ಕಾಂಗ್ರೆಸ್​ ಅನ್ನು ಬೇಲ್ ಗಾಡಿ ಎಂದು ಜನ ಕರೆಯುತ್ತಿದ್ದಾರೆ: ಪ್ರಧಾನಿ ಮೋದಿ

ಜೈಪುರ: ಕಾಂಗ್ರೆಸ್​​ನವರದು ಬೇಲ್ ಗಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು. ರಾಜಸ್ಥಾನದ ಜೈಪುರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮುಂಬರುವ ರಾಜಸ್ಥಾನ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗೆ ವೇದಿಕೆ ಸಿದ್ಧಗೊಳಿಸುತ್ತಿರುವ ಸೂಚನೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಜನ ಬೇಲ್ ಗಾಡಿ ಎಂದು ಕರೆಯತೊಡಗಿದ್ದಾರೆ. ಏಕೆಂದರೆ, ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು ಜಾಮೀನಿನ ಮೇಲೆ ಹೊರಗಡೆ ಇದ್ದಾರೆ ಎಂದು ಲೇವಡಿ ಮಾಡಿದರು. ಸಾರ್ವಜನಿಕ ಸಭೆಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಕುರಿತು ಇತ್ತೀಚೆಗೆ ಕೆಲವರು ಬೇಲ್ ಗಾಡಿ ಎಂದು ಕರೆಯತೊಡಗಿದ್ದಾರೆ. ಕಾಂಗ್ರೆಸ್​​ನ ದಿಗ್ಗಜ ನಾಯಕರು ಮತ್ತು ಮಂತ್ರಿಗಳು ಇತ್ತೀಚೆಗೆ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ ಎಂದರು.

ವಿಪಕ್ಷಗಳ ವಿರುದ್ಧದ ಭಾವೋದ್ರೇಕದ ಭಾಷಣದಲ್ಲಿ, ಕೇಂದ್ರ ಸರ್ಕಾರವಾಗಲಿ ಅಥವಾ ರಾಜ್ಯದ ಸಿಎಂ ವಸುಧರಾ ರಾಜೇಯವರಾಗಲಿ ಮಾಡಿರುವ ಒಳ್ಳೆಯ ಕೆಲಸವನ್ನು ಕೆಲವರು ಎಂದಿಗೂ ಪ್ರಶಂಸಿಸುವುದಿಲ್ಲ ಎಂದು ಆರೋಪಿಸಿದರು. ಫಲಾನುಭವಿಗಳ ಮುಖದಲ್ಲಿರುವ ಸಂತೋಷವನ್ನು ಎಲ್ಲರೂ ಕಾಣಬಹುದು ಎಂದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ಸ್ವಯಂ ಪ್ರಶಂಸೆ ಮಾಡಿಕೊಂಡರು. ಅಲ್ಲದೇ, ಪ್ರಧಾನಿ ಮೋದಿ ಮತ್ತು ಅವರು ಮಾಡಿರುವ ಕೆಲಸದ ಕುರಿತು ಕೇಳಿದ ತಕ್ಷಣವೇ ಕೆಲವರಿಗೆ ಕಿರಿಕಿರಿಯಾಗುತ್ತದೆ ಎಂದರು.

ಅಲ್ಲದೇ, ಈ ಹಿಂದಿನ ಸರ್ಕಾರ ರಾಜಸ್ಥಾನವನ್ನು ಯಾವ ಮಟ್ಟಕ್ಕೆ ಇಳಿಸಿತ್ತು ಎಂದು ಎಂದಿಗೂ ಮರೆಯಲಾಗದು ಎಂದು ಪರೋಕ್ಷವಾಗಿ ಮಾಜಿ ಸಿಎಂ ಅಶೋಕ್ ಗೆಹ್ಲೋಟ್ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ದೇ, ವಿಕಾಸವೊಂದೇ ತಮ್ಮ ಏಕೈಕ ಅಜೆಂಡಾ ಎಂದು ಅವರು ಅಭಿಪ್ರಾಯಪಟ್ಟರು. ಫಲಾನುಭವಿಗಳು ಲಾಭ ಪಡೆದಿರುವುದನ್ನು ಕೇಳುವುದು ಅದ್ಭುತ ಎಂದ ಅವರು, ಎಲ್ಲರನ್ನೂ ಒಳಗೊಳ್ಳುವುದು ಮತ್ತು ಎಲ್ಲ ರೀತಿಯ ಅಭಿವೃದ್ಧಿ ನಮ್ಮ ಗುರಿ ಎಂದರು.

ರಾಜಸ್ಥಾನ ಸಿಎಂ ವಸುಂಧರಾ ರಾಜೇಯವರ ಕಾರ್ಯಗಳನ್ನು ಪ್ರಶಂಸಿಸಿದ ಮೋದಿ, ರಾಜ್ಯದ ಕೆಲಸದ ಸಂಸ್ಕೃತಿಯನ್ನೇ ವಸುಂಧರಾ ಪರಿವರ್ತಿಸಿದ್ದಾರೆ ಎಂದರು. ವಸುಂಧರಾ ರಾಜೇ 2013ರಲ್ಲಿ ಅಧಿಕಾರ ಸ್ವೀಕರಿಸಿದ ಸಂದರ್ಭ ಮತ್ತು ಈಗಿನ ಸರ್ಕಾರ ರಾಜಸ್ಥಾನವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯುತ್ತಿರುವುದನ್ನು ಎಂದಿಗೂ ಮರೆಯಬೇಡಿ ಎಂದು ಅವರು ರಾಜ್ಯದ ಜನತೆಗೆ ಸಲಹೆ ನೀಡಿದರು.

ನಾವು ಕೆಲಸ ಮಾಡುವ ಅವಧಿಯಲ್ಲಿ ಯಾವುದೇ ಕೆಲಸ ತಡವಾಗುವುದಿಲ್ಲ, ಬಾಕಿ ಉಳಿಯುವುದಿಲ್ಲ ಅಥವಾ ಗುರಿ ಬದಲಾಗುವುದಿಲ್ಲ ಎಂದು ಅವರು ಪಂಚಿಂಗ್ ಡೈಲಾಗ್ ಹೊಡೆದರು. ಅಲ್ದೇ, ದಲಿತರು, ರೈತರು, ಮಹಿಳೆಯರು, ಹಿಂದುಳಿದ ಜಾತಿಗಳಿಗೆ ಕೇಂದ್ರ ಸರ್ಕಾರ ನೀಡಿರುವ ವಿವಿಧ ಯೋಜನೆಗಳನ್ನು ಪುನರುಚ್ಛರಿಸಿದರು. ಜೊತೆಗೆ ರಾಜಸ್ಥಾನದ ಇತಿಹಾಸವನ್ನು ಮೆಲುಕು ಹಾಕಿದ ಅವರು, ವಿಶೇಷ ಅಂಶಗಳೆಡೆಗೆ ಜನರ ಗಮನ ಸೆಳೆದರು.

2100 ಕೋಟಿ ರೂ. ಮೌಲ್ಯದ 13 ನಗರ ಮೂಲ ಸೌಕರ್ಯ ಯೋಜನೆಗಳಿಗೆ ಅಡಿಗಲ್ಲು ಹಾಕಿದರು. ಇಂದಿನ ಸಭೆಯಲ್ಲಿ 2.5 ಲಕ್ಷ ಫಲಾನುಭವಿಗಳು ಹಾಜರಿದ್ದರು. ಈ ಮೂಲಕ ಮುಂಬರುವ ರಾಜಸ್ತಾನ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಆರಂಭಿಸಿರುವ ಸೂಚನೆಯನ್ನು ನೀಡಿದರು. ಇನ್ನು ಪ್ರಧಾನಿ ಆಗಮನಕ್ಕಾಗಿ ಜೈಪುರದ ಸವಾಯಿ ಮಾನ್​​ಸಿಂಗ್ ಕ್ರೀಡಾಂಗಣದಲ್ಲಿ ಹೆಲಿಪ್ಯಾಡ್ ನಿರ್ಮಿಸಲಾಗಿದ್ದು, ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *