ತೆಲಂಗಾಣ ರಾಜ್ಯದಲ್ಲಿ ಆಟ ಬದಲಿಸಿದ ಡಾ. ಆರ್. ಎಸ್. ಪ್ರವೀಣ್ ಕುಮಾರ್

ಮುಖ್ಯವಾಹಿನಿ ಅಭಿವೃದ್ಧಿಗೆ ಕಾಣದೆ ಉಳಿದ ಅಭಿವೃದ್ಧಿ ಮಾದರಿ

 • ಜಾತಿ ನಿರ್ಮೂಲನೆಗಿಂತ ಮೊದಲು ಭಯ ನಿರ್ಮೂಲನೆ ಯಾಗಬೇಕು – ಡಾ. ಆರ್. ಎಸ್. ಪ್ರವೀಣ್ ಕುಮಾರ್
 • ಒಬ್ಬ ಮನುಷ್ಯನನ್ನು ಕೊಲ್ಲುವುದು ಯುದ್ಧವಲ್ಲ. ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಮನುಷ್ಯನನ್ನಾಗಿ ರೂಪಿಸುವುದು ಜ್ಞಾನ ಯುದ್ಧ – ಡಾ. ಆರ್. ಎಸ್. ಪ್ರವೀಣ್ ಕುಮಾರ್

ಡಾ. ಆರ್. ಎಸ್. ಪ್ರವೀಣ್ ಕುಮಾರ್, ಐ.ಪಿ.ಎಸ್. ಕಾರ್ಯದರ್ಶಿ, ತೆಲಂಗಾಣ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳ ಸಂಸ್ಥೆ ಇವರ ಸಂದರ್ಶನ.

ಆರ್. ಎಸ್. ಪ್ರವೀಣ್ ಕುಮಾರ್, ಐ.ಪಿ.ಎಸ್. ಅಧಿಕಾರಿಯಾಗಿ ಇಂದು ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ. ತೆಲಂಗಾಣ ಸಮಾಜ ಕಲ್ಯಾಣ ಇಲಾಖೆಯಲ್ಲಿ 268 ವಸತಿ ಶಾಲೆಗಳಿವೆ. ಈ ಶಾಲೆಯಲ್ಲಿ ಮಕ್ಕಳಿಗೆ ಉಚಿತವಾಗಿ ಗುಣಮಟ್ಟದ ಶಿಕ್ಷಣ, ಆಹಾರ, ವಸತಿ ವ್ಯವಸ್ಥೆಯನ್ನು ಲಕ್ಷಾಂತರ ಜನ ಮಕ್ಕಳಿಗೆ ಪ್ರತಿ ವರ್ಷ ಕಲ್ಪಿಸುತ್ತಿದ್ದಾರೆ. ಈ ಶಾಲೆಗಳಲ್ಲಿ ಐದನೇ ತರಗತಿಯಿಂದ ಪ್ರಾರಂಭವಾಗಿ ಪದವಿ ಪೂರ್ವ ಶಿಕ್ಷಣದವರೆಗೆ ಶಿಕ್ಷಣ ನೀಡಲಾಗುತ್ತಿದೆ. ಹೆಣ್ಣು ಮಕ್ಕಳಿಗಾಗಿ 30 ವಸತಿ ಸಹಿತ ಪ್ರಥಮ ದರ್ಜೆ ಕಾಲೇಜುಗಳನ್ನು ಪ್ರಾರಂಭಿಸಿದ್ದಾರೆ. ಎರಡು ಸೇನಾ ಶಾಲೆಗಳು, ಎರಡು ನೌಕಾ ಸೇನಾ ಶಾಲೆಗಳು, ಪ್ರತ್ಯೇಕ ಸೆಂಟರ್ ಫಾರ್ ಎಕ್ಸಲೆನ್ಸ್‍ಗಳು, ಪ್ರತಿ ವಿಷಯಕ್ಕೆ ಪ್ರತ್ಯೇಕವಾಗಿ ಸ್ಥಾಪಿಸಲಾಗಿದೆ. ಇದಲ್ಲದೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕೇಂದ್ರಗಳನ್ನು ಪ್ರಾರಂಭಿಸಿದ್ದಾರೆ. ಈ ಶಾಲೆಗಳಲ್ಲಿ ಪ್ರವೇಶ ಪಡೆಯಲು ವಾರ್ಷಿಕ ಒಂದು ಲಕ್ಷ ರೂ. ಆದಾಯಕ್ಕಿಂತ ಕಡಿಮೆ ಆದಾಯ ಹೊಂದಿರಬೇಕು.

ಮಕ್ಕಳು ಶಿಕ್ಷಣ ಪಡೆದು ಏನಾದರೂ ಆಗಬೇಕು ಎನ್ನುವುದು ಪೋಷಕರ ನಿರೀಕ್ಷೆ. ಶಿಕ್ಷಕರು ತಮ್ಮ ಕರ್ತವ್ಯವನ್ನು ಪೂರೈಸುವ ಜವಬ್ದಾರಿ ವಹಿಸಿಕೊಳ್ಳಬೇಕು. ಆದರೆ, 21ನೇ ಶತಮಾನದಲ್ಲಿ ಮಾರುಕಟ್ಟೆಗೆ ಬೇಕಾದ ಅವಶ್ಯಕತೆ ಒಂದೆಡೆ ಇದೆ. ಸಮುದಾಯಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾದರೆ ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಿಸಬೇಕಾಗಿದೆ. ಅದಕ್ಕೆ ಅವರಿಗೆ ಬೇಕಾದ ಶಿಕ್ಷಣವನ್ನು ನೀಡಬೇಕು ಎಂದು ತೀರ್ಮಾನಿಸಿ, ಪ್ರವೀಣ್ ಕುಮಾರ್‍ರವರು, ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಹಾಗೂ ಹಳೆಯ ವಿದ್ಯಾರ್ಥಿಗಳಿಗೆ ಏಕಕಾಲದಲ್ಲಿ ಸಂಪರ್ಕದಲ್ಲಿದ್ದು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ವ್ಯವಸ್ಥೆಗಳನ್ನು ಕಲ್ಪಿಸಲು ವಿವಿಧ ಹಂತಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. “ನಾನು ಇಲ್ಲಿ ಶಿಕ್ಷಕನಾಗಲು ಬಂದಿಲ್ಲ. ನಾನು ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಬೇಕಾಗಿರುವುದು ಏನು? ಎಂಬುದನ್ನು ಅರ್ಥ ಮಾಡಿಕೊಂಡು ಪೂರಕವಾದಂತಹ ವ್ಯವಸ್ಥೆಯನ್ನು ಕಲ್ಪಿಸಿ, ಸಮಗ್ರ ಬದಲಾವಣೆಯನ್ನು ತರಲು ಇಲ್ಲಿಗೆ ಬಂದಿದ್ದೇನೆ”ಎನ್ನುವುದು ಪ್ರವೀಣ್ ಕುಮಾರ್ ಅವರ ಅಭಿಪ್ರಾಯ.

ಈ ಶಾಲೆಗಳಲ್ಲಿ ಮಕ್ಕಳ ಕಲಿಕಾ ಗುಣಮಟ್ಟ ಹೆಚ್ಚಿಸಲು ಶಾಲೆಗಳಲ್ಲಿ ಕಲಿತು ಹೋಗಿರುವ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಪ್ರವೀಣ್ ಕುಮಾರ್‍ರವರು ‘ಸ್ವೇರೋಸ್’(SWAEROES) ಚಳವಳಿಯನ್ನು ಆರಂಭಿಸಿದ್ದಾರೆ. SW ಎಂದರೆ ‘ಸಮಾಜ ಕಲ್ಯಾಣ’ ಎಂದು ‘AEROES’ ಎಂದರೆ ಆಕಾಶ ನಮ್ಮ ಮಿತಿಯಾಗಬೇಕು ಅಲ್ಲಿಯವರೆಗೆ ನಾವು ಸಾಧನೆ ಮಾಡಬೇಕು ಎಂಬುದಾಗಿದೆ. ಈ ಚಳವಳಿಯ ಉದ್ದೇಶ ಅದರ ಮೂಲಕ ಶಾಲೆಗಳಲ್ಲಿ ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸುತ್ತಿದ್ದರೆ ಈಗಾಗಲೇ ಕಲಿತು ವಿವಿಧ ರಂಗಗಳಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳು, ಇಂಜಿನಿಯರುಗಳು, ತಾಂತ್ರಿಕ ತಜ್ಞರು, ಡಾಕ್ಟರ್‍ಗಳು ರಜೆ ದಿನಗಳಲ್ಲಿ ಶಾಲೆಗಳಿಗೆ ಬಂದು, ವಿದ್ಯಾರ್ಥಿಗಳೊಂದಿಗೆ ಸಂವಾದ ಮಾಡಿ, ಮಕ್ಕಳ ತಿಳಿವಳಿಕೆಯನ್ನು ವಿಸ್ತರಿಸುತ್ತಾರೆ. ಪ್ರತಿವರ್ಷ ಅವರೆಲ್ಲರು ಒಟ್ಟಾಗಿ ಸೇರಿ ಮುಂದಿನ ಬೆಳವಣಿಗೆಗಳ ಕುರಿತು ಚರ್ಚಿಸುತ್ತಾರೆ. ಇವರೆಲ್ಲರನ್ನು ಜ್ಯೋತಿಬಾ ಪುಲೆ, ಸಾವಿತ್ರಿಬಾಯಿ ಪುಲೆ ಮತ್ತು ಅಂಬೇಡ್ಕರ್ ಅವರ ಆಲೋಚನ ಕ್ರಮಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ಚಳವಳಿಯನ್ನು ಹಳೆಯ ವಿದ್ಯಾರ್ಥಿಗಳು ಪ್ರಾರಂಭಿಸಿದ್ದಾರೆ. ಅವರೊಂದಿಗೆ ನಡೆದ ಸಂದರ್ಶನದ ಆಯ್ದ ಪಾಠ ಇಲ್ಲಿದೆ.

 1. ನಿಮ್ಮ ಬಾಲ್ಯ ಮತ್ತು ಬಾಲ್ಯದ ಶಿಕ್ಷಣ ಹೇಗಿತ್ತು?

ಪ್ರವೀಣ್ ಕುಮಾರ್: ನಾನು ಜನಿಸಿದ್ದು ಆಲಂಪುರ ಗ್ರಾಮ, ಮೆಹಬೂಬ್ ನಗರ ಜಿಲ್ಲೆ, ಆಂದ್ರ ಪ್ರದೇಶದಲ್ಲಿ. ನನ್ನ ಬಾಲ್ಯವನ್ನು ಇಲ್ಲಿಯೇ ಕಳೆದೆ. ಪ್ರಾಥಮಿಕ ಶಿಕ್ಷಣವನ್ನು ಆಲಂಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಪಡೆದೆ. ಅಂದಿನ ದಿನಗಳಲ್ಲಿ ನಮ್ಮ ಕುಟುಂಬದ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳು ನನ್ನನ್ನು ವ್ಯಾಪಕವಾಗಿ ಪ್ರಭಾವಿಸಿದವು. ಆ ಗ್ರಾಮೀಣ ಪರಿಸರದಲ್ಲಿ ನನಗೆ ಹೆಚ್ಚು ಕನಸು ಕಟ್ಟಿಕೊಳ್ಳಲು ಅವಕಾಶಗಳು ಇರಲಿಲ್ಲ. ಪ್ರಾರಂಭದಲ್ಲಿ ಒಬ್ಬ ಟ್ರಕ್ ಡ್ರೈವರ್ ಆಗಬೇಕೆಂಬುದು ನನ್ನ ಕನಸಾಗಿತ್ತು. ನಮ್ಮ ಊರಿಗೆ ಆಗಾಗ ಬರುತ್ತಿದ್ದ ಟ್ರಕ್‍ಗಳ ಡ್ರೈವರ್‍ಗಳೇ ನನಗೆ ಮಾದರಿಯಾಗಿದ್ದರು. ಆದ್ದರಿಂದ ನಾನು ಸಹ ಒಬ್ಬ ಟ್ರಕ್ ಡ್ರೈವರ್ ಆಗಬೇಕೆಂದುಕೊಂಡಿದ್ದೆ. ನಂತರ ನನ್ನ ಶಿಕ್ಷಣ ಸಮಾಜ ಕಲ್ಯಾಣ ಇಲಾಖೆ ವಸತಿ ಶಾಲೆಗಳಿಗೆ ಸ್ಥಳಾಂತರವಾಯಿತು. ಅಲ್ಲಿಂದ ಪ್ರಾರಂಭವಾದ ವಸತಿ ಶಾಲೆಗಳ ಅನುಭವ ಇಲ್ಲಿಯವರೆಗೆ ಮುಂದುವರೆದಿವೆ. ಆಗಿನ ಕಾಲದಲ್ಲಿ ಆ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳು ಇರಲಿಲ್ಲ. ಶಿಕ್ಷಣದ ಗುಣಮಟ್ಟವೂ ಇರಲಿಲ್ಲ. ಶಾಲೆಗಳನ್ನು ಬೇಕಾಬಿಟ್ಟಿ ನಡೆಸುತ್ತಿದ್ದರು. ಯಾವುದೇ ರೀತಿಯ ಪ್ರೋತ್ಸಾಹಗಳು ಇರಲಿಲ್ಲ. ಅದೇ ಶಾಲೆಯಲ್ಲಿ ಹತ್ತನೇ ತರಗತಿಯನ್ನು ಪೂರ್ಣಗೊಳಿಸಿ ಮುಂದಿನ ಶಿಕ್ಷಣಕ್ಕಾಗಿ ನಗರ ಪ್ರದೇಶಗಳಿಗೆ ಬರಬೇಕಾಯಿತು. ಪದವಿ ಶಿಕ್ಷಣವನ್ನು ಪಡೆಯಲು ಬಂದ ನಂತರದಲ್ಲಿ ವಾಸ್ತವಗಳ ಅರಿವಾಯಿತು.

 1. ಐ.ಎ.ಎಸ್. ಪರೀಕ್ಷೆಗೆ ಸಿದ್ಧತೆ ಹೇಗಿತ್ತು?

ಪ್ರ. ಕು.: ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆದು ವಿಶ್ವವಿದ್ಯಾಲಯಗಳಲ್ಲಿ ಕಲಿಯುವಾಗ ಹಿರಿಯ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧವಾಗುತ್ತಿರುವುದನ್ನು ನೋಡಿ ನನಗೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕೆಂಬ ಪ್ರೇರಣೆ ದೊರೆಯಿತು. ಅವರ ಪ್ರೇರಣೆಗಳಿಂದ ಐ.ಎ.ಎಸ್. ಪರೀಕ್ಷೆಯನ್ನು ಬರೆಯಲು ಪ್ರಾರಂಭಿಸಿದೆ. ಮೊದಲ ಬಾರಿ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಕ್ಕೆ ತೆರಳಿದಾಗ ಅಲ್ಲಿಗೆ ಬಂದಿದ್ದ ಇತರರನ್ನು ಕಂಡು ಹೆದರಿಕೆಯಾಯಿತು. ದೊಡ್ಡ ದೊಡ್ಡ ಕಾರುಗಳಲ್ಲಿ ಶ್ರೀಮಂತರೆಲ್ಲರು ಪರೀಕ್ಷೆ ಬರೆಯಲು ಬಂದಿದ್ದರು. ಪರೀಕ್ಷೆಯನ್ನು ಚೆನ್ನಾಗಿ ಬರೆಯಲು ಸಾಧ್ಯವಾಗಲಿಲ್ಲ. ಮರುದಿನ ಕಾಲೇಜಿಗೆ ತೆರಳಿದಾಗ ಪ್ರಾಧ್ಯಾಪಕರೊಬ್ಬರು “ಪರೀಕ್ಷೆ ಹೇಗಾಯಿತು”ಎಂದು ಕೇಳಿದರು. “ಪರೀಕ್ಷೆ ಏನು ಸರಿಯಾಗಲಿಲ್ಲ ಅಲ್ಲಿ ಬಂದಿದ್ದವರನ್ನು ನೋಡಿ ಹೆದರಿಕೆಯಾಯಿತು”ಎಂದು ಹೇಳಿದಾಗ ಪ್ರಾಧ್ಯಾಪಕರು “ಅವರನ್ನು ನೋಡಿ ನೀನೇಕೆ ಹೆದರಬೇಕು, ಮುಂದಿನ ಪರೀಕ್ಷೆಗೆ ಕಷ್ಟಪಟ್ಟು ಸಿದ್ಧವಾಗು”ಎಂದರು. ಹಾಗೆಯೆ ಮುಂದಿನ ಬಾರಿ ಐ.ಎ.ಎಸ್. ಪೂರ್ವಭಾವಿ ತಯಾರಿಗೆ ಆಂಧ್ರಪ್ರದೇಶದ ಸಮಾಜ ಕಲ್ಯಾಣ ಇಲಾಖೆ ನಡೆಸುತ್ತಿದ್ದ ತರಬೇತಿ ಸಂಸ್ಥೆಗೆ ಅರ್ಜಿ ಸಲ್ಲಿಸಿ ತರಬೇತಿಗೆ ನಾನು ನನ್ನ ಸ್ನೇಹಿತ ಆಯ್ಕೆಯಾದೆವು. ಆದರೆ ಹಾಸ್ಟೆಲ್ ಸೌಲಭ್ಯ ನೀಡಲು ಸಾಧ್ಯವಿಲ್ಲ, ಜೇಷ್ಠತೆಯ ಆಧಾರದ ಮೇಲೆ ವಸತಿ ವ್ಯವಸ್ಥೆಯನ್ನು ಕಲ್ಪಸುತ್ತೇವೆ ಎಂದರು. ಆದರೆ ನಾವು 100-120 ಕಿ.ಮೀ.ಗಳ ದೂರ ಪ್ರಯಾಣ ಮಾಡಿ, ತರಬೇತಿಗೆ ಆಗಮಿಸಲು ಸಾಧ್ಯವಿಲ್ಲವೆಂದು ಮನವಿ ಮಾಡಿದೆವು. ಯಾವುದೇ ಕಾರಣಕ್ಕೂ ಹಾಸ್ಟೆಲ್ ಸೌಲಭ್ಯ ನೀಡಲು ಸಾಧ್ಯವಿಲ್ಲವೆಂದು ಅಧಿಕಾರಿಗಳು ಹೇಳಿದರು. ಮತ್ತೆ ನಾವು ಮನವಿ ಸಲ್ಲಿಸಿದಾಗ ನೀವು ಒಪ್ಪುವುದಾದರೆ ಒಂದು ಪರ್ಯಾಯ ವ್ಯವಸ್ಥೆ ಮಾಡುತ್ತೇವೆ ಎಂದರು. ಸರಿ ಹೇಳಿ ಎಂದಾಗ ಸಮಾಜ ಕಲ್ಯಾಣ ಇಲಾಖೆಯ ಕಾರ್‍ಶೆಡ್ ಒಂದು ಇದೆ. ಅದರಲ್ಲಿ ಇರುವುದಾದರೆ ವ್ಯವಸ್ಥೆ ಮಾಡುತ್ತೇವೆ ಎಂದು ಅಧಿಕಾರಿಗಳು ಹೇಳಿದರು. ಆಗ ನಾನು ಅದಕ್ಕೆ ಶೌಚಾಲಯದ ವ್ಯವಸ್ಥೆ ಇದೆಯೇ ಎಂದು ಕೇಳಿದೆ. ಅವರು ಇದೆ ಎಂದರು. ಹಾಗಿದ್ದರೆ ನಾವು ಅಲ್ಲೇ ವಾಸಿಸುತ್ತೇವೆ ಎಂದು ಒಪ್ಪಿಕೊಂಡು, ಆ ಸ್ಥಳದಿಂದ ತರಬೇತಿ ಹಾಗೂ ಹಾಸ್ಟೆಲ್ ಮೆಸ್‍ಗೆ ಹೋಗಿ ಬರಲು ಪ್ರತಿ ದಿನ 4 ಕಿ.ಮೀ. ಗಳ ದೂರ ನಡೆಯಬೇಕಾಗಿತ್ತು. ಅದರಲ್ಲಿಯೇ ಕಷ್ಟಪಟ್ಟು ಪರೀಕ್ಷೆಗೆ ಸಿದ್ಧವಾದೆವು. ಐ.ಎ.ಎಸ್. ಪರೀಕ್ಷೆಯಲ್ಲಿ ಮೊದಲ ಬಾರಿಗೆ ಐ.ಆರ್.ಎಸ್. ಭಾರತೀಯ ರೈಲ್ವೆ ಸೇವೆಗೆ ಆಯ್ಕೆಯಾದೆ. ಆ ಸೇವೆಯನ್ನು ಮಾಡುತ್ತಲೆ ಮುಂದಿನ ಭಾರಿ ಐ.ಎ.ಎಸ್. ಪರೀಕ್ಷೆಯನ್ನು ಬರೆದೆ ಅದರಲ್ಲಿ ನನಗೆ ಐ.ಪಿ.ಎಸ್. ಹುದ್ದೆ ದೊರೆಯಿತು. ನನ್ನ ಸ್ನೇಹಿತನಿಗೆ ಐ.ಎ.ಎಸ್. ಹುದ್ದೆ ದೊರೆಯಿತು. ಹೀಗೆ ನನ್ನ ಪ್ರಯಾಣ ಪ್ರಾರಂಭವಾಯಿತು.

 1. ಐ.ಪಿ.ಎಸ್. ಹುದ್ದೆ ನಿಮಗೆ ತೃಪ್ತಿ ನೀಡಿತ್ತೇ?

ಪ್ರ. ಕು.: ಐ.ಪಿ.ಎಸ್. ಆದ ನಂತರ ನಾನು ಅನೇಕ ಜಿಲ್ಲೆಗಳಲ್ಲಿ ಕೆಲಸ ಮಾಡಿದೆ. ವಿವಿಧ ರೀತಿಯ ಜನರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಯಿತು. ಸಾಮಾಜಿಕ ವ್ಯವಸ್ಥೆ ಮತ್ತು ಅಲ್ಲಿನ ಅಸಮಾನತೆಗಳು ನನ್ನ ಮೇಲೆ ಪ್ರಭಾವ ಬೀರಿದವು. ಅಲ್ಲಿ ಕೆಲಸ ಮಾಡುವಾಗ ಬರುತ್ತಿದ್ದ ಪ್ರಕರಣಗಳು ನನ್ನ ಆಸಕ್ತಿಯನ್ನು ಸಮಾಜ ಮುಖಿಯನ್ನಾಗಿಸಿದವು. ಠಾಣೆಗೆ ಬರುತ್ತಿದ್ದ ಪ್ರಕರಣಗಳ ತನಿಖೆ ಮಾಡುವಾಗ ಅಪರಾಧಿಗಳನ್ನು ಕರೆದುಕೊಂಡು ಬಂದ ತಕ್ಷಣ ಒಂದು ಕೊಠಡಿಯಲ್ಲಿ ಕೂರಿಸಿ ಊಟ ತಿಂಡಿ ನೀಡಿ, ಅವರು ಮಾಡಿರುವ ಅಪರಾಧವೇನು? ಮತ್ತು ಅದಕ್ಕೆ ಕಾರಣಗಳೇನು? ಎಂಬುದನ್ನು ಬರೆಯಲು ಹೇಳುತ್ತಿದ್ದೆ. ಬರೆಯಲು ಬಾರದವರು ಇದ್ದರೆ ಇತರರ ಸಹಾಯದಿಂದ ಬರೆಸುತ್ತಿದ್ದೆ. ಹೀಗೆ ಎರಡು ವರ್ಷಗಳ ಕಾಲ ಬಂದ ಎಲ್ಲ ಅಪರಾಧಿಗಳು ಅವರ ವಿವರಣೆಗಳನ್ನು ಬರೆದು ಕೊಡುತ್ತಿದ್ದರು. ಅದು ಈಗ ಪೋಲಿಸ್ ತನಿಖೆಗಳಿಗೆ ಒಂದು ಮಾರ್ಗದರ್ಶಿ ದಾಖಲೆಯಾಗಿ ರೂಪುಗೊಂಡಿದೆ. ನಾವು ಏನೆ ಕೆಲಸ ಮಾಡಿದರು ಭಿನ್ನವಾಗಿ ಮತ್ತು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ನಾನು ಹೈದರಬಾದಿಗೆ ಬಂದ ನಂತರ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದ್ದ ಹೋರಾಟಗಳನ್ನು ತನಿಖೆ ಮಾಡಲು ನನ್ನನ್ನು ನೇಮಿಸಿದರು. ಪ್ರತಿ ದಿನ ವಿಶ್ವವಿದ್ಯಾಲಯದಲ್ಲಿ ಸುತ್ತಾಡುವುದು, ಗ್ರಂಥಾಲಯದಲ್ಲಿ ಎಂ.ಎ., ಎಂ.ಎಸ್ಸಿ. ಎಂ.ಸಿ.ಎ., ಓದುವ ವಿದ್ಯಾರ್ಥಿಗಳು ಅಟೆಂಡರ್, ಕ್ಲರ್ಕ್, ಪೊಲೀಸ್, ಕಂಡಕ್ಟರ್ ಹುದ್ದೆಗಳಿಗೆ ಹೋಗಲು ಪರೀಕ್ಷೆಗೆ ಸಿದ್ಧರಾಗುತ್ತಿದ್ದರು. ಆಗ ನನಗೆ ಇವರು ಉನ್ನತ ವ್ಯಾಸಂಗ ಮಾಡುತ್ತಿದ್ದರೂ ಕೆಳ ದರ್ಜೆಯ ಉದ್ಯೋಗಗಳಿಗೆ ಹೋಗಲು ಪ್ರಯತ್ನಿಸುತ್ತಿದ್ದಾರೆ. ಏಕೆ? ಎಂಬ ಪ್ರಶ್ನೆ ಮೂಡಿತು.  ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ಪ್ರದೇಶಗಳಿಂದ ಬಂದಿರುವುದರಿಂದ ಅವರಲ್ಲಿನ ಕನಸುಗಳು ವಿಸ್ತಾರವಾಗಿರಲಿಲ್ಲ ಎಂಬುದು ಸತ್ಯ. ಸಣ್ಣದರಲ್ಲಿಯೇ ತೃಪ್ತಿ ಪಡುತ್ತಿದ್ದರು. ಅದನ್ನು ನೋಡಿ ನನಗೆ ನಮ್ಮ ಶಿಕ್ಷಣದಲ್ಲಿರುವ ಸಮಸ್ಯೆಗಳೇನು? ಎಂಬುದು ಅರ್ಥವಾಯಿತು ಮತ್ತು ಅದನ್ನು ಹೇಗೆ ಬದಲಾಯಿಸಲು ಪ್ರಯತ್ನಿಸಬೇಕು ಎಂಬ ಅಭಿಪ್ರಾಯ ಮೂಡುತ್ತಿತ್ತು.

 1. ನಿಮಗೆ ಈ ವೃತ್ತಿಗೆ ಬರಬೇಕು ಎಂದು ಏಕೆ ಅನಿಸಿತು?

