12 ವರ್ಷ ನಂತರ ತೆರೆಮೇಲೆ ಒಂದಾಗ್ತಿದ್ದಾರೆ ಅಣ್ಣ-ತಂಗಿ

ಕೆಲ ದಿನಗಳಿಂದ ಯಾವುದೇ ಸುದ್ದಿಯಿಲ್ಲದೆ ಸೈಲೆಂಟಾಗಿದ್ದ ನಟಿ ರಾಧಿಕಾ ಕುಮಾರಸ್ವಾಮಿ. ಇದೀಗ ಚಂದನವನದಲ್ಲಿ ಮತ್ತೆ ಸಖತ್​ ಸೌಂಡ್​ ಮಾಡ್ತಿದ್ದಾರೆ.

ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್​ ಮತ್ತು ರಾಧಿಕಾ ಕುಮಾರಸ್ವಾಮಿ ಈ ಮೊದಲು ತವರಿಗೆ ಬಾ ತಂಗಿ ಮತ್ತು ಅಣ್ಣ ತಂಗಿ ಚಿತ್ರದಲ್ಲಿ ನಟಿಸಿದ್ರು. ಇವರಿಬ್ಬರ ಅಣ್ಣ ತಂಗಿ ಕಾಂಬಿನೇಷನ್ನಿನ ಸಿನಿಮಾ ಗಾಂಧೀನಗರದ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಸದ್ದು ಮಾಡಿತ್ತು. ಇದೀಗ ಈ ಅಣ್ಣ ತಂಗಿ ಫೇವರೇಟ್​ ಜೋಡಿ ಮತ್ತೆ ತೆರೆಮೇಲೆ ಮೋಡಿ ಮಾಡಲು ಮುಂದಾಗಿದ್ದಾರೆ.

ಈ ಮುಂಚೆ ಸಾಕಷ್ಟು ಸಾಂಸಾರಿಕ ಮತ್ತು ಅಣ್ಣ ತಂಗಿ ಬಾಂಧವ್ಯವಿರುವಂತ ಕಥೆಗಳನ್ನು ಕನ್ನಡಕ್ಕೆ ಕೊಟ್ಟ ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್​, ತವರಿಗೆ ಬಾ ತಂಗಿ ಮತ್ತು ಅಣ್ಣ ತಂಗಿ ಚಿತ್ರದ ನಂತರ ಶಿವರಾಜ್​ಕುಮಾರ್​ ಮತ್ತು ರಾಧಿಕಾ ಕುಮಾರಸ್ವಾಮಿಗೆ ಹೊಸ ಸಿನಿಮಾ ಮಾಡಲು ಎಲ್ಲ ರೀತಿಯ ತಯಾರಿಯಲ್ಲಿದ್ದಾರೆ. ಸದ್ಯ ಓಂ ಸಾಯಿಪ್ರಕಾಶ್​ ಚಿತ್ರದ ಸ್ಕ್ರಿಪ್ಟ್​ ಕೆಲಸದಲ್ಲಿ ಬ್ಯುಸಿಯಾಗಿದ್ದು ಮಾರ್ಚ್​ ತಿಂಗಳಿನಲ್ಲಿ ಈ ಹೊಸ ಚಿತ್ರ ಸೆಟ್ಟೇರಲಿದೆ.

ಇಷ್ಟು ವರ್ಷಗಳ ಕಾಲ ರಾಧಿಕಾ ಕುಮಾರಸ್ವಾಮಿ ಗ್ಲಾಮರ್​ ಪಾತ್ರಗಳಲ್ಲಿ ಮತ್ತು ಕೌಟುಂಬಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಮೊಟ್ಟ ಮೊದಲ ಬಾರಿಗೆ ಹಾರರ್​ ಚಿತ್ರವೊಂದರಲ್ಲಿ ನಟಿಸಲು ಒಕೆ ಹೇಳಿದ್ದಾರೆ. ಈಗಾಗಲೇ ಚಿತ್ರದ ಕಥೆ ಕೇಳಿ ಒಪ್ಪಿಗೆ ಸೂಚಿಸಿರುವ ರಾಧಿಕಾ ಕುಮಾರ ಸ್ವಾಮಿ ಮೊಟ್ಟ ಮೊದಲ ಬಾರಿಗೆ ಹಾರರ್ ಸಿನಿಮಾವೊಂದರಲ್ಲಿ ನಟಿಸಲು ಮುಂದಾಗಿದ್ದಾರೆ. ಹೊಸಬರ ತಂಡ ಈ ಹಾರರ್​ ಚಿತ್ರ ಮಾಡಲು ಮುಂದಾಗಿದ್ದು, ರಾಧಿಕಾ ಕುಮಾರಸ್ವಾಮಿ ಹಾರರ್​ ಚಿತ್ರದಲ್ಲಿ ನಟಿಸಲು ಉತ್ಸುಕರಾಗಿದ್ದಾರೆ.

ಸದ್ಯ ರಾಧಿಕಾ ಕುಮಾರಸ್ವಾಮಿ ಕ್ರೇಜಿಸ್ಟಾರ್​ ರವಿಚಂದ್ರನ್ ನಿರ್ದೇಶನದ​ ರಾಜೇಂದ್ರಪೊನ್ನಪ್ಪ ಚಿತ್ರದಲ್ಲಿ ನಟಿಸುತ್ತಿದ್ದಾರೆ. 2006ರಲ್ಲಿ ಹಠವಾದಿ ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿ ರವಿಚಂದ್ರನ್​ ಜೊತೆ ನಟಿಸಿದ್ದರು. ಇದೀಗ ಒಂದು ದಶಕದ ನಂತರ ಈ ಜೋಡಿ ಮತ್ತೆ ತೆರೆಮೇಲೆ ಮೋಡಿ ಮಾಡಲು ಮುಂದಾಗಿದೆ.

ಈ ರಾಜೇಂದ್ರ ಪೊನ್ನಪ್ಪ ಚಿತ್ರಕ್ಕೆ ರವಿಚಂದ್ರನ್ ಅವರೇ ಕಥೆ ಬರೆದು ನಿರ್ದೇಶನದ ಜೊತೆಗೆ ನಿರ್ಮಾಣವನ್ನು ಮಾಡುತ್ತಿದ್ದಾರೆ. ಚಿತ್ರದಲ್ಲಿ ರವಿಚಂದ್ರನ್​ ವಕೀಲನ ಪಾತ್ರದಲ್ಲಿ ನಟಿಸುತ್ತಿದ್ದು, ರಾಧಿಕಾ ಕುಮಾರಸ್ಟಾಮಿ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಯಾವುದೇ ಮಾಹಿತಿ ಹೊರಬಂದಿಲ್ಲ. ಒಟ್ಟಾರೆ ರಾಧಿಕಾ ಕುಮಾರಸ್ವಾಮಿ ಬ್ಯಾಕ್​ ಟು ಬ್ಯಾಕ್​ ಮೂರು ವಿಭಿನ್ನ ಚಿತ್ರಗಳಲ್ಲಿ ಬ್ಯುಸಿಯಾಗಿದ್ದು, ಮುಂದಿನ ವರ್ಷದಲ್ಲಿ ಈ ಎಲ್ಲಾ ಚಿತ್ರಗಳು ತೆರೆಮೇಲೆ ಬರಲಿವೆ.

ಹರೀಶ್.ಕೆ.ಗೌಡ. ಫಿಲ್ಮ್​ ಬ್ಯೂರೋ, ಸುದ್ದಿ ಟಿವಿ.

0

Leave a Reply

Your email address will not be published. Required fields are marked *