ಪ್ರಥಮ ಬಾರಿಗೆ ಪೊಲೀಸ್ ಆಗಿ ಪ್ರಿಯಾಂಕ ಉಪೇಂದ್ರ

ನಟಿ ಪ್ರಿಯಾಂಕ ಉಪೇಂದ್ರ ಪ್ರಥಮ ಬಾರಿಗೆ ಪೊಲೀಸ್ ಆಗಿ ನಟಿಸುತ್ತಿರುವ ಚಿತ್ರ ಸೆಕೆಂಡ್ ಹಾಫ್. ಅದರಲ್ಲಿಯೂ ನಾಯಕಿಯೊಬ್ಬಳು ಪೊಲೀಸ್ ಕಾನ್ಸ್ಟೇಬಲ್ ಪಾತ್ರದಲ್ಲಿ ಕಾಣಿಸುತ್ತಿರುವುದು ಕನ್ನಡದಲ್ಲೇ ಪ್ರಥಮ. ಕೆಳದರ್ಜೆಯ ಅಧಿಕಾರಿಯಾಗಿದ್ದುಕೊಂಡು ಪೊಲೀಸ್ ಇಲಾಖೆಯಲ್ಲಿ ಎದುರಿಸುವ ಸಮಸ್ಯೆಗಳ ಬಗ್ಗೆ ಮತ್ತು ಅದನ್ನು ನಾಯಕಿ ಹೇಗೆ ಸಮರ್ಥವಾಗಿ ನಿಭಾಯಿಸುತ್ತಾರೆ. ಎಂದು ತೋರಿಸಿರುವಂಥ ಚಿತ್ರ ಸೆಕೆಂಡ್ ಹಾಫ್.

ಸೆಕೆಂಡ್ ಹಾಫ್ ಚಿತ್ರದ ಮತ್ತೊಂದು ವಿಶೇಷತೆ ಎಂದರೆ ಉಪೇಂದ್ರ ಅವರ ಅಣ್ಣ ಸುಧೀಂದ್ರರ ಮಗ ನಿರಂಜನ್ ಸುಧೀಂದ್ರ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರಂಗಭೂಮಿ ಕಲಾವಿದನಾಗಿ ಚಿತ್ರರಂಗ ಪ್ರವೇಶಿಸಿರುವ ನಿರಂಜನ್ ಕನ್ನಡದ ಎತ್ತರದ ನಾಯಕರ ಸಾಲಲ್ಲಿ ನಿಲ್ಲಬಹುದಾದ ಮತ್ತೊಬ್ಬ ಆರಡಿ ಕಟೌಟ್​​ನಂತೆ ಇದ್ದಾರೆ. ನಿರ್ದೇಶಕ ಯೋಗಿ ದೇವಗಂಗೆಯವರಿಗೆ ಇದು ಪ್ರಥಮ ಚಿತ್ರ. ಆದರೆ ಮೊದಲ ಚಿತ್ರದಲ್ಲೇ ವಿಭಿನ್ನ ಕತೆಯನ್ನು ಆರಿಸಿಕೊಂಡ ಖುಷಿ ಅವರಲ್ಲಿದೆ. ಪ್ರಿಯಾಂಕ ಅವರು ದೃಶ್ಯವೊಂದರಲ್ಲಿ ಇಪ್ಪತ್ತು ನಿಮಿಷಗಳ ಕಾಲ ಸಂಭಾಷಣೆಗಳೇ ಇಲ್ಲದಿದ್ದರೂ ಮುಖಭಾವದಿಂದ ಅದ್ಭುತವಾಗಿ ನಟಿಸಿದ್ದಾರೆ ಎನ್ನುತ್ತಾರೆ ನಿರ್ದೇಶಕರು. ಚಿತ್ರದ ಪಾತ್ರಕ್ಕಾಗಿ ಪ್ರಿಯಾಂಕ ಉಪೇಂದ್ರ ಈ ವರ್ಷದ ಶ್ರೇಷ್ಠನಟಿ ಪ್ರಶಸ್ತಿಯನ್ನು ಪಡೆದುಕೊಳ್ಳಬಹುದೆಂಬ ನಿರೀಕ್ಷೆ ಯೋಗಿಯವರಲ್ಲಿದೆ.

ಇನ್ನು ಚಿತ್ರದ ಟ್ರೇಲರ್ ಬಿಡುಗಡೆ ಮಾಡಲು ವಿಶೇಷ ಅತಿಥಿಯಾಗಿ ಆಗಮಿಸಿದ್ದ ಖ್ಯಾತಿ ಐಪಿಎಸ್ ಅಧಿಕಾರಿ ರೂಪಾ, ಸಿನಿಮಾದಲ್ಲಿ ಆಯ್ದುಕೊಂಡ ವಿಷಯವನ್ನು ಪ್ರಶಂಸೆ ಮಾಡಿದರು. ನಾಯಕಿ ಪ್ರಿಯಾಂಕ ಅವರನ್ನು ಭೇಟಿಯಾಗಿ ಖುಷಿಯಾಯಿತು, ಅವರ ಸರಳ ವ್ಯಕ್ತಿತ್ವ ಗಮನ ಸೆಳೆಯಿತು ಎಂದು ಕೂಡ ಅವರು ಹೇಳಿದರು. ಚಿತ್ರದ ಸಂಗೀತ ನಿರ್ದೇಶಕ ಚೇತನ್ ಸೋಸ್ಕ, ಬೃಂದಾವನ ಎಂಟರ್ ಪ್ರೈಸಸ್ ಬ್ಯಾನರ್​ನಲ್ಲಿ ಚಿತ್ರವನ್ನು ನಿರ್ಮಾಣ ಮಾಡಿರುವ ನಾಗೇಶ್ ದಂಪತಿ, ಛಾಯಾಗ್ರಾಹಕ ಆರ್ ಕೆ ಶಿವಕುಮಾರ್ ಸಮಾರಂಭದಲ್ಲಿ ಹಾಜರಿದ್ದರು. ಸುರಭಿ ಸಂತೋಷ್, ಶರತ್ ಲೋಹಿತಾಶ್ವ, ವೀಣಾ ಸುಂದರ್, ರಿತೇಶ್ ಮೊದಲಾದವರು ನಟಿಸಿರುವ ಈ ಚಿತ್ರದ ಸೆನ್ಸಾರ್ ಆಗಬೇಕಿದೆ. ಪ್ರಮಾಣ ಪತ್ರ ಸಿಕ್ಕೊಡನೆ ಚಿತ್ರ ಬಿಡುಗಡೆಗೊಳಿಸುವುದಾಗಿ ಚಿತ್ರತಂಡ ಹೇಳಿದೆ.

0

Leave a Reply

Your email address will not be published. Required fields are marked *