ಪ್ರ. ಕು.: ನಾನು ಐ.ಪಿ.ಎಸ್. ಆಗಿ 14 ವರ್ಷಗಳ ಸೇವೆ ಪೂರೈಸಿದೆ. ಒಂದು ದಿನ ನನ್ನ ತಾಯಿ ಕರೆ ಮಾಡಿ “ಮನೆಗೆ ಈ ಬಾರಿ ಬರುವಾಗ ನೀನು 4 ಗಂಟೆ ಸಮಯವನ್ನು ನನಗೆ ನೀಡಬೇಕು”ಎಂದು ಕೇಳಿದರು. ನಮ್ಮ ತಾಯಿ ಹೀಗ್ಯಾಕೆ ಕೇಳುತ್ತಿದ್ದಾಳೆ ಎಂದು ಅರ್ಥವಾಗಲಿಲ್ಲ. ನಾನು ಒಪ್ಪಿಕೊಂಡೆ. ಒಂದು ದಿನ ಮನೆಗೆ ಹೋದೆ. ಮನೆಯಲ್ಲಿ ನನ್ನ ತಾಯಿ “ನೀನು ಐ.ಪಿ.ಎಸ್. ಅಧಿಕಾರಿಯಾಗಿರುವುದರಿಂದ ನನ್ನ ಗೌರವ ಹೆಚ್ಚಾಗಿದೆ. ನೀನು ಒಳ್ಳೆಯ ಅಧಿಕಾರಿಯಾಗಿ ಹೆಸರು ಮಾಡುತ್ತಿದ್ದೀಯ, ನಾವು ಸುಖವಾಗಿ ಬದುಕುತ್ತಿದ್ದೇವೆ. ಆದರೆ ನೀನು ಐ.ಪಿ.ಎಸ್. ಅಧಿಕಾರಿಯಾಗಿರುವುದರಿಂದ ನಮ್ಮ ಸಮುದಾಯಗಳಿಗೆ ಏನು ಲಾಭ” ಎಂದು ಪ್ರಶ್ನೆ ಮಾಡಿದಳು.  ಆ ಪ್ರಶ್ನೆಗೆ ನನ್ನ ಬಳಿ ಉತ್ತರವಿರಲಿಲ್ಲ. ಒಂದು ರೀತಿಯ ಆತಂಕ ಮತ್ತು ಗೊಂದಲಕ್ಕೆ ಒಳಗಾದೆ. ನಂತರ ನನ್ನ ತಾಯಿ ನಮ್ಮ ಸಮುದಾಯದವರು ವಾಸಿಸುತ್ತಿದ್ದ ಮನೆಗಳಿಗೆ ಕರೆದುಕೊಂಡು ಹೋಗಿ ಕೂಲಿ ಕಾರ್ಮಿಕರು, ಜೀತದಾಳುಗಳು, ಗುಡಿಸಲುಗಳು ಹಾಗೂ ವಿವಿಧ ದುಶ್ಚಟಗಳಿಗೆ ಒಳಗಾಗಿರುವವರನ್ನು ತೋರಿಸಿ “ನೋಡು ನಮ್ಮ ಸಮುದಾಯಗಳು ಈ ಪರಿಸ್ಥಿತಿಯಲ್ಲಿದೆ. ಇವರಿಗೆ ನಿನ್ನಿಂದ ಏನಾದರೂ ಮಾಡಲು ನಿನಗೆ ಸಾಧ್ಯವೇ?” ಎಂದು ಪ್ರಶ್ನಿಸಿದರು. ಆಗ ಉತ್ತರ ನನ್ನ ಬಳಿ ಇರಲಿಲ್ಲ. ನನ್ನ 14 ವರ್ಷಗಳ ಸೇವೆಯನ್ನು ಮತ್ತು ನನ್ನ ಬದುಕನ್ನು ನಾನೇ ಆತ್ಮ ವಿಮರ್ಶೆಗೆ ಒಳಪಡಿಸಿಕೊಂಡೆ. ಏನಾದರೂ ಮಾಡಬೇಕು ಎನ್ನುವ ಯೋಚನೆ ಪ್ರಾರಂಭವಾಯಿತು. ಆಗ ನಾನು ಉಸ್ಮಾನಿಯಾ ವಿಶ್ವವಿದ್ಯಾಲಯಕ್ಕೆ ಹೋಗಿ ಪ್ರೊ. ಕಾಂಚಾಲಯ್ಯ ಅವರನ್ನು ಭೇಟಿ ಮಾಡಿ ನನ್ನ ತಾಯಿ ಹೀಗೆ ಕೇಳಿದ್ದಾರೆ. ನನಗೆ ಗೊಂದಲವಿದೆ ನಾನು ಸಮುದಾಯಕ್ಕಾಗಿ ಏನನ್ನಾದರು ಮಾಡಬೇಕೆಂದು ಕೇಳಿದೆ. ಆಗ ಅವರು ನನ್ನೊಂದಿಗೆ ಚರ್ಚಿಸಿ “ನೀನು ಪ್ರಪಂಚದ ಪ್ರತಿಷ್ಟಿತ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪಡೆಯಲು ಪೊಲೀಸ್ ಹುದ್ದೆಗೆ ರಜೆ ಪಡೆದು ಹೋಗು ಎಂದರು. ನಾನು ಹಾರ್ವರ್ಡ್ ವಿಶ್ವವಿದ್ಯಾನಿಲಯದ ಸಾರ್ವಜನಿಕ ಆಡಳಿತ ವಿಭಾಗದಲ್ಲಿ ಪ್ರವೇಶ ಪಡೆದು ಪ್ರವೇಶ ಪರೀಕ್ಷೆ ಬರೆದು ಉತ್ತಮ ರ್ಯಾಂಕ್‍ನಲ್ಲಿ ತೇರ್ಗಡೆಯಾಗಿ ಒಂದು ವರ್ಷ ಕಾಲ ಉನ್ನತ ಶಿಕ್ಷಣವನ್ನು ಪಡೆದೆ. ಅಲ್ಲಿ ನನಗೆ ಅಂತರರಾಷ್ಟ್ರೀಯ ತಜ್ಞರು ಪರಿಚಯವಾದರು. ಅವರೊಂದಿಗೆ ಚರ್ಚಿಸುತ್ತಾ ನನ್ನ ಆಲೋಚನಾ ಕ್ರಮವನ್ನು ವಿಸ್ತರಿಸಿಕೊಂಡೆ. ತಳ ಸಮುದಾಯಗಳ ಅಭಿವೃದ್ಧಿಗೆ ಪ್ರಪಂಚದಾದ್ಯಂತ ನಡೆದಿರುವ ಪ್ರಯತ್ನಗಳನ್ನು ಅರ್ಥ ಮಾಡಿಕೊಂಡು ಅನೇಕ ತಜ್ಞರನ್ನು ಭೇಟಿ ಮಾಡಿದೆ. ನನ್ನ ಈ ಅನುಭವವೂ ಸಮುದಾಯದ ಅಭಿವೃದ್ಧಿಗೆ ಶಿಕ್ಷಣವೇ ಮೂಲ ಅಸ್ತ್ರ ಎಂಬುದು ಅರ್ಥವಾಯಿತು. ಅದಕ್ಕೆ ಪೂರಕವಾಗಿ ಯೋಚಿಸಲು ಪ್ರಾರಂಭಿಸಿ ತಳಸಮುದಾಯಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ ಸ್ಥಿತಿಗತಿಗಳನ್ನು ಮರು ಪರಿಶೀಲಿಸಿದಾಗ 21ನೇ ಶತಮಾನದ ಬೆಳವಣಿಗೆಗಳನ್ನು ಎದುರಿಸಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂಬುದು ಅರ್ಥವಾಯಿತು. ಮಕ್ಕಳಿಗೆ ಗುಣಮಟ್ಟದ ಮತ್ತು ಸಮಗ್ರ ಬದಲಾವಣೆಯ ಶಿಕ್ಷಣ ನೀಡಬೇಕು. ಅದು ಸಮುದಾಯಗಳ ಸಹಯೋಗದಲ್ಲಿ ಎಂದು ತೀರ್ಮಾನಿಸಿದೆ.

ನಾನು ಸಣ್ಣವನಾಗಿದ್ದಾಗ ನನ್ನ ತಂದೆ ತಾಯಿ ಇಬ್ಬರು ಶಿಕ್ಷಕರಾಗಿದ್ದು, ನಮ್ಮ ಮನೆಯಲ್ಲಿ ವಿದ್ಯುತ್ ಸಂಪರ್ಕವಿರಲಿಲ್ಲ. ನಾನು ಸಹ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳಲ್ಲಿ ಪಿ.ಯು.ಸಿ.ವರೆಗೆ ಶಿಕ್ಷಣವನ್ನು ಪಡೆದುಕೊಂಡಿದ್ದೇನೆ. ಇಂದಿಗೂ ಸಮಾಜದಲ್ಲಿ ಅಂಚಿನ ಸಮುದಾಯಗಳನ್ನು ಅಗೌರವದಿಂದ ನಡೆಸಿಕೊಳ್ಳುತ್ತಾರೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಗ್ರಾಮಗಳ ಹೊರಗೆ ನಮ್ಮ ಮನೆಗಳು. ನಗರ ಪ್ರದೇಶಗಳಲ್ಲಿ ನಿರ್ದಿಷ್ಟ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿವೆ. ನಮ್ಮ ತಾಯಿ ಇಂದಿಗೂ ಊರಿನ ಹೊರಗಿರುವ ಕಾಲೋನಿಯಲ್ಲಿ ವಾಸಿಸುತ್ತಿದ್ದಾಳೆ. ನಮ್ಮ ತಂದೆ ಉತ್ತಮ ಗಣಿತ ಶಿಕ್ಷಕರು. ಅವರು ತಮ್ಮ ಕಾಲೋನಿ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದಾಗ ಅಲ್ಲಿರುವ ಭೂ ಮಾಲೀಕರು ಅದನ್ನು ವಿರೋಧಿಸುತ್ತಿದ್ದರು. (ಪ್ರವೀಣ್ ಕುಮಾರ್ ಅವರು ಅನೇಕ ವರ್ಷಗಳ ನಂತರ ತಮ್ಮ ತಂದೆಯ ಕನಸುಗಳನ್ನು ನನಸು ಮಾಡುತ್ತಿದ್ದಾರೆ. ಅದೇ ಅವರಿಗೆ ಹೊಸ ಮಾರ್ಗವನ್ನು ತೋರಿಸಿದೆ)

 1. ನೀವು ಸ್ವಯಂ ಪ್ರೇರಿತವಾಗಿ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳ ಸಂಸ್ಥೆಯನ್ನು ಏಕೆ ಆಯ್ಕೆ ಮಾಡಿಕೊಂಡಿರಿ?

ಪ್ರ. ಕು.: ಭಾರತದಲ್ಲಿ ಅನೇಕ ಸಾಮಾಜಿಕ ಚಳವಳಿಗಳು ನಡೆದಿವೆ. ಕಾರ್ಮಿಕರು, ನಾಗರಿಕ ಹಕ್ಕುಗಳು, ಮಹಿಳಾ ಚಳವಳಿ, ಮಾನವ ಹಕ್ಕುಗಳು, ದಲಿತ ಮತ್ತು ಬುಡಕಟ್ಟು ಚಳವಳಿ ಕೊನೆಯ ಒಂದು ಶತಮಾನದಿಂದ ನಡೆಯುತ್ತಿವೆ. ಬಹುತೇಕ ಚಳವಳಿಗಳು ಶೋಷಣೆಯ ವಿರುದ್ಧದ ಹೋರಾಟಗಳಾಗಿವೆ. ಆದರೆ ದಲಿತ ಸಮುದಾಯದ ಜನರಿಗೆ ಆತ್ಮ ಗೌರವದಿಂದ ಬದುಕಲು ಅವಕಾಶಗಳೇ ರೂಪುಗೊಳ್ಳಲಿಲ್ಲ. ಸ್ವತಂತ್ರ ಪೂರ್ವದಲ್ಲಿ ಜ್ಯೋತಿಬಾಪುಲೆ, ಸಾವಿತ್ರಿಬಾಯಿ ಪುಲೆ, ಮತ್ತು ಅಂಬೇಡ್ಕರ್ ಅವರು ತಮ್ಮ ಜೀವಿತ ಅವಧಿಯನ್ನು ಸಂಪೂರ್ಣವಾಗಿ ಈ ಹೋರಾಟದಲ್ಲಿ ಕಳೆದರು. ಭಾರತದಲ್ಲಿ ಸಾಮಾಜಿಕ ಸುಧಾರಣೆಗಾಗಿ ಅನೇಕ ಸಮಾಜ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದರು. ಅವೆಲ್ಲವೂ ಪತ್ರಿಕೆಗಳಲ್ಲಿ ಮತ್ತು ಆಲೋಚನೆ ಹಂತದಲ್ಲಿ ನಿಂತುಬಿಟ್ಟವು.

ನಾನು ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದು, ಆದರೆ ಆ ಶಾಲೆಗಳ ಗುಣಮಟ್ಟದ ಶಿಕ್ಷಣವಿಲ್ಲದೆ ತಳಸಮುದಾಯಗಳು ವಂಚನೆಗೆ ಒಳಗಾಗುತ್ತಿದ್ದವು. ಅದನ್ನು ಬದಲಿಸಬೇಕಿತ್ತು. 21ನೇ ಶತಮಾನದಲ್ಲಿ ಜಾಗತಿಕ ಸ್ಪರ್ಧೆಯನ್ನು ಎದುರಿಸಲು ತಳಸಮುದಾಯಗಳ ಮಕ್ಕಳನ್ನು ಸಿದ್ಧಗೊಳಿಸಬೇಕು. ಅಂಬೇಡ್ಕರ್, ಸಾವಿತ್ರಿಬಾಯಿ ಪುಲೆ ಅವರ ಕನಸುಗಳನ್ನು ನನಸು ಮಾಡಲು ಸಾಧ್ಯವೆಂದು ನನಗೆ ಅರ್ಥವಾಯಿತು. ಆದ್ದರಿಂದ ನಾನು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ನನಗೆ ಐ.ಜಿ.ಪಿ. ಹುದ್ದೆ ಬದಲಾಗಿ ಕಾರ್ಯದರ್ಶಿಗಳು, ತೆಲಂಗಾಣ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳ ಸಂಸ್ಥೆ ಹುದ್ದೆಯನ್ನು ನೀಡಬೇಕೆಂದು ಮನವಿ ಸಲ್ಲಿಸಿದೆ. “ನೀವೇಕೆ ಅಲ್ಲಿಗೆ ಹೋಗುತ್ತೀರಿ”ಎಂದು ಕೇಳಿದರು. ನಾನು ಆ ಶಾಲೆಯ ವಿದ್ಯಾರ್ಥಿ ಮತ್ತು ಅದೇ ಸಮುದಾಯದವನಾಗಿರುವುದರಿಂದ ನಾನು ಆ ಶಾಲೆಗಳಿಗೆ ಮತ್ತು ಆ ಶಾಲೆಗಳಿಗೆ ಬರುವ ಸಾಮಾಜಿಕ, ಆರ್ಥಿಕ, ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ನನ್ನ ಸಮುದಾಯಗಳಿಗಾಗಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದೆ. ಅದನ್ನು ಅವರು ಪರಿಶೀಲಿಸಿ ಒಪ್ಪಿಗೆ ನೀಡಿ 2011ರಲ್ಲಿ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ ವಸತಿ ಶಾಲೆಗಳ ಸಂಸ್ಥೆಗೆ ನೇಮಿಸುವ ಆದೇಶವನ್ನು ನೀಡಿದರು. ಇಲ್ಲಿಂದ ವಸತಿ ಶಾಲೆಗಳ ಪ್ರಯಾಣ ಪ್ರಾರಂಭವಾಯಿತು.

 1. ಪ್ರಾರಂಭದಲ್ಲಿ ನೀವು ಎದುರಿಸಿದ ಸಮಸ್ಯೆಗಳೇನು?

ಪ್ರ. ಕು.: ನಾನು ಕಾರ್ಯದರ್ಶಿಯಾಗಿ ಜವಬ್ದಾರಿ ತೆಗೆದುಕೊಂಡಾಗ ವಸತಿ ಶಾಲೆಗಳಲ್ಲಿ ಸೌಲಭ್ಯಗಳ ಕೊರತೆ ಇತ್ತು. ಶಿಕ್ಷಕರಿಗೆ ಪ್ರೋತ್ಸಾಹ ನೀಡುವವರಿರಲಿಲ್ಲ. ಶಾಲಾ ಕೊಠಡಿಗಳು ದೊಡ್ಡಿಗಳಾಗಿದ್ದವು. ಕೇಳುವವರಿರಲಿಲ್ಲ ಮಕ್ಕಳನ್ನು ಗುಲಾಮರ ರೀತಿಯಲ್ಲಿ ನೋಡುತ್ತಿದ್ದರು. ಮಕ್ಕಳಿಗೆ ಪ್ರೋತ್ಸಾಹವಿರಲಿಲ್ಲ. ಪೋಷಕರನ್ನು ಹಕ್ಕುದಾರರನ್ನಾಗಿ ಎಂದು ಪರಿಗಣಿಸುತ್ತಿರಲಿಲ್ಲ. ಅವರಿಗೆ ಇಷ್ಟ ಬಂದ ಹಾಗೆ ವರ್ತಿಸುತ್ತಿದ್ದರು. ಶಾಲೆಗಳ ಮೇಲುಸ್ತುವಾರಿ ಮತ್ತು ಸಮುದಾಯಗಳ ಭಾಗವಹಿಸುವಿಕೆಗೆ ಅವಕಾಶವಿರಲಿಲ್ಲ. ವಸತಿಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿತ್ತು. ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿದ್ದವು.

ಪ್ರಾರಂಭದಲ್ಲಿ ಆರು ತಿಂಗಳು ಸತತವಾಗಿ ಶಾಲೆಗಳನ್ನು ಸುತ್ತಾಡಿದೆ ಮಕ್ಕಳನ್ನು ಭೇಟಿ ಮಾಡಿ ಶಾಲೆಗಳಲ್ಲಿ ಅವರೊಂದಿಗೆ ವಾಸವಾಗಿದ್ದೆ. ಅದರ ಮೂಲಕ ಮಕ್ಕಳನ್ನು ಮತ್ತು ಅವರ ದೃಷ್ಟಿಕೋನ, ನಿರೀಕ್ಷೆಗಳನ್ನು ಅರ್ಥಮಾಡಿಕೊಂಡೆ. ಶಿಕ್ಷಕರೊಂದಿಗೆ ಚರ್ಚಿಸಿ ಅವರ ಆಲೋಚನೆ ಮತು ನಿರೀಕ್ಷೆಗಳನ್ನು ಗ್ರಹಿಸಿದೆ. ಪೋಷಕರೊಂದಿಗೆ ಚರ್ಚಿಸಿ ವ್ಯವಸ್ಥೆಯಲ್ಲಿನ ಸಮಸ್ಯೆಗಳೇನು ಎಂಬುದನ್ನು ಅರ್ಥಮಾಡಿಕೊಂಡೆ. ವಸತಿ ಶಾಲೆಗಳಲ್ಲಿ ಸಮಸ್ಯೆ ಎಲ್ಲಿದೆ? ಎನ್ನುವುದನ್ನು ಗುರುತಿಸಿಕೊಂಡೆ. ಅದನ್ನು ಬದಲಾಯಿಸಲು ಪ್ರಾರಂಭಿಸಿದೆ. ಯಾವುದೇ ಬದಲಾವಣೆಗೆ ಪ್ರತಿರೋಧವಿರುತ್ತದೆ. ಅವು ನಿಧಾನವಾಗಿ ಬದಲಾದವು. ಈಗ ಯಾವುದೇ ರೀತಿಯ ಪ್ರತಿರೋಧಗಳಿಲ್ಲ. ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಇಂದು ಘನತೆ ಹೆಚ್ಚಾಗಿದೆ.

 1. ಜನರಿಗೆ ಶಿಕ್ಷಣ ಕುರಿತು ಜಾಗೃತಿ ಮೂಡಿಸುವಾಗ ಎದುರಿಸಿದ ಸಮಸ್ಯೆಗಳು ಯಾವುವು?

ಪ್ರ. ಕು.: ತಳಸಮುದಾಯಗಳಿಗೆ ಸಾಮಾಜಿಕ, ಆರ್ಥಿಕ, ಸಮಸ್ಯೆಗಳೇ ಹೆಚ್ಚಾಗಿದ್ದು ಮತ್ತು ಅವರಿಗೆ ಸರಿಯಾದ ರೋಲ್ ಮಾಡಲ್‍ಗಳಿರಲಿಲ್ಲ. ಪೋಷಕರಿಗೆ ಶಿಕ್ಷಣದ ಸಾಧನೆಗಳ ಬಗ್ಗೆ ಹೆಚ್ಚು ತಿಳಿವಳಿಕೆ ಇರಲಿಲ್ಲ. ಇಲ್ಲಿಗೆ ಬರುವ ಮಕ್ಕಳು ಮತ್ತು ಪೋಷಕರು ಸಾಮಾನ್ಯವಾಗಿ ಶೋಷಣೆಗೆ ಒಳಗಾದವರು, ಗ್ರಾಮಗಳಿಂದ ಹೊರಗೆ ವಾಸಿಸುವವರೆ ಹೆಚ್ಚಾಗಿದ್ದರು. ಗ್ರಾಮಗಳಿಂದ ನಗರಗಳಿಗೆ ವಲಸೆ ಬಂದವರು ವಿಶೇಷವಾಗಿ ಹೆಣ್ಣು ಮಕ್ಕಳೆಂದರೆ ಕುಟುಂಬಕ್ಕೆ ಹೊರೆ ಎಂದುಕೊಂಡವರು. ಪೋಷಕರಲ್ಲಿ ಶಿಕ್ಷಣ ಕುರಿತು ನಂಬಿಕೆ ಇರಲಿಲ್ಲ. ಅಂತಹ ಪೋಷಕರಿಗೆ ಜಾಗೃತಿ ಮೂಡಿಸಲಾಯಿತು. ಅದೇ ಪರಿಸ್ಥಿತಿಯಿಂದ ಶಿಕ್ಷಣ ಪಡೆದು ಉತ್ತಮ ಸಾಧನೆ ಕೈಗೊಂಡಿದ್ದ ಹಳೆಯ ವಿದ್ಯಾರ್ಥಿಗಳನ್ನು ಶಾಲೆಗಳಿಗೆ ಆಹ್ವಾನಿಸಿ ಅವರ ಅನುಭವ ಮತ್ತು ಸಾಧನೆಗಳನ್ನು ಪೋಷಕರಿಗೆ ಮನವರಿಕೆ ಮಾಡಿಕೊಡಲಾಗುತ್ತಿತ್ತು. ಅದರಿಂದ ಪೋಷಕರು ಶಿಕ್ಷಣದ ಮಹತ್ವವನ್ನು ಅರ್ಥ ಮಾಡಿಕೊಳ್ಳುತ್ತಿದ್ದರು.

ಅಂಚಿನ ಸಮುದಾಯಗಳಿಗೆ ಸಮಾಜದಲ್ಲಿ ತಾವು ವಾಸಿಸುವ ಕುಟುಂಬ ಮತ್ತು ಪ್ರದೇಶದಲ್ಲಿ ಕನಸು ಕಾಣಲು ಅವಕಾಶಗಳಿಲ್ಲ. ಅಲ್ಲಿ ಅವರಿಗೆ ಪ್ರತಿ ನಿತ್ಯ ಜೀವನವೇ ಅವರಿಗೆ ಸವಾಲಾಗಿರುತ್ತದೆ. ಮಕ್ಕಳಿಗೆ ಕನಸು ಕಾಣುವ ಅವಕಾಶ ರೂಪಿಸುವುದು ಬಹಳ ಮುಖ್ಯ. ಅಂತಹ ಕೆಲಸವನ್ನು ನಮ್ಮ ಶಾಲೆಗಳಲ್ಲಿ ಮಾಡುತ್ತೇವೆ. ಮಕ್ಕಳು ದೊಡ್ಡ ದೊಡ್ಡ ಕನಸು ಕಾಣಬೇಕು. ಅದರಲ್ಲೂ ಹೆಣ್ಣು ಮಕ್ಕಳು ಮನೆ ಕೆಲಸ ಮಾಡುವ ಕನಸು ಕಾಣಬಾರದು. ಅದನ್ನು ಮಕ್ಕಳ ಮೇಲೆ ಹೇರಬಾರದು. ಅವಕಾಶ ರೂಪಿಸಿ ಕೊಟ್ಟರೆ ಅವರಿಗೆ ಬೇಕಾದ ಕನಸುಗಳನ್ನು ಕಾಣುತ್ತಾರೆ. ಪೋಷಕರನ್ನು ಒಪ್ಪಿಸುವಂತಹ ಪ್ರಕ್ರಿಯೆಗಳನ್ನು ರೂಪಿಸುತ್ತಿದ್ದೇವೆ. ಶಿಕ್ಷಣದ ಮಹತ್ವವನ್ನು ಅರ್ಥ ಮಾಡಿಸುತ್ತಿದ್ದೇವೆ. ಇಂದು ಪೋಷಕರು ಮಕ್ಕಳನ್ನು ಸಂತೋಷವಾಗಿ ಶಾಲೆಗಳಲ್ಲಿ ಬಿಟ್ಟು ಹೋಗುತ್ತಾರೆ. ಅವರೆಲ್ಲರೂ ಇಂದು ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳ ಮಕ್ಕಳಾಗಿ ಬಿಟ್ಟಿದ್ದಾರೆ. ಮಕ್ಕಳಲ್ಲಿ ದಿನದಿಂದ ದಿನಕ್ಕೆ ಆತ್ಮ ಗೌರವ ಮತ್ತು ಆತ್ಮ ವಿಶ್ವಾಸ ಹೆಚ್ಚಾಗುತ್ತಿದೆ. ಏನನ್ನಾದರೂ ಸಾಧಿಸುತ್ತೇವೆ ಎಂಬ ಛಲ ಮಕ್ಕಳಲ್ಲಿ ಮೂಡಿದೆ.

 1. ಸಮಾಜ ಕಲ್ಯಾಣ ಇಲಾಖೆಯ ಎಲ್ಲ ವಸತಿ ಶಾಲೆಗಳು ಏಕೆ ಇಂಗ್ಲಿಷ್ ಮಾಧ್ಯಮಕ್ಕೆ ಹೆಚ್ಚು ಒತ್ತು ಕೊಡುತ್ತಿವೆ?

ಪ್ರ. ಕು.: ಪ್ರಪಂಚದಲ್ಲಿ ಇಂಗ್ಲಿಷ್ ಒಂದು ಬಿಡುಗಡೆಯ ಭಾಷೆಯಾಗಿದೆ. ಇಂಗ್ಲಿಷ್ ಮಾತನಾಡದೇ ಇರುವ ಜನರನ್ನು ಗುಲಾಮರಂತೆ ನಡೆಸಿಕೊಳ್ಳುತ್ತಾರೆ. ಅದನ್ನು ನಾವು ಮೊದಲು ಬದಲಿಸಬೇಕು. 2000 ವರ್ಷಗಳಿಂದ ಭಾಷೆ ಮತ್ತು ಕಲಿಕೆಗಳಿಂದ ತಳಸಮುದಾಯಗಳನ್ನು ಹೊರಗೆ ಇಡಲಾಗಿದೆ. ಆ ಸ್ಥಳಗಳನ್ನು ಈ ಮಕ್ಕಳು ಆಕ್ರಮಸಿಕೊಳ್ಳಬೇಕು. ಅದು ಕೇವಲ ಉಳ್ಳವರಿಗೆ ಮಾತ್ರ ಎಂಬುವುದು ಬದಲಾಗಬೇಕು ಒಬ್ಬ ಪೌರಕಾರ್ಮಿಕನ ಮಗಳು, ದೇವದಾಸಿಯ ಮಗಳು, ಕೂಲಿ ಕಾರ್ಮಿಕನ ಮಗಳಿಗೂ ಒಂದೇ ರೀತಿಯ ಶಿಕ್ಷಣ ದೊರೆಯಬೇಕು. ಅದಕ್ಕಾಗಿ ನಾವು ಇಂಗ್ಲಿಷ್ ಭಾಷೆಯನ್ನು ಮಕ್ಕಳಿಗೆ ಕಲಿಸಲು ‘ಈಪೋಲ್ಸ್ ಕ್ಲಬ್’ಗಳನ್ನು ಪ್ರತಿ ಶಾಲೆಯಲ್ಲಿ ಪ್ರಾರಂಭಿಸಿದ್ದೇವೆ. ಅದರಲ್ಲಿ ನಾವು ಶಾಲಾ ಕೊಠಡಿಯ ಬಾಗಿಲು ಮತ್ತು ಕಿಟಕಿಗಳನ್ನು ಮುಚ್ಚುತ್ತೇವೆ. ಮಕ್ಕಳು ಒಬ್ಬರಿಗೊಬ್ಬರು ಕೇವಲ ಇಂಗ್ಲಿಷ್ ಭಾಷೆಯಲ್ಲಿ ಮಾತನಾಡಬೇಕು. ಅದರಿಂದ ಮಕ್ಕಳಿಗಿರುವ ಭಾಷೆ ಕೀಳರಿಮೆ ಹೋಗಿ ಭಾಷೆಯ ಮೇಲೆ ಹಿಡಿತ ಬರುತ್ತದೆ. ಸರಾಗವಾಗಿ ಇಂಗ್ಲಿಷ್ ಮಾತನಾಡುತ್ತಾರೆ. ಮಕ್ಕಳಲ್ಲಿ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ. 21ನೇ ಶತಮಾನದಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ನಮ್ಮ ಮಕ್ಕಳು ಎಲ್ಲಿ ಬೇಕಾದರೂ ಸ್ಪರ್ಧೆ ಒಡ್ಡಲು ಸಿದ್ಧಗೊಳಿಸುತ್ತಿದ್ದೇವೆ.

 1. ಈ ಕೆಲಸ ಮಾಡಲು ನಿಮಗಿರುವ ಸ್ವಾರ್ಥವೇನು?

ಪ್ರ. ಕು.: ನನ್ನ ಬಾಲ್ಯದ ಅನುಭವಗಳು ಹಾಗೂ ಮುಂದಿನ ಭವಿಷ್ಯ. ಸಮಾಜದ ಅಂಚಿನಲ್ಲಿರುವ ಜನ ಈ ದೇಶದಲ್ಲಿ ನಡೆದ ಎಲ್ಲ ಬದಲಾವಣೆ ಮತ್ತು ಅಭಿವೃದ್ಧಿಯಲ್ಲಿ ಅವಕಾಶ ವಂಚಿತರಾಗಿದ್ದಾರೆ. ಆದ್ದರಿಂದಲೇ ಇಂದಿಗೂ ಕೂಲಿಕಾರ್ಮಿಕರಾಗೇ ಮುಂದುವರೆಯುತ್ತಿದ್ದಾರೆ. ಕೈಗಾರಿಕ ಕ್ರಾಂತಿಯಲ್ಲೂ ಅವರು ಕಾರ್ಮಿಕರಾಗೆ ಉಳಿದಿದ್ದಾರೆ. ತಂತ್ರಜ್ಞಾನದ ಕ್ರಾಂತಿಯಲ್ಲಿ ಅವರು ಕಾವಲುಗಾರರು, ದಿನಗೂಲಿಗಳು, ಮಾರಾಟಗಾರರು ಹಾಗೂ ಕೂಲಿ ಕಾರ್ಮಿಕರಾಗಿ ಉಳಿದಿದ್ದಾರೆ. ಮುಂದಿನ ಕ್ರಾಂತಿ ಇರುವುದು ಆಟೋ ಮಿಷನ್‍ಗಳದ್ದು ಮತ್ತು ರೋಬೋಟ್‍ಗಳದ್ದು. ಈ ಕ್ರಾಂತಿಯಲ್ಲಿ ಲಕ್ಷಾಂತರ ಜನರ ಬದುಕಿನ ಕ್ರಮಗಳು ಸ್ಥಳಾಂತರಾವಾಗುತ್ತವೆ. ಎಲ್ಲ ಕೆಲಸಗಳನ್ನು ಮಿಷನ್‍ಗಳೇ ಮಾಡುತ್ತವೆ. ಅಂತಹ ಸಂದರ್ಭದಲ್ಲಿ ಅಂಚಿನ ಸಮುದಾಯಗಳ ಸ್ಥಿತಿ ಏನಾಗುತ್ತದೆ ಎಂದು ಯೋಚಿಸಿದರೆ ನನಗೆ ನಿದ್ದೆ ಬರುವುದಿಲ್ಲ. ಇರುವ ಆಶಾವಾದ ಎಂದರೆ ನಮಗೆ ಎಲ್ಲಿ ಪಾಲು ಸಿಗಲಿಲ್ಲ ಅದರಿಂದ ಎಲ್ಲ ಕಡೆ ನಮ್ಮ ಪಾಲಿದೆ ಅದನ್ನು ಪಡೆದುಕೊಳ್ಳುವ ಸಲುವಾಗಿ ಪ್ರಯತ್ನಿಸುತ್ತಿದ್ದೇನೆ. ಮಕ್ಕಳಿಗೆ ನಿಮ್ಮ ಹಿನ್ನೆಲೆ ಮುಖ್ಯವಲ್ಲ. ಆದರೆ ನಿಮ್ಮ ಮಕ್ಕಳನ್ನು ಕನಸು ಕಾಣಲು ಬಿಡಿ.

ಅನ್ಯಾಯದ ವಿರುದ್ಧ ಹೋರಾಟಗಳನ್ನು ಮುಂದಕ್ಕೆ ತೆಗೆದುಕೊಂಡು ಹೋಗಲು  ಜ್ಯೋತಿ ಬಾ ಪುಲೆ ಮತ್ತು ಡಾ. ಬಿ. ಆರ್. ಅಂಬೇಡ್ಕರ್‍ಗಳು ಯಾವಾಗಲೂ ಹೊಸ ನಾಯಕರನ್ನು ರೂಪಿಸಲು ಪ್ರಯತ್ನಿಸುತ್ತಿದ್ದರು. ಆ ಕಾಲಘಟ್ಟದಲ್ಲಿ ಶಿಕ್ಷಣ ಮತ್ತು ಸಬಲೀಕರಣ ಹಾಗೂ ಜಾಗೃತಿಯ ಕೊರತೆಯಿಂದಾಗಿ ಅದು ಸಾಧ್ಯವಾಗದೇ ಹಿನ್ನಡೆ ಅನುಭವಿಸಿದರು. ಸ್ವಯಂ ಶಿಕ್ಷಣ, ಸಂಶೋಧನೆ, ಉದ್ಯೋಗ ಕ್ಷೇತ್ರದಲ್ಲಿ ತಳಸಮುದಾಯಗಳ ಮಕ್ಕಳ ಪ್ರಾತಿನಿಧ್ಯ ಮತ್ತು ಅವಕಾಶಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದರು. ಭವಿಷ್ಯದ ನಾಯಕರನ್ನು ರೂಪಿಸಲು ವೇದಿಕೆ ಅಸ್ತಿತ್ವಕ್ಕೆ ಬಂದಿದೆ ಈ ನಾಯಕರು ಸಮುದಾಯ ಮತ್ತು ತಾವು ಕಲಿತ ಸಂಸ್ಥೆಗಳ ಅಭಿವೃದ್ಧಿಗೆ ತಮ್ಮ ಪಾಲನ್ನು ಹಿಂತಿರುಗಿಸಿ ಕೊಡುತ್ತಾರೆ. ಈ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿರುವವರು ಮೊದಲನೇ ತಲೆಮಾರಿನಲ್ಲಿ ಶಿಕ್ಷಣಕ್ಕೆ ಪ್ರವೇಶಿಸಿದ ಕುಟುಂಬಗಳಾಗಿವೆ.

 1. ಸಮುದಾಯಗಳ ಮೇಲೆ ಪ್ರಭಾವ ಬೀರಲು ಮಾಡುತ್ತಿರುವ ಕಾರ್ಯಕ್ರಮಗಳು ಯಾವುವು?

ಪ್ರ. ಕು.: ಇಲ್ಲಿಯವರೆಗೆ ಸಂಘಟನೆಗಳು ನಮಗೆ ಜ್ಞಾನ ಬೇಕು ಎಂದು ಕೇಳಿಲ್ಲ. ಯಾವುದೇ ಸಂಘಟನೆ ನಿಮಗೆ ಶಕ್ತಿ ಇದೆ ಇದನ್ನು ಸಾಧಿಸಿ ಎಂದು ಹೇಳಿಲ್ಲ. ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಸಾಧಿಸಲು ಅವಕಾಶ ಮಾಡಿಕೊಡಿ ಎಂದು ಹೇಳಿಲ್ಲ. ಈಗ ನಮ್ಮ ಆಲೋಚನೆ ಬದಲಾಗಿದೆ. ಬೀದಿ ಹೋರಾಟ ಹಕ್ಕುಗಳ ಬೇಡಿಕೆ ಸೀಮಿತಗೊಳ್ಳದೆ ನಾವು ಶಿಕ್ಷಣದ ಮೂಲಕ ಜ್ಞಾನವನ್ನು ಪಡೆಯುತ್ತೇವೆ. ಜ್ಞಾನ ಯುದ್ಧವನ್ನು ಮಾಡಿ ಗೆಲ್ಲುತ್ತೇವೆ ಎಂದು ‘ಸ್ವರೋಸ್ ಸಂಘಟನೆ’ ಪ್ರಾರಂಭಿಸಿದ್ದೇವೆ. ನಾವು ನಮಗೆ ಆಗಿರುವ ಮೋಸವನ್ನು ಮತ್ತೆ ಮತ್ತೆ ಪ್ರಶ್ನೆ ಮಾಡಬಾರದು. ನಾವು ಅದನ್ನು ಏಕೆ ಪಡೆದುಕೊಳ್ಳಬಾರದು ಎಂದು ಯೋಚಿಸಬೇಕು.

ಭೀಮ್ ದೀಕ್ಷಾ ಹೆಸರಿನಲ್ಲಿ ಮಾರ್ಚ್ 15 ರಿಂದ ಏಪ್ರಿಲ್ 14ರವೆರೆಗೆ ನಾವು ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ.

ಅನುಸರಿಸಬೇಕಾದ ಕ್ರಮಗಳು:

 • ಭೀಮ್ ದೀಕ್ಷಾ ಸಂದರ್ಭದಲ್ಲಿ ಮದ್ಯಪಾನ, ಧೂಮಪಾನಗಳಿಂದ ದೂರವಿರಬೇಕು.
 • ಮಕ್ಕಳು ಕಡ್ಡಾಯವಾಗಿ ಆಂಗ್ಲ ಭಾಷೆಯಲ್ಲಿಯೇ ಮಾತನಾಡಬೇಕು ಮತ್ತು ಪುಸ್ತಕಗಳನ್ನು ಓದಬೇಕು.
 • ಪ್ರತಿ ದಿನ ಮುಂಜಾನೆ 5 ಗಂಟೆಗೆ ಎದ್ದು ವ್ಯಾಯಾಮ ಮಾಡಬೇಕು. ಸಮುದಾಯದ ಅಭಿವೃದ್ಧಿಗೆ ಕೊಡುಗೆ ನೀಡಿರುವ ಮಹನೀಯರ ಪುಸ್ತಕಗಳನ್ನು ಓದಬೇಕು.

ಮಾಡಬೇಕಾದ ಕಾರ್ಯಗಳು:

 • ಪ್ರತಿ ಗ್ರಾಮದಲ್ಲಿ ಅಂಬೇಡ್ಕರ್ ವಿಜ್ಞಾನ ಕೇಂದ್ರಗಳನ್ನು ಪ್ರಾರಂಭಿಸುವುದು ಮತ್ತು ಅದರ ಮೂಲಕ ಅವರ ಚಿಂತನೆಗಳನ್ನು ಜನರಿಗೆ ಅರ್ಥ ಮಾಡಿಸುವುದು.
 • ನಮ್ಮದೇ ಆದ ಸಾಂಸ್ಕೃತಿಕ ಬಂಡವಾಳವನ್ನು ಸ್ಥಾಪಿಸಬೇಕು.
 • ನಮ್ಮದೇ ಸಮುದಾಯದ ರೋಲ್ ಮಾಡಲ್‍ಗಳನ್ನು ರೂಪಿಸಬೇಕು.
 • ಅಂಚಿನ ಸಮುದಾಯಗಳಿಗೆ ಮಾಹಿತಿ ಇಲ್ಲ. ಮಾಹಿತಿ ನೀಡಬೇಕು. ರೋಲ್ ಮಾಡೆಲ್‍ಗಳನ್ನು ಪರಿಚಯಿಸಬೇಕು.
 • ನಮ್ಮ ಸಮುದಾಯಗಳ ಪ್ರತಿನಿಧಿಗಳು ತಮ್ಮ ಸಂಭಾವನೆಯಲ್ಲಿ 1%ರಷ್ಟು ಹಣವನ್ನು ಅಂಬೇಡ್ಕರ್ ವಿಜ್ಞಾನ ಕೇಂದ್ರಗಳಿಗೆ ಪುಸ್ತಕಗಳ ರೂಪದಲ್ಲಿ ನೀಡಬೇಕು. ಹಬ್ಬ, ಜಾತ್ರೆ ಮತ್ತು ದುಂದುವೆಚ್ಚ ಮಾಡುವುದರ ಬದಲಾಗಿ ಆ ಹಣವನ್ನು ಅಂಬೇಡ್ಕರ್ ವಿಜ್ಞಾನ ಕೇಂದ್ರಗಳಿಗೆ ನೀಡಬೇಕು.

ಈ ಶಾಲೆಗಳಿಗೆ ಬರುವ ಮಕ್ಕಳ ಪೋಷಕರು ಮೊದಲನೇ ಬಾರಿ ಶಾಲೆಗಳಿಗೆ ಬರುತ್ತಿದ್ದಾರೆ. ಅವರಿಗೆ ಶಿಕ್ಷಣ ಕುರಿತು ಜಾಗೃತಿ ಇರುವುದಿಲ್ಲ. ಶಾಲೆಗಳ ಕಲಿಕಾ ವಿಧಾನ ಮತ್ತು ಗುಣಮಟ್ಟವನ್ನು ತಿಳಿದಿರುವುದಿಲ್ಲ. ಪೋಷಕರ ಮುಂದೆ ಮಕ್ಕಳ ಪ್ರತಿಭೆಯನ್ನು ಅನಾವರಣ ಮಾಡಲು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಹಳೆಯ ವಿದ್ಯಾರ್ಥಿಗಳ ಸಂಘದಲ್ಲಿರುವ ಕೆಲವು ಸದಸ್ಯರು ಪೋಷಕರ ಸಭೆಗಳಲ್ಲಿ ಭಾಗವಹಿಸಿ ಪೋಷಕರಿಗೆ ಶಿಕ್ಷಣದ ಪ್ರಾಮುಖ್ಯತೆ ಕುರಿತು ತಿಳಿವಳಿಕೆ ಮತ್ತು ಭರವಸೆಗಳನ್ನು ಮೂಡಿಸುತ್ತಾರೆ.

ಅಂಬೇಡ್ಕರ್ ಅವರ ತತ್ವ ಸಿದ್ಧಾಂತ ಮತ್ತು ಆದರ್ಶಗಳನ್ನು ಜನರಿಗೆ ತಲುಪಿಸಲು ಹಳೆಯ ವಿದ್ಯಾರ್ಥಿಗಳು ಗ್ರಾಮ, ಮಂಡಲ್, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಗುಂಪುಗಳನ್ನು ರಚಿಸಿಕೊಂಡಿದ್ದಾರೆ. ಈ ಗುಂಪುಗಳಲ್ಲಿ ಅಂಚಿನ ಸಮುದಾಯಗಳಿಗೆ ಶಿಕ್ಷಣ ಕುರಿತು ಜಾಗೃತಿ ಮತ್ತು ಅರಿವು ಮೂಡಿಸುವುದೇ ಇದರ ಉದ್ದೇಶವಾಗಿದೆ. ಅವರ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಅದರಿಂದ ಪ್ರೇರಣೆಗೊಂಡು ಅಂಚಿನ ಸಮುದಾಯಗಳು ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳುಹಿಸುತ್ತಾರೆ. ಶಿಕ್ಷಣ ಪಡೆಯುವುದರಿಂದ ಸಿಗುವ ಅವಕಾಶಗಳು ಮತ್ತು ಸಾಮಾಜಿಕ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳುತ್ತಾರೆ.

 1. ನಿಮ್ಮ ಶಾಲೆಗಳಲ್ಲಿ ಕಲಿತ ಮಕ್ಕಳು ಮಾತ್ರ ಏಕೆ ಉನ್ನತ ಸಂಸ್ಥೆಗಳಿಗೆ ಪ್ರವೇಶ ಪಡೆಯುತ್ತಿದ್ದಾರೆ?

ಪ್ರ. ಕು.: ಮಕ್ಕಳು ಜನಿಸಿದ ಮತ್ತು ವಾಸಿಸುವ ಸ್ಥಳಗಳು ಹಾಗೂ ಪೋಷಕರು ಮಕ್ಕಳನ್ನು ಆಸ್ತಿ ಎಂದು ಭಾವಿಸುವುದಿಲ್ಲ. ಬದಲಿಗೆ ಹೊರೆ ಎಂದು ಭಾವಿಸುತ್ತಾರೆ. ವಿಶೇಷವಾಗಿ ಹೆಣ್ಣು ಮಕ್ಕಳನ್ನು ಅವರು ವಾಸಿಸುವ ಪರಿಸರ ಮಕ್ಕಳಿಗೆ ಪೂರಕವಾಗಿಲ್ಲ. ಅಲ್ಲಿ ಅನೇಕ ಕಾರಣಗಳಿಂದಾಗಿ ಶೋಷಣೆ ಮತ್ತು ಬಡತನಗಳಿಂದಾಗಿ ಅಂತಹ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ನಮ್ಮ ಶಾಲೆಗೆ ಬರುವ ಮಕ್ಕಳಿಗೆ ಈ ಪರಿಸ್ಥಿತಿಯಿಂದ ಹೊರ ಬರಲು ಪೂರಕವಾದ ವಾತವರಣವನ್ನು ನಿರ್ಮಿಸುತ್ತೇವೆ. ಇದರಿಂದ ಮಕ್ಕಳಿಗೆ ಪ್ರೋತ್ಸಾಹ ಹೆಚ್ಚಿಸಿದಾಗ ವಿಶಾಲವಾಗಿ ಯೋಚಿಸುತ್ತಾರೆ. ದೊಡ್ಡ ಗುರಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ. ಬಡತನವಿದ್ದರೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸೀಟು ಪಡೆದುಕೊಂಡಿದ್ದಾರೆ.

ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳಿಂದ ಬರುವ ಮಕ್ಕಳು ಇತರೆ ಮಕ್ಕಳಿಗಿಂತ ಬುದ್ಧಿವಂತರಾಗಿರುತ್ತಾರೆ. ಮಧ್ಯಮ ವರ್ಗದವರ ಮಕ್ಕಳಿಗಿರುವಂತಹ ಅವಕಾಶಗಳು ಈ ಮಕ್ಕಳಿಗೆ ಇರುವುದಿಲ್ಲ ಅವರಿಗೆ ತಿಳಿವಳಿಕೆ ಮತ್ತು ಅವಕಾಶಗಳನ್ನು ರೂಪಿಸಿ ಕೊಟ್ಟರೆ, ಅವರು ಬಡತನ ಮತ್ತು ನಿರಾಸಕ್ತಿಗಳಿಂದ ಹೊರ ಬರುತ್ತಾರೆ. ಸಾಧನೆ ಮತ್ತು ಸಾಧಿಸಲಾಗದೇ ಇರುವುದಕ್ಕೂ ಅವಕಾಶ ದೊರೆಯುವುದಕ್ಕೂ ವ್ಯತ್ಯಾಸಗಳಿವೆ. ಅದನ್ನು ಗಮನದಲ್ಲಿಟ್ಟುಕೊಂಡು ಅವಕಾಶಗಳನ್ನು ರೂಪಿಸಲಾಗುತ್ತದೆ. ಅದರ ಮೂಲಕ ಮಕ್ಕಳಿಗೆ ಆದರ್ಶ ಮಾದರಿಗಳನ್ನು ರೂಪಿಸಲಾಗುತ್ತದೆ. ಅದರಿಂದ ಅವರಿಗೆ ಯಾವ ದಾರಿ ಮುಖ್ಯವೋ ಅದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ನಮ್ಮ ಶಾಲೆಗಳು ಸುರಕ್ಷಿತ ಪರಿಸರದಲ್ಲಿವೆ. ಮತ್ತು ಆ ಶಾಲೆಗಳಲ್ಲಿ ಅಂತರ್ಗತವಾಗಿ ಪ್ರಚೋದಿಸುವ ಬೋಧನೆ ಮತ್ತು ಕಲಿಕಾ ವಿಧಾನಗಳನ್ನು ಅಳವಡಿಸಿಕೊಳ್ಳಲಾಗಿದೆ. ಅವರ ಪ್ರತಿಭೆಗಳನ್ನು ಗುರುತಿಸಲು ಶಿಕ್ಷಣ ಮತ್ತು ಇತರ ಕ್ಷೇತ್ರಗಳಲ್ಲಿ ಪ್ರೋತ್ಸಾಹಿಸಲಾಗುತ್ತಿದೆ. 24*7 ಗಂಟೆಗಳು ನಮ್ಮ ಮಕ್ಕಳನ್ನು ಶಿಕ್ಷಕರು ನಿಗಾ ಇಟ್ಟು ನೋಡಿಕೊಳ್ಳುತ್ತಾರೆ. ಸಮರ್ಪಕವಾಗಿ ಮಕ್ಕಳ ಸಾಧನೆಗೆ ಪ್ರೋತ್ಸಾಹಿಸುತ್ತಾರೆ. ಅದರಿಂದಲೇ ಮಕ್ಕಳು ದೊಡ್ಡ ದೊಡ್ಡ ಸಾಧನೆಗಳನ್ನು ತಮ್ಮ ಜೀವನದ ಗುರಿಯಾಗಿಸಿಕೊಂಡಿದ್ದಾರೆ.

 1. ಮಕ್ಕಳು ಹೆಚ್ಚು ಸಾಧನೆ ಮಾಡುತ್ತಿದ್ದಾರೆ. ಇದು ಜಾತಿ ತಾರತಮ್ಯವನ್ನು ಕೊನೆಗೊಳಿಸುವ ಪ್ರಯತ್ನವೇ ಮಕ್ಕಳ ಸಾಧನೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಮಕ್ಕಳಿಗೆ ಈ ಗುಣವನ್ನು ಅಳವಡಿಸಿಕೊಳ್ಳಲು ನಿಮಗೆ ಏನಾದರು ಸವಾಲುಗಳಿವೆಯೇ?

ಪ್ರ. ಕು.: ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರುವ ಸಮುದಾಯಗಳಿಂದ ಮುಂದೆ ಬಂದು ಉನ್ನತ ಉದ್ಯೋಗಗಳಲ್ಲಿ ಇರುವವರಿಂದ ತಳಸಮುದಾಯಗಳು ನಿರೀಕ್ಷಿಸುವುದು ಹಣವಲ್ಲ; ಅವರಿಗೆ ಬೇಕಾಗಿರುವುದು ನಿಮ್ಮ ರೀತಿ ನಮ್ಮ ಮಕ್ಕಳನ್ನು ಮಾಡುವುದು ಹೇಗೆ? ಎನ್ನುವ ಮಾರ್ಗದರ್ಶನ ಮತ್ತು ಮಾಹಿತಿ. ಆದರೆ ನಾವು ಉನ್ನತ ಸ್ಥಾನದಲ್ಲಿರುವವರು ಅವರಿಂದ ದೂರವಾಗಿ ಅವರೊಂದಿಗೆ ನಮ್ಮ ಮಕ್ಕಳನ್ನು ಸೇರಲು ಬಿಡುವುದಿಲ್ಲ. ಅವರನ್ನು ದೂರವಿಡುತ್ತಿದ್ದೇವೆ. ಅದರಿಂದ ಸಮುದಾಯದ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ.

ನಾವು ಇತರರನ್ನು ಸ್ಪರ್ಧಿಗಳೆಂದು ಭಾವಿಸಬಾರದು. ಅವರೊಂದಿಗೆ ಸ್ಪರ್ಧೆ ಒಡ್ಡಿಕೊಳ್ಳಬಾರದು. ಅವರು ನಮ್ಮ ಶತ್ರುಗಳಲ್ಲ. ಅದರ ಬದಲಾಗಿ ಅತ್ಯಂತ ಉನ್ನತ ಸ್ಥಾನದಲ್ಲಿರುವವರು ಏನು ಮಾಡುತ್ತಾರೋ ಅದೇ ರೀತಿ ನಮ್ಮ ಮಕ್ಕಳು ಆಗಬೇಕೆಂದರೆ ಏನು ಮಾಡಬೇಕು? ಎಂಬುವುದನ್ನು ಯೋಚಿಸಿ ಅದನ್ನು ಮಾಡಲು ಪ್ರಯತ್ನಿಸಬೇಕು. ಅದೇ ನಮ್ಮ ಗುರಿಯಾಗಬೇಕು.

ನಾವು ಬಡವರ ಮಧ್ಯೆ ಜಾತಿ ನೋಡಬಾರದು. ಎಲ್ಲ ಬಡವರು ಒಂದೇ. ಅವರಿಗೆ ಬೇಕಾಗಿರುವುದನ್ನು ಒದಗಿಸಬೇಕು. ಅವರನ್ನು ಓದಿಸಲು ನಾವು ಪ್ರೋತ್ಸಾಹಿಸಬೇಕು. ಅದರಿಂದ ಅವರೊಳಗಿರುವ ಕೀಳರಿಮೆ ಹೋಗುತ್ತದೆ. ಅವರು ದೊಡ್ಡ ದೊಡ್ಡ ಸಾಧನೆಗಳನ್ನು ಮಾಡುತ್ತಾ ಹೋದರೆ ಅವರಿಗೆ ಜಾತಿ ಮುಖ್ಯವಾಗುವುದಿಲ್ಲ. ಅಂತಹ ಒಂದು ಪ್ರಯತ್ನ ಮಾಡಬೇಕು.

ಜಾತಿ ನಿರ್ಮೂಲನೆಗೆ ಸಮಯವಿದೆ. ಮೊದಲು ಸಮುದಾಯದವರು ಭಯವನ್ನು ಬಿಡಬೇಕು. ಅವಕಾಶ ಪಡೆದವರು ಅವಕಾಶ ವಂಚಿತರಿಗೆ ಅವಕಾಶಗಳನ್ನು ಬಿಟ್ಟುಕೊಡಬೇಕು.

ಬ್ರಿಟೀಷರು ಭಾರತಕ್ಕೆ ಬಂದಾಗ ಆ ಭಾಷೆ ಕಲಿತವರು ಕೇವಲ ಮೇಲ್ಜಾತಿಗಳು. ಅದು ಇಂದಿಗೂ ಅವರದ್ದೇ ಆಗಿದೆ. ಅವರು ಹೇಗಿದ್ದಾರೆ ನೋಡಿ! ದೇಶದ ಆಸ್ತಿ, ಅಧಿಕಾರ ಎಲ್ಲವೂ ಅವರ ಬಳಿ ಇದೆ. ಅದರೆ ನಾವು ಹೇಗಿದ್ದೇವೆ ನೋಡಿ! ಆದ್ದರಿಂದ ನಾವು ಇಂಗ್ಲಿಷ್ ಭಾಷೆಯನ್ನು ಕಲಿತುಕೊಳ್ಳಬೇಕು. ಅದರಿಂದ ನಮ್ಮ ಅವಕಾಶಗಳು ವಿಸ್ತರಣೆಯಾಗುತ್ತವೆ. ಜ್ಞಾನ ಹೆಚ್ಚುತ್ತದೆ. ಆದರೆ ಇಂಗ್ಲಿಷ್ ಭಾಷೆ ಹೆಚ್ಚು ದಿನ ಇರುವುದಿಲ್ಲ. 2030ರ ವೇಳೆಗೆ ಪ್ರಪಂಚದಲ್ಲಿ ಕೋಡಿಂಗ್ ಭಾಷೆ ಮಾತ್ರ ಇರುತ್ತವೆ. ಈ ಕೋಡಿಂಗ್ ಭಾಷೆಯನ್ನು ಮಿಷನ್‍ಗಳು ನಡೆಸುತ್ತದೆ. ಎಲ್ಲ ಕಾರ್ಯವನ್ನು ಯಂತ್ರಗಳೇ ಮಾಡುತ್ತವೆ. ಅದರಿಂದ ನಾವು ಹೇಳುವುದು ಕುಡುಗೋಲು ಹಿಡಿದ ಕೈಗಳಲ್ಲಿ ಕೋಡಿಂಗ್ ಮಾಡಬೇಕು. ಜಾತಿಗಳು ಬದಲಾಗಬೇಕಾದರೆ; ಯಾವ ಜಾತಿ ತಮ್ಮ ಗತಕಾಲದ ಚರಿತ್ರೆಯನ್ನು ಮುಂದಿನ ಪೀಳೆಗೆಗೆ ಪರಿಚಯ ಮಾಡುವುದಿಲ್ಲವೋ, ಯಾವ ಜಾತಿಗಳು ತಮ್ಮ  ಕ್ಷಣಿಕ ಸುಖವನ್ನು ಭವಿಷ್ಯಕ್ಕಾಗಿ ತ್ಯಾಗ ಮಾಡುವುದಿಲ್ಲವೋ, ಯಾವ ಜಾತಿಗಳು ನಡೆಯುವುದನ್ನು ಕಲ್ಪಿಸಿಕೊಳ್ಳದೇ ಹೋದರೆ ಆ ಜಾತಿಗಳು ಎಂದಿಗೂ ಬದಲಾಗುವುದಿಲ್ಲ.

ನಮಗೆ ವಾಟ್ಸಾಪ್, ಫೇಸ್‍ಬುಕ್ ಅಲ್ಲ ಬೇಕಾಗಿರುವುದು. ನಮಗೆ ಪುಸ್ತಕಗಳು ಬೇಕಾಗಿವೆ. ನಮಗೆ ಲಿಕ್ಕರ್ ಬೇಕಾಗಿಲ್ಲ. ಗ್ರಂಥಾಲಯಗಳು ಬೇಕು. ಚಪ್ಪಲಿ ಹೊಲೆದ ಕೈಗಳಿಂದ ಚರಿತ್ರೆ ರೂಪಿಸಿ ಹಣ ಸಂಪಾದಿಸಿದ ಕೈಗಳಿಂದ ಡಾಲರ್‍ಗಳನ್ನು ಸಂಪಾದಿಸಬೇಕು.

ನಮ್ಮ ಅಕ್ಕಪಕ್ಕದಲ್ಲಿರುವ ಸಣ್ಣ ಜಾತಿಗಳು ನಮ್ಮ ಶತ್ರುಗಳಲ್ಲ. ನಮ್ಮ ಗಮನದಲ್ಲಿರಬೇಕಾಗಿರುವುದು 1%ರಷ್ಟು ಜನ     60%ರಷ್ಟು ಸಂಪತ್ತು ಮತ್ತು ಅಧಿಕಾರವನ್ನು ಹೊಂದಿದ್ದಾರೆ. ಅಲ್ಲಿಗೆ ಪ್ರವೇಶಿಸುವುದು ನಮ್ಮ ಗುರಿಯಾಗಬೇಕು ಅದನ್ನು ಸಾಧಿಸಲು ತ್ಯಾಗದ ಅವಶ್ಯಕತೆ ಇದೆ. ನಮ್ಮ ಸುಖ ಜೀವನಗಳನ್ನು ಬಿಟ್ಟು ಕೊಡಬೇಕು. ಪ್ರತಿ ವಾರದಲ್ಲಿ ಒಂದು ದಿನ ನಾವು ನಮ್ಮ ಕಾಲೋನಿಗಳಿಗೆ ಹೋಗಿ ಅವರೊಂದಿಗೆ ಚರ್ಚಿಸಬೇಕು. ನಮ್ಮ ಮಕ್ಕಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗಬೇಕು. ಅವರಿಗೆ ಸಮುದಾಯದ ಸ್ಥಿತಿಯನ್ನು ಅರ್ಥ ಮಾಡಿಸಬೇಕು. ಸಮುದಾಯಗಳಿಗೆ ಜಾಗೃತಿ ಮತ್ತು ಆತ್ಮವಿಶ್ವಾಸವನ್ನು ಮೂಡಿಸಬೇಕು. ಅದರಿಂದ ಬದಲಾವಣೆ ತರಬಹುದು.

