್ಥಿತಿಯನ್ನು ಪಕ್ಷ ಹೇಗೆ ತನ್ನ ಪರವಾಗಿ ತಿರುಗಿಸಿಕೊಳ್ಳುತ್ತದೆ? ಬಿಕ್ಕಟ್ಟಿನ ಸಂದರ್ಭದಲ್ಲಿ ಪಕ್ಷವನ್ನು ಮುನ್ನಡೆಸೋಕೆ ಕಾಂಗ್ರೆಸ್‌ಗೆ ಒಬ್ಬ ದಕ್ಷ ಆಡಳಿತಗಾರ, ಚಾಣಾಕ್ಷ ರಾಜನೀತಿಜ್ಞ ಮತ್ತು ಆಡಳಿತ ಪಕ್ಷದ ತಪ್ಪುಗಳನ್ನು ತಕ್ಷಣ ಕಂಡುಹಿಡಿದು ವಿಮರ್ಶಿಸುವ ಹದ್ದಿನಕಣ್ಣಿನ ನಾಯಕನ ಅಗತ್ಯವಿದೆ. ಇದನ್ನೆಲ್ಲ ರಾಹುಲ್ ಗಾಂಧಿಯವ್ರಿಂದ ಕಾಂಗ್ರೆಸ್ಸಿಗರು ನಿರೀಕ್ಷಿಸ್ತಿದಾರೆ. ಶತಮಾನಗಳ ಇತಿಹಾಸ ಹೊಂದಿರೋ ಪಕ್ಷ ನಿರ್ಣಾಯಕ ತಿರುವಿನಲ್ಲಿ ನಿಂತಿದೆ. ಹೊಸ ನಾಯಕನ ನಿರೀಕ್ಷೆಯಿಂದ ಕಾದಿದೆ. ಇದ್ರಿಂದಾದ್ರೂ ಪಕ್ಷ ಮತ್ತೆ ಚೇತರಿಕೆ ಕಾಣುತ್ತಾ ಕಾದು ನೋಡಬೇಕಿದೆ.

ದೇಶದ ಅತ್ಯಂತ ಹಳೆಯ ಪಕ್ಷ ಕಾಂಗ್ರೆಸ್​​ನ ಚುಕ್ಕಾಣಿಯನ್ನು ಹಿಡಿಯೋಕೆ ಯುವಕ ರಾಹುಲ್ ಗಾಂಧಿ ಸಜ್ಜಾಗಿದ್ದಾರೆ. ಈ ಮೂಲಕ ಯುವ ಜನರನ್ನು ಸೆಳೆಯೋ ಪಕ್ಷದ ಉದ್ದೇಶ ಸಾಧನೆಯಾಗುತ್ತಾ? ಯುವಕರನ್ನು ರಾಹುಲ್ ಗಾಂಧಿ ಹೇಗೆ ತಮ್ಮ ಪಕ್ಷದತ್ತ ಸೆಳೀತಾರೆ? ಅನ್ನೋ ಪ್ರಶ್ನೆಗಳು ಸದ್ಯಕ್ಕೆ ಎದುರಾಗಿವೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *