ಓಂ ಪುರಿ ನಿನಗಿದೋ ವಿದಾಯ

ಆ ಧ್ವನಿಯನ್ನು ನಾನು ಮರೆಯಲಾರೆ. ಅದು ನನ್ನ ಮನಸ್ಸಿನಲ್ಲಿ ಮೂಡಿಸಿದ ಭಾವ ಎಂಥಹುದು ? ಅವನ ಧ್ವನಿಯಲ್ಲಿ ಇದ್ದ ಶಕ್ತಿ ಎಂಥಹುದು ? ಈ ಪ್ರಶ್ನೆಗಳಿಗೆ ಊತ್ತರ ಕಂಡುಕೊಳ್ಳುವುದು ಕಷ್ಟ.. ಆದರೆ ಆತ ನನ್ನ ಮೇಲೆ ಬೀರಿದ ಪ್ರಭಾವ ಕಡಿಮೆಯದಲ್ಲ. ನಾನು ಕನ್ನಡದ ಸಿನಿಮಾ ಜೊತೆ ಹಿಂದಿ ಸಿನಿಮಾ ನೋಡಿ ಬೆಳೆದವನು. ಒಂದು ಕಾಲದಲ್ಲಿ ನನಗೆ ರಾಜೇಶ್ ಖನ್ನ ತುಂಭಾ ಇಷ್ಟವಾಗುತ್ತಿದ್ದ. ನಾನು ಶಾಲೆಗೆ ಹೋಗುವ ದಿನಗಳಲ್ಲಿ ರಾಜೇಶ್ ಖನ್ನನಂತೆ ಕುತ್ತಿಗೆ ಮುಚ್ಚುವ ಅಂಗಿ ಹೊಲಿಸಿಕೊಂಡಿದ್ದೆ. ಇದನ್ನು ನೋಡಿದ ನಮ್ಮ ಊರಿನ ಜನ ನನಗೆ ಸಿದ್ದಾಪುರದ ರಾಜೇಶ್ ಖನ್ನ ಎಂದೇ ಕರೆಯುತ್ತಿದ್ದರು. ಆಗ ನನಗೆ ಖುಷಿ ಆಗುತ್ತಿತ್ತು. ನಂತರ ನನಗೆ ಅಮಿತಾಬ್ ಬಚ್ಚನ್ ತುಂಬಾ ಇಷ್ಟವಾಗುತ್ತಿದ್ದ. ಕಾಲೇಜಿಗೆ ಬರುವ ಹೊತ್ತಿಗೆ ನಾನು ಹೊಸ್ ಅಲೆಯ ಸಿನಿಮಾಗಳನ್ನು ನೋಡತೊಡಗಿದೆ. ಶ್ಯಾಮ್ ಬೆನಗಲ್, ಎಮ್. ಎಸ್. ಸತ್ಯು, ಸತ್ಯಜಿತ್ ರಾಯ್, ಅಡೂರು, ಎಲ್ಲ ಇಷ್ಟವಾಗತೊಡಗಿದ್ದರು. ಆಗ ನನಗೆ ಇಷ್ಟವಾದವನು ಇದೇ ಓಮ್ ಪುರಿ. ಓಮ್ ಪುರಿಯ ಮುಖ ಮತ್ತು ಧ್ವನಿ ಹೊಸ ಭಾವ ಜಗತ್ತನ್ನು ಸೃಷ್ಟಿಸಿ ಬಿಡುತ್ತಿತ್ತು. ಆತ ನಟಿಸುತ್ತಿದ್ದಾನೆ ಎಂದು ಅನ್ನಿಸುತ್ತಿರಲಿಲ್ಲ. ಆತ ಪಾತ್ರವೇ ಆಗಿ ಬಿಡುತ್ತಿದ್ದ. ಜೊತೆ ಅವನ ಧ್ವನಿ. ಅಬ್ಬಾ.. ಅದು ಗುಂಡು ಹೊಡೆದಂತೆ. ನಾನು ಇತ್ತೀಚೆಗೆ ಪಾಕಿಸ್ಥಾನದ ಟೀವಿಯಲ್ಲಿ ಬಂದ ಓಂ ಪುರಿ ಸಂದರ್ಶನ ನೋಡುತ್ತಿದ್ದೆ. ಹಾಸ್ಯ ಮತ್ತು ಗಾಂಭೀರ್ಯ ಎರಡೂ ಸರಿಯಾಗಿ ಮಿಶ್ರಣವಾಗಿ ಪಾಕ ಮಾಡಿ ಬಡಿಸಿದಂತೆ ಓಮ್ ಪುರಿ ಆ ಸಂದರ್ಶನದಲ್ಲಿ ಮಾತನಾಡಿದ್ದ.
ಇಂದು ಆತ ನಮ್ಮನ್ನು ಬಿಟ್ಟು ಹೋಗಿದ್ದಾನೆ. ನನಗೆ ಆತನ ಬಗ್ಗೆ ಹೇಳಬೇಕಾದ್ದು ಬೇಕಾದಷ್ಟಿದೆ. ಆದರೆ ಈಗ ಇಷ್ಟೇ ಸಾಕು.. ಅವನ ಸಾವಿನ ಬಗ್ಗೆ ನಾನು ಹೇಳಲಿ ? ಏನು ಹೇಳಿದರೂ ಅದು ಕೃತಕವಾಗುತ್ತದೆ.. ಆದ್ದರಿಂದ ನಾನು ಏನನ್ನೂ ಹೇಳಲಾರೆ. ಸುಮ್ಮನೆ ಮೌನವಾಗಿ ಇದ್ದು ಬಿಡುತ್ತೇನೆ.

0

Leave a Reply

Your email address will not be published. Required fields are marked *