2030ರ ವೇಳೆಗೆ 40%ರಷ್ಟು ಉದ್ಯೋಗಗಳು ಕಳೆದು ಹೋಗುತ್ತವೆ. ಎಲ್ಲ ಕೆಲಸವನ್ನು ಮಿಷನ್‍ಗಳು ಮತ್ತು ರೋಬೋಟ್‍ಗಳು ಮಾಡುತ್ತವೆ. ಎಲ್ಲದಕ್ಕೂ ಆಟೋ ಮಿಷನ್‍ಗಳ ಮೇಲೆ ಅವಲಂಬಿಸಬೇಕಾಗುತ್ತದೆ. ಆದ್ದರಿಂದ ಆ ಬದಲಾವಣೆಗೆ ಪೂರಕವಾಗಿ ನಮ್ಮ ಸಮುದಾಯಗಳಿಗೆ ಜಾಗೃತಿ, ಮಾಹಿತಿ ಮತ್ತು ಪ್ರೋತ್ಸಾಹವನ್ನು ನೀಡಿ ಈಗಿನಿಂದಲೇ ಅದನ್ನು ಎದುರಿಸಲು ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು ಪ್ರಯತ್ನಿಸಬೇಕು.

ನಮ್ಮ ಮನೆಯಲ್ಲಿ ಟಿ.ವಿ. ಇದೆ ಕೇಬಲ್ ಇಲ್ಲ. ನಾನು ಬಿಡುವಿನ ವೇಳೆಯಲ್ಲಿ ಪುಸ್ತಕಗಳನ್ನು ಓದುತ್ತೇನೆ. ಇತರರೊಂದಿಗೆ ಚರ್ಚಿಸಿ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ. ಅಂತರ್ಜಾಲ ಮತ್ತು ಕಂಪ್ಯೂಟರ್‍ಗಳಲ್ಲಿ ನೋಡುವುದೆಲ್ಲ ನಿಜವಲ್ಲ. ಅದನ್ನು ನೋಡಿ ಸಮಯ ವ್ಯರ್ಥ ಮಾಡಕೊಳ್ಳಬೇಡಿ. ನೀವು ನೋಡುವ ಚಿತ್ರಗಳು ಮತ್ತು ವಿಷಯಗಳು ಸತ್ಯವಲ್ಲ. ನೀವು ವಿಭಿನ್ನ ಸೆಳೆತಗಳಿಂದ ದೂರವಿರಿ. ನಿಮ್ಮ ಗುರಿ ಸಾಧನೆಯತ್ತ ಇರಲಿ.

ಬದಲಾವಣೆಗೆ ತೆರೆದುಕೊಳ್ಳಬೇಕು:-

 • ನನ್ನನು ನಾನು ನಂಬುವುದು.
 • ಬೇರೆಯವರನ್ನು ಅನುಸರಿಸಬಾರದು. ನೀವು ಮಾಡುವುದರ ಬಗ್ಗೆ ನಿಮಗೆ ಸಂಪೂರ್ಣ ನಂಬಿಕೆ ಇರಬೇಕು.
 • ನಿಮ್ಮ ಆಲೋಚನೆಗಳು ಮುಕ್ತವಾಗಿರಬೇಕು.
 • ವೈವಿಧ್ಯತೆಗಳ ಮಧ್ಯೆ ಜೀವಿಸಬೇಕು.
 • ಕಲಿಕೆ ನಿರಂತರವಾಗಿರಬೇಕು. ಯಾರಿಂದ ಬೇಕಾದರೂ ಕಲಿಯಬಹುದು.

ಹೆಣ್ಣು ಮಕ್ಕಳಿಗೆ ನಮ್ಮ ಶಾಲೆಗಳಲ್ಲಿ ವಿಶೇಷವಾದ ಆದ್ಯತೆ ನೀಡುತ್ತೇವೆ. ಅವರ ಪೌಷ್ಠಿಕತೆ, ಅವರ ಸಾಮರ್ಥ್ಯಗಳು ಕಡಿಮೆ ಇರುತ್ತವೆ. ಆದ್ದರಿಂದ ನಾವು ‘ವಾಯ್ಸ್ ಫಾರ್ ಗರ್ಲ್ಸ್’ಎಂಬ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ. ಮಕ್ಕಳಿಗೆ ವಿಶೇಷ ತರಬೇತಿಯನ್ನು ನೀಡುತ್ತೇವೆ. ಅವರ ಬಗ್ಗೆ ಅವರೇ ಅರ್ಥ ಮಾಡಿಕೊಂಡಾಗ ಅವರ ಸಾಮರ್ಥ್ಯ ಹೆಚ್ಚಾಗುತ್ತವೆ. ಅದಕ್ಕೆ ಬೇಕಾದ ತರಬೇತಿ ಮತ್ತು ಪ್ರೋತ್ಸಾಹವನ್ನು ನೀಡುತ್ತಿದ್ದೇವೆ.

ಗ್ರಾಮಗಳಿಂದ ಹೊರ ಬರದೆ ಅಲ್ಲೇ ಇದ್ದು ಅವರು ಬದಲಾವಣೆಗೆ ಹೊಗ್ಗಿಕೊಳ್ಳದೇ ಹಾಗೆ ಉಳಿದರೆ ಮುಂದೆ ಬರುವ ಬದಲಾವಣೆಗಳಲ್ಲಿ ಜೀವನ ಸಾಗಿಸುವುದು ಕಷ್ಟ. 21ನೇ ಶತಮಾನದ ಅಭಿವೃದ್ಧಿಯಲ್ಲಿ ಬದುಕುಳಿಯಬೇಕಾದರೆ ಇವರು ಮನೆ ಮತ್ತು ಹಳ್ಳಿಗಳನ್ನು ಬಿಟ್ಟು ಹೊರ ಬರಬೇಕು. ಆಗ ಮಾತ್ರ ದೊಡ್ಡ ಸಾಧನೆ ಮಾಡಬಹುದು. ಹಳ್ಳಿಗಳ ಮೇಲೆ ಪ್ರೀತಿ ಇರಬೇಕು. ಉತ್ತಮ ಸ್ಥಾನಕ್ಕೆ ಹೋದ ಮೇಲೆ ಹಳ್ಳಿಗಳ ಅಭಿವೃದ್ಧಿಗೆ ಕೆಲಸ ಮಾಡಬೇಕು. ನಗರ ಪ್ರದೇಶಗಳಲ್ಲಿ ತಿಳಿವಳಿಕೆ, ಜ್ಞಾನ, ಮತ್ತು ಅವಕಾಶಗಳು ಹೆಚ್ಚಾಗಿರುತ್ತವೆ. ಅವುಗಳನ್ನು ಬಳಸಿಕೊಳ್ಳಬೇಕು.

 1. ವಸತಿ ಶಾಲೆಗಳಲ್ಲಿ ಮಕ್ಕಳು ಶಾಲೆ ಬಿಡುತ್ತಿರುವ ಉದಾಹರಣೆಗಳಿವಿಯೇ?

ಪ್ರ. ಕು.: ನನಗೆ ‘ಡ್ರಾಪ್ ಔಟ್’ಎನ್ನುವ ಪದದ ಬಗ್ಗೆ ತಕರಾರಿದೆ. ಡ್ರಾಪ್ ಔಟ್ ಎಂದರೆ ನಾನು ಚೆನ್ನಾಗಿ ಪಾಠ ಮಾಡುತ್ತಿದ್ದೇನೆ. ಆದರೆ ವಿದ್ಯಾರ್ಥಿಗಳು ಡ್ರಾಪ್ ಆಗುತ್ತಿದ್ದಾರೆ ಎಂದರ್ಥ. ಅದರ ಬದಲಾಗಿ ಇದನ್ನು ‘ಡ್ರೀವನ್ ಔಟ್’ ಎನ್ನಬೇಕು. ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆದುಕೊಳ್ಳಬೇಕು ಎನ್ನುವ ಇಚ್ಚೆ ಇದೆ. ಆದರೆ ವ್ಯವಸ್ಥೆ ವಿದ್ಯಾರ್ಥಿಗಳನ್ನು ಶಿಕ್ಷಣ ಪಡೆದುಕೊಳ್ಳಲು ಸಾಧ್ಯವಿಲ್ಲದ ಹಾಗೆ ಮಾಡುತ್ತಿದೆ ಹಾಗಾಗಿ ಮಕ್ಕಳು ಶಾಲೆ ಬಿಡುತ್ತಾರೆ. ನಮ್ಮ ಶಾಲೆಗಳಲ್ಲಿ ಡ್ರಾಪ್ ಔಟ್ ಈಗ ಇಲ್ಲ. ಏಕೆಂದರೆ ಡ್ರಾಪ್ ಔಟ್ ಆಗುವುದು ಶಾಲೆಯಲ್ಲಿ ವಿದ್ಯಾರ್ಥಿಗಳು ಹೊಂದಿಕೊಳ್ಳುವ ವಾತಾವರಣ ಇಲ್ಲದೇ ಇರುವಾಗ, ವಿದ್ಯಾರ್ಥಿಯನ್ನು ನೋಡಿಕೊಳ್ಳಲು ಸಾದ್ಯವಾಗದೇ ಇರುವಾಗ ಡ್ರಾಪ್ ಔಟ್ ಆಗುತ್ತದೆ. ನಮ್ಮ ಶಾಲೆಗಳಲ್ಲಿ ಪೂರಕವಾದ ವಾತವರಣ ಮತ್ತು ಅವರ ಆಲೋಚನೆಗೆ ಪೂರಕವಾದ ವ್ಯವಸ್ಥೆಗಳನ್ನು ಕಲ್ಪಿಸುವುದರಿಂದ ಮಕ್ಕಳು ಶಾಲೆ ಬಿಡುವುದಿಲ್ಲ.

ಕೆ.ಜಿ. ಟು ಪಿ.ಜಿ. (LKG TO PG) ಎನ್ನುವ ಪರಿಕಲ್ಪನೆಯಲ್ಲಿ ತೆಲಂಗಾಣ ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಮಕ್ಕಳ ಅಭಿರುಚಿಗೆ ತಕ್ಕಂತೆ ಅಂತರರಾಷ್ಟ್ರೀಯ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದೇವೆ.

 1. ಹಳೆಯ ವಿದ್ಯಾರ್ಥಿಗಳು ಮತ್ತು ಸಮುದಾಯಗಳನ್ನು ಒಳಗೊಂಡು ಶಿಕ್ಷಣದ ಕಲಿಕೆಯನ್ನು ಪ್ರೋತ್ಸಾಹಿಸಲು ‘ಸ್ವೆರೋಸ್ ಸಂಘಟನೆ’ಯನ್ನು ಮಾಡಿರುವ ಉದ್ದೇಶವೇನು?

ಪ್ರ. ಕು.: ಈ ಶಾಲೆಗಳಲ್ಲಿ ಕಲಿತವರು, ಸಮುದಾಯಗಳಿಂದ ಬಂದು ಸಾಧನೆಗಳನ್ನು ಮಾಡಿರುವವರು, ಸಮುದಾಯಗಳ ಅಭಿವೃದ್ಧಿಗಳಿಗೆ ಯೋಚಿಸುತ್ತಿರುವವರು ಮರಳಿ ಸಮುದಾಯಕ್ಕೆ ಕೊಡುಗೆ ನೀಡಬೇಕು. ನಮ್ಮ ಸಮುದಾಯದ ಎಲ್ಲರೂ ನಮ್ಮಂತೆ ಅವಕಾಶಗಳನ್ನು ಪಡೆದು ಅಭಿವೃದ್ಧಿ ಹೊಂದಬೇಕು ಎಂದು ಯೋಚಿಸುವರು. ಎಲ್ಲರನ್ನು ಒಟ್ಟಾಗಿ ಸೇರಿಸಿ ‘ಸ್ವೆರೋಸ್ ಸಂಘಟನೆ’ಯನ್ನು ರೂಪಿಸಿಕೊಂಡಿದ್ದೇವೆ.

ನಮ್ಮನ್ನು ಮೊದಲು ದಲಿತರು ಎಂದು ಗುರುತಿಸುತ್ತಿದ್ದರು. ದಲಿತ ಎಂದರೆ ಸಮಾಜದಲ್ಲಿ ಗ್ರಹಿಸುವ ಅರ್ಥಗಳು ಅವಮಾನ ಮತ್ತು ಕೀಳರಿಮೆಯನ್ನು ಉಂಟು ಮಾಡುತ್ತಿತ್ತು. ಸಮಾಜದಲ್ಲಿ ಕೀಳಾಗಿರುವವರು, ಶೋಷಿತರು, ನಿಸ್ಸಾಹಯಕರು, ನಿರ್ಗತಿಕರು ಎಂಬ ಅರ್ಥವಿರುವುದರಿಂದ ಆ ಪದ ಬಳಕೆಯ ಬಗ್ಗೆ ನಮಗೆ ತಕರಾರಿದೆ. ಆದ್ದರಿಂದ ನಾವು ಉದ್ದೇಶಪೂರ್ವಕವಾಗಿ ಅದನ್ನು ಆ ಪದ ಮತ್ತು ಆ ಪದಕ್ಕೆ ಅಂಟಿಕೊಂಡಿರುವ ಅವಮಾನ ಮತ್ತು ಶೋಷಣೆಗಳಿಂದ ಹೊರಗೆ ಬಂದು ಸ್ವಾಭಿಮಾನದಿಂದ ಬದುಕಬೇಕು. ಅದಕ್ಕಾಗಿ ನಾವು ‘ಸ್ವೆರೋಸ್ ಸಂಘಟನೆ’ಯನ್ನು ಸ್ಥಾಪಿಸಿದ್ದೇವೆ. ‘ಸ್ವೇರೋಸ್’ಚಳವಳಿಯನ್ನು ಪ್ರಾರಂಭಿಸಿದ್ದಾರೆ. SW ಎಂದರೆ ‘ಸಮಾಜ ಕಲ್ಯಾಣ’ ಎಂದು ‘AEROES’ ಎಂದರೆ ಗ್ರೀಕ್ ಭಾಷೆಯಲ್ಲಿ ಆಕಾಶ ಎಂದರ್ಥ. ಸಮಾಜ ಕಲ್ಯಾಣ ಸಹಕಾರದಲ್ಲಿ ಬೆಳೆಯುವ ವಿದ್ಯಾರ್ಥಿ ಯುವ ಜನರಿಗೆ ಆಕಾಶವೇ ಮಿತಿಯಾಗಬೇಕು. ಅಲ್ಲಿಯವರೆಗೆ ನಾವು ಸಾಧನೆ ಮಾಡಬೇಕು ಎಂಬುದಾಗಿದೆ. ಸಮಾಜ ಕಲ್ಯಾಣ ಇಲಾಖೆಯಲ್ಲಿರುವ ವಸತಿ ಶಾಲೆಗಳಲ್ಲಿ ಕಲಿಯುವ ಮಕ್ಕಳಿಗೆ ಪ್ರೋತ್ಸಾಹ, ಕಲಿಕೆಯ ವಿಸ್ತರಣೆ, ರೋಲ್ ಮಾಡೆಲ್‍ಗಳನ್ನು ರೂಪಿಸಲಾಗುತ್ತಿದೆ. ಆಕಾಶದಷ್ಟು ನಾವು ಸಾಧಿಸಬೇಕು ಎನ್ನುವ ಛಲವನ್ನು ವಿದ್ಯಾರ್ಥಿ ಮತ್ತು ಯುವ ಜನರಲ್ಲಿ ತುಂಬುವ ಸಲುವಾಗಿ ಹೊಸ ಪರಿಕಲ್ಪನೆಯನ್ನು ಅಳವಡಿಸಿಕೊಂಡಿದ್ದೇವೆ.

