ಗೌರಿ ಲಂಕೇಶ್ ಹತ್ಯೆ ವಿರೋಧಿಸಿ ನಾಳೆ ಪ್ರತಿರೋಧ ಸಮಾವೇಶ

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಗತಿಪರರು, ಸಾಹಿತಿಗಳು, ಹೋರಾಟಗಾರರನ್ನು ಕಂಗೆಡಿಸಿದೆ. ಗೌರಿ ಲಂಕೇಶ್ ಹತ್ಯೆ ಖಂಡಿಸಿ ನಾಳೆ ಹೋರಾಟಕ್ಕೆ ಬೃಹತ್​ ವೇದಿಕೆ ಸಿದ್ಧಗೊಂಡಿದೆ. ಹಂತಕರ ಬಂಧನಕ್ಕೆ ಆಗ್ರಹಿಸಿ ನಾಳೆ ಬೆಂಗಳೂರಿನ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಗೌರಿ ಲಂಕೇಶ್ ಹತ್ಯೆ ವಿರೋಧಿ ಹೋರಾಟ ವೇದಿಕೆ ವತಿಯಿಂದ ಬೃಹತ್ ಪ್ರತಿರೋಧ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಇನ್ನು ಸಮಾವೇಶದಲ್ಲಿ ಹೋರಾಟಗಾರ್ತಿ ಮೇಧಾ ಪಾಟ್ಕರ್, ಮಾನವ ಹಕ್ಕು ಪರ ಹೋರಾಟಗಾರ್ತಿ ತೀಸ್ತಾ ಸೆಟಲ್​ವಾಡ್, ಹೋರಾಟಗಾರ ಜಿಗ್ನೇಶ್ ಮೇವಾನಿ, ಕಿರು ಚಿತ್ರಗಳ ನಿರ್ದೇಶಕ ಆನಂದ್ ಪಟವರ್ಧನ್, ರಾಕೇಶ್ ಶರ್ಮಾ, ಪತ್ರಕರ್ತ ಪಿ. ಸಾಯಿನಾಥ್ ಸೇರಿ ಹಲವರು ಭಾಗವಹಿಸಲಿದ್ದಾರೆ.

ಪತ್ರಕರ್ತೆ ಗೌರಿ ಲಂಕೇಶ್​​ ಹತ್ಯೆ ಪ್ರಕರಣ ಇದೀಗ ಎಲ್ಲೆಡೆ ಸದ್ದು ಮಾಡ್ತಿದೆ. ಗೌರಿ ಲಂಕೇಶ್ ಹತ್ಯೆಗೆ ಎಲ್ಲೆಡೆ ವ್ಯಾಪಕ ಖಂಡನೆ, ಪ್ರತಿರೋಧಗಳೂ ವ್ಯಕ್ತವಾಗುತ್ತಿವೆ. ಇದೀಗ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಮತ್ತೊಂದು ಬೃಹತ್ ಪ್ರತಿಭಟನೆಗೆ ಬೆಂಗಳೂರಿನಲ್ಲಿ ವೇದಿಕೆ ಸಜ್ಜುಗೊಂಡಿದೆ. ಇದೇ ತಿಂಗಳ 12ರ ಮಂಗಳವಾರದಂದು ಬೆಂಗಳೂರಿನ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಗೌರಿ ಲಂಕೇಶ್ ಹತ್ಯೆ ವಿರೋಧಿ ಹೋರಾಟ ವೇದಿಕೆ ವತಿಯಿಂದ ಬೃಹತ್ ಪ್ರತಿರೋಧ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಈ ಸಂಬಂಧ ಇವತ್ತು ಪೂರ್ವಭಾವಿಯಾಗಿ ಪ್ರಗತಿಪರರು ಮತ್ತು ವಿಚಾರವಾದಿಗಳು ಪ್ರತ್ಯೇಕವಾಗಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ಕೊಟ್ರು.

ಶಾಸಕರ ಭವನದಲ್ಲಿ ಸಾಹಿತಿಗಳಾದ ಚಂಪಾ, ಪ್ರೊ.ಮರುಳಸಿದ್ದಪ್ಪ, ಕೆ.ನೀಲಾ, ಬಿ. ಟಿ. ಲಲಿತಾನಾಯಕ್, ನಟ ಚೇತನ್ ಮತ್ತಿತರರು ಜಂಟಿ ಸುದ್ದಿಗೋಷ್ಟಿ ನಡೆಸಿದರು. ಈ ಸಂದರ್ಭದಲ್ಲಿ ಮಾತಾಡಿದ ಸಾಹಿತಿ ಚಂಪಾ, ಗೌರಿ ಲಂಕೇಶ್ ಹತ್ಯೆ ಖಂಡಿಸುವ ಸಲುವಾಗಿ ಪ್ರತಿರೋಧ ಸಮಾವೇಶ ನಡೆಸುತ್ತಿದ್ದೇವೆ ಎಂದರು.

ಇನ್ನು ಇತ್ತ ಪ್ರೆಸ್​ಕ್ಲಬ್​ನಲ್ಲಿ ವಿಚಾರವಾದಿಗಳು, ಪ್ರಗತಿಪರರು ಜಂಟಿ ಸುದ್ದಿಗೋಷ್ಠಿ ನಡೆಸಿ ಅದೇ 12ರ ಸಮಾವೇಶ ಕುರಿತು ಮಾಹಿತಿ ನೀಡಿದ್ರು. ವಿಚಾರವಾದಿ ಪ್ರೊ. ಜಿ. ಕೆ. ಗೋವಿಂದ ರಾವ್, ರಂಗಕರ್ಮಿ ಶ್ರೀನಿವಾಸ್ ಜಿ ಕಪ್ಪಣ್ಣ, ಸಾಹಿತಿ ಎಚ್. ಎಲ್. ಪುಷ್ಪಾ ಮತ್ತಿತರರು ಈ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ರು.

ಮಂಗಳವಾರ ಬೆಳಗ್ಗೆ 10.30 ಸಂಗೊಳ್ಳಿರಾಯಣ್ಣ ರೈಲು ನಿಲ್ದಾಣದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಆರಂಭವಾಗಲಿದೆ. ಬಳಿಕ ಸೆಂಟ್ರಲ್ ಕಾಲೇಜಿನ ಮೈದಾನದಲ್ಲಿ ಬೃಹತ್ ಪ್ರತಿರೋಧ ಸಮಾವೇಶ ನಡೆಸಲಾಗುತ್ತದೆ. ಗೌರಿ ಲಂಕೇಶ್ ಮತ್ತು ಡಾ. ಎಂ. ಎಂ. ಕಲಬುರ್ಗಿಯವರನ್ನು ಹತ್ಯೆ ಮಾಡಿದ ಹಂತಕರ ಪತ್ತೆ, ಹಂತಕರ ಹಿಂದೆ ಇರುವ ಶಕ್ತಿಗಳ ಪತ್ತೆ ಮಾಡುವ ಮೂಲಕ ಹತ್ಯಾ ಸಂಸ್ಕೃತಿಗೆ ಕೊನೆ ಹಾಡುವಂತೆ ಸರ್ಕಾರಗಳಿಗೆ ಆಗ್ರಹಿಸಲಾಗುತ್ತದೆ.

0

Leave a Reply

Your email address will not be published. Required fields are marked *