ಈ ಸಂಘಟನೆಯ ಮೂಲಕ ಸಮುದಾಯಗಳಿಗೆ ಶಿಕ್ಷಣ ಕುರಿತು ಜಾಗೃತಿ ಮೂಡಿಸುತ್ತಿದ್ದೇವೆ. ಅದೇ ಪರಿಸರದಿಂದ ಬಂದು ಸಾಧನೆ ಮಾಡಿರುವ ವ್ಯಕ್ತಿಗಳನ್ನು ಮಾದರಿಗಳನ್ನಾಗಿ ಬಳಸುತ್ತಿದ್ದೇವೆ. ಅದರಿಂದ ಜನ ಎಚ್ಚೆತ್ತುಕೊಳ್ಳುತ್ತಿದ್ದಾರೆ. ಮಕ್ಕಳನ್ನು ಶಾಲೆಗಳಿಗೆ ಕಳುಹಿಸಲು ಇಚ್ಛಿಸುತ್ತಿದ್ದಾರೆ. ಸಮುದಾಯಕ್ಕೆ ಪುನಃ ವಾಪಸ್ಸು ಏನಾದರೂ ಕೊಡಬೇಕು ಎಂದು ಸ್ವಯಂ ಪ್ರೇರಿತವಾಗಿ ಬಂದು ಮಕ್ಕಳಿಗೆ ಪ್ರೋತ್ಸಾಹ ಮತ್ತು ಕಲಿಕೆಗಳ ವಿಸ್ತರಣೆ ಹಾಗೂ ಆತ್ಮವಿಶ್ವಾಸವನ್ನು ಮೂಡಿಸುತ್ತಿದ್ದಾರೆ. ಸಮುದಾಯದ ಸಾಧಕರಾದ ಜ್ಯೋತಿಬಾಪುಲೆ, ಸಾವಿತ್ರಿ ಬಾಯಿ ಪುಲೆ, ಶಾಹು ಮಹಾರಾಜ್, ಡಾ. ಬಿ.ಆರ್.ಅಂಬೇಡ್ಕರ್ ಅವರ ಕೊಡುಗೆಗಳು ಮತ್ತು ಅವರ ಸಾಧನೆ ಮತ್ತು ಆಶಯಗಳನ್ನು ಜನರಿಗೆ ತಲುಪಿಸುತ್ತಿದ್ದಾರೆ. ಅವರ ತತ್ವ, ಸಿದ್ಧಾಂತಗಳನ್ನು ಪ್ರತಿದಿನ ಜೀವನದಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ. ಇದರಿಂದ ಸಮುದಾಯಗಳಿಗೆ ಹೊಸ ಚೈತನ್ಯವನ್ನು ನೀಡುತ್ತಿದ್ದಾರೆ.

ಕಲಿಕೆ ಎಂದರೆ ಕೇವಲ ಶಾಲೆಗಳಲ್ಲಿ ಪಠ್ಯ ಬೋಧನೆ ಮಾತ್ರವಾಗಿರದೆ ಕಲಿಕೆ ಯಾರಿಂದ ಬೇಕಾದರೂ ಆಗಬಹುದು ಎನ್ನುವುದನ್ನು ಅರ್ಥ ಮಾಡಿಸುತ್ತಿದ್ದಾರೆ. ಶಾಲೆಗಳಿಗೆ ಬೇಕಾದ ಸೌಲಭ್ಯಗಳು, ಶಿಕ್ಷಕರು ಮತ್ತು ಮಕ್ಕಳಿಗೆ ಬೇಕಾದ ಪ್ರೋತ್ಸಾಹ, ತರಬೇತಿಗಳನ್ನು ನೀಡಲು ಸ್ವಯಂ ಪ್ರೇರಿತವಾಗಿ ಭಾಗವಹಿಸುತ್ತಿದ್ದಾರೆ. ಹಳೆಯ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು, ಸಮುದಾಯದ ಪ್ರತಿನಿಧಿಗಳು, ಮತ್ತು ಸಾಧಕರು, ಒಟ್ಟಿಗೆ ಸೇರಿಕೊಂಡು ಶಿಕ್ಷಣದ ಕಲಿಕಾ ವಿಧಾನಗಳಿಗೆ ಒಂದು ಹೊಸ ವ್ಯಾಖ್ಯಾನ ಬರೆದಿದ್ದಾರೆ.

ಕೇವಲ ಶಿಕ್ಷಣ ಮತ್ತು ಕಲಿಕೆಗಷ್ಟೇ ಸೀಮತವಾಗಿ ಉಳಿಯದೇ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ ಸಮುದಾಯಗಳಿಗೆ ಮಾಹಿತಿ ನೀಡುವುದು, ಮಾರ್ಗದರ್ಶನ ಹಾಗೂ ಜಾಗೃತಿಗಳನ್ನು ಮೂಡಿಸಿ ಅವರ ಸ್ವಾಭಿಮಾನವನ್ನು ಹೆಚ್ಚಿಸುತ್ತಿದ್ದಾರೆ. ಕಲಿತ ಮಕ್ಕಳು ಇತರೆ ಮಕ್ಕಳಿಗೆ ಕಲಿಸುವ ಪ್ರಕ್ರಿಯೆಯನ್ನು ಅಳವಡಿಸಿಕೊಂಡಿದ್ದಾರೆ. ಪೋಷಕರ ನಡವಳಿಕೆ ಮತ್ತು ಆಲೋಚನ ಕ್ರಮಗಳಲ್ಲಿ ಬದಲಾವಣೆ ತರುತ್ತಿದ್ದಾರೆ. ಸರ್ಕಾರಿ ಕಾರ್ಯಕ್ರಮಗಳ ಅನುಷ್ಠಾನದ ಲೋಪದೋಷಗಳನ್ನು ಬಗೆಹರಿಸುತ್ತಿದ್ದಾರೆ. ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ಸ್ವಯಂಪ್ರೇರಿತವಾಗಿ ಕೆಲಸ ಮಾಡುತ್ತಿದ್ದಾರೆ.

 1. ಬೇರೆ ಶಾಲೆಗಳಿಗಿಂತ ನಿಮ್ಮ ಶಾಲೆ ಹೇಗೆ ಭಿನ್ನವಾಗಿವೆ?

ಪ್ರ. ಕು.: ವಿದ್ಯಾರ್ಥಿಗಳಿಗೆ ಯಾವುದೇ ಅಂತರರಾಷ್ಟ್ರೀಯ ವಸತಿ ಶಾಲೆಗಳಲ್ಲಿ ಸಿಗದೆ ಇರುವ ತರಬೇತಿಗಳನ್ನು ಈ ವಸತಿ ಶಾಲೆಗಳಲ್ಲಿ ನೀಡಲಾಗುತ್ತದೆ. ಪ್ರತಿ ವರ್ಷ ಬೇಸಿಗೆ ರಜೆಯಲ್ಲಿ ಎರಡು ತಿಂಗಳ ಕಾಲ ವಿದ್ಯಾರ್ಥಿಗಳಿಗೆ ಆಸಕ್ತಿ ಇರುವ ವಿಷಯಗಳನ್ನು ಕುರಿತು ಬೇಸಿಗೆ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ಈ ಶಿಬಿರಗಳನ್ನು ಆಯೋಜಿಸುವ ಮೊದಲು 268 ಶಾಲೆಗಳಿಂದ ಆಸಕ್ತಿ ಇರುವ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು ಒಂದೊಂದು ಶಾಲೆಯಲ್ಲಿ ಒಂದೊಂದು ಶಿಬಿರವನ್ನು ಏರ್ಪಡಿಸುತ್ತಾರೆ. 40ಕ್ಕೂ ಹೆಚ್ಚು ವಿಷಯಗಳ ಮೇಲೆ ಶಿಬಿರಗಳು ನಡೆಯುತ್ತವೆ. ‘ವಾಯ್ಸ್ ಫಾರ್ ಗರ್ಲ್ಸ್’,  ‘ಅಬಾಕಸ್’, ‘ಶೂಟಿಂಗ್’, ‘ಸ್ಟಾಕ್ ಮಾರ್ಕೆಟ್’, ‘ಸ್ಪೋಕನ್ ಇಂಗ್ಲಿಷ್’, ‘ಬೋಧನಾ ತರಬೇತಿ’ ಹಿಂದುಸ್ಥಾನಿ ಸಂಗೀತ, ನೀರಿನಲ್ಲಿ ಆಡುವ ಕ್ರೀಡೆಗಳು, ಕುದುರೆ ಓಡಿಸುವುದು, ಹೋಟೆಲ್ ನಿರ್ವಹಣೆ, ಯುವ ರಾಜಕಾರಣಿ, ಕರಕುಶಲ ತರಬೇತಿ, ವ್ಯಾವಹಾರಿಕ ಜ್ಞಾನ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ, ಯುವ ಪತ್ರಕರ್ತರ ತರಬೇತಿ, ಲೇಖನ ಬರೆಯುವ ತರಬೇತಿ ಮುಂತಾದ ತರಬೇತಿಗಳನ್ನು ನೀಡಲಾಗುತ್ತದೆ. ಈ ತರಬೇತಿಗಳನ್ನು ಪಡೆದು ವಿದ್ಯಾರ್ಥಿಗಳು ವಾಪಸ್ಸು ಅವರವರ ಶಾಲೆಗಳಲ್ಲಿ ಇತರೆ ವಿದ್ಯಾರ್ಥಿಗಳಿಗೆ ಈ ತರಬೇತಿಗಳನ್ನು ನೀಡಬೇಕು. ಅದರ ಮೂಲಕ ಇಡೀ ಶಾಲೆಯಲ್ಲಿರುವ ಎಲ್ಲ ವಿದ್ಯಾರ್ಥಿಗಳಿಗೂ ಈ ತರಬೇತಿಯ ಸದುಪಯೋಗ ಪಡೆದು ಕ್ರಿಯಾಶೀಲರಾಗಿ ಬೆಳೆಯಲು ಅವಕಾಶ ಮಾಡಿ ಕೊಡಲಾಗಿದೆ.

ವಿದ್ಯಾರ್ಥಿಗಳು ಶಾಲೆಯಲ್ಲಿ ಕಲಿತ ಶಿಕ್ಷಣವನ್ನು ರಜೆ ದಿನಗಳಲ್ಲಿ ತಮ್ಮ ಕಾಲೋನಿಗಳ ಇತರೆ ವಿದ್ಯಾರ್ಥಿಗಳಿಗೆ ಕಲಿಸಿ ಕೊಡಬೇಕು. ಅದಕ್ಕಾಗಿ ಹಳೆಯ ವಿದ್ಯಾರ್ಥಿಗಳ ಸಹಾಯವನ್ನು ಪಡೆದು ತಮ್ಮ ಕುಟುಂಬದ ಇತರೆ ಸದಸ್ಯರಿಗೆ ಮತ್ತು ಈ ಶಿಕ್ಷಣ ವ್ಯವಸ್ಥೆಯಿಂದ ವಂಚಿತರಾಗಿರುವ ಸಮುದಾಯದ ಜನರಿಗೆ ಈ ಶಿಕ್ಷಣವನ್ನು ತಲುಪಿಸುವ ಕೆಲಸವನ್ನು ವಿದ್ಯಾರ್ಥಿಗಳು ಮಾಡುತ್ತಿದ್ದಾರೆ. ಎಷ್ಟೋ ಜನ ಪೋಷಕರು ಮಕ್ಕಳ ಮೂಲಕ ಕಲಿಕೆಯನ್ನು ಪ್ರಾರಂಭಿಸಿರುವುದು ಕಂಡು ಬಂದಿದೆ.

 1. ಈ ಮಾದರಿಯನ್ನು ಇತರೆ ರಾಜ್ಯಗಳಿಗೆ ವಿಸ್ತರಿಸಬೇಕಾದರೆ ಏನು ಮಾಡಬೇಕು?

ಪ್ರ. ಕು.: ಈ ಮಾದರಿಯ ಕುರಿತು ಚರ್ಚೆಗಳಾಗಬೇಕು. ಹೊರಗಿನಿಂದ ಬಂದವರು ಈ ಮಾದರಿಯನ್ನು ನೋಡಬೇಕು ಅರ್ಥ ಮಾಡಿಕೊಳ್ಳಬೇಕು ಇದರ ಮಹತ್ವವನ್ನು ಅರ್ಥ ಮಾಡಿಕೊಂಡು ಇತರರು ಅಳವಡಿಸಿಕೊಳ್ಳುವುದು.

ಡಾ. ಆರ್. ಎಸ್.  ಪ್ರವೀಣ್ ಕುಮಾರ್,  ಐ.ಪಿ.ಎಸ್ ಕಾರ್ಯಾಲಯದಲ್ಲಿ ಹಾಕಿರುವ ನಾಮಫಲಕ:

ಸರ್ಕಾರಿ ಕಾರ್ಯಾಲಯ ನಿಮ್ಮ ಕಾರ್ಯಾಲಯ

ಇಲ್ಲಿಗೆ ಬರುವವರು

 • ಚಪ್ಪಲಿಗಳನ್ನು ಹಾಕಿಕೊಂಡು ಒಳಗೆ ಬರಬೇಕು
 • ಬಾಗಿಕೊಂಡು ಬರಬಾರದು
 • ಕೈ ಕಟ್ಟಿಕೊಂಡು ಬರಬಾರದು
 • ಕಾಲಿಗೆ ಬೀಳಬಾರದು
 • ಕಣ್ಣೀರು ಹಾಕಬಾರದು
 • ಕೇಳಬೇಕಾದುದನ್ನು ಧೈರ್ಯವಾಗಿ ಕೇಳಬೇಕು

ಸಂದರ್ಶನ: ಡಾ. ಆರ್. ವಿ. ಚಂದ್ರಶೇಖರ್

ಸಹಾಯಕ ಪ್ರಾಧ್ಯಾಪಕ

ತಳಸಮುದಾಯಗಳ ಅಧ್ಯಯನ ಕೇಂದ್ರ

ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿ ಅಧ್ಯಯನ ಕೇಂದ್ರ

ರಾಷ್ಟ್ರೀಯ ಕಾನೂನು ಶಾಲೆ, ಭಾರತ ವಿಶ್ವವಿದ್ಯಾಲಯ, ಬೆಂಗಳೂರು.

4+

Leave a Reply

Your email address will not be published. Required fields are